ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಾಜಕಾರಣಿಗಳ ಬಾಯಿತುರಿಕೆಯಿಂದ ಲಿಂಗಸಂವೇದನೆಗೆ ನಿರಂತರ ಕುತ್ತು

ಸಂಪಾದಕೀಯ
Published 16 ಏಪ್ರಿಲ್ 2024, 21:11 IST
Last Updated 16 ಏಪ್ರಿಲ್ 2024, 21:11 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಗಳ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಆಡಿರುವ ಮಾತು, ಲಿಂಗಸಂವೇದನೆಯ ಸೂಕ್ಷ್ಮಗಳನ್ನು ನಮ್ಮ ರಾಜಕೀಯ ನೇತಾರರು ಇನ್ನೂ ರೂಢಿಸಿಕೊಂಡಿಲ್ಲ ಎನ್ನುವುದಕ್ಕೆ ಹೊಸ ಉದಾಹರಣೆ.

ಲಿಂಗತಾರತಮ್ಯವನ್ನು ನಿವಾರಿಸಬೇಕಾದ ರಾಜಕಾರಣಿಗಳೇ ಲಿಂಗಭೇದವನ್ನು ಉತ್ತೇಜಿಸುವಂತೆ ಮಾತನಾಡುವುದು ದುರದೃಷ್ಟಕರ. ಕುಮಾರಸ್ವಾಮಿ ಅವರ ಅಭಿಪ್ರಾಯವನ್ನು ಸರ್ಕಾರದ ವಿರುದ್ಧದ ಟೀಕೆಯ ಭರದಲ್ಲಿ ಬಾಯ್ತಪ್ಪಿ ಬಂದಿರುವ ಮಾತೆಂದು ಭಾವಿಸುವಂತಿಲ್ಲ. ‘ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ ವಿಷಾದಿಸುವೆ’ ಎಂದು ಹೇಳಿದ್ದರೂ ಅವರಿಗೆ ತಾವು ಆಡಿರುವ ಮಾತಿನ ಬಗ್ಗೆ ಪಶ್ಚಾತ್ತಾಪವೇನೂ ಆದಂತಿಲ್ಲ.

ಮಹಿಳೆಯರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳುತ್ತಲೇ ಲಿಂಗಭೇದದ ಮಾತುಗಳನ್ನಾಡುವ ರಾಜಕಾರಣಿಗಳ ಜಾಣ್ಮೆಯನ್ನು ಅವರೂ ಪ್ರದರ್ಶಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಗೂ ಚುನಾವಣೆ ನಂತರ ಸುಮಲತಾ ಅಂಬರೀಷ್‌ ಅವರ ಬಗ್ಗೆ ಕುಮಾರಸ್ವಾಮಿ ಅವರು ಆಡಿದ್ದ ಮಾತುಗಳೂ ವಿವಾದಕ್ಕೆ ಕಾರಣವಾಗಿ ದ್ದವು. ರಾಜಕೀಯ ಪಕ್ಷಗಳ ಮುಖಂಡರ ನಡುವೆ ಟೀಕೆ ಟಿಪ್ಪಣಿಗಳು ಸಹಜ.

ಟೀಕೆ ಅಥವಾ ಚರ್ಚೆಗಳನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಮಾಡಬೇಕೇ ಹೊರತು, ವೈಯಕ್ತಿಕ ಕೆಸರೆರಚಾಟವು ಸಾರ್ವಜನಿಕ ಸಭ್ಯತೆಯಲ್ಲ. ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವುದು ಕುಮಾರಸ್ವಾಮಿ ಒಬ್ಬರೇ ಅಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಹೊಣೆ ಹೊತ್ತಿರುವ ಸಂಜಯ ಪಾಟೀಲ ಹಾಗೂ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ಬೇಜವಾಬ್ದಾರಿಯಿಂದ ಮಾತನಾಡಿದ್ದರು. ‘ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕಿರುವ ಬೆಂಬಲ ನೋಡಿ ನಿದ್ದೆಗೆಡುವ ಅಕ್ಕ ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಪೆಗ್‌ ಹೆಚ್ಚುವರಿ ಕುಡಿಯಬೇಕು’ ಎಂದು ಸಂಜಯ ಪಾಟೀಲ ವ್ಯಂಗ್ಯವಾಡಿದ್ದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಎದುರಾಳಿ ಮಹಿಳಾ ಅಭ್ಯರ್ಥಿಯನ್ನು ಉದ್ದೇಶಿಸಿ, ‘ಇವರು ಅಡುಗೆ ಮಾಡಿಕೊಂಡಿರುವುದಕ್ಕಷ್ಟೇ ಲಾಯಕ್ಕು’ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು. ಕೀಳು ಅಭಿರುಚಿಯ ಇಂಥ ಮಾತುಗಳನ್ನು ಲಿಂಗಸಂವೇದನೆಗೆ ಕುರುಡಾದಾಗಲಷ್ಟೇ ಆಡಲಿಕ್ಕೆ ಸಾಧ್ಯ. ಬಿಜೆಪಿ ನೇತೃತ್ವದ ನಿಕಟಪೂರ್ವ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಅವರು ‘ತಮ್ಮನ್ನು ತಾವು ಮಾರಿಕೊಂಡು ಪಕ್ಷಾಂತರ ಮಾಡಿದ ಶಾಸಕರನ್ನು ವೇಶ್ಯೆಯರೆಂದು ಕರೆಯಬಹುದೇ’ ಎಂದು ಜರಿದಿದ್ದನ್ನೂ, ಅದಕ್ಕೆ ಪ್ರತಿಯಾಗಿ ತಮ್ಮನ್ನು ಹೀಯಾಳಿಸಿದವರಿಗೆ ಅವರು ಬಳಸಿದ ಬೈಗುಳವನ್ನೇ ಅಂದಿನ ಸಚಿವರಾದ ಬಿ.ಸಿ. ಪಾಟೀಲ ಹಾಗೂ ಮುನಿರತ್ನ ಹಿಂತಿರುಗಿಸಿದ್ದನ್ನೂ ನೆನಪಿಸಿಕೊಳ್ಳಬಹುದು. ವೇಶ್ಯಾವೃತ್ತಿಯಲ್ಲಿ ಇರುವವರನ್ನು ಅವಮಾನಿಸುವಂತಿದ್ದ ಆ ಬೈಗುಳಗಳು ಹೆಣ್ಣನ್ನು ಭೋಗದ ವಸ್ತುವಿನ ರೂಪದಲ್ಲಿ ಪರಿಗಣಿಸುವ ಗಂಡಿನ ಮನಃಸ್ಥಿತಿಗೆ ನಿದರ್ಶನದಂತಿದ್ದವು. ವೇಶ್ಯಾವೃತ್ತಿಯಲ್ಲಿ ನಿರತರಾಗಿರುವವರು ಅನುಭವಿಸಬಹುದಾದ ಬಡತನ, ಹಸಿವು, ಅಸಹಾಯಕತೆ ಹಾಗೂ ದೇಹಶೋಷಣೆಯ ಸಾಧ್ಯತೆಗಳ ಅರಿವಿರುವ ಯಾರೂ ಹೀಗೆ ಮಾತನಾಡಲಾರರು.

ಪುರುಷ ಅಹಂ ಸೋಂಕು ಹಾಗೂ ಅಧಿಕಾರದ ಮದದಿಂದ ನಾಲಿಗೆ ಮೇಲೆ ನಿಯಂತ್ರಣ ಕಳೆದುಕೊಳ್ಳುವ ರಾಜಕಾರಣಿಗಳು ಮಹಿಳೆಯರ ಸೀರೆ, ಹೂವು, ಕುಂಕುಮ, ಬಳೆಗಳ ಬಗ್ಗೆಯೂ ನಿಕೃಷ್ಟವಾಗಿ ಮಾತನಾಡುವುದಿದೆ. ಹೀಗೆ ಮಾತನಾಡುವ ಜನಪ್ರತಿನಿಧಿಗಳು ತಮ್ಮ ಬಾಯಿ ತುರಿಕೆಯನ್ನೂ ಲಿಂಗಸಂವೇದನೆಯ ಜಡತ್ವವನ್ನೂ ಎಗ್ಗಿಲ್ಲದೆ ಪ‍್ರದರ್ಶಿಸುವುದರ ಜೊತೆಗೆ, ತಾವು ಪ್ರತಿನಿಧಿಸುವ ಶಾಸನಸಭೆಗಳ ಘನತೆಯನ್ನೂ ಕುಗ್ಗಿಸುತ್ತಿರುತ್ತಾರೆ.

ಲಿಂಗಸಂವೇದನೆಯ ಬಗ್ಗೆ ಕಾಳಜಿಯುಳ್ಳ ಯಾವುದೇ ರಾಜಕೀಯ ಪಕ್ಷ, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಎಲ್ಲ ರಾಜಕೀಯ ಪಕ್ಷಗಳೂ ಲಿಂಗಭೇದದ ಹೇಳಿಕೆಗಳು ನಗಣ್ಯವೆನ್ನುವಂತೆ ನಡೆದುಕೊಳ್ಳುತ್ತಿವೆ ಇಲ್ಲವೇ ಆ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳುವ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ಮಹಿಳಾ ಸಂವೇದನೆ ಎನ್ನುವುದು ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕವಾಗಿ ಹಾಗೂ ನಿರಂತರವಾಗಿ ರೂಢಿಸಿಕೊಳ್ಳಬೇಕಾದ ನಡವಳಿಕೆ.

ಪ್ರಬುದ್ಧ ಎನ್ನಿಸಿಕೊಂಡವರೂ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿ ಲಿಂಗತಾರತಮ್ಯದ ಮಾತುಗಳನ್ನಾಡುವುದಿದೆ. ಅಂಥ ಸಂದರ್ಭಗಳಲ್ಲಿ ಕ್ಷಮೆ ಕೇಳುವ ಮೂಲಕ ತಪ್ಪನ್ನು ತಿದ್ದಿಕೊಳ್ಳಬೇಕೇ ವಿನಾ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ನಿರ್ಲಜ್ಜೆಯನ್ನು ಪ್ರದರ್ಶಿಸಬಾರದು. ಜನಪ್ರತಿನಿಧಿಗಳ ಮಾತುಗಳು ಸಾರ್ವಜನಿಕ ಸಭ್ಯತೆಯಿಂದ ಕೂಡಿರಬೇಕು ಹಾಗೂ ನಾಗರಿಕರಿಗೆ ಮಾದರಿಯಾಗಿರ ಬೇಕು. ಆದರೆ, ರಾಜಕಾರಣಿಗಳು ಬೈದಾಡಿಕೊಳ್ಳಲು ಬಳಸುತ್ತಿರುವ ಭಾಷೆ ಕೊಳಕು ಅಭಿರುಚಿಯದ್ದಾಗಿದೆ,

ಮಹಿಳೆಯರನ್ನು ಕೀಳಾಗಿ ಕಾಣುವಂತಿದೆ. ಮಾತಿನ ಮೇಲೆ ಹಿಡಿತವಿಲ್ಲದ, ಸಾರ್ವಜನಿಕ ಸಭ್ಯತೆಯ ಅರಿವಿಲ್ಲದ ಇಂಥ ರಾಜಕಾರಣಿಗಳ ಕೃತಿಯಲ್ಲಿ ನೈತಿಕತೆಯನ್ನು ನಿರೀಕ್ಷಿಸುವುದು
ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT