ಭಾನುವಾರ, ಸೆಪ್ಟೆಂಬರ್ 15, 2019
27 °C

ಆರ್‌ಬಿಐ ಮೀಸಲು ನಿಧಿ ವರ್ಗಾವಣೆ ರಚನಾತ್ಮಕವಾಗಿ ಬಳಕೆಯಾಗಲಿ

Published:
Updated:
Prajavani

ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಧ್ಯೆ ಕೆಲವು ತಿಂಗಳುಗಳಿಂದ ನಡೆದಿದ್ದ ಸಂಘರ್ಷಕ್ಕೆ ಕೊನೆಗೂ ತೆರೆಬಿದ್ದಿದೆ. ಆರ್‌ಬಿಐನಿಂದ ₹ 1.76 ಲಕ್ಷ ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ.

ಆರ್‌ಬಿಐನ ಮಾಜಿ ಗವರ್ನರ್‌ ಬಿಮಲ್‌ ಜಲನ್‌ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ. ₹ 1.23 ಲಕ್ಷ ಕೋಟಿ ಮೊತ್ತವನ್ನು ನಿವ್ವಳ ವರಮಾನದ ರೂಪದಲ್ಲಿ ಮತ್ತು ₹ 52,637 ಕೋಟಿ ಮೊತ್ತವನ್ನು ಮೀಸಲು ನಿಧಿಯಿಂದ ವರ್ಗಾಯಿಸಲು ತೀರ್ಮಾನಿಸಲಾಗಿದೆ.

ಸರ್ಕಾರದ ಹೊಸ ಸಾಲದ ಹೊರೆ ತಗ್ಗಿಸಲು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪುನರ್ಧನ ಒದಗಿಸಲು, ನಷ್ಟದ ಸುಳಿಗೆ ಸಿಲುಕಿರುವ ಹಲವಾರು ವಲಯಗಳಿಗೆ ತುರ್ತಾಗಿ ಹಣಕಾಸು ನೆರವು ಕಲ್ಪಿಸಲು ಸರ್ಕಾರಕ್ಕೆ ಇದರಿಂದ ಸುಲಭವಾಗಲಿದೆ. ಆರ್ಥಿಕ ಹಿಂಜರಿತ ತಡೆಗಟ್ಟಲು, ಸರ್ಕಾರಿ ಹೂಡಿಕೆ ಹೆಚ್ಚಿಸಲು ಮತ್ತು ವಲಯವಾರು ಉತ್ತೇಜನಾ ಕೊಡುಗೆ ನೀಡಲು ಈ ನಿಧಿ ಸದ್ಬಳಕೆ ಆಗಬೇಕಾಗಿದೆ. ಸರ್ಕಾರದ ಬೊಕ್ಕಸಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಗ್ರಹವಾಗುವ ವರಮಾನವು ಅಂದಾಜಿಗಿಂತ ಕಡಿಮೆಯಾಗುವ ಸಾಧ್ಯತೆ ಇದೆ.

ಈ ಕಾರಣಕ್ಕೆ ಸರ್ಕಾರವು ಆರ್‌ಬಿಐ ಬಳಿ ಇರುವ ₹ 3 ಲಕ್ಷ ಕೋಟಿಯಿಂದ ₹ 4 ಲಕ್ಷ ಕೋಟಿ ಮೊತ್ತದ ಹೆಚ್ಚುವರಿ ಮೀಸಲು ನಿಧಿಯ ಮೇಲೆ ಕಣ್ಣಿಟ್ಟಿತ್ತು. ಹೆಚ್ಚುವರಿ ನಿಧಿ ವರ್ಗಾವಣೆ ವಿಷಯದಲ್ಲಿ ಸರ್ಕಾರದ ವಿತ್ತೀಯ ಅಗತ್ಯ ಮತ್ತು ಆರ್‌ಬಿಐನ ಹೊಣೆಗಾರಿಕೆ ಮಧ್ಯೆ ಜಲನ್‌ ಸಮಿತಿಯು ಸಮತೋಲನ ಕಾಯ್ದುಕೊಂಡಿದೆ. ತುರ್ತು ಅಗತ್ಯಗಳಿಗೆ ಸಾಲುವಷ್ಟು ಹೆಚ್ಚುವರಿ ನಿಧಿ ಆರ್‌ಬಿಐ ಬಳಿ ಇರುವಂತೆಯೂ ಸಮಿತಿಯು ಎಚ್ಚರ ವಹಿಸಿದೆ.

ವಿಶ್ವದ ಇತರ ದೇಶಗಳ ಕೇಂದ್ರೀಯ ಬ್ಯಾಂಕ್‌ ಬಳಿ ಇರುವ ಮೀಸಲು ನಿಧಿಗಿಂತ (ಶೇ 18) ಹೆಚ್ಚಿನ ಮೊತ್ತವು ಆರ್‌ಬಿಐ ಬಳಿ (ಶೇ 20ರಿಂದ ಶೇ 24.5ರಷ್ಟು) ಇರುವಂತೆ ನೋಡಿಕೊಂಡಿದೆ. ಮೀಸಲು ನಿಧಿಯ ಪ್ರಮಾಣವು ಆರ್‌ಬಿಐನ ಒಟ್ಟಾರೆ ಸಂಪತ್ತಿನ ಶೇ 5.5ರಿಂದ ಶೇ 6.5ರಷ್ಟು ಇರಬೇಕು ಎಂದು ಸಮಿತಿ ನಿಗದಿಪಡಿಸಿದೆ. ಹಣಕಾಸು ಪರಿಸ್ಥಿತಿಯ ನಿರ್ವಹಣೆ, ಹಣದುಬ್ಬರದ ಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ಸಂಕಷ್ಟದ ಸಂದರ್ಭ ಎದುರಿಸಲು ಈ ನಿಧಿ ಬಳಕೆಯಾಗಲಿದೆ.

ಆರ್ಥಿಕ ವೃದ್ಧಿ ದರದ ಬೆಳವಣಿಗೆಯು ಹಿಂಜರಿತ ಕಾಣುತ್ತಿರುವ ಸೂಕ್ಷ್ಮ ಕಾಲಘಟ್ಟದಲ್ಲಿ ನಿಧಿ ವರ್ಗಾವಣೆಯಿಂದಾಗಿ ಸರ್ಕಾರದ ಮೇಲಿನ ಹೊರೆ ಗಣನೀಯವಾಗಿ ತಗ್ಗಲಿದೆ. ಸರ್ಕಾರದ ವಿತ್ತೀಯ ಕೊರತೆ ಹೆಚ್ಚಿಸದೆ, ಆರ್ಥಿಕತೆಯ ಚೇತರಿಕೆಗೆ ಅಗತ್ಯವಾದ ನೆರವು ಸಿಗಲಿದೆ. ಇದರಿಂದ ಆರ್ಥಿಕತೆ ಯಲ್ಲಿ ಬಹುಬಗೆಯ ಸಕಾರಾತ್ಮಕ ಪರಿಣಾಮಗಳೂ ಕಂಡುಬರಬಹುದು. ವರಮಾನ ಸಂಗ್ರಹದ ಅವಾಸ್ತವಿಕ ಗುರಿ ತಲುಪಲು ತೆರಿಗೆ ಇಲಾಖೆ ಮೇಲಿನ ಒತ್ತಡವನ್ನೂ ದೂರ ಮಾಡಲಿದೆ.

ಆರ್‌ಬಿಐ ಮೀಸಲು ನಿಧಿಯಲ್ಲಿನ ಕೆಲ ಭಾಗವನ್ನು ಕೇಂದ್ರ ಸರ್ಕಾರವು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು. ಆದರೆ, ವರ್ಷಗಳಿಂದ ಕೂಡಿಟ್ಟಿರುವ ಮೀಸಲು ನಿಧಿಯ ಕೆಲ ಭಾಗವನ್ನು ಸರ್ಕಾರವು ತನ್ನ ವಿತ್ತೀಯ ಕೊರತೆ ಮತ್ತು ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸಲು ಬಳಸಲು ಮುಂದಾಗುವುದು ಸ್ವೀಕಾರಾರ್ಹವಲ್ಲ. ಹಣಕಾಸು ಬಿಕ್ಕಟ್ಟಿನ ಸಂದರ್ಭಕ್ಕೆ ಮೀಸಲಿಟ್ಟ ನಿಧಿಯ ದುರ್ಬಳಕೆ ಆಗಬಾರದು. ಸರ್ಕಾರದ ಹಣಕಾಸಿನ ಅಗತ್ಯಗಳಿಗೆ ಕೇಂದ್ರೀಯ ಬ್ಯಾಂಕ್‌ನ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿ ಕೊಡಬಾರದು.

ಆರ್ಥಿಕತೆಯಲ್ಲಿ ಉತ್ಸಾಹ ಬಡಿದೆಬ್ಬಿಸಲು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಜಾರಿಗೆ ತರಲು ಕೇಂದ್ರ ಸರ್ಕಾರ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸ ಬೇಕಾಗಿದೆ. ಸರ್ಕಾರವು ಪದೇ ಪದೇ ಆರ್‌ಬಿಐ ಅನ್ನು ನೆಚ್ಚಿಕೊಳ್ಳುವುದು ಸರಿಯಲ್ಲ. ಈ ಮೊತ್ತವನ್ನು ಅನುತ್ಪಾದಕ ಉದ್ದೇಶಗಳಿಗೆ ವೆಚ್ಚ ಮಾಡಬಾರದು. ಮೂಲ ಸೌಕರ್ಯ ಹೆಚ್ಚಳಕ್ಕೆ, ಸಂಪತ್ತು ವೃದ್ಧಿಗೆ ಮತ್ತು ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಗೆ ಬಳಸುವ ಜಾಣ್ಮೆ ತೋರಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಈ ನಿಧಿಯನ್ನು ಗರಿಷ್ಠ ಮಟ್ಟದಲ್ಲಿ ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಜ್ಞರ ಜತೆ ಚರ್ಚಿಸಿ, ನೀಲನಕ್ಷೆ ಸಿದ್ಧಪಡಿಸಬೇಕು. ಅದರ ಅನ್ವಯವೇ ಕಾರ್ಯೋನ್ಮುಖ ಆಗುವುದು ವಿಹಿತ.

Post Comments (+)