ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ನೀರಿನ ಘಟಕ ಅಳವಡಿಕೆಯಲ್ಲಿ ಅಕ್ರಮ: ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ

Last Updated 22 ಫೆಬ್ರುವರಿ 2023, 4:14 IST
ಅಕ್ಷರ ಗಾತ್ರ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿದಿದೆ. ಇದರಿಂದಾಗಿ ಕೆಲವು ಪ್ರದೇಶಗಳ ಜನರು ಫ್ಲೋರೈಡ್‌, ಆರ್ಸೆನಿಕ್‌ ಸೇರಿದಂತೆ ಅಪಾಯಕಾರಿ ರಾಸಾಯನಿಕಗಳಿಂದ ಕಲುಷಿತವಾಗಿರುವ ನೀರನ್ನು ಸೇವಿಸುತ್ತಿದ್ದಾರೆ. ಅಂತಹ ನೀರನ್ನು ಶುದ್ಧೀಕರಿಸದೆ ನೇರವಾಗಿ ಸೇವಿಸುತ್ತಿರುವುದರಿಂದ ಗಂಭೀರ ಸ್ವರೂಪದ ರೋಗಬಾಧೆಗೆ ಜನರು ಒಳಗಾಗುತ್ತಿರುವುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವುದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರದಿಂದಲೇ ಅಳವಡಿಸಿ, ಶುದ್ಧೀಕರಿಸಿದ ನೀರನ್ನು ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಒದಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯು 2014ರಲ್ಲಿ ಜಾರಿಗೆ ಬಂತು. ಆಗಿನಿಂದ 2021ರವರೆಗೂ ಹಂತ ಹಂತವಾಗಿ 26,000ಕ್ಕೂ ಹೆಚ್ಚು ಘಟಕಗಳನ್ನು ರಾಜ್ಯದಾದ್ಯಂತ ಅಳವಡಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆರಂಭಿಸಿದ ಈ ಕಾರ್ಯಕ್ರಮವನ್ನು ನಂತರದ ದಿನಗಳಲ್ಲಿ ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳೂ ಅನುಷ್ಠಾನಗೊಳಿಸಿದವು. ರಾಜ್ಯದ ಹಲವೆಡೆ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿವೆ. ಕೆಲವೆಡೆ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಿಟ್ಟುಹೋದ ನಿದರ್ಶನಗಳಿವೆ. ಈ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಆರೋಪದ ಕುರಿತು ವಿಚಾರಣೆಗಾಗಿ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಜಂಟಿ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ವರದಿಯನ್ನು ಸೋಮವಾರ ವಿಧಾನಮಂಡಲದ ಎರಡೂ ಸದನಗಳಲ್ಲಿ ಮಂಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ನಿಯಮಗಳ ವ್ಯಾಪಕ ಉಲ್ಲಂಘನೆ, ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವುದನ್ನು ಈ ವಿಚಾರಣಾ ವರದಿ ತೆರೆದಿಟ್ಟಿದೆ.

ಸಮಿತಿ ತನ್ನದೇ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ, 2014ರಿಂದ 2021ರ ಅವಧಿಯಲ್ಲಿ ವಿವಿಧ ಇಲಾಖೆಗಳು ಒಟ್ಟು 26,569 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿವೆ. ಆದರೆ, ಜಂಟಿ ಸದನ ಸಮಿತಿಯ ಮುಂದೆ ಸರ್ಕಾರದ ವಿವಿಧ ಇಲಾಖೆಗಳು 25,219 ಘಟಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಒದಗಿಸಿವೆ. ಉಳಿದ ಘಟಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿಟ್ಟಿರುವುದು ಈ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಿದೆ. 7,893 ಘಟಕಗಳಲ್ಲಿ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿರುವುದನ್ನು ಸಮಿತಿ ಪತ್ತೆ ಮಾಡಿದೆ.

2,606 ಘಟಕಗಳನ್ನು ಟೆಂಡರ್‌ ಪ್ರಕ್ರಿಯೆ ನಡೆಸದೇ ಅಳವಡಿಸಲಾಗಿದೆ ಮತ್ತು 3,581 ಘಟಕಗಳ ಅಳವಡಿಕೆಯ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಗಳೇ ಇಲ್ಲ ಎಂಬುದು ಇಡೀ ಯೋಜನೆಯನ್ನು ಅಧಿಕಾರಿಗಳು ಮತ್ತು ಅಧಿಕಾರಸ್ಥ ಚುನಾಯಿತ ಪ್ರತಿನಿಧಿಗಳು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ. ಲಭ್ಯವಿರುವ ನೀರಿನ ಗುಣಮಟ್ಟದ ಕುರಿತು ಪ್ರಯೋಗಾಲಯದಿಂದ ಪರೀಕ್ಷಾ ವರದಿ ಪಡೆಯದೇ 2,195 ಘಟಕಗಳನ್ನು ಅಳವಡಿಸಲಾಗಿದೆ ಮತ್ತು 2,263 ಘಟಕಗಳಿಗೆ ಪೂರೈಸುತ್ತಿರುವ ನೀರಿನ ಪರೀಕ್ಷೆ ನಡೆಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂಬುದು ಕಳವಳಕಾರಿ ಸಂಗತಿ. ನೀರಿನ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳದೇ ಜನರಿಗೆ ಪೂರೈಸುತ್ತಿರುವುದು ಸ್ವೀಕಾರಾರ್ಹವಲ್ಲ. ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಜನರನ್ನು ಈ ರೀತಿ ವಂಚಿಸಿರುವ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಕ್ಷಮೆಗೆ ಅರ್ಹರಲ್ಲ. ಈ ಯೋಜನೆಯಡಿ ಪ್ರತೀ ಘಟಕಕ್ಕೆ ಸರಾಸರಿ ವೆಚ್ಚ ₹ 7.48 ಲಕ್ಷಗಳಷ್ಟಿದ್ದರೆ, ಕೆಲವು ಘಟಕಗಳಿಗೆ ₹ 45 ಲಕ್ಷದವರೆಗೂ ವೆಚ್ಚ ಮಾಡಿರುವುದು ಅವ್ಯವಹಾರ ನಡೆದಿರುವುದನ್ನು ಧ್ವನಿಸುತ್ತದೆ ಎಂದು ಸದನ ಸಮಿತಿ ಹೇಳಿದೆ. ಈ ಯೋಜನೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮ, ಕಾನೂನು ಉಲ್ಲಂಘನೆ ನಡೆದಿರುವುದನ್ನು ಗುರುತಿಸಿರುವ ಸಮಿತಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದೆ.

ಈ ಶಿಫಾರಸನ್ನು ಸರ್ಕಾರ ಕಿಂಚಿತ್ತೂ ವಿಳಂಬವಿಲ್ಲದೆ ಒಪ್ಪಿಕೊಂಡು, ತನಿಖೆಗೆ ಆದೇಶಿಸಬೇಕು. ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಜನರ ಜೀವದ ಜತೆ ಚೆಲ್ಲಾಟ ಆಡುವ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಗುರುತಿಸಿ ಶಿಕ್ಷೆಯಾಗುವಂತೆ ಮಾಡಬೇಕು. ಅದರ ಜತೆಯಲ್ಲೇ, ಈಗ ಕಾರ್ಯನಿರ್ವಹಿಸುತ್ತಿರುವ ಘಟಕಗಳಲ್ಲಿ ಪೂರೈಸುತ್ತಿರುವ ನೀರನ್ನು ಉನ್ನತ ಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಬೇಕು. ಕಲುಷಿತ ಹಾಗೂ ಅಪಾಯಕಾರಿ ರಾಸಾಯನಿಕ ಅಂಶಗಳಿರುವ ನೀರು ಪೂರೈಕೆ ಕಂಡುಬಂದಲ್ಲಿ ತಕ್ಷಣವೇ ಅಂತಹ ಘಟಕಗಳನ್ನು ಸ್ಥಗಿತಗೊಳಿಸಬೇಕು. ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT