ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷತೆ ಆದ್ಯತೆಯಾಗಲಿ: ಶಾಲೆಗಳ ಆರಂಭಕ್ಕೆ ಅವಸರ ಸಲ್ಲ

Last Updated 6 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯು ಮಕ್ಕಳನ್ನು ಶಾಲೆಗೆ ಮರಳಿ ಕರೆತರುವ ಪ್ರಯತ್ನಕ್ಕೆ ಇಂಬು ನೀಡುವಂತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ಭಾಗ ಮುಗಿದು, ದಸರಾ ರಜೆ ಆರಂಭವಾಗಬೇಕಿದ್ದ ಸಂದರ್ಭದಲ್ಲಿ ಶಾಲೆಯನ್ನು ಆರಂಭಿಸುವ ಕುರಿತ ಚಿಂತನೆ ಹರಳುಗಟ್ಟುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ಮಾರ್ಚ್‌ ಕೊನೆಯ ಭಾಗದಲ್ಲಿ ಮುಚ್ಚಿದ್ದ ಶಾಲೆಗಳು ಈವರೆಗೂ ಆರಂಭಗೊಂಡಿಲ್ಲ. ಆನ್‌ಲೈನ್‌ ಶಿಕ್ಷಣ, ರಾಜ್ಯ ಸರ್ಕಾರದ ‘ವಿದ್ಯಾಗಮ’ ಯೋಜನೆಯ ಮೂಲಕ ಕಲಿಕಾ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ವಿದ್ಯಾರ್ಥಿ ಹಾಗೂ ಶಿಕ್ಷಕರ ನೇರ ಮುಖಾಮುಖಿಯ ತರಗತಿಗಳಿಗೆ ಯಾವುದೂ ಪರ್ಯಾಯವಲ್ಲ. ಹಾಗಾಗಿಯೇ ಶಾಲೆಗಳನ್ನು ಆದಷ್ಟು ಬೇಗ ತೆರೆಯುವ ಚರ್ಚೆಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ದೀರ್ಘ ಕಾಲ ಶಾಲೆಗಳನ್ನು ಮುಚ್ಚುವುದರಿಂದ ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹದ ಪಿಡುಗು ಹೆಚ್ಚುವ ಸಾಧ್ಯತೆಯೂ ಶಾಲೆಗಳನ್ನು ಆರಂಭಿಸುವ ವಾದಕ್ಕೆ ಪೂರಕವಾಗಿದೆ. ಈ ದಿಸೆಯಲ್ಲಿ ಶಾಲೆಗಳನ್ನು ಸುಗಮವಾಗಿ ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ರೂಪಿಸಿರುವ ಮಾರ್ಗಸೂಚಿಗೆ ವಿಶೇಷ ಮಹತ್ವವಿದೆ. ಶಾಲೆಗೆ ಬರುವ ಮಕ್ಕಳು ಹಾಗೂ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ವಿದ್ಯಾರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರ ಕಾಪಾಡಿಕೊಳ್ಳುವಂತಹ ಸಾಮಾನ್ಯ ನಿಯಮಗಳ ಜೊತೆಗೆ, ಶಾಲಾ ಪರಿಸರ ಹಾಗೂ ಬೋಧನಾಕ್ರಮದಲ್ಲಿ ಆಗಬೇಕಾದ ಬದಲಾವಣೆಗಳು ಮಾರ್ಗಸೂಚಿಯಲ್ಲಿವೆ. ಈ ಮಾರ್ಗಸೂಚಿಗಳನ್ನು ಅನುಸರಿಸಿ ಅಕ್ಟೋಬರ್‌ 15ರ ನಂತರ ತರಗತಿಗಳನ್ನು ನಡೆಸಬಹುದೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಶಾಲೆಗಳನ್ನು ಯಾವಾಗ ಆರಂಭಿಸಬೇಕೆಂಬ ನಿರ್ಧಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೇ ಬಿಟ್ಟಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ. ಆದರೆ, ಈ ಮಾರ್ಗಸೂಚಿಯನ್ನು ಎಷ್ಟು ಶಾಲೆಗಳಲ್ಲಿ ಅನುಸರಿಸಲಿಕ್ಕೆ ಸಾಧ್ಯವಿದೆ ಎನ್ನುವುದನ್ನು ರಾಜ್ಯ ಸರ್ಕಾರ ಖಾತರಿಪಡಿಸಿಕೊಳ್ಳಬೇಕಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಒಳ್ಳೆಯ ಮೂಲಸೌಕರ್ಯ ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ತಕ್ಕಮಟ್ಟಿಗೆ ಅನುಸರಿಸಬಹುದಾದರೂ ಅಂತಹ ಸೌಲಭ್ಯ ಇಲ್ಲದ ಶಾಲೆಗಳ ಪಾಲಿಗೆ ಮಾರ್ಗಸೂಚಿಯ ಪಾಲನೆ ಎಷ್ಟರಮಟ್ಟಿಗೆ ಪ್ರಾಯೋಗಿಕ ಎನ್ನುವುದನ್ನು ಶಿಕ್ಷಣ ಇಲಾಖೆಯೇ ಹೇಳಬೇಕು. ಗ್ರಾಮೀಣ ಪ್ರದೇಶದ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ತರಗತಿ ನಡೆಸಲು ಸರಿಯಾದ ಕಟ್ಟಡವೇ ಇಲ್ಲದಿರುವಾಗ, ಶೌಚಾಲಯ ಮತ್ತು ನೀರಿನ ವ್ಯವಸ್ಥೆಯನ್ನು ನಿರೀಕ್ಷಿಸುವುದು ಕಷ್ಟ. ಶಾಲಾ ಪರಿಸರ ಹಾಗೂ ವಾಹನಗಳನ್ನು ದಿನಕ್ಕೆರಡು ಬಾರಿ ಸ್ಯಾನಿಟೈಸ್‌ ಮಾಡಬೇಕೆಂದು ಮಾರ್ಗಸೂಚಿ ಹೇಳುತ್ತದೆ. ಈ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರುವುದು ಯಾರು ಮತ್ತು ಹೇಗೆ ಎನ್ನುವುದು ಸದ್ಯಕ್ಕೆ ಯಕ್ಷಪ್ರಶ್ನೆಯಂತೆಯೇ ತೋರುತ್ತದೆ. ಮಾರ್ಗಸೂಚಿಯನ್ನು ಶಾಲಾ ಆಡಳಿತ ಮಂಡಳಿಗಳುಕಟ್ಟುನಿಟ್ಟಾಗಿ ಪಾಲಿಸುತ್ತವೆ ಎಂದು ಭಾವಿಸಿದರೂ ಪ್ರಾಥಮಿಕ ಶಾಲೆಯ ಮಕ್ಕಳು ಸುರಕ್ಷಾ ಸೂತ್ರಗಳನ್ನು ಸರಿಯಾಗಿ ಅನುಸರಿಸುತ್ತಾರೆಯೇ? ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ತಮ್ಮನ್ನು ತಾವು ಸಂಭಾಳಿಸಿಕೊಳ್ಳಲಾಗದ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಅಪಾಯಕ್ಕೆ ಎಡೆಮಾಡಿಕೊಡುವಂತಹದ್ದು. ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಕ್ಕೆ ಪಾಲಕರ ಒಪ್ಪಿಗೆ ಬೇಕು ಹಾಗೂ ಆನ್‌ಲೈನ್‌ ಮೂಲಕ ಮನೆಯಲ್ಲಿಯೇ ಕಲಿಯಬಯಸುವ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಇಂಥ ಆಯ್ಕೆಯ ಅವಕಾಶಗಳು ಪೋಷಕರನ್ನು ಗೊಂದಲಕ್ಕೆ ದೂಡುತ್ತವೆಯೇ ವಿನಾ ಬಿಕ್ಕಟ್ಟಿಗೆ ಪರಿಹಾರ ಹೇಳುವುದಿಲ್ಲ. ಪರಿಸ್ಥಿತಿ ಸುಧಾರಿಸುವವರೆಗೂ ಎಂಟನೇ ತರಗತಿಯವರೆಗಿನ ಮಕ್ಕಳನ್ನು ಶಾಲೆಗೆ ಕರೆತರುವ ಸಾಧ್ಯತೆಗಳ ಬಗ್ಗೆ ತೀರಾ ಎಚ್ಚರಿಕೆಯ ನಡೆ ಅನುಸರಿಸುವುದು ಒಳ್ಳೆಯದು. ಒಂಬತ್ತನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಸುರಕ್ಷಾ ಕ್ರಮಗಳೊಂದಿಗೆ ತರಗತಿಗಳನ್ನು ಆರಂಭಿಸುವುದಕ್ಕೆ ಹೆಚ್ಚಿನ ತೊಡಕುಗಳಿರಲಾರವು. ಮಕ್ಕಳ ವಿಷಯದಲ್ಲಿ ಆತುರದ ನಿರ್ಧಾರ ಸಲ್ಲದು. ಮಕ್ಕಳನ್ನು ಕೇಂದ್ರವಾಗಿಸಿಕೊಂಡ ಶಿಕ್ಷಣನೀತಿ ಈ ಹೊತ್ತಿನ ಅಗತ್ಯ. ಎಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT