ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಾರ್ವಜನಿಕ ಗಣೇಶೋತ್ಸವ; ಸಂಯಮ ಮತ್ತು ಮುನ್ನೆಚ್ಚರಿಕೆ ಅಗತ್ಯ

Last Updated 20 ಆಗಸ್ಟ್ 2020, 2:46 IST
ಅಕ್ಷರ ಗಾತ್ರ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸುವ ಮೂಲಕ, ಕೊರೊನಾ ಸಂದರ್ಭದಲ್ಲಿ ಹುಲಿ ಸವಾರಿಯ ಸಾಹಸಕ್ಕೆ ಸರ್ಕಾರ ಮುಂದಾಗಿದೆ. ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೇರಿರುವ ನಿರ್ಬಂಧವು ಸಾರ್ವಜನಿಕ ಗಣೇಶೋತ್ಸವಕ್ಕೂ ಅನ್ವಯವಾಗಲಿದೆ; ಕೋವಿಡ್‌–19 ನಿಯಂತ್ರಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಈ ಮೊದಲು ಹೇಳಿತ್ತು. ಮನೆ ಮತ್ತು ದೇವಸ್ಥಾನಗಳಲ್ಲಿ ಮಾತ್ರ ಗಣೇಶನ ಮೂರ್ತಿಯ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿತ್ತು.

ದೇವಸ್ಥಾನಗಳಲ್ಲಿ ಆರು ಅಡಿಯ ಅಂತರ ಕಾಪಾಡಿಕೊಳ್ಳಲು, ಪ್ರತಿದಿನವೂ ಮಂದಿರವನ್ನು ಸ್ಯಾನಿಟೈಸ್‌ ಮಾಡಲು ಹಾಗೂ ಎಲ್ಲ ಭಕ್ತರಿಗೂ ಸ್ಯಾನಿಟೈಸರ್‌ ಒದಗಿಸಲು ಸೂಚಿಸಲಾಗಿತ್ತು. ಆದರೆ ಈಗ ಕೆಲವು ನಿರ್ಬಂಧ ಹಾಗೂ ಷರತ್ತುಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು, ಸರ್ಕಾರದ ಮಾರ್ಗಸೂಚಿಯ ‍ಪ್ರಕಾರ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಅವರು ಕೋರಿದ್ದಾರೆ. ಮುಖ್ಯಮಂತ್ರಿಯವರ ಜನಪರ ಕಾಳಜಿಯನ್ನು ಮೆಚ್ಚಿಕೊಂಡರೂ ಆತಂಕದ ಸಂದರ್ಭದಲ್ಲಿ ಮನೆಗೆ ಸೀಮಿತವಾಗಿದ್ದ ಹಬ್ಬದ ಸಂಭ್ರಮವನ್ನು ಬಯಲಿಗೂ ವಿಸ್ತರಿಸಿರುವ ನಿರ್ಧಾರದಲ್ಲಿ ಅಪಾಯದ ಸಾಧ್ಯತೆಯೂ ಇದೆ ಎನ್ನುವುದನ್ನು ಮರೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರು ಮುಖಗವಸನ್ನು ಯಾವೆಲ್ಲ ರೀತಿಯಲ್ಲಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದರೆ, ಸರ್ಕಾರದ ಮಾರ್ಗಸೂಚಿ ಎಷ್ಟರಮಟ್ಟಿಗೆ ಪಾಲನೆಯಾಗಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟವೇನಲ್ಲ. ಭಕ್ತಿ ಮತ್ತು ಭಾವುಕತೆಯ ಆವೇಶದಲ್ಲಿ ಸರ್ಕಾರದ ಮಾರ್ಗಸೂಚಿಗಳು ಸಾರ್ವಜನಿಕರ ನೆನಪಿನಲ್ಲಿ ಉಳಿಯುತ್ತವೆಂದು ನಂಬುವುದೂ ಕಷ್ಟ. ಕೋವಿಡ್‌–19ರ ಕರ್ತವ್ಯ ನಿಯೋಜನೆಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಯು ಈಗ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ನಿಭಾಯಿಸಬೇಕಾಗಿದೆ.

ಕೊರೊನಾ ಕಾರಣದಿಂದಾಗಿ ಈ ನಾಲ್ಕೈದು ತಿಂಗಳುಗಳಲ್ಲಿನ ಹಬ್ಬಗಳ ಆಚರಣೆ ಕಳೆಗುಂದಿತ್ತು. ಲಾಕ್‌ಡೌನ್‌ನ ನಿರ್ಬಂಧಗಳಿಂದಾಗಿ ಯಾವುದೇ ಸಮುದಾಯದ ಹಬ್ಬ–ಆಚರಣೆಯು ಸಾಮೂಹಿಕವಾಗಿ ನಡೆದಿಲ್ಲ. ಈಗಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಈಗಲೂ ಜನ ಬೀದಿಗೆ ಬರಲು ಹೆದರುತ್ತಿದ್ದಾರೆ. ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಇಳಿಕೆಯೇನೂ ಕಾಣಿಸುತ್ತಿಲ್ಲ. ಬೆಂಗಳೂರು ನಗರದಲ್ಲಂತೂ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಪರಿಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆಯಾಗದಿದ್ದರೂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಹಸಿರುನಿಶಾನೆ ತೋರಿಸಿಯಾಗಿದೆ.

ಪ್ರಸ್ತುತ ಸರ್ಕಾರಕ್ಕೆ ಉಳಿದಿರುವುದು, ಸ್ಥಳೀಯ ಆಡಳಿತದ ಪೂರ್ವಾನುಮತಿಯೊಂದಿಗೆ ನಡೆಸಬಹುದಾದ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ತಾನು ರೂಪಿಸಿರುವ ಮಾರ್ಗಸೂಚಿಯು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳುವುದಷ್ಟೇ. ಆ ಮಾರ್ಗಸೂಚಿಯ ಪ್ರಕಾರ, ಆಚರಣೆಯ ಸ್ಥಳದಲ್ಲಿ 20ಕ್ಕಿಂತ ಹೆಚ್ಚು ಜನ ಇರುವಂತಿಲ್ಲ. ಮನೆಗಳಲ್ಲಿನ ಗಣೇಶಮೂರ್ತಿಯ ಎತ್ತರ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಮೂರ್ತಿಯ ಎತ್ತರ 4 ಅಡಿ ಮೀರಬಾರದು.

ಮನೆಯಲ್ಲಿ ಪೂಜಿಸಿದ ಮೂರ್ತಿಗಳನ್ನು ಮನೆಯೊಳಗೆ ಹಾಗೂ ಸಾರ್ವಜನಿಕ ಆಚರಣೆಯ ಮೂರ್ತಿಗಳನ್ನು ಸ್ಥಳೀಯ ಆಡಳಿತ ನಿಗದಿ ಮಾಡಿದ ಸ್ಥಳದಲ್ಲೇ ವಿಸರ್ಜಿಸಬೇಕು. ಉತ್ಸವದ ಸಂದರ್ಭದಲ್ಲಿ ಸಂಗೀತ, ನೃತ್ಯ ಸೇರಿದಂತೆ ಯಾವುದೇ ಬಗೆಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಇವೆಲ್ಲ ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಈ ಬಾರಿಯ ಉತ್ಸವವನ್ನು ಆದಷ್ಟೂ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಗಣಪತಿ ಸಂಕಷ್ಟ ನಿವಾರಕನಾಗಿರುವಂತೆ, ವಿವೇಕದ ದ್ಯೋತಕವೂ ಹೌದು. ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ಹತ್ತಿಕ್ಕಲು ಅಗತ್ಯವಾದ ವಿವೇಕ ಮತ್ತು ಸಂಕಲ್ಪಶಕ್ತಿಯನ್ನು ಆತನ ಆರಾಧನೆ ಎಲ್ಲರಿಗೂ ದೊರಕಿಸಿಕೊಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT