ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಅರಿವಿನ ಮಹತ್ವ ಸರ್ಕಾರ, ಜನರಿಗೆ ಮನದಟ್ಟಾಗಲಿ

Last Updated 10 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಸ್ವ–ಉನ್ನತಿ ಮತ್ತು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಬಹುಮುಖ್ಯ ಅಸ್ತ್ರ ಎಂದು ಪರಿಗಣಿತವಾಗಿರುವ ಸಾಕ್ಷರತೆಯ ಪ್ರಮಾಣದ ಕುರಿತು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ವರದಿ ಬೆಚ್ಚಿಬೀಳಿಸುವಂತಿದೆ. ಭೌಗೋಳಿಕ ಮತ್ತು ಲಿಂಗ ಆಧಾರಿತವಾಗಿ ಅಸಮಾನತೆ ತಾಂಡವವಾಡುತ್ತಿರುವುದನ್ನು ವರದಿಯು ಗುರುತಿಸಿದೆ. ಮೇಲ್ನೋಟಕ್ಕೆ ಅಭಿವೃದ್ಧಿಶೀಲ ರಾಜ್ಯಗಳಂತೆ ಕಾಣುವ ದಕ್ಷಿಣ ಭಾರತದ ಮೂರು ಪ್ರಮುಖ ರಾಜ್ಯಗಳಲ್ಲಿಯೂ ವಾಸ್ತವ ಚಿತ್ರಣ ಬೇರೆಯದೇ ಇರುವುದನ್ನು ಈ ಸಮೀಕ್ಷಾ ವರದಿ ತೆರೆದಿಟ್ಟಿದೆ.

ಎಂದಿನಂತೆ ಕೇರಳವು ಶೇಕಡ 96.2ರಷ್ಟು ಸಾಕ್ಷರತೆಯೊಂದಿಗೆ ದೇಶದ ಮುಂಚೂಣಿ ಸಾಕ್ಷರ ರಾಜ್ಯವಾಗಿಯೇ ಉಳಿದಿದೆ. ಆದರೆ, ಕೊನೆಯ ಸ್ಥಾನದಲ್ಲಿರುವ ಆಂಧ್ರಪ್ರದೇಶ (ಶೇ 66.4) ಮತ್ತು ದಕ್ಷಿಣದ ಇತರ ರಾಜ್ಯಗಳಾದ ಕರ್ನಾಟಕ (ಶೇ 77.2) ಮತ್ತು ತೆಲಂಗಾಣದಲ್ಲಿನ (72.8) ಸಾಕ್ಷರತಾ ಪ್ರಮಾಣವು ರಾಷ್ಟ್ರೀಯ ಸರಾಸರಿ ಸಾಕ್ಷರತಾ ಮಟ್ಟಕ್ಕಿಂತ (ಶೇ 77.7) ಕಡಿಮೆ ಇದೆ. ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಫಲಿತಾಂಶ ಹೊರಬಿದ್ದಾಗ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಣ್ಣುಮಕ್ಕಳ ವಿಷಯದಲ್ಲಿ ಈ ಅಂಕಿಅಂಶಗಳು ಬೇರೆಯದೇ ಕತೆ ಹೇಳುತ್ತಿವೆ. ರಾಷ್ಟ್ರಮಟ್ಟದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣವು ಶೇ 84.7ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣವು ಶೇ 70.3. ಅಂದರೆ ಈ ಅಂತರ 14.4ರಷ್ಟಿದೆ.

ಸೆಪ್ಟೆಂಬರ್‌ 8ರಂದು ನಡೆದ ಸಾಕ್ಷರ ದಿನಾಚರಣೆಗೆ ಯುನೆಸ್ಕೊ ಕೊಟ್ಟ ಧ್ಯೇಯವಾಕ್ಯ– ‘ಕೋವಿಡ್‌–19 ಬಿಕ್ಕಟ್ಟು ಮತ್ತು ಅದರಾಚೆಗೂ ಅಕ್ಷರ ಬೋಧನೆ ಮತ್ತು ಕಲಿಕೆ’ ಎಂಬುದಾಗಿದೆ. ಈಗ ನಮ್ಮ ಮುಂದಿರುವ ನಾನಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೇಬೇಕಾದ ತುರ್ತನ್ನು ಈ ಧ್ಯೇಯವಾಕ್ಯವು ನಮಗೆ ನೆನಪಿಸುತ್ತಿದೆ. ಆರ್ಥಿಕ, ಸಾಮಾಜಿಕ ಸಮಸ್ಯೆಗಳೊಟ್ಟಿಗೆ ಬರುವ ಶೈಕ್ಷಣಿಕ ಪರಿಣಾಮಗಳೂ ಈಗ ನಮಗೆ ನಿಚ್ಚಳವಾಗುತ್ತಿವೆ. ಕಲಿಕಾ ಬಿಕ್ಕಟ್ಟಿಗೆ ಪರಿಹಾರವಾಗಿ ಆಪದ್ಬಾಂಧವನಂತೆ ಒದಗಿಬಂದಿರುವ ಆನ್‌ಲೈನ್‌ ಶಿಕ್ಷಣದ ಸಾಧಕ– ಬಾಧಕಗಳು ಚರ್ಚೆಗೊಳಗಾಗಿವೆ.

ನಗರ ಪ್ರದೇಶಗಳಲ್ಲಿ ಕಲಿಕಾ ಬಿಕ್ಕಟ್ಟನ್ನು ಕೊಂಚ ಮಟ್ಟಿಗೆ ಸುಧಾರಿಸಿರುವ ಈ ವ್ಯವಸ್ಥೆಯು ನೆಟ್‌ವರ್ಕ್‌ ಸರಿಯಾಗಿ ಇಲ್ಲದ ಗ್ರಾಮೀಣ ಭಾಗದಲ್ಲಿ ಸೃಷ್ಟಿಸಿರುವ ಒತ್ತಡ ಸಾಮಾನ್ಯವಾದುದಲ್ಲ. ಪೋಷಕರೇ ಸ್ವತಃ ನಿರಕ್ಷರರಾಗಿದ್ದರೆ ಇನ್ನು ಅವರು ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸುವುದು ಹೇಗೆ ಸಾಧ್ಯ? ಲಾಕ್‌ಡೌನ್‌ನಿಂದ ಕಾರ್ಮಿಕರಷ್ಟೇ ಅಲ್ಲ, ನಗರಗಳ ಮಧ್ಯಮ, ಕೆಳಮಧ್ಯಮ ವರ್ಗದ ಜನರೂ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇಂತಲ್ಲಿ ಮಕ್ಕಳ ಶಿಕ್ಷಣ ದುಬಾರಿ ಎನಿಸುವುದು, ಅವರ ಕಲಿಕಾ ಗುಣಮಟ್ಟ ಕುಸಿಯುವುದು ಸಹಜವೇ. ಹೀಗಾಗಿ ಶಾಲಾ–ಕಾಲೇಜು ಪುನರಾರಂಭವಾದರೂ ಕೆಲ ಮಕ್ಕಳು ಮತ್ತೆ ಶಾಲೆ ಮುಖ ಕಾಣದಿರುವ ಸಾಧ್ಯತೆ ಎಲ್ಲಕ್ಕಿಂತ ಅಪಾಯಕಾರಿಯಾದುದು. ಇನ್ನು ಹೆಣ್ಣುಮಕ್ಕಳ ಶಿಕ್ಷಣವಂತೂ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು.

ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿದ್ದ ಪೌಷ್ಟಿಕ ಆಹಾರದಿಂದ ಮಕ್ಕಳು ವಂಚಿತರಾಗಿದ್ದಾರೆ. ಸಾಕ್ಷರತೆ, ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿಗೆ ಒತ್ತು ನೀಡಬೇಕಾದುದು ನಿರುದ್ಯೋಗದ ಪ್ರಮಾಣ ತಗ್ಗಿಸುವುದಕ್ಕಷ್ಟೇ ಅಲ್ಲ ಆರೋಗ್ಯ ಕಾಯ್ದುಕೊಳ್ಳಲು ಮತ್ತು ಸಾಮಾಜಿಕವಾದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹ ಪೂರಕ. ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಕೇರಳದ ಸಾಧನೆ ಗಮನಾರ್ಹ. ಇದಕ್ಕೆ ಅಲ್ಲಿನ ಆಡಳಿತದ ಜನಸ್ನೇಹಿ ನೀತಿಗಳೂ ಕಾರಣ. ಕೇರಳದಲ್ಲಿ ಯಾವುದೇ ಪಕ್ಷದ ನೇತೃತ್ವದ ಸರ್ಕಾರವಿರಲಿ, ಅದು ಒಂದು ಹಂತದವರೆಗೆ ಜನಪರವಾಗಿ ವರ್ತಿಸುವಂತೆ ಅಲ್ಲಿನ ಅಕ್ಷರಸ್ಥ ಸಮುದಾಯವು ಒತ್ತಡ ತರುವ ಕೆಲಸ ಮಾಡುತ್ತದೆ. ಹಸಿವು, ಅಪೌಷ್ಟಿಕತೆ, ಶಿಶುಮರಣದಂತಹ ಸಮಸ್ಯೆಗಳನ್ನು ತಗ್ಗಿಸುವಲ್ಲಿ ಈ ಸಮುದಾಯದ ಕೊಡುಗೆ ಅಪಾರ. ಸಾಕ್ಷರತೆಯ ಗುರಿ ಸಾಧನೆಯತ್ತ ಕಾರ್ಯೋನ್ಮುಖರಾಗಲು ದೇಶದ ಇತರ ರಾಜ್ಯಗಳಿಗೆ ಇದಕ್ಕಿಂತ ಪ್ರೇರಣೆ ಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT