ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬಿಹಾರ ಚುನಾವಣಾ ಫಲಿತಾಂಶ; ಎಲ್ಲ ಪಕ್ಷಗಳಿಗೂ ಇದೆ ಪಾಠ

Last Updated 11 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮತಗಟ್ಟೆ ಸಮೀಕ್ಷೆಗಳೆಲ್ಲವನ್ನೂ ಸುಳ್ಳಾಗಿಸಿ ಜೆಡಿಯು ನೇತೃತ್ವದ ಎನ್‌ಡಿಎ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತ ಪಡೆದಿದೆ. ಎನ್‌ಡಿಎ ಮೈತ್ರಿಕೂಟ ಮತ್ತು ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ನಡುವೆ ಭಾರಿ ಜಿದ್ದಾಜಿದ್ದಿ ಸ್ಪರ್ಧೆಯ ಫಲಿತಾಂಶವು ಬಿಹಾರ ರಾಜಕಾರಣದ ಸಮೀಕರಣವನ್ನು ಬದಲಿಸಿದೆ. ಹಿಂದಿನಂತೆಯೇ ಈ ಬಾರಿಯೂ ಆರ್‌ಜೆಡಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದಕ್ಕಿಂತ ಒಂದು ಸ್ಥಾನ ಕಡಿಮೆ ಪಡೆದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಬಿಹಾರದಲ್ಲಿ ಎನ್‌ಡಿಎ ಕೂಟದ ಹಿರಿಯ ಪಾಲುದಾರ ಪಕ್ಷವಾಗಿದ್ದ ಜೆಡಿಯು ಭಾರಿ ಹಿನ್ನಡೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದು, ಸತತ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಆಳ್ವಿಕೆಯ ಬಗ್ಗೆ ಮತದಾರ ನೀಡಿದ ತೀರ್ಪು ಎಂದೇ ಭಾವಿಸಬೇಕಾಗುತ್ತದೆ. ನಿತೀಶ್‌ ಕುಮಾರ್ ಮುಖ್ಯಮಂತ್ರಿ ಆಗಿ ಮುಂದುವರಿಯುವರೇ ಎಂಬ ಚರ್ಚೆಗೂ ಅವರ ಪಕ್ಷದ ಹಿನ್ನಡೆಯು ದಾರಿ ಮಾಡಿಕೊಟ್ಟಿತ್ತು. ಜೆಡಿಯುಗೆ ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಲಭಿಸಿದರೂ ಚುನಾವಣೆಗೆ ಮೊದಲೇ ಮಾತು ಕೊಟ್ಟಂತೆ ನಿತೀಶ್‌ ಅವರೇ ಮುಖ್ಯಮಂತ್ರಿ ಎಂಬ ಮಾತನ್ನು ಪಾಲಿಸುವುದಾಗಿ ಬಿಜೆಪಿ ಹೇಳುವುದರೊಂದಿಗೆ ಈ ಚರ್ಚೆ ಸದ್ಯಕ್ಕೆ ಮಹತ್ವ ಕಳೆದುಕೊಂಡಿದೆ. ಹಾಗಿದ್ದರೂ ಇದು ಪೂರ್ಣವಾಗಿ ಮುಗಿದ ಅಧ್ಯಾಯ ಎಂದು ಹೇಳಲಾಗದು. 74 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿಯು ಬಿಹಾರದ ಪ್ರಮುಖ ಪಕ್ಷವಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ರಾಜ್ಯ ಮಟ್ಟದಲ್ಲಿ ವರ್ಚಸ್ವೀ ನಾಯಕರೇ ಇಲ್ಲದ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಸರೆ; ಅವರ ಜನಪ್ರಿಯತೆಗೆ ಕೊಂಚ ಕೂಡ ಕುಂದು ಬಂದಿಲ್ಲ ಎಂಬುದನ್ನು ಈ ಫಲಿತಾಂಶ ಹೇಳಿದೆ. ಕೇರಳವನ್ನು ಬಿಟ್ಟು ದೇಶದ ಎಲ್ಲೆಡೆ ನೆಲೆ ಕಳೆದುಕೊಂಡಿರುವ ಎಡಪಕ್ಷಗಳು 16 ಕ್ಷೇತ್ರಗಳಲ್ಲಿ ಗೆದ್ದಿರುವುದು ಎಡಪಂಥೀಯ ಚಿಂತನೆಯ ಪರವಾಗಿ ಇರುವವರಿಗೆ ಶುಭ ಸುದ್ದಿ. 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 19ರಲ್ಲಿ ಗೆದ್ದಿರುವ ಕಾಂಗ್ರೆಸ್‌, ಪ್ರಾಮಾಣಿಕವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಎಂದೋ ಕಳೆದುಹೋಗಿದೆ. ನಿತೀಶ್‌ ಅವರನ್ನು ಸೋಲಿಸುವುದೇ ಗುರಿ ಎಂದು ಸ್ಪರ್ಧೆಗೆ ಇಳಿದಿದ್ದ ಚಿರಾಗ್‌ ಪಾಸ್ವಾನ್‌ ನೇತೃತ್ವದ ಪಕ್ಷವು ಕೇವಲ ಒಂದು ಸ್ಥಾನ ಗೆದ್ದಿದೆ. ಎಲ್‌ಜೆಪಿ ಸ್ಪರ್ಧೆಯ ಹಿಂದಿನ ಕಾರ್ಯತಂತ್ರ ಏನೇ ಇದ್ದರೂ ಗೆಲ್ಲುವ ಗುರಿ ಇಲ್ಲದ, ಅಭಿವೃದ್ಧಿಯ ಕನಸುಗಳನ್ನು ಬಿತ್ತದ ನಕಾರಾತ್ಮಕ ಧೋರಣೆಗೆ ಜನರು ಕಲಿಸಿದ ನೀತಿ ಪಾಠ ಇದು ಎಂದು ಪರಿಗಣಿಸುವುದೇ ಒಳ್ಳೆಯದು.

ಹೊಸ ತಲೆಮಾರಿನ ಮೊದಲ ಜನನಾಯಕ ಎಂಬ ಹೆಗ್ಗಳಿಕೆ ತಮ್ಮದು ಎಂದು ಆರ್‌ಜೆಡಿಯ ತೇಜಸ್ವಿ ಯಾದವ್‌ ನಿಸ್ಸಂಶಯವಾಗಿಯೂ ಹೆಮ್ಮೆಪಡಬಹುದು. ಮಹಾಮೈತ್ರಿಕೂಟ ಲೆಕ್ಕಕ್ಕೇ ಇಲ್ಲ, ಬಿಹಾರ ಚುನಾವಣೆಯು ಎನ್‌ಡಿಎಗೆ ಸುಲಭದ ತುತ್ತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. 31 ವರ್ಷ ವಯಸ್ಸಿನ ತೇಜಸ್ವಿ ಅವರನ್ನು ಬಿಟ್ಟರೆ ಆ ಪಕ್ಷಕ್ಕೆ ಬೇರೆ ನಾಯಕರೂ ಇಲ್ಲದ ಕಾರಣ ಈ ವಿಶ್ಲೇಷಣೆ ನಿಜವೆಂದೂ ತೋರುತ್ತಿತ್ತು. ಆದರೆ, ತೇಜಸ್ವಿಯ ಪ್ರಚಾರ ವೈಖರಿ, ಜನರನ್ನು ಅರ್ಥ ಮಾಡಿಕೊಳ್ಳಲು ಅವರು ಯತ್ನಿಸಿದ ಪರಿ ಚುನಾವಣಾ ಹೋರಾಟದ ಚಿತ್ರಣವನ್ನು ಬದಲಿಸಿತು. ಸರಳ ಬಹುಮತ ಪಡೆಯಲು ಎನ್‌ಡಿಎ ಏದುಸಿರು ಬಿಡುವಂತಾಯಿತು. ಗೆದ್ದಿರುವ ಮೈತ್ರಿಕೂಟಕ್ಕೆ ಚುನಾವಣಾ ಚಿತ್ರಣದಲ್ಲಿ ಆದ ಬದಲಾವಣೆಯಲ್ಲಿಯೇ ಹಲವು ಪಾಠಗಳಿವೆ. ‘ಹತ್ತು ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ ಕೊಡುತ್ತೇನೆ’ ಎಂದು ತೇಜಸ್ವಿ ನೀಡಿದ್ದ ಭರವಸೆಯು ಯುವಸಮೂಹವು ಅವರ ಪರವಾಗಿ ನಿಲ್ಲುವಂತೆ ಮಾಡಿತ್ತು. ನಿರುದ್ಯೋಗವು ಜನರನ್ನು ಯಾವ ಪರಿ ಕಾಡುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿ ಇದು. ಈ ಭರವಸೆಯು ಆರ್‌ಜೆಡಿ ಪರವಾಗಿ ಸೃಷ್ಟಿಸಿದ ಒಲವನ್ನು ಹಿಮ್ಮೆಟ್ಟಿಸಲು 19 ಲಕ್ಷ ಉದ್ಯೋಗ ಕೊಡುವುದಾಗಿ ಬಿಜೆಪಿ ಭರವಸೆ ಕೊಡಬೇಕಾಯಿತು. ಬಿಹಾರದ ಲಕ್ಷಾಂತರ ಜನರು ಉದ್ಯೋಗ ಅರಸಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಅವರೆಲ್ಲರೂ ಈಗ ರಾಜ್ಯಕ್ಕೆ ಮರಳಿದ್ದಾರೆ. ಅವರಿಗೆಲ್ಲ ಜೀವನೋಪಾಯ ಕಲ್ಪಿಸಬೇಕಿದೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಕುರಿತು ನಿತೀಶ್‌ ಮತ್ತು ಬಿಜೆಪಿ ನಾಯಕರು ಪದೇ ಪದೇ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಆದರೆ, ಜನರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ಜೀವನೋಪಾಯ ಇಲ್ಲದ ಅಭಿವೃದ್ಧಿಯು ಟೊಳ್ಳು ಎಂಬುದನ್ನು ಅಧಿಕಾರದಲ್ಲಿ ಇರುವವರು ಅರ್ಥ ಮಾಡಿಕೊಳ್ಳಲೇಬೇಕು; ಅದನ್ನು ಈ ಚುನಾವಣೆ ಮನದಟ್ಟು ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT