ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ದತ್ತು: ಸಾಮೂಹಿಕ ಹೊಣೆ ಅಗತ್ಯ

Last Updated 20 ಜುಲೈ 2020, 2:51 IST
ಅಕ್ಷರ ಗಾತ್ರ

ಚಿತ್ರನಟರು ಮತ್ತು ಜನಪ್ರತಿನಿಧಿಗಳು ಕನ್ನಡ ಶಾಲೆಗಳ ಬಗ್ಗೆ ಆಸಕ್ತಿ ವಹಿಸುವ ವಿದ್ಯಮಾನಗಳು ಸಮುದಾಯದ ಗಮನವನ್ನು ಸೆಳೆಯುತ್ತವೆ ಮತ್ತು ಅವರ ಅಭಿಮಾನಿಗಳು ಹಾಗೂ ಅನುಯಾಯಿಗಳ ಆಸಕ್ತಿಯು ಕನ್ನಡ ಶಾಲೆಗಳತ್ತ ಹರಿಯುವುದಕ್ಕೆ ಪ್ರೇರಣೆಯಾಗುತ್ತವೆ

ದತ್ತು ಪಡೆಯುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಪ್ರಕ್ರಿಯೆ ಆಂದೋಲನದ ರೂಪ ಪಡೆದುಕೊಳ್ಳುತ್ತಿರುವುದು ಸ್ವಾಗತಾರ್ಹ ವಿದ್ಯಮಾನ. ಕೊರೊನಾ ಸೋಂಕಿನ ಸಂದರ್ಭದಲ್ಲಿನ ನಿರಾಶಾದಾಯಕ ಸುದ್ದಿಗಳ ನಡುವೆ, ಕನ್ನಡ ಶಾಲೆಗಳನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಚಲನಚಿತ್ರ ಕಲಾವಿದರು ಹಾಗೂ ಜನಪ್ರತಿನಿಧಿಗಳು ಭಾಗಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ದಿಸೆಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ಸುದೀಪ್‌ ಅವರು ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್‌ ಅವರು ಮೂರು ಶಾಲೆಗಳನ್ನು ದತ್ತು ಪಡೆದಿರುವುದನ್ನು ನೆನಪಿಸಿಕೊಳ್ಳಬಹುದು. ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಸಮಕಾಲೀನ ಕಲಾವಿದರಲ್ಲಿ ಸುದೀಪ್‌ ಮೊದಲಿಗರಲ್ಲ. ಇದಕ್ಕೆ ಮೊದಲು ಚಲನಚಿತ್ರ ಕಲಾವಿದರಾದ ರಿಷಬ್ ಶೆಟ್ಟಿ, ದೇವರಾಜ್‌, ಪ್ರಣೀತಾ ಸುಭಾಷ್‌ ಮುಂತಾದವರು ಶಾಲೆಗಳನ್ನು ದತ್ತು ಪಡೆದಿದ್ದರು. ಕಳೆದ ವರ್ಷ ದರ್ಶನ್‌ ಅಭಿಮಾನಿಗಳು ಹಾಸನ ಜಿಲ್ಲೆಯ ಶಾಲೆಯೊಂದನ್ನು ದತ್ತು ಪಡೆದದ್ದು ದೊಡ್ಡ ಸುದ್ದಿಯಾಗಿತ್ತು. ತಾರಾವರ್ಚಸ್ಸಿನ ನಟರು ಕನ್ನಡ ಶಾಲೆಗಳ ಬಗ್ಗೆ ಆಸಕ್ತಿ ವಹಿಸುವ ವಿದ್ಯಮಾನಗಳು ಸಮುದಾಯದ ಗಮನವನ್ನು ಸೆಳೆಯುತ್ತವೆ ಮತ್ತು ನಟರ ಅಭಿಮಾನಿ ಬಳಗದ ಆಸಕ್ತಿ ಕನ್ನಡ ಶಾಲೆಗಳತ್ತ ಹರಿಯುವುದಕ್ಕೆ ಪ್ರೇರಣೆಯಾಗಿ ಪರಿಣಮಿಸುತ್ತವೆ. ಸೆಲೆಬ್ರಿಟಿಗಳ ಸಹಭಾಗಿತ್ವದಿಂದಾಗಿ ಕೆಲವು ಶಾಲೆಗಳಲ್ಲಾದರೂ ಮೂಲ ಸೌಕರ್ಯಗಳು ಅಭಿವೃದ್ಧಿಗೊಂಡು, ಆ ಶಾಲೆಗಳು ಮಕ್ಕಳನ್ನು ಆಕರ್ಷಿಸುವುದಕ್ಕೆ ಸಹಕಾರಿಯಾಗಬಹುದು.

ಸರ್ಕಾರಿ ಶಾಲೆಗಳನ್ನು ಸಾರ್ವಜನಿಕರಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಚಟುವಟಿಕೆಗಳು ಎರಡು– ಮೂರು ವರ್ಷಗಳಿಂದ ವೇಗ ಪಡೆದುಕೊಂಡಿವೆ. ‘ಸರ್ಕಾರಿ ಶಾಲೆಗಳನ್ನು ಉಳಿಸಿ’ ಎನ್ನುವ ಆನ್‌ಲೈನ್‌ ಆಂದೋಲನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ತೊಡಗಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕರನ್ನು ಒಳಗೊಳ್ಳುವ ಮೂಲಕ ಈ ಆಂದೋಲನವು ಹೆಚ್ಚು ಜನರನ್ನು ತೊಡಗಿಸಿಕೊಳ್ಳುವ ಹಾಗೂ ಹೆಚ್ಚು ಶಾಲೆಗಳನ್ನು ಮುಟ್ಟುವ ಪ್ರಯತ್ನ ನಡೆಸಿದೆ. ಪೀಠೋಪಕರಣ, ಕುಡಿಯುವ ನೀರು, ಕಂಪ್ಯೂಟರ್‌, ಶೌಚಾಲಯ, ಕೊಠಡಿಗಳ ನಿರ್ಮಾಣದಂತಹ ಮೂಲ ಸೌಕರ್ಯಗಳನ್ನು ಶಾಲೆಗಳಿಗೆ ಒದಗಿಸುವ ದಿಸೆಯಲ್ಲಿ ಈ ಆಂದೋಲನ ಸಕ್ರಿಯವಾಗಿದೆ. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳು ಕೂಡ ಶಾಲೆಗಳನ್ನು ದತ್ತು ಪಡೆದಿರುವುದಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳು ಕೂಡ ಭಾಗವಹಿಸಬೇಕೆಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು ಸರ್ಕಾರಕ್ಕೆ ನೀಡಿರುವ ಸಲಹೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ರತಿಯೊಬ್ಬ ಶಾಸಕ ತಲಾ 3 ಹಾಗೂ ಸಂಸದ ತಲಾ 5 ಶಾಲೆಗಳನ್ನು ದತ್ತು ಪಡೆಯಬೇಕೆಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಅವರ ಸಲಹೆ ಕಾರ್ಯರೂಪಕ್ಕೆ ಬಂದದ್ದೇ ಆದಲ್ಲಿ ಪ್ರತಿವರ್ಷ 1 ಸಾವಿರಕ್ಕೂ ಹೆಚ್ಚು ಶಾಲೆಗಳು ಹೊಸರೂಪು ಪಡೆಯುವುದು ಸಾಧ್ಯವಿದೆ. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರು ಶಾಲೆಗಳನ್ನು ದತ್ತು ಪಡೆಯುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಇದರ ಅರಿವೇ ಹೆಚ್ಚಿನ ಜನಪ್ರತಿನಿಧಿಗಳಿಗಿಲ್ಲ. ಶಾಲೆಗಳನ್ನು ದತ್ತು ಪಡೆಯುವ ದಿಸೆಯಲ್ಲಿ ಶಾಸಕರ ಗಮನಸೆಳೆಯುವ ಕೆಲಸವನ್ನು ವಲಯ ಶಿಕ್ಷಣಾಧಿಕಾರಿಗಳು ಮಾಡಬೇಕಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಪ್ರಯತ್ನಿಸಿದಲ್ಲಿ ಕಾರ್ಪೊರೇಟ್‌ ಸಂಸ್ಥೆಗಳ ‘ಸಾಮಾಜಿಕ ಹೊಣೆಗಾರಿಕೆ’ ನಿಧಿಯಿಂದ ಹೆಚ್ಚಿನ ಸಂಪನ್ಮೂಲವನ್ನು ಸರ್ಕಾರಿ ಶಾಲೆಗಳಿಗೆ ಒದಗಿಸಿಕೊಡಬಹುದಾಗಿದೆ. ಸಾಮಾಜಿಕ ಸಬಲೀಕರಣದ ಬುನಾದಿಯಂತಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಸಾಮೂಹಿಕ ಜವಾಬ್ದಾರಿಯಾಗಬೇಕಾದ ಸಂದರ್ಭ ಇಂದಿನದು. ಸಮಾನ ಶಿಕ್ಷಣ ಮರೀಚಿಕೆಯಾಗಿಯೇ ಉಳಿದಿರುವ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳಿಗೆ ವಿಶೇಷ ಮಹತ್ವವಿದೆ. ಸಾಮಾಜಿಕ ನ್ಯಾಯವನ್ನು
ತಕ್ಕಮಟ್ಟಿಗಾದರೂ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಗಮನಾರ್ಹ ಪ್ರಯತ್ನದ ರೂಪದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಅಭಿಯಾನವನ್ನು ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT