ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಿತಿ ಮೀರಿದ ಹಣದುಬ್ಬರ ಬಡ್ಡಿದರ ಹೆಚ್ಚಳಕ್ಕೆ ಸಕಾಲ?

Last Updated 15 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಚಿಲ್ಲರೆ ಹಣದುಬ್ಬರ ದರವು ಜನವರಿಯಲ್ಲಿ ಶೇಕಡ 6.01ಕ್ಕೆ ತಲುಪಿದೆ. ಇದು ಏಳು ತಿಂಗಳ ಗರಿಷ್ಠ ಮಟ್ಟ. ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇಕಡ 4ಕ್ಕೆ ಮಿತಿಗೊಳಿಸುವ ಹೊಣೆಯನ್ನು ಹೊರಿಸಿದೆ. ಹಣದುಬ್ಬರವು ಶೇ 4ಕ್ಕಿಂತ 2 ಅಂಶದಷ್ಟು ಹೆಚ್ಚು ಅಥವಾ 2 ಅಂಶದಷ್ಟು ಕಡಿಮೆ ಆಗಲು ಅವಕಾಶ ಇದೆ.

ಆದರೆ, ಜನವರಿಯಲ್ಲಿ ದಾಖಲಾಗಿರುವ ಚಿಲ್ಲರೆ ಹಣದುಬ್ಬರ ದರವು ಗರಿಷ್ಠ ಮಿತಿ ಯನ್ನು (ಶೇ 6) ಕೂಡ ದಾಟಿದೆ ಎಂಬುದು ಗಮನಾರ್ಹವೂ ಹೌದು, ಕಳವಳಕಾರಿಯೂ ಹೌದು. ಈಚೆಗೆ ಮುಕ್ತಾಯಗೊಂಡ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ರೆಪೊ ಹಾಗೂ ರಿವರ್ಸ್ ರೆಪೊ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವ ತೀರ್ಮಾನ ಕೈಗೊಂಡಿದೆ. ದೇಶದಲ್ಲಿ ಹಣದುಬ್ಬರ ಪ್ರಮಾಣವು ಜಾಸ್ತಿ ಆಗುತ್ತಿರುವ ಹೊತ್ತಿನಲ್ಲಿ, ಆರ್‌ಬಿಐ ಕನಿಷ್ಠಪಕ್ಷ ರಿವರ್ಸ್‌ ರೆಪೊ ದರವನ್ನಾದರೂ ತುಸು ಜಾಸ್ತಿ ಮಾಡಿ, ಹಣಕಾಸು ನೀತಿಯಲ್ಲಿ ಬದಲಾವಣೆ ತರುವತ್ತ ಮುಖ ಮಾಡಬಹುದು ಎಂಬ ನಿರೀಕ್ಷೆಗಳು ಇದ್ದವು. ಆದರೆ, ಅಂತಹ ಯಾವ ತೀರ್ಮಾನವನ್ನೂ ಕೈಗೊಳ್ಳದೆ, ಯಥಾಸ್ಥಿತಿಯನ್ನು ಮುಂದುವರಿಸಿದೆ. ಅಂದರೆ, ಕೇಂದ್ರೀಯ ಬ್ಯಾಂಕ್‌ ಸತತ ಹತ್ತನೆಯ ಬಾರಿಯೂ ಹಣಕಾಸಿನ ನೀತಿಯನ್ನು ಇರುವ ಹಾಗೆಯೇ ಇರಿಸಿ ಕೊಂಡಿದೆ. ಕೋವಿಡ್‌ನಿಂದ ಜರ್ಜರಿತ ಆಗಿ, ತುಸು ಚೇತರಿಸಿಕೊಂಡಿರುವ ಅರ್ಥ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಆರ್‌ಬಿಐ ಹೊಂದಾಣಿಕೆಯ ಹಣಕಾಸಿನ ನೀತಿಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದೆ ಎನ್ನಬಹುದಾದರೂ, ಹಣದುಬ್ಬರದ ಸವಾಲನ್ನು ಅದು ಉಪೇಕ್ಷಿಸಿದೆಯೇ ಎಂಬ ಪ್ರಶ್ನೆ ಇದೆ.

ಹಣದುಬ್ಬರದ ಸಮಸ್ಯೆಯು ಪ್ರಸ್ತುತ ಸಂದರ್ಭ ದಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳನ್ನು ಕಾಡುತ್ತಿದೆ. ಈ ಸಮಸ್ಯೆಯು ಭಾರತಕ್ಕೆ ಮಾತ್ರ ಸೀಮಿತವಾಗಿ ಇಲ್ಲ ಎಂಬುದು ನಿಜ. ಆದರೆ, ಜಗತ್ತಿನ ಹಲವು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಹೆಚ್ಚಿಸುವ ಹೆಜ್ಜೆ ಇರಿಸಿವೆ ಅಥವಾ ಹೆಚ್ಚಿಸುವುದಾಗಿ ಹೇಳಿವೆ. ಆ ಮೂಲಕ, ಹಣಕಾಸು ವ್ಯವಸ್ಥೆಯಲ್ಲಿನ ನಗದು ಹರಿವಿನ ಪ್ರಮಾಣವನ್ನು ತಗ್ಗಿಸಿ, ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಆಲೋಚನೆಯಲ್ಲಿ ಇವೆ.

ಆದರೆ, ಆರ್‌ಬಿಐ ಕಡೆಯಿಂದ ಇಂತಹ ಕ್ರಮಗಳು ಆಗಿಲ್ಲ. ಫೆಬ್ರುವರಿ ಎರಡನೆಯ ವಾರದಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ದೇಶದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಾರ್ವಜನಿಕರಿಂದ ಬರುವ ಬೇಡಿಕೆಯು ಕೋವಿಡ್‌ ಪೂರ್ವದ ಹಂತವನ್ನು ಇನ್ನೂ ತಲುಪಿಲ್ಲ ಎಂದು ಹೇಳಿದ್ದರು. ಈಗ ಹಣದುಬ್ಬರವು ಗರಿಷ್ಠ ಮಿತಿಯನ್ನೂ ಮೀರಿ ಬೆಳೆದಿರುವುದರ ಪರಿಣಾಮವಾಗಿ, ಸಾರ್ವಜನಿಕರ ಕಡೆಯಿಂದ ಬರುವ ಬೇಡಿಕೆಗಳು ಇನ್ನಷ್ಟು ಕಡಿಮೆ ಆಗುವ ಅಪಾಯ ಇದ್ದೇ ಇದೆ. ಈಗಿನ ಹಣದುಬ್ಬರದ ಪ್ರಮಾಣವನ್ನು ಪರಿಗಣಿಸಿದರೆ, ಜಾಗತಿಕ ವಾಗಿ ಕೇಂದ್ರೀಯ ಬ್ಯಾಂಕ್‌ಗಳು ಕೈಗೊಳ್ಳುತ್ತಿರುವ ತೀರ್ಮಾನವನ್ನು ಗಮನಿಸಿದರೆ, ಈಗ ಚಾಲ್ತಿಯಲ್ಲಿ ಇರುವ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಬದಲಾವಣೆ ತರಬೇಕಿರುವ ಅಗತ್ಯ ಕಾಣಿಸುತ್ತಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ನ ದೇಶಿ ಮಾರುಕಟ್ಟೆ ದರ ಹಾಗೂ ಚಿಲ್ಲರೆ ಹಣದುಬ್ಬರ ದರದ ನಡುವೆ ನೇರ ಸಂಬಂಧ ಇದೆ. ಉತ್ತರಪ್ರದೇಶ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಯು ಸನಿಹವಾದ ಹೊತ್ತಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರ ಸರ್ಕಾರವು ದೊಡ್ಡ ಮಟ್ಟದಲ್ಲಿ ತಗ್ಗಿಸಿತು. ಬಹುತೇಕ ರಾಜ್ಯಗಳು ಮೌಲ್ಯವರ್ಧಿತ ತೆರಿಗೆ ಕಡಿಮೆ ಮಾಡಿದವು. ಗರಿಷ್ಠ ಮಟ್ಟ ತಲುಪಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಈ ಕಾರಣಗಳಿಂದಾಗಿ ತುಸು ಕಡಿಮೆ ಆಯಿತು. ಆದರೆ ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುವುದು ಬಹುತೇಕ ಖಚಿತ. ಹೆಚ್ಚಳದ ಪ್ರಮಾಣ ಎಷ್ಟು ಎಂಬುದನ್ನು ಈಗಲೇ ಅಂದಾಜಿಸಲು ಆಗದು. ಇವೆರಡರ ಬೆಲೆ ಹೆಚ್ಚಳ ಆದೊಡನೆ ಹಣದುಬ್ಬರ ಪ್ರಮಾಣವು ಇನ್ನಷ್ಟು ಜಾಸ್ತಿ ಆಗಬಹುದು. ಆಗ, ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರ ಹೆಚ್ಚಿಸುವುದು ಆರ್‌ಬಿಐಗೆ ಅನಿವಾರ್ಯ ಆಗಬಹುದು. ಹಣದುಬ್ಬರವು ಜನರಿಗೆ ಪ್ರತಿದಿನವೂ ಅನುಭವಕ್ಕೆ ಬರುತ್ತಿರುವ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವ ಹೊಣೆ ಇರುವುದು ಆರ್‌ಬಿಐ ಮೇಲೆ. ಕೋವಿಡ್‌ ಅಪ್ಪಳಿಸಿದಾಗ ಬಡ್ಡಿ ದರವನ್ನು ತಗ್ಗಿಸಿ, ವ್ಯವಸ್ಥೆಯಲ್ಲಿ ನಗದು ಹರಿವು ಹೆಚ್ಚಿಸಿದ್ದು ಅನಿವಾರ್ಯ ಆಗಿದ್ದಿರಬಹುದು. ಆದರೆ, ಹಣದುಬ್ಬರವು ತಾನೇ ನಿಗದಿ ಮಾಡಿ ಕೊಂಡಿರುವ ಮಿತಿಯನ್ನೂ ಮೀರಿ ಸಾಗುತ್ತಿರುವಾಗ ಅದನ್ನು ನಿಯಂತ್ರಿಸಲು ಬಿಗಿಯಾದ ಕ್ರಮಗಳನ್ನು ಆರ್‌ಬಿಐ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT