ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನನ್ನು ಉಲ್ಲಂಘಿಸಲು ಹಾತೊರೆಯುವ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಅನರ್ಹ

Last Updated 1 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳು ನಿಸ್ಸಂಶಯವಾಗಿ ಕೋಮು ಸ್ವರೂಪವನ್ನು ಹೊಂದಿವೆ. ಅವು, ಸಾಮರಸ್ಯದ ಬದುಕನ್ನು ಬಯಸುವವರಿಗೆಲ್ಲ ಆಘಾತವನ್ನು ಉಂಟುಮಾಡಿವೆ. ‘ಸರ್ವಜನಾಂಗದ ಶಾಂತಿಯ ತೋಟ’ದ ಭವಿಷ್ಯದ ಕುರಿತು ಆತಂಕ ಕೂಡ ಎದುರಾಗಿದೆ. ಹತ್ಯೆ ಪ್ರಕರಣಗಳ ಕುರಿತು ರಾಜ್ಯ ಸರ್ಕಾರ ಪ್ರತಿಕ್ರಿಯಿಸಿರುವ ರೀತಿಯೂ ಕೋಮುಭಾವದಿಂದಲೇ ಕೂಡಿದೆ. ಕಾನೂನುಬಾಹಿರ ಹಾಗೂ ಅನೈತಿಕವಾಗಿರುವ ಅದರ ಚಿಂತನೆಯ ಸ್ವರೂಪವು ಇನ್ನೂ ಹೆಚ್ಚಿನ ಕಳವಳವನ್ನು ಉಂಟುಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರು, ಹತ್ಯೆಯನ್ನು ಹತ್ಯೆಯಿಂದ, ಹಿಂಸೆಯನ್ನು ಹಿಂಸೆಯಿಂದ ಎದುರಿಸುವ ಮಾತನಾಡಿರುವುದು ಆಘಾತಕಾರಿ ಬೆಳವಣಿಗೆ. ಇದೊಂದುಅನಪೇಕ್ಷಿತ, ಹೊಣೆಗೇಡಿ ಮತ್ತು ಅಸಮಂಜಸವಾದ ಪ್ರತಿಕ್ರಿಯೆಯಾಗಿದೆ. ಈಗಾಗಲೇ ಹದಗೆಟ್ಟಿರುವ ರಾಜ್ಯದ ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುವಂಥದ್ದು. ಹಿಂಸಾಚಾರದ ಬೆದರಿಕೆ ಮತ್ತು ಹಿಂಸಾಚಾರವು ರಾಜ್ಯಕ್ಕೆ ಹೊಸದಲ್ಲ. ಅವುಗಳು ಕೆಲವು ತಿಂಗಳುಗಳಿಂದ ರಾಜ್ಯದ ಜನರ ಗ್ರಹಿಕೆಗೆ ನಿಲುಕುತ್ತಿವೆ.

ದಕ್ಷಿಣ ಕನ್ನಡದ ಕಳಂಜೆಯಲ್ಲಿ ನಡೆದ ಮಸೂದ್‌ ಹತ್ಯೆ,ನೆಟ್ಟಾರುವಿನಲ್ಲಿ ನಡೆದಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಮತ್ತು ಸುರತ್ಕಲ್‌ನಲ್ಲಿ ನಡೆದ ಮೊಹಮ್ಮದ್‌ ಫಾಝಿಲ್‌ ಅವರ ಹತ್ಯೆಯು ರಾಜ್ಯದಾದ್ಯಂತ ತಲ್ಲಣವನ್ನು ಉಂಟುಮಾಡಿವೆ. ಪ್ರವೀಣ್‌ ಹತ್ಯೆಯಿಂದ ಉಂಟಾದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲು ಮತ್ತು ಸ್ವಪಕ್ಷೀಯರ ಆಕ್ರೋಶವನ್ನು ತಣಿಸಲು ಸರ್ಕಾರದ ಹೊಣೆ ಹೊತ್ತವರು ನೀಡಿದ ಹೇಳಿಕೆಗಳು ಅತ್ಯಂತ ಕೆಟ್ಟ ರೀತಿಯ ಪ್ರತಿಕ್ರಿಯೆಗೆ ನಿದರ್ಶನ.

ರಾಜಕೀಯ ಹತ್ಯೆ ಮತ್ತು ಹಿಂಸಾಚಾರವನ್ನು ಕೊನೆಗಾಣಿಸಲು ಅಗತ್ಯವಾದರೆ ‘ಯೋಗಿ ಮಾದರಿ’ ಯನ್ನು ಅನುಸರಿಸುವುದಾಗಿಯೂ ಬೊಮ್ಮಾಯಿ ಹೇಳಿದ್ದಾರೆ. ಕರ್ನಾಟಕವು ಉತ್ತರಪ್ರದೇಶದಂತೆ ಅರಣ್ಯ ನ್ಯಾಯವನ್ನು ಅನುಸರಿಸುತ್ತಿರುವ ಹಿಂದುಳಿದ ರಾಜ್ಯವಲ್ಲ. ಒಳ್ಳೆಯ ಆಡಳಿತದ ದೊಡ್ಡ ಪರಂಪರೆಯೇ ನಮ್ಮ ರಾಜ್ಯಕ್ಕಿದೆ. ನಾವು ಯಾವ ರೀತಿಯಲ್ಲೂ ಉತ್ತರಪ್ರದೇಶವನ್ನು ಅನುಸರಿಸ ಬೇಕಿಲ್ಲ.

ಪ್ರಜಾಪ್ರಭುತ್ವವಾದಿ ಸರ್ಕಾರಕ್ಕೆ ಇಲ್ಲವೇ ಅತ್ಯುತ್ತಮ ಆಡಳಿತಕ್ಕೆ ಉತ್ತರಪ್ರದೇಶ ಸರ್ಕಾರದ ನಡವಳಿಕೆಯು ಖಂಡಿತ ಮಾದರಿಯಲ್ಲ. ಉತ್ತರಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಶಿಕ್ಷೆ ಆಗುತ್ತಿರುವುದು ಅವರು ಏನು ಮಾಡಿದ್ದಾರೆ ಎಂಬುದರ ಆಧಾರದಲ್ಲಿ ಅಲ್ಲ, ಬದಲಿಗೆ ಅವರು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ.ಸರ್ಕಾರದ ನಿಲುವನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ ಮತ್ತು ಅವರು ಮುಸ್ಲಿಮರಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ.

ಹೀಗಾಗಿ, ಅಲ್ಲಿನ ಆಡಳಿತ ವ್ಯವಸ್ಥೆಯ ಸಂಕೇತವಾಗಿ ಬುಲ್ಡೋಜರ್‌ ಗೋಚರಿಸುತ್ತಿದೆ. ಅಲ್ಲಿ ಕಾನೂನಿನ ಪ್ರಕ್ರಿಯೆಗಳು ಯಾವುವೂ ಸಮರ್ಪಕವಾಗಿ ನಿರ್ವಹಣೆ ಯಾಗುತ್ತಿಲ್ಲ. ತ್ವರಿತ ಹಾಗೂ ನಿರ್ದಯಿ ಶಿಕ್ಷೆ ಯೊಂದೇ ಗುರಿಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಳೆದ ಐದು ವರ್ಷಗಳಲ್ಲಿ ಈ ಮಾದರಿಯನ್ನು ಕರಗತ ಮಾಡಿಕೊಂಡಿದ್ದಾರೆ.


ಶಿಕ್ಷೆಗೆ ಒಳಗಾದವರನ್ನು ‘ಸಮಾಜಘಾತುಕ ಶಕ್ತಿಗಳು’, ‘ಪ್ರತಿಭಟನಕಾರರು’, ‘ಗಲಭೆಕೋರರು’, ‘ಅತಿ ಕ್ರಮಣಕಾರರು’, ‘ಅಕ್ರಮ ನಿವಾಸಿಗಳು’ ಎಂದೆಲ್ಲ ಅಲ್ಲಿನ ಸರ್ಕಾರ ಕರೆದರೂ ಬಹುತೇಕ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ಇದ್ದವರು ಮುಸ್ಲಿಮರು.

ಅತ್ಯುತ್ತಮ ಆಡಳಿತದ ಹಿನ್ನೆಲೆ ಹೊಂದಿರುವ, ಬಹುತ್ವ ಸಂಸ್ಕೃತಿಯ ಬೀಡಾಗಿರುವ, ಆರ್ಥಿಕವಾಗಿ ಅಭಿವೃದ್ಧಿಯ ಪಥದಲ್ಲಿರುವ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಗಾಧ ಸಾಧನೆ ಮಾಡಿರುವ, ಇತರ ಹಲವು ಕ್ಷೇತ್ರಗಳಲ್ಲಿಯೂ ಮುಂದಿರುವ ಕರ್ನಾಟಕ ಅನುಸರಿಸಬೇಕಾದ ಮಾದರಿ ಖಂಡಿತ ಇದಲ್ಲ. ಉಳಿದ ರಾಜ್ಯಗಳು ಒಳ್ಳೆಯ ಮಾದರಿಗಾಗಿ ಕರ್ನಾಟಕದತ್ತ ನೋಡುತ್ತವೆ. ಜಾಗತಿಕ ಮಾನ್ಯತೆ ಗಳಿಸಿರುವ ಬೆಂಗಳೂರು ನಗರವಂತೂ ತಂತ್ರಜ್ಞಾನದ ವಿಷಯದಲ್ಲಿ ದೇಶದ ಇತರ ನಗರಗಳಿಗೆ ಆದರ್ಶಪ್ರಾಯದಂತಿದೆ. ಶೈಕ್ಷಣಿಕವಾಗಿಯೂ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.

ಅಭಿವೃದ್ಧಿ ಯೋಜನೆಗಳು, ಸುಧಾರಣೆಗಳು ಮತ್ತು ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವ ನೀತಿಗಳ ಅನುಷ್ಠಾನದಲ್ಲಿ ರಾಜ್ಯವು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಸಾಮಾಜಿಕ ಹಾಗೂ ರಾಜಕೀಯ ಸಂಘರ್ಷಗಳು, ಕೋಮು ಗಲಭೆಗಳು ಉಲ್ಬಣಗೊಳ್ಳದಂತೆ ಲಾಗಾಯ್ತಿ ನಿಂದಲೂ ನಿಯಂತ್ರಿಸಿದ ಹಿರಿಮೆ ಕೂಡ ನಮ್ಮ ರಾಜ್ಯಕ್ಕಿದೆ. ಒಂದು ರಾಜ್ಯವಾಗಿ, ಕರ್ನಾಟಕಕ್ಕೆ ಉತ್ತರಪ್ರದೇಶದಿಂದ ಕಲಿಯುವಂತಹದ್ದು ಏನೂ ಇಲ್ಲ. ನಾಡಿನ ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಬಹುದೀರ್ಘ ಸಮಯವನ್ನು ಸವೆಸಿರುವ ಮುಖ್ಯಮಂತ್ರಿ, ಇಂತಹ ಉತ್ಕೃಷ್ಟ ಮಾದರಿಯನ್ನು ಕಡೆಗಣಿಸಿ, ಉತ್ತರಪ್ರದೇಶದ ಪ್ರತಿಗಾಮಿ ಮತ್ತು ಕಾನೂನಿಗೆ ಕಿಮ್ಮತ್ತು ಇಲ್ಲದ ಮಾದರಿಯತ್ತ ಒಲವು ತೋರಿರುವುದು ವಿಷಾದದ ಸಂಗತಿ.

ಕೆಲವು ವರ್ಷಗಳ ಹಿಂದೆಯಷ್ಟೇಬಿಜೆಪಿಗೆ ಸೇರ್ಪಡೆಯಾಗಿರುವ ಅವರು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಮೆಚ್ಚಿಸಬೇಕಾದ ಒತ್ತಡದಲ್ಲಿ ಇರಬಹುದು. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಂಡವರು ತಮ್ಮ ಬದ್ಧತೆಯನ್ನು ತೋರಿಸಲು, ಪಕ್ಷದವರನ್ನೆಲ್ಲ ಮೆಚ್ಚಿಸಲು ಇಂತಹ ಬಿಡುಬೀಸು ಹೇಳಿಕೆ ನೀಡು ವುದು ಹೊಸದೇನಲ್ಲ. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ತಮ್ಮ ರಾಜಕೀಯ ಉಳಿವಿಗಾಗಿ ಈಗ ಹಿಡಿದಿರುವ ಹಾದಿ ಒಪ್ಪತಕ್ಕದ್ದಲ್ಲ. ಇದರಿಂದ ಅವರಿಗೆ ರಾಜಕೀಯವಾಗಿ ಅನುಕೂಲವಾಗುವುದೋ ಇಲ್ಲವೋ ಗೊತ್ತಿಲ್ಲ; ರಾಜ್ಯಕ್ಕಂತೂ ಒಳಿತಾಗುವುದಿಲ್ಲ.

ಸಚಿವ ಅಶ್ವತ್ಥನಾರಾಯಣ ಅವರು ಒಂದು ಹೆಜ್ಜೆ ಮುಂದೆ ಹೋಗಿ ಎನ್‌ಕೌಂಟರ್‌ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಸಂಭಾವ್ಯ ನಕಲಿ ಎನ್‌ಕೌಂಟರ್‌ಗಳ ಕ್ರೂರ ಶಿಕ್ಷೆಯ ಬೆದರಿಕೆ
ಅವರ ಹೇಳಿಕೆಯಲ್ಲಿದೆ. ಸಂವಿಧಾನಬದ್ಧವಾಗಿ ನಡೆಯುವುದಾಗಿ ಮತ್ತು ಸಂವಿಧಾನವನ್ನು ರಕ್ಷಿಸುವುದಾಗಿ ಪ್ರಮಾಣ ಮಾಡಿದ ಸಚಿವರೇ ‘ಎನ್‌ಕೌಂಟರ್‌ ನಡೆಸಲು ಸರ್ಕಾರ ಸಿದ್ಧ’ ಎನ್ನುವಂತಹ ಹೇಳಿಕೆ ನೀಡಿರುವುದು ಆಘಾತಕಾರಿ. ಎನ್‌ಕೌಂಟರ್‌ಗಳಲ್ಲಿ ಯಾರಿಗೆ ಗುಂಡಿಕ್ಕಲಾಗುತ್ತದೆ ಮತ್ತು ಯಾವ ಕಾನೂನಿನ ಅಡಿಯಲ್ಲಿ ಅವರನ್ನು ಕೊಲ್ಲಲಾಗುತ್ತದೆ? ದೇಶದಲ್ಲಿ ಈ ಹಿಂದೆ ಎನ್‌ಕೌಂಟರ್‌ಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ.

ಆದರೆ ನಕಲಿ ಎನ್‌ಕೌಂಟರ್‌ ನಡೆಸಿದವರು ಕೂಡ ತಾವು ಕೊಲೆ ಮಾಡಿದ್ದೇವೆ ಎಂಬುದನ್ನು ಹೇಳಿಕೊಳ್ಳುವುದಿಲ್ಲ. ಆದರೆ, ಈ ಸಚಿವರು ತಮ್ಮ ಸರ್ಕಾರ ಕೊಲ್ಲುವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಇಲ್ಲಿಯೂ ರಾಜಕೀಯ ಲಾಭ ಪಡೆಯುವುದು ಮತ್ತು ಪಕ್ಷದ ಕಾರ್ಯಕರ್ತರನ್ನು ಮೆಚ್ಚಿಸುವುದೇ ಉದ್ದೇಶವಾಗಿರಬಹುದು. ಆದರೆ, ಅಧಿಕಾರದ ಗದ್ದುಗೆಗೆ ಏರಿದವರು ಕಾನೂನುಬಾಹಿರವಾದುದನ್ನು ಪ್ರತಿಪಾದಿಸಿದ ಕ್ಷಣದಿಂದಲೇ ಆ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಾಗೂ ರಾಜಕೀಯ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಕರ್ನಾಟಕವು ಕೋಮು ಸಂಘರ್ಷದ ತಾಣವಾಗಬೇಕೇ, ಇಲ್ಲಿಯೂ ನೋಟಿಸ್‌ ನೀಡದೆಯೇ ಮನೆಗಳನ್ನು ಬುಲ್ಡೋಜರ್‌ಗಳಿಂದ ಧ್ವಂಸಗೊಳಿಸಬೇಕೇ, ವಿವೇಚನಾರಹಿತವಾಗಿ ಜನರನ್ನು ಗುಂಡಿಕ್ಕಿ ಕೊಲ್ಲಬೇಕೇ ಎನ್ನುವುದನ್ನು ಬೊಮ್ಮಾಯಿ ಮತ್ತು ಅವರ ಸಂಪುಟದ ಸಚಿವರು ಯೋಚಿಸಬೇಕು. ನಾಡಿನ ಜನ ಬಯಸುವ ಕರ್ನಾಟಕವಂತೂ ಅದಲ್ಲ. ಅಂತಹ ಮಾತುಗಳು ಕೂಡ ಕೋಮು ಸೌಹಾರ್ದವನ್ನು ಕದಡುವುದಲ್ಲದೆ ರಾಜ್ಯದ ಪ್ರತಿಷ್ಠೆಗೂ ಮಸಿ ಬಳಿಯುತ್ತವೆ.

ಸಮಾಜದಲ್ಲಿ ಕೋಮು ಧ್ರುವೀಕರಣ ಹೆಚ್ಚುತ್ತಿರುವುದು ನಿಜ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎರಡೂ ಸಮುದಾಯಗಳಲ್ಲಿನ ಸಮಾಜವಿರೋಧಿ ಶಕ್ತಿಗಳ ಪಾತ್ರ ಇದರಲ್ಲಿರುವುದು ನಿಸ್ಸಂಶಯ. ಆದರೆ ಬೊಮ್ಮಾಯಿ ಅವರು ಪ್ರತಿಪಾದಿಸಿರುವಂತೆ, ಇಂತಹ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಸರ್ಕಾರಕ್ಕೆ ನಿಜವಾಗಿಯೂ ಗೊತ್ತಿದ್ದರೆ ಇಂದಿನ ಸ್ಥಿತಿ ಖಂಡಿತವಾಗಿ ನಿರ್ಮಾಣವಾಗುತ್ತಿರಲಿಲ್ಲ. ನಾಡಿನ ಎಲ್ಲ ಪ್ರಜೆಗಳನ್ನು ಮತ್ತು ಅವರ ಆಸ್ತಿಗಳನ್ನುಸಂರಕ್ಷಿಸಬೇಕಾದುದು ಸರ್ಕಾರದ ಪ್ರಾಥಮಿಕ ಮತ್ತು ಬಹುಮುಖ್ಯ ಹೊಣೆ.

ಈ ಹೊಣೆ ನಿಭಾಯಿಸುವಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಪದೇ ಪದೇ ಎಡವಿದೆ. ಹತ್ಯೆಗೆ ಕಾರಣವಾದ ಸನ್ನಿವೇಶ ಮತ್ತು ಸಂದರ್ಭಗಳನ್ನು ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ನಿಭಾಯಿಸಬೇಕಿತ್ತು. ಇಂತಹ ಸನ್ನಿವೇಶಗಳನ್ನು ನಿಭಾಯಿಸಲು ಆಡಳಿತವು ಸನ್ನದ್ಧವಾಗಿತ್ತೇ? ಅಹಿತಕರ ಘಟನೆಗಳು ಸಂಭವಿಸುವ ಕುರಿತು ಗುಪ್ತಚರದಳ ಯಾವ ಮುನ್ಸೂಚನೆಯನ್ನೂ ನೀಡಿರಲಿಲ್ಲವೇ? ಒಂದುವೇಳೆ ಮುನ್ಸೂಚನೆ ಇದ್ದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಆಡಳಿತಾತ್ಮಕ ವೈಫಲ್ಯದೊಂದಿಗೆ ರಾಜಕೀಯ ವೈಫಲ್ಯವೂ ಸೇರಿ ಸಮಸ್ಯೆಯನ್ನು ಮತ್ತಷ್ಟು ಜಟಿಲ ಗೊಳಿಸಿರುವುದು ಎದ್ದು ಕಾಣುತ್ತಿದೆ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುವ ವಿಷಯದಲ್ಲಿ, ಹಲಾಲ್‌ ಮಾಂಸದ ಕುರಿತ ವಿವಾದದಲ್ಲಿ, ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ವಿಚಾರದಲ್ಲಿ ಸರ್ಕಾರದ ನೀತಿ–ನಿಲುವುಗಳು ಕೋಮು ಧ್ರುವೀಕರಣದ ಪರವಾಗಿಯೇ ಇದ್ದವು. ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿಯೇ ಇದೆ.

ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಪಕ್ಷದ ಹತಾರವನ್ನು ಚೂಪುಗೊಳಿಸಿ ಚುನಾವಣೆಗೆ ಸನ್ನದ್ಧಗೊಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ. ಸಮುದಾಯಗಳ ನೆಲೆಯಲ್ಲಿ ಸಮಾಜದ ವಿಭಜನೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕ್ಷುಬ್ಧ ವಾತಾವರಣ, ಹಿಂಸಾಚಾರ, ಪ್ರತೀಕಾರ ಎಲ್ಲವೂ ಈ ನೀತಿ–ನಿಲುವುಗಳ ತಕ್ಷಣದ ಫಲ. ಹತ್ಯೆಗಳು ಮತ್ತು ಅವುಗಳನ್ನು ಎದುರಿಸಲು ಕಾನೂನುಬಾಹಿರ, ಸಂವಿಧಾನಬಾಹಿರ ಮಾರ್ಗ ಅಳವಡಿಸಿಕೊಳ್ಳುವ ಸರ್ಕಾರದ ಹತಾಶೆಯನ್ನು ಆ ಹಿನ್ನೆಲೆಯಲ್ಲಿ ನೋಡಬೇಕಿರುವುದು ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT