ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಪೊಲೀಸ್‌ ಸಿಬ್ಬಂದಿಯಲ್ಲಿ ಬೊಜ್ಜು: ವೃತ್ತಿ–ಬದುಕಿನಲ್ಲಿ ಬೇಕು ಸಮತೋಲನ

ಪೊಲೀಸ್ ಸಿಬ್ಬಂದಿಯ ಕೆಲಸದ ಸ್ಥಿತಿಯನ್ನು ಸುಧಾರಿಸಲು ಹಲವು ಉಪಕ್ರಮಗಳ ಅಗತ್ಯ ಇದೆ
Published 27 ಮೇ 2024, 1:27 IST
Last Updated 27 ಮೇ 2024, 1:27 IST
ಅಕ್ಷರ ಗಾತ್ರ

‘ಪೊಲೀಸ್’ ಎಂಬ ಪದವನ್ನು ಕೇಳಿದಾಕ್ಷಣ ಜನರ ಮನಸ್ಸಿನಲ್ಲಿ ‘ಸಮವಸ್ತ್ರ ಧರಿಸಿರುವ ಹಾಗೂ ದೃಢಕಾಯರಾಗಿರುವ’ ವ್ಯಕ್ತಿಗಳ ಚಿತ್ರಣವೊಂದು ಸಾಮಾನ್ಯವಾಗಿ ಮೂಡುವುದಿದೆ. ಪೊಲೀಸರು ಮಾಡಬೇಕಿರುವ ಕೆಲಸಗಳು, ನಿರ್ವಹಿಸಬೇಕಿರುವ ಹೊಣೆ ಆ ರೀತಿಯ ಚಿತ್ರಣವನ್ನು ಮೂಡಿಸುತ್ತವೆ. ಆದರೆ ಬೆಂಗಳೂರಿನ ಪೊಲೀಸರು ದೈಹಿಕವಾಗಿ ಎಷ್ಟು ದೃಢವಾಗಿದ್ದಾರೆ ಎಂಬ ಬಗ್ಗೆ ನಡೆಸಿದ ಪರೀಕ್ಷೆ
ಯೊಂದರಲ್ಲಿ, ಶೇಕಡ 87ರಷ್ಟು ಮಂದಿ ಒಂದೋ ಅತಿಯಾದ ತೂಕ ಹೊಂದಿದ್ದಾರೆ ಅಥವಾ ಕಡಿಮೆ
ತೂಕದ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಅಂಶ ಪತ್ತೆಯಾಗಿದೆ. ನಗರದ 18,665 ಪೊಲೀಸರನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ‍ಪೈಕಿ 7,500 ಮಂದಿ ಪೊಲೀಸರು ಬೊಜ್ಜಿನ ಸಮಸ್ಯೆ ಎದುರಿಸುತ್ತಿರು
ವುದು ಗೊತ್ತಾಗಿದೆ. 3,746 ಮಂದಿ ಅತಿಯಾದ ತೂಕ ಹೊಂದಿದ್ದಾರೆ, ಸರಿಸುಮಾರು ಐದು ಸಾವಿರ
ಮಂದಿ ಕಡಿಮೆ ತೂಕ ಹೊಂದಿದ್ದಾರೆ. ಅಂದರೆ, 2,369 ಮಂದಿ ಪೊಲೀಸರು ಮಾತ್ರ ದೈಹಿಕವಾಗಿ
ಸದೃಢರಾಗಿದ್ದಾರೆ. ಇವರ ಪ್ರಮಾಣವು ಬೆಂಗಳೂರು ನಗರದ ಒಟ್ಟು ಪೊಲೀಸರಲ್ಲಿ ಶೇಕಡ 13ರಷ್ಟು ಮಾತ್ರ. ಬೆಂಗಳೂರಿನ ಜನಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ, ಪೊಲೀಸರು
ದೈಹಿಕವಾಗಿ ಸದೃಢರಾಗಿ ಇರದೇ ಇದ್ದರೆ, ಅವರು ತಮ್ಮ ಕೆಲಸವನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲರು ಎಂಬ ಪ್ರಶ್ನೆ ಮೂಡುತ್ತದೆ. ಕೆಲಸದ ಅವಧಿಯಲ್ಲಿನ ಅನಿಶ್ಚಿತತೆ, ಪೊಲೀಸರು ಆಹಾರ ಸೇವಿಸುವುದರಲ್ಲಿ ಶಿಸ್ತು ಇಲ್ಲದಿರುವುದು, ಅತಿಯಾದ ಒತ್ತಡ ಹಾಗೂ ಜೀವನಶೈಲಿ ಉತ್ತಮವಾಗಿ ಇಲ್ಲದೇ ಇರುವುದು ಈ ರೀತಿ ಆಗಿರುವುದಕ್ಕೆ ಕಾರಣ ಎಂದು ಪೊಲೀಸ್ ಕಮಿಷನರ್‌ ಬಿ. ದಯಾನಂದ ಹೇಳಿದ್ದಾರೆ. ಅಲ್ಲದೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿ ಇಲ್ಲ. ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ವಿಭಾಗದಲ್ಲಿಯೇ ಸಿಬ್ಬಂದಿ ಕೊರತೆಯು ಶೇಕಡ 15ರಿಂದ ಶೇ 20ರಷ್ಟು ಇದೆ. ಇದು ಈಗಿರುವ ಸಿಬ್ಬಂದಿಯ ಮೇಲಿನ ಕಾರ್ಯಭಾರವನ್ನು ಹೆಚ್ಚು ಮಾಡುತ್ತದೆ. ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುವುದು ಹಾಗೂ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನದ ಕೊರತೆಯು ಮಾನಸಿಕವಾಗಿಯೂ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದು ಪೊಲೀಸರ ದೇಹದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಕೆಲಸದ ವೇಳೆ ನಿಶ್ಚಿತವಾಗಿ ಇಲ್ಲದೇ ಇರುವಾಗ, ಸಿಬ್ಬಂದಿಗೆ ಆಹಾರ ಸೇವನೆಯಲ್ಲಿ ಶಿಸ್ತು ಮೂಡಿಸಿಕೊಳ್ಳುವುದು ಕಷ್ಟ ಆಗುತ್ತದೆ. ಅವರಿಗೆ ಸರಿಯಾಗಿ ನಿದ್ರೆಯೂ ಇರುವುದಿಲ್ಲ. ಅಪರಾಧ ಪ್ರಕರಣಗಳ ತನಿಖೆಯು ಪೊಲೀಸ್ ಸಿಬ್ಬಂದಿಯ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆಯಾದರೂ, ಅವರಲ್ಲಿ ಹೆಚ್ಚಿನವರು ಕೌನ್ಸೆಲಿಂಗ್‌ಗೆ ಮುಂದಾಗುವುದಿಲ್ಲ. ಪೊಲೀಸರ ಪಾಲಿಗೆ ಕರ್ತವ್ಯದ ಕರೆಯು ಆಹಾರ, ನಿದ್ದೆ ಮತ್ತು ವ್ಯಾಯಾಮದ ವಿಚಾರದಲ್ಲಿ ಶಿಸ್ತಿನ ಜೀವನ ನಡೆಸಲು ಅವಕಾಶ ಕಲ್ಪಿಸುವುದಿಲ್ಲ. ಇನ್ನೊಂದೆಡೆ, ಕೆಲಸಕ್ಕೆ ಸಂಬಂಧಿಸಿದ ಒತ್ತಡಗಳು ಅವರು ಧೂಮಪಾನ, ಮದ್ಯ ಸೇವನೆಯ ಮೊರೆಹೋಗುವಂತೆ ಮಾಡುವ ಅಪಾಯ ಇರುತ್ತದೆ. ಅದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ.

ಪೊಲೀಸರ ದೈಹಿಕ ಸಾಮರ್ಥ್ಯದ ಬಗೆಗಿನ ಚರ್ಚೆಯು ದೇಶದಾದ್ಯಂತ ದಶಕಗಳಿಂದಲೂ ನಡೆದಿದೆ. ಆದರೆ, ಸಮಸ್ಯೆಯನ್ನು ಪರಿಹರಿಸಲು ಗಂಭೀರವಾಗಿ ಯಾವ ಉಪಕ್ರಮವನ್ನೂ ಕೈಗೊಂಡಂತೆ ಕಾಣುತ್ತಿಲ್ಲ. ಕಳೆದ ವರ್ಷ ಅಸ್ಸಾಂ ಸರ್ಕಾರವು ಒಂದು ಆದೇಶ ಹೊರಡಿಸಿ, ಆರು ತಿಂಗಳಲ್ಲಿ ದೈಹಿಕ ಕ್ಷಮತೆಯ ಮಟ್ಟವನ್ನು ತಲುಪಲು ಸಾಧ್ಯವಾಗದೇ ಇದ್ದರೆ ಬೊಜ್ಜು ಇರುವ ಪೊಲೀಸರು ಕಡ್ಡಾಯ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಹೇಳಿತ್ತು. ಈ ರೀತಿಯಲ್ಲಿ ಶಿಕ್ಷೆಯ ಮೂಲಕ ಸುಧಾರಣೆಯನ್ನು ತರುವ ನಡೆಯು ಅಸೂಕ್ಷ್ಮ ಕ್ರಮವಾಗುತ್ತದೆ. ಏಕೆಂದರೆ, ಸ್ಥೂಲಕಾಯದಂತಹ ಸಮಸ್ಯೆಗಳು ಪೊಲೀಸ್ ಕೆಲಸದ ಕಠಿಣ
ಸ್ವರೂಪದಿಂದಾಗಿಯೂ ಬರುತ್ತವೆ. 

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯು (ಕೆಎಸ್‌ಆರ್‌ಪಿ) 2021ರಲ್ಲಿ ವಿನೂತನವಾದ ಕ್ರಮವೊಂದನ್ನು ಕೈಗೊಂಡಿತ್ತು. ವ್ಯಾಯಾಮ ಹಾಗೂ ಆಹಾರಕ್ಕೆ ಸಂಬಂಧಿಸಿದ ಕ್ರಮ ಇದಾಗಿತ್ತು. ಈ ಕ್ರಮದ ಪರಿಣಾಮವಾಗಿ, ಸ್ಥೂಲಕಾಯ ಹೊಂದಿದ್ದ 1,000 ಮಂದಿ ಪೊಲೀಸ್ ಸಿಬ್ಬಂದಿ ಎರಡು ತಿಂಗಳ ಅವಧಿಯಲ್ಲಿ ದೈಹಿಕ ದೃಢತೆಯನ್ನು ಸಾಧಿಸಿದ್ದರು. ಈ ಮಾದರಿಯನ್ನು ಬೆಂಗಳೂರು ನಗರ ಪೊಲೀಸರು ಪರಿಶೀಲಿಸಬಹುದು ಹಾಗೂ ಬಹುಶಃ ಇದನ್ನು ಅನುಕರಿಸಲೂಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ, ಈಗ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾದ ಹಾಗೂ ಪೊಲೀಸ್‌ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅಗತ್ಯ ಇದೆ. ಬೆಂಗಳೂರು ಬೆಳೆಯುತ್ತಿರುವುದನ್ನು ಕಂಡಾಗ ಈ ಅಗತ್ಯದ ಅರಿವು ಆಗುತ್ತದೆ. ಹಾಗೆ ಮಾಡಿದಾಗ ಪೊಲೀಸರಿಗೆ ಕರ್ತವ್ಯ ಹಾಗೂ ವೈಯಕ್ತಿಕ ಜೀವನದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು ಸಾಧ್ಯವಾಗುತ್ತದೆ. ಪೊಲೀಸ್ ಸಿಬ್ಬಂದಿಯ ಕೆಲಸದ ಸ್ಥಿತಿಯನ್ನು ಸುಧಾರಿಸಲು ಹಲವು ಉಪಕ್ರಮಗಳ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT