ಸೋಮವಾರ, ಡಿಸೆಂಬರ್ 6, 2021
23 °C

ಸಂಪಾದಕೀಯ | ಬಿಡಿಎ ಶುದ್ಧೀಕರಣಕ್ಕೆ ಈಗಲಾದರೂ ಇಚ್ಛಾಶಕ್ತಿ ಪ್ರದರ್ಶಿಸಲೇಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ 1976ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆಯಾಯಿತು. ರಾಜಧಾನಿಯ ಬೆಳವಣಿಗೆಯ ವೇಗ ಹೆಚ್ಚಿದಂತೆ ಪ್ರಾಧಿಕಾರದ ಪರಿಧಿಯೂ
ವಿಸ್ತರಣೆಯಾಗುತ್ತಲೇ ಸಾಗಿದೆ. ನಗರದ ಮೂಲಸೌಕರ್ಯ ಅಭಿವೃದ್ಧಿಯ ದಿಸೆಯಲ್ಲಿ ಮಹತ್ವದ ಹೊಣೆಗಾರಿಕೆ ಇರುವ ಈ ಸಂಸ್ಥೆ ಕೆಲವು ದಶಕಗಳಿಂದ ಈಚೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳ ಆರೋಪಗಳನ್ನು ಹೊತ್ತುಕೊಂಡೇ ಸಾಗುತ್ತಿದೆ.

ಬಡಾವಣೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಣೆ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಗೆ ಟೆಂಡರ್‌, ನಿವೇಶನಗಳ ಹಂಚಿಕೆ ದೋಷರಹಿತವಾಗಿ ನಡೆದಿರುವ ಉದಾಹರಣೆಗಳೇ ಕಡಿಮೆ. ಬಡಾವಣೆ ನಿರ್ಮಾಣಕ್ಕೆ ಗುರುತಿಸಿದ್ದ ಜಮೀನುಗಳನ್ನು ಅಧಿಸೂಚನೆಯಿಂದ ಕೈಬಿಡುವ (ಡಿನೋಟಿಫಿಕೇಷನ್‌) ಪ್ರಕ್ರಿಯೆಯಲ್ಲಿನ ಅಕ್ರಮದ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೇ ಶುಕ್ರವಾರ ಮತ್ತು ಶನಿವಾರ ಬಿಡಿಎ ಕೇಂದ್ರ ಕಚೇರಿಯ ಮೇಲೆ ದಾಳಿ ಮಾಡಿ, ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಪ್ರಾಧಿಕಾರದಲ್ಲಿ ನಡೆದಿದ್ದ ಮತ್ತು ನಡೆಯುತ್ತಿರುವ ನಾನಾ ಬಗೆಯ ಅಕ್ರಮಗಳನ್ನು ಪತ್ತೆಮಾಡಿದೆ.

ನೂರಾರು ಕಡತಗಳನ್ನು ವಶಕ್ಕೆ ಪಡೆದಿದೆ. ಅನರ್ಹರಿಗೆ ನಿವೇಶನ ಹಂಚಿಕೆ, ಜಮೀನು ಸ್ವಾಧೀನಪಡಿಸಿಕೊಳ್ಳದಿದ್ದರೂ ಪರಿಹಾರ ವಿತರಣೆ, ಸರ್ಕಾರಿ ಜಮೀನುಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರದ ಮೊತ್ತ ಕೊಳ್ಳೆಯಂತಹ ಅಕ್ರಮಗಳನ್ನು ಪತ್ತೆ ಮಾಡಿರುವುದಾಗಿ ಎಸಿಬಿ ಅಧಿಕಾರಿಗಳು ಪ್ರಕಟಿಸಿದ್ದಾರೆ. ಬಿಡಿಎ ಅಧಿಕಾರಿಗಳು ಅರಿವಿದ್ದೂ ಒಂದೇ ನಿವೇಶನವನ್ನು ಇಬ್ಬರು, ಮೂವರಿಗೆ ಹಂಚಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ ಮತ್ತು ಕಡತಗಳ ವಿಲೇವಾರಿಯಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ಜನರನ್ನು ಹಿಂಸಿಸುತ್ತಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು
ಸಂಗ್ರಹಿಸಿರುವುದಾಗಿ ತನಿಖಾ ಸಂಸ್ಥೆ ತಿಳಿಸಿದೆ.

ಬಿಡಿಎ ವಿರುದ್ಧ ಇಂತಹ ದೂರುಗಳು ಕೇಳಿಬರುವುದು ಹೊಸದೇನೂ ಅಲ್ಲ. ಭ್ರಷ್ಟಾಚಾರ, ದುರಾಡಳಿತದ ಕಾರಣಕ್ಕಾಗಿ ಹಲವು ಬಾರಿ ನ್ಯಾಯಾಲಯಗಳಿಂದ ಪ್ರಾಧಿಕಾರ ಛೀಮಾರಿಗೆ ಒಳಗಾದ ಉದಾಹರಣೆಗಳಿವೆ. ಈ ಬಾರಿ ರಾಜ್ಯ ಸರ್ಕಾರದ ಉನ್ನತ ತನಿಖಾ ಸಂಸ್ಥೆಯು ಸಾರ್ವಜನಿಕರ ದೂರುಗಳನ್ನು ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರಿಗೆ ವಸತಿ ಸೌಲಭ್ಯ ಒದಗಿಸುವ ವಿಚಾರದಲ್ಲಿ ಜನಪರವಾಗಿ ಕೆಲಸ ಮಾಡಬೇಕಿದ್ದ ಪ್ರಾಧಿಕಾರವು ಭ್ರಷ್ಟಾಚಾರ, ಅಕ್ರಮ ವ್ಯವಹಾರಗಳ ಕೂಪವಾಗಿದೆ ಎಂಬ ಆರೋಪಕ್ಕೆ ಈಗ ಬಲವಾದ ಸಾಕ್ಷ್ಯಗಳೇ ದೊರಕಿವೆ.

ಈ ವಿಚಾರ ಆಗಾಗ ಚರ್ಚೆಯ ಮುನ್ನೆಲೆಗೆ ಬಂದರೂ, ಇದು ರಾಜಕೀಯ ಅಸ್ತ್ರವಾಗಿ ಬಳಕೆಯಾದುದೇ ಹೆಚ್ಚು. ಪ್ರಾಧಿಕಾರವನ್ನು ಭ್ರಷ್ಟಾಚಾರ, ದುರಾಡಳಿತದಿಂದ ಮುಕ್ತಗೊಳಿಸುವ ದಿಸೆಯಲ್ಲಿ ಪ್ರಾಮಾಣಿಕವಾಗಿ, ಬದ್ಧತೆಯಿಂದ ಕ್ರಮ ಕೈಗೊಳ್ಳಲು ಪ್ರಯತ್ನಗಳೇ ನಡೆದಿಲ್ಲ. ಈ ವರ್ಷದ ಆರಂಭದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಬಿಡಿಎ ಅಧ್ಯಕ್ಷ
ಎಸ್‌.ಆರ್‌. ವಿಶ್ವನಾಥ್‌ ಮತ್ತು ಪ್ರಾಧಿಕಾರದ ಆಗಿನ ಆಯುಕ್ತ ಡಾ.ಎಚ್‌.ಆರ್‌. ಮಹಾದೇವ್‌ ಮಧ್ಯೆ ಆರೋಪ– ಪ್ರತ್ಯಾರೋಪಗಳು ನಡೆದಿದ್ದವು. ಬಳಿಕ ಬಿಡಿಎ ಕಚೇರಿಗೆ ತೆರಳಿ ಪ್ರಗತಿಪರಿಶೀಲನೆ ನಡೆಸಿದ್ದ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದ್ದರು. ‘ಬಿಡಿಎ ಶುದ್ಧೀಕರಣಕ್ಕೆ ನಾಲ್ಕು ತಿಂಗಳು ಬೇಕು’ ಎಂದು ವಿಧಾನಸಭೆಯಲ್ಲೇ ಪ್ರಕಟಿಸಿದ್ದರು. ಆದರೆ, ಯಾವ ಕ್ರಮವೂ ಜಾರಿಗೆ ಬಂದಿರಲಿಲ್ಲ. ಪ್ರಾಧಿಕಾರದ ಅಂಗಳದಲ್ಲಿ ಭ್ರಷ್ಟಾಚಾರ, ಅವ್ಯವಹಾರ, ದುರಾಡಳಿತ ಯಥಾವತ್ತಾಗಿ ಮುಂದುವರಿದಿರುವುದನ್ನು ಎಸಿಬಿ ದಾಳಿ ಬಹಿರಂಗಪಡಿಸಿದೆ.

ಎರಡು ದಿನಗಳ ಕಾಲ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳಲ್ಲಿ ಶೋಧ ನಡೆಸಿರುವ ಎಸಿಬಿ ಅಧಿಕಾರಿಗಳು, ಆರಂಭಿಕ ಹಂತದಲ್ಲೇ ₹300 ಕೋಟಿಗೂ ಹೆಚ್ಚು ಮೊತ್ತದ ಅಕ್ರಮಗಳನ್ನು ಪತ್ತೆಹಚ್ಚಿದ್ದಾರೆ. ಬಗೆದಷ್ಟೂ ಅಕ್ರಮಗಳು ಪತ್ತೆಯಾಗುತ್ತ ಇವೆ. ಪ್ರಾಧಿಕಾರದಲ್ಲಿನ ಅಕ್ರಮಗಳ ಕುರಿತು ತಾವು ಕೂಡ ಎಸಿಬಿಗೆ ದೂರು ನೀಡಿರುವುದಾಗಿ ಬಿಡಿಎ ಅಧ್ಯಕ್ಷರೇ ಹೇಳಿಕೆ ನೀಡಿದ್ದಾರೆ. ಸರ್ಕಾರ, ಆಡಳಿತ ಮಂಡಳಿ ಇವೆಲ್ಲವನ್ನೂ ಮೀರಿದ ರೀತಿಯಲ್ಲಿ ಬಿಡಿಎ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆಯೇ ಎಂಬ ಸಂಶಯಕ್ಕೆ ಈ ಬೆಳವಣಿಗೆ ಎಡೆಮಾಡಿದೆ. ಬಿಡಿಎ ಶುದ್ಧೀಕರಣಕ್ಕೆ ಯಾವ ರಾಜಕೀಯ ಪಕ್ಷದ ನೇತೃತ್ವದ ಸರ್ಕಾರವೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.

ಸದ್ಯದ ಸ್ಥಿತಿಯನ್ನು ಅವಲೋಕಿಸಿದರೆ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ, ಭ್ರಷ್ಟಾಚಾರಗಳ ತನಿಖೆಗೆ ಪ್ರತ್ಯೇಕವಾದ ಉನ್ನತ ಮಟ್ಟದ ತಂಡವೊಂದನ್ನು ರಚಿಸುವುದು ಸೂಕ್ತ ಎನಿಸುತ್ತದೆ. ಎಸಿಬಿಯಲ್ಲಿ ವಿಶೇಷ ತಂಡವೊಂದನ್ನು ರಚಿಸುವ ಅಥವಾ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದರೆ ಈ ಪ್ರಕರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗಬಹುದು. ಅದರ ಜತೆಯಲ್ಲೇ ದುರಾಡಳಿತವನ್ನು ತೊಲಗಿಸಿ, ಪ್ರಾಧಿಕಾರವನ್ನು ಜನಸ್ನೇಹಿ ಸಂಸ್ಥೆಯನ್ನಾಗಿ ಪರಿವರ್ತಿಸುವ ಸುಧಾರಣಾ ಕ್ರಮಗಳ ಅಗತ್ಯವೂ ಇದೆ. ‘ಬಿಡಿಎಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆಸಿರುವ ಯಾರನ್ನೂ ರಕ್ಷಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅದು ಹೇಳಿಕೆಗೆ ಸೀಮಿತವಾಗಬಾರದು.

ಪ್ರಾಧಿಕಾರದಲ್ಲಿ ನಡೆದಿರುವ ಎಲ್ಲ ಬಗೆಯ ಅವ್ಯವಹಾರ, ಭ್ರಷ್ಟಾಚಾರಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರಕಟಿಸಬೇಕು. ಮುಖ್ಯಮಂತ್ರಿ ತಮ್ಮ ಮಾತನ್ನು ಕೃತಿಗಿಳಿಸುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು