ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಕೆಲವು ಅತಿಥಿ ಉಪನ್ಯಾಸಕರ ಪದವಿ ಪ್ರಮಾಣಪತ್ರಗಳು ನಕಲಿ ಹಾಗೂ ಅವುಗಳ ನೈಜತೆಯನ್ನು ದೃಢೀಕರಿಸಿರುವ ದಾಖಲೆಗಳೂ ನಕಲಿ ಎನ್ನುವ ವರದಿ ಉನ್ನತ ಶಿಕ್ಷಣ ಕ್ಷೇತ್ರದ ರೋಗಗ್ರಸ್ತ ಪರಿಸ್ಥಿತಿಯನ್ನು ಸೂಚಿಸುವಂತಿದೆ. ಹಾಗೆಯೇ, ಈ ಪರಿಸ್ಥಿತಿಯನ್ನು ಸರಿಪಡಿಸಲು ಹೊರಟಿರುವ ಕಾಲೇಜು ಶಿಕ್ಷಣ ಇಲಾಖೆಯ ಪ್ರಯತ್ನವೂ ವಿರೋಧಾಭಾಸಗಳಿಂದ ಕೂಡಿದೆ. ಎಲ್ಲ ಕ್ಷೇತ್ರಗಳಲ್ಲೂ ನಕಲಿಗಳ ಹಾವಳಿ ವ್ಯಾಪಕವಾಗಿರುವ ಸಂದರ್ಭದಲ್ಲಿ, ಪದವಿ ಪ್ರಮಾಣಪತ್ರಗಳ ನೈಜತೆಯನ್ನು ಪರೀಕ್ಷಿಸುವ ಇಲಾಖೆಯ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ, ಅದಕ್ಕೆ ತಗಲುವ ವೆಚ್ಚವನ್ನು ಅತಿಥಿ ಉಪನ್ಯಾಸಕರೇ ಭರಿಸಬೇಕೆಂದು ಇಲಾಖೆ ಬಯಸುತ್ತಿರುವುದನ್ನು ಒಪ್ಪುವುದು ಕಷ್ಟ. ಈಗಾಗಲೇ ಹಲವು ರೂಪಗಳಲ್ಲಿ ಶೋಷಣೆಗೆ ಒಳಗಾಗಿರುವ, ಉದ್ಯೋಗದ ಅಭದ್ರತೆಯಲ್ಲಿ ಬದುಕುತ್ತಿರುವ ಹಾಗೂ ಕಡಿಮೆ ಸಂಭಾವನೆಗೆ ದುಡಿಯುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಪ್ರಮಾಣಪತ್ರಗಳ ನೈಜತೆಯನ್ನು ಸಾಬೀತುಪಡಿಸಲೂ ಖರ್ಚು ಮಾಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿರುವುದು ಮಾನವೀಯ ನಡವಳಿಕೆಯಲ್ಲ. ಆಡಳಿತಾತ್ಮಕವಾಗಿ ಕೂಡ ಇದು ಸರಿಯಾದ ನಿರ್ಧಾರವಲ್ಲ. ಸ್ನಾತಕೋತ್ತರ ಪದವಿಯ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರ, ಪಿಎಚ್.ಡಿ, ಎಂ.ಫಿಲ್, ಎನ್ಇಟಿ ಅಥವಾ ಕೆ–ಸೆಟ್ಗಳ ನೈಜತೆಯನ್ನು ಅಭ್ಯರ್ಥಿಗಳು ದೃಢೀಕರಿಸಬೇಕಾಗಿದೆ. ಪ್ರತಿಯೊಂದು ದಾಖಲೆಯ ನೈಜತಾ ಪ್ರಮಾಣಪತ್ರಕ್ಕೆ ಆಯಾ ವಿಶ್ವವಿದ್ಯಾಲಯಗಳು ದುಬಾರಿ ಶುಲ್ಕ ನಿಗದಿ ಮಾಡಿವೆ; ಈ ಮೂಲಕ ಹೊಸ ಆದಾಯ ಮೂಲವೊಂದನ್ನು ವಿಶ್ವವಿದ್ಯಾಲಯಗಳು ಸೃಷ್ಟಿಸಿಕೊಳ್ಳಲು ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರು ಮತ್ತಷ್ಟು ಹೊರೆ ಹೊರಲೇಬೇಕಾದ ಅನಿವಾರ್ಯತೆ ರೂಪುಗೊಂಡಿದೆ.

ಅತಿಥಿ ಉಪನ್ಯಾಸಕರ ಶೈಕ್ಷಣಿಕ ದಾಖಲೆಗಳ ಅಸಲಿಯತ್ತನ್ನು ಒರೆಗೆ ಹಚ್ಚುವ ಕೆಲಸ 2017ರಲ್ಲೂ ನಡೆದಿತ್ತು. ಆಗ ಎಲ್ಲ ವೆಚ್ಚವನ್ನು ಕಾಲೇಜು ಶಿಕ್ಷಣ ಇಲಾಖೆಯೇ ಭರಿಸಿತ್ತು. ಆ ಪರಿಶೀಲನೆಯಲ್ಲಿ 23 ಅಭ್ಯರ್ಥಿಗಳ ಪಿಎಚ್.ಡಿ ಪ್ರಮಾಣಪತ್ರಗಳು ನಕಲಿ ಎನ್ನುವುದು ಪತ್ತೆಯಾಗಿ, ಅವರ ವಿರುದ್ಧ ಇಲಾಖೆ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಆಗಿನ ಕ್ರಮವನ್ನು ಈಗಲೂ ಇಲಾಖೆ ಅನುಸರಿಸಬಹುದಾಗಿದೆ. ಪ್ರಮಾಣಪತ್ರಗಳ ನೈಜತೆಯನ್ನು ಅಭ್ಯರ್ಥಿಗಳೇ ಸಾಬೀತುಪಡಿಸುವ ಪ್ರಕ್ರಿಯೆಯಲ್ಲಿ ನಕಲಿಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಕೆಲವು ಅಭ್ಯರ್ಥಿಗಳು ನೀಡಿರುವ ನೈಜತಾ ಪ್ರಮಾಣಪತ್ರಗಳೇ ನಕಲಿಯಾಗಿವೆ ಎನ್ನುವ ದೂರುಗಳಿವೆ. ನೈಜತಾ ಪ್ರಮಾಣಪತ್ರಗಳು ನಕಲಿಯೋ ಅಸಲಿಯೋ ಎನ್ನುವುದನ್ನು ದೃಢಪಡಿಸಿಕೊಳ್ಳುವ ಅಧಿಕಾರ ಪ್ರಾಂಶುಪಾಲರಿಗೆ ಇಲ್ಲವಾದುದರಿಂದ, ತಪ್ಪು ಮಾಡಿರುವ ಅಭ್ಯರ್ಥಿಗಳು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರಮಾಣಪತ್ರಗಳ ಪರಿಶೀಲನೆಯ ಕೆಲಸವನ್ನು ಇಲಾಖೆಯೇ ಮಾಡಿದ್ದಲ್ಲಿ, ನಕಲಿ ಪ್ರಮಾಣಪತ್ರ ಸಲ್ಲಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿತ್ತು. ಆ ಅವಕಾಶವನ್ನು ಬಿಟ್ಟುಕೊಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿನ ಕೊಳೆಯನ್ನು ಸ್ವಲ್ಪಮಟ್ಟಿಗಾದರೂ ತೊಳೆಯಬಹುದಾಗಿದ್ದ ಅವಕಾಶವನ್ನು ಇಲಾಖೆ ಕೈಚೆಲ್ಲಿದೆ.

ನಕಲಿ ಪದವಿಗಳನ್ನು ವಿತರಿಸುವ ಜಾಲ ದೇಶದಾದ್ಯಂತ ಸಕ್ರಿಯವಾಗಿದೆ. ಕರ್ನಾಟಕದ ವಿಶ್ವವಿದ್ಯಾಲಯವೊಂದು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಪ್ರಮಾಣಪತ್ರಗಳನ್ನು ವಿತರಿಸುವ ದಂಧೆ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಪತ್ತೆಯಾಗಿತ್ತು. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಪ್ರಮಾಣಪತ್ರಗಳನ್ನು ಅಕ್ರಮವಾಗಿ ಹಣ ಪಡೆದು ವಿತರಿಸಿದ ಲಕ್ಷಾಂತರ ರೂಪಾಯಿಗಳ ಹಗರಣ ಇತ್ತೀಚೆಗಷ್ಟೇ ವರದಿಯಾಗಿತ್ತು. ಅಂತರ್ಜಾಲ ಹಾಗೂ ಪತ್ರಿಕಾ ಜಾಹೀರಾತುಗಳ ಮೂಲಕವೂ ಜನರನ್ನು ಮರುಳು ಮಾಡಿ, ನಕಲಿ ಪ್ರಮಾಣಪತ್ರಗಳ ಮಾರಾಟ ನಡೆಯುವುದಿದೆ. ಈ ಪ್ರಮಾಣಪತ್ರಗಳನ್ನು ಬಳಸಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ ಪಡೆದಿರುವವರೂ ಇದ್ದಾರೆ. ಈ ಅವ್ಯವಹಾರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಆಂದೋಲನ ರೂಪದ ಕಾರ್ಯಾಚರಣೆಯನ್ನೇ ಸರ್ಕಾರಗಳು ಹಮ್ಮಿಕೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.