ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಏಕಕಾಲದಲ್ಲಿ ಚುನಾವಣೆ ಪ್ರಸ್ತಾವ; ಒಳಿತಿಗಿಂತ ಸಮಸ್ಯೆಗಳೇ ಹೆಚ್ಚು

Published 24 ಜನವರಿ 2024, 19:43 IST
Last Updated 24 ಜನವರಿ 2024, 19:43 IST
ಅಕ್ಷರ ಗಾತ್ರ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವದ ಬಗ್ಗೆ ಪರಿಶೀಲನೆ ನಡೆಸಿ, ಶಿಫಾರಸುಗಳನ್ನು ಮಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ರಚಿಸಿರುವ ಉನ್ನತಾಧಿಕಾರ ಸಮಿತಿಯು ಚುರುಕಿನಿಂದ ಮುಂದಡಿ ಇರಿಸಿದೆ. ಈ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆಗಳನ್ನು, ಸಲಹೆಗಳನ್ನು ನೀಡುವಂತೆ ಸಮಿತಿಯು ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ಅವರಿಗೆ ಸಲಹೆ, ಅನಿಸಿಕೆ ಸಲ್ಲಿಸಲು ಜನವರಿ 5ರಿಂದ 15ರವರೆಗೆ ಕಾಲಾವಕಾಶ ಕೂಡ ನೀಡಿತ್ತು. ಸಮಿತಿಯು 20,972 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಹಾಗೂ ಅವುಗಳ ಪೈಕಿ ಶೇಕಡ 81ರಷ್ಟು ಮಂದಿ ಪ್ರಸ್ತಾವದ ಪರವಾಗಿ ಇದ್ದಾರೆ ಎಂದು ವರದಿಯಾಗಿದೆ. 17 ರಾಜಕೀಯ ಪಕ್ಷಗಳು ಕೂಡ ಈ ಪ್ರಸ್ತಾವದ ಕುರಿತಾಗಿ ತಮ್ಮ ನಿಲುವನ್ನು ಸಮಿತಿಗೆ ತಿಳಿಸಿವೆ. ಕೋವಿಂದ್ ಅವರು ಪ್ರಸ್ತಾವದ ವಿಚಾರವಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ), ಹಿರಿಯ ನ್ಯಾಯಶಾಸ್ತ್ರಜ್ಞರು ಮತ್ತು ಉದ್ಯಮ ಸಂಘಟನೆಗಳ ಜೊತೆ ಮಾತುಕತೆ ಆರಂಭಿಸಿದ್ದಾರೆ. ಸಮಿತಿಯ ಮುಂದಿನ ಸಭೆಯು ಜನವರಿ 27ರಂದು ನಡೆಯಲಿದೆ. ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕೆ ಚುರುಕು ನೀಡಲಾಗಿದೆ, ಪ್ರಸ್ತಾವವು ನಿರೀಕ್ಷೆಗಿಂತ ಮೊದಲೇ ಅನುಷ್ಠಾನಕ್ಕೆ ಬರಬಹುದು ಎಂಬ ಸೂಚನೆಯನ್ನು ಈ ಎಲ್ಲ ಬೆಳವಣಿಗೆಗಳು ನೀಡುತ್ತಿವೆ.

‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವಕ್ಕೆ ನೀತಿ ಆಯೋಗ ಮತ್ತು ಕೇಂದ್ರ ಕಾನೂನು ಆಯೋಗ ಬೆಂಬಲ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಸ್ವಾತಂತ್ರ್ಯೋತ್ಸವ ಭಾಷಣವೂ ಸೇರಿದಂತೆ ಹಲವು ಬಾರಿ ಈ ಪ್ರಸ್ತಾವದ ಪರವಾಗಿ ಮಾತನಾಡಿದ್ದಾರೆ. ಕೋವಿಂದ್ ಅವರು ‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ 2017ರಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ ಉಲ್ಲೇಖಿಸಿದ್ದರು. ಉನ್ನತಾಧಿಕಾರ ಸಮಿತಿಯ ಇತರ ಸದಸ್ಯರು ಕೂಡ ಈ ಪ್ರಸ್ತಾವದ ಪರವಾಗಿ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಸಮಿತಿಯಲ್ಲಿ ಇರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತ್ರ ಅಲ್ಲಿ ಈ ಪ್ರಸ್ತಾವಕ್ಕೆ ವಿರೋಧ ಸೂಚಿಸಬಹುದು. ಆದರೆ ಅವರು ಸಮಿತಿಯ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಉನ್ನತಾಧಿಕಾರ ಸಮಿತಿಯ ರಚನೆ ಹಾಗೂ ಅದಕ್ಕೆ ಸದಸ್ಯರ ನೇಮಕವೇ, ಸರ್ಕಾರವು ಸಮಿತಿಯಿಂದ ಪೂರಕವಾದ ವರದಿಯನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಸೂಚಿಸುವಂತೆ ಇತ್ತು. ಆದರೆ ಸೂಕ್ತವಾದ ಸಮಾಲೋಚನೆ ಇಲ್ಲದೆ ಈ ಪ್ರಸ್ತಾವವನ್ನು ಅವಸರದಲ್ಲಿ ಮುಂದಕ್ಕೆ ಒಯ್ಯುವುದು ತಪ್ಪಾಗುತ್ತದೆ. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಪ್ರಸ್ತಾವವನ್ನು ಬೇರೆ ಬೇರೆ ಕಾರಣಗಳಿಗಾಗಿ ವಿರೋಧಿಸಿವೆ. ಈ ಪ್ರಸ್ತಾವವು ಕಾರ್ಯರೂಪಕ್ಕೆ ಬಂದಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪ್ರಬಲ ರಾಜಕೀಯ ಪಕ್ಷಕ್ಕೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುತ್ತದೆ. ಪ್ರಸ್ತಾವವು ದೇಶದ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿಲ್ಲ.

2029ಕ್ಕೂ ಮೊದಲು ಏಕಕಾಲದಲ್ಲಿ ಚುನಾವಣೆ ನಡೆಸಲು ಆಗದು ಎಂಬ ಅಭಿಪ್ರಾಯವನ್ನು ಚುನಾವಣಾ ಆಯೋಗವು ವ್ಯಕ್ತಪಡಿಸಿದೆ ಎನ್ನಲಾಗಿದೆ. ಏಕೆಂದರೆ, ಎಲೆಕ್ಟ್ರಾನಿಕ್‌ ಮತಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತವೆ ಎಂಬ ಕಾರಣವನ್ನು ಅದು ನೀಡಿದೆ ಎ‌ನ್ನಲಾಗಿದೆ. ಈ ಪ್ರಸ್ತಾವವು ಹಲವು ಗಂಭೀರವಾದ ಕಾನೂನು ಮತ್ತು ರಾಜಕೀಯ ಸಮಸ್ಯೆಗಳನ್ನು ಕೂಡ ಒಳಗೊಂಡಿದೆ. ಪ್ರಸ್ತಾವವು ಜಾರಿಗೆ ಬರಬೇಕು ಎಂದಾದರೆ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಬರಬೇಕಾಗುತ್ತದೆ. ದೇಶದ ರಾಜಕೀಯ ಹಾಗೂ ಸಾಮಾಜಿಕ ಭಿನ್ನತೆಗಳಿಗೆ ಹೊಂದಿಕೆ ಆಗುವಂತೆ ಚುನಾವಣಾ ವ್ಯವಸ್ಥೆಯನ್ನು ಕಟ್ಟಬೇಕಾಗುತ್ತದೆ. ಪ್ರಜಾತಂತ್ರವು ಇನ್ನೂ ವಿಕಾಸ ಹೊಂದುತ್ತಿರುವ ಈ ದೇಶದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಆಲೋಚನೆಯು ರಾಜಕೀಯ ಪ್ರಕ್ರಿಯೆಗಳ ಸಹಜ ಹರಿವಿಗೆ ಅಡ್ಡಿಯುಂಟು ಮಾಡುವಂತಿದೆ. ಈ ಪ್ರಸ್ತಾವವನ್ನು ಜಾರಿಗೆ ತಂದರೆ ಎದುರಾಗುವ ಸಮಸ್ಯೆಗಳು ಹಲವು. ಈ ಸಮಸ್ಯೆಗಳ ಎದುರು, ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಕೆಲವು ಕೋಟಿಗಳಷ್ಟು ಹಣ ಉಳಿತಾಯ ಆಗುತ್ತದೆ ಹಾಗೂ ಇನ್ನೂ ಕೆಲವು ಪ್ರಯೋಜನಗಳು ಆಗುತ್ತವೆ ಎನ್ನುವುದು ಹೆಚ್ಚು ಮಹತ್ವ ಪಡೆಯುವುದಿಲ್ಲ. ಈ ವ್ಯವಸ್ಥೆಯಿಂದಾಗಿ ಚುನಾವಣಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT