ಮಂಗಳವಾರ, ಜೂನ್ 28, 2022
28 °C

ಸಂಪಾದಕೀಯ: ಸಂಕಷ್ಟದಲ್ಲಿರುವ ರೈತರ ಬೆಂಬಲಕ್ಕೆ ನಿಲ್ಲುವುದು ಸರ್ಕಾರದ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಎರಡನೇ ಬಾರಿಗೆ ಲಾಕ್‌ಡೌನ್ ಜಾರಿಯಲ್ಲಿದೆ. 2020ರ ಮಾರ್ಚ್‌ನಲ್ಲಿ ಭಾರತದಲ್ಲಿ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಲಾಕ್‌ಡೌನ್‌ ಘೋಷಿಸಲಾಗಿತ್ತು. ಆಗ ಸುದೀರ್ಘ ಅವಧಿಗೆ ನಿರ್ಬಂಧಗಳು ಜಾರಿಯಲ್ಲಿದ್ದವು. 2021ರಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ, ಸಾವಿನ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಕರ್ನಾಟಕದಲ್ಲೂ ಮೇ 10ರಿಂದ ಲಾಕ್‌ಡೌನ್‌ ಜಾರಿಯಲ್ಲಿದೆ. ಕೋವಿಡ್‌ ಸೋಂಕು ನಿಯಂತ್ರಣ ಮತ್ತು ಸಾವಿನ ಸಂಖ್ಯೆಯನ್ನು ತಗ್ಗಿಸುವ ದೃಷ್ಟಿಯಿಂದ ಲಾಕ್‌ಡೌನ್‌ ಕೊನೆಯ ಆಯ್ಕೆಯಾಗಿತ್ತು. ಲಾಕ್‌ಡೌನ್‌ ಜಾರಿಯಾದ ಬಳಿಕ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ದೊಡ್ಡ ಜನಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷದ ಲಾಕ್‌ಡೌನ್‌ ವೇಳೆ ಆದಂತೆಯೇ ಈ ಬಾರಿಯೂ ರಾಜ್ಯದ ರೈತರು ತಾವು ಬೆಳೆದ ಬೆಳೆಗಳನ್ನು ಮಾರಲಾಗದೆ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಕಠಿಣ ನಿರ್ಬಂಧಗಳ ಪರಿಣಾಮವಾಗಿ ರಾಜ್ಯದ ಬಹುತೇಕ ಸಗಟು ಮಾರುಕಟ್ಟೆಗಳು ಬಂದ್‌ ಆಗಿವೆ. ಕೃಷಿ ಉತ್ಪನ್ನ ಮಾರುಕಟ್ಟೆಗಳ ವಹಿವಾಟು ಕೂಡಾ ನಿರ್ಬಂಧಕ್ಕೆ ಒಳಪಟ್ಟಿದೆ. ಬಹುಬೇಗ ಕೆಡುವಂತಹ ಹಣ್ಣು, ತರಕಾರಿ, ಹೂವು ಮತ್ತಿತರ ಬೆಳೆಗಳನ್ನು ಬೆಳೆದಿರುವ ರೈತರು ಮಾರುಕಟ್ಟೆಯೇ ಇಲ್ಲದೆ ಅಕ್ಷರಶಃ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಟೊಮೆಟೊ ಸೇರಿದಂತೆ ತರಕಾರಿಗಳನ್ನು ಕೊಳ್ಳುವವ ರಿಲ್ಲದೇ ಬೆಳೆಗಾರರು ರಸ್ತೆಗೆ ಸುರಿದು ಹೋಗಿರುವುದು, ತರಕಾರಿ ಬೆಳೆಗಳನ್ನು ಹೊಲದಲ್ಲೇ ನಾಶ ಮಾಡಿರುವುದು, ಹಣ್ಣುಗಳನ್ನು ನದಿ– ಕೆರೆಗಳಿಗೆ ಎಸೆದಿರುವಂತಹ ವಿದ್ಯಮಾನಗಳು ಕೆಲವು ದಿನಗಳಿಂದ ನಿರಂತರವಾಗಿ ವರದಿಯಾಗುತ್ತಿವೆ. ಮಾರುಕಟ್ಟೆಯೇ ಇಲ್ಲದ್ದರಿಂದ ಹತಾಶರಾದ ಕೆಲವು ಕಲ್ಲಂಗಡಿ ಬೆಳೆಗಾರರು ಹಣ್ಣುಗಳನ್ನು ಹೊಲದಲ್ಲೇ ಕತ್ತರಿಸಿ ಹಾಕಿದ್ದಾರೆ. ಕೆಲವು ಕಡೆಗಳಲ್ಲಿ ಟ್ರ್ಯಾಕ್ಟರ್‌ ಬಳಸಿ ತರಕಾರಿ, ಹೂವಿನ ತೋಟಗಳನ್ನು ನಾಶ ಮಾಡಿರುವುದೂ ನಡೆದಿದೆ. ಇವೆಲ್ಲವೂ ಲಾಕ್‌ಡೌನ್‌ನಿಂದ ತಮ್ಮ ಉತ್ಪನ್ನವನ್ನು ಮಾರಲಾಗದೇ ರೈತ ಸಮುದಾಯವು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವುದರ ಮುನ್ಸೂಚನೆಯಂತೆ ಕಾಣಿಸುತ್ತಿವೆ. ಕೆಲವೇ ಸಾವಿರ ರೂಪಾಯಿ ಪರಿಹಾರ ಘೋಷಿಸುವುದರಿಂದ ರೈತರ ಹಿತವನ್ನು ರಕ್ಷಿಸಲು ಸಾಧ್ಯವಿಲ್ಲ.

ರಾಜ್ಯಕ್ಕೆ ಲಾಕ್‌ಡೌನ್‌ ಹೊಸತೇನೂ ಅಲ್ಲ. ಕಳೆದ ಬಾರಿಯೂ ರೈತರು ಇಂತಹದ್ದೇ ಸಮಸ್ಯೆ ಎದುರಿಸಿದ್ದರು. ಆದರೆ, ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ ಇಲಾಖೆ, ಚುನಾಯಿತ ಪ್ರತಿನಿಧಿಗಳ ಕಡೆಯಿಂದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸುವ ಪ್ರಯತ್ನಗಳು ನಡೆದಿದ್ದವು. ಹಲವು ಮಂದಿ ಜನಪ್ರತಿನಿಧಿಗಳು ಮತ್ತು ಉದ್ಯಮಿಗಳು ರೈತರ ಉತ್ಪನ್ನಗಳನ್ನು ಖರೀದಿಸಿ ಅಗತ್ಯ ಇರುವವರಿಗೆ ವಿತರಣೆ ಮಾಡಿದ್ದರು. ಇದರಿಂದಾಗಿ ಕೆಲವು ರೈತರು ಸಂಕಷ್ಟದ ಸುಳಿಯಿಂದ ಹೊರಬರಲು ತುಸು ನೆರವು ಸಿಕ್ಕಿತ್ತು. ಆದರೆ, ಈ ಬಾರಿ ಅತ್ತ ಮಾರುಕಟ್ಟೆಯೂ ಇಲ್ಲ, ಇತ್ತ ನೆರವೂ ಇಲ್ಲದಂತಹ ಸ್ಥಿತಿಗೆ ರೈತರು ತಲುಪಿದ್ದಾರೆ. ತರಕಾರಿ, ಹಣ್ಣು, ಹೂವು ಬೆಳೆಯಲು ಹೆಚ್ಚಿನ ಹಣ ವ್ಯಯಿಸಿರುವ ಕೃಷಿಕರು ಬೆಳೆಯನ್ನು ಮಾರಲಾಗದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಲಾಕ್‌ಡೌನ್‌ ಅಗತ್ಯ ಕಂಡುಬಂದಾಗಲೇ ರೈತರನ್ನು ಇಂತಹ ಸಂಕಷ್ಟಗಳಿಂದ ಪಾರು ಮಾಡುವ ಕ್ರಿಯಾಯೋಜನೆ ರೂಪಿಸಬೇಕಿತ್ತು. ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ಭರವಸೆ ಯನ್ನು ಒದಗಿಸುವುದು ಜವಾಬ್ದಾರಿಯುತ ಸರ್ಕಾರಗಳ ಕರ್ತವ್ಯ ಕೂಡ. ಮೊದಲ ಲಾಕ್‌ಡೌನ್‌ನ ಅನುಭವಗಳ ಆಧಾರದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಯಾವ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ ಎಂಬುದನ್ನು ಈಗಿನ ಪರಿಸ್ಥಿತಿ ಜಾಹೀರುಗೊಳಿಸಿದೆ. ತರಕಾರಿ, ಹಣ್ಣು ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಕುಸಿದಿಲ್ಲ. ಬೆಳೆಗಾರ, ಸಗಟು ಮಾರುಕಟ್ಟೆ, ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರ ನಡುವಿನ ಮಾರುಕಟ್ಟೆ ಸರಪಳಿಯ ಕೊಂಡಿ ಕಳಚಿರುವುದೇ ಈ ಬಿಕ್ಕಟ್ಟಿಗೆ ಕಾರಣ. ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಈಗಲೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ನೆರವು ಒದಗಿಸಬೇಕಾದುದು ಸರ್ಕಾರದ ಜವಾಬ್ದಾರಿ. ರೈತರು ಹತಾಶರಾಗಿ ಬೆಳೆ ನಾಶಕ್ಕೆ ಮುಂದಾಗುವುದನ್ನು ತಡೆಯಬೇಕಿದೆ. ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸರಿಯಾದ ವೇದಿಕೆಗಳನ್ನು ತ್ವರಿತವಾಗಿ ಒದಗಿಸಬೇಕು. ಕೃಷಿ ಉತ್ಪನ್ನಗಳು ಕೆಡುವುದನ್ನು ತಡೆಯಲು ಶೈತ್ಯಾಗಾರಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ಆನ್‌ಲೈನ್‌ ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಎಲ್ಲ ಸಾಧನಗಳನ್ನೂ ಬಳಸಿಕೊಂಡು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ಬೆಂಬಲವಾಗಿ ನಿಲ್ಲಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು