ಸೋಮವಾರ ಬೆಳಗಿನ ಜಾವ ಕೆಲವು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ನಗರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಮಳೆಯ ನೀರು ರಾಜಕಾಲುವೆಗಳನ್ನು ಸೇರದೆ ಉಕ್ಕಿ ಹರಿದು ರಸ್ತೆಗಳೇ ನದಿಗಳಂತಾಗಿದ್ದವು. ಹಲವೆಡೆ ಅಂಡರ್‌ಪಾಸ್‌ಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾದರೆ, ಕೆಲವೆಡೆ ಅಪಾರ್ಟ್‌ಮೆಂಟ್, ಕಟ್ಟಡ, ಮಾರುಕಟ್ಟೆಗಳಿಗೆ ನೀರು ನುಗ್ಗಿ ಜನಜೀವನಕ್ಕೆ ತೊಂದರೆಯಾಯಿತು. ಬೆಂಗಳೂರಿನ ಪೂರ್ವ ಭಾಗದ ಕೆಲವು ರಸ್ತೆಗಳಲ್ಲಿ ಗಂಟೆಗಟ್ಟಲೆ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪಡಿಪಾಟಲು ಅನುಭವಿಸಬೇಕಾಯಿತು. ಇದು ಈ ಮುಂಗಾರಿನಲ್ಲಿ ಬೆಂಗಳೂರು ನಗರವು ಎದುರಿಸಿದ ಅತಿದೊಡ್ಡ ಮಳೆ ಅನಾಹುತ. ಮೇ ತಿಂಗಳಿನಲ್ಲಿ ಸುರಿದ ಮುಂಗಾರುಪೂರ್ವ ಮಳೆಯಲ್ಲೂ ನಗರದಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಯಾಗಿತ್ತು. ಮೂರು ತಿಂಗಳ ಬಳಿಕವೂ ಅಂತಹದ್ದೇ ಸಮಸ್ಯೆ ಕಾಣಿಸಿಕೊಂಡಿದೆ. ಸೋಮವಾರ ನಸುಕಿನ ಜಾವ ಅಸಾಧಾರಣ ಎಂಬಂತೇನೂ ಮಳೆ ಸುರಿದಿರಲಿಲ್ಲ. ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸೆಂಟಿಮೀಟರ್‌ನಿಂದ 6.15 ಸೆಂಟಿಮೀಟರ್‌ವರೆಗೂ ಮಳೆ ಬಿದ್ದಿತ್ತು. ಆದರೂ ‘ನಗರ ಮಹಾಪೂರ’ ಉಂಟಾಗಿ ಜನಜೀವನಕ್ಕೆ ತೊಂದರೆ ಆಗಿರುವುದು ಮಳೆಗಾಲವನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಲ್ಲಿ ಬಿಬಿಎಂಪಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ‘ಮಳೆಗಾಲ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂಬ ಬಿಬಿಎಂಪಿ ಮುಖ್ಯ ಆಯುಕ್ತರ ಹೇಳಿಕೆಯು ಬರೀ ಮಾತಿಗೆ ಸೀಮಿತವಾಗಿದೆ ಎಂಬುದನ್ನು ಸೋಮವಾರದ ಪ್ರವಾಹವು ಸಾಬೀತುಪಡಿಸಿದೆ.
ಜಗತ್ತಿನಲ್ಲಿ ಅತ್ಯಂತ ಯೋಜನಾಬದ್ಧವಾಗಿ ನಿರ್ಮಾಣವಾದ ನಗರಗಳು ಕೂಡ ಅತಿಯಾದ ಮಳೆ ಸುರಿದಾಗ ಪ್ರವಾಹದ ಸ್ಥಿತಿ ಎದುರಿಸುವುದಿದೆ. ಆದರೆ, ಬೆಂಗಳೂರು ನಗರದಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದರೂ ಮಹಾಪೂರದ ಸನ್ನಿವೇಶ ಸೃಷ್ಟಿಯಾಗಿ ಜನಜೀವನಕ್ಕೆ ತೊಂದರೆ ಆಗುತ್ತಿರುವುದರ ಹಿಂದೆ ಬಿಬಿಎಂಪಿ ಸೇರಿದಂತೆ ನಗರಾಡಳಿತದ ಜವಾಬ್ದಾರಿ ಹೊತ್ತಿರುವ ಸಂಸ್ಥೆಗಳ ಲೋಪವೇ ಕಾರಣ. ಬೆಂಗಳೂರು ನಗರವು ಎತ್ತರದ ದಿಣ್ಣೆಗಳು ಮತ್ತು ತಗ್ಗು ಪ್ರದೇಶಗಳಿಂದ ಕೂಡಿದೆ. ಎತ್ತರದ ಪ್ರದೇಶಗಳಲ್ಲಿ ಬಿದ್ದ ಮಳೆಯ ನೀರು ತಗ್ಗು ಪ್ರದೇಶಕ್ಕೆ ಹರಿದು, ರಾಜಕಾಲುವೆಗಳನ್ನು ಸೇರಿ, ಅಲ್ಲಿಂದ ಕೆರೆಗಳಿಗೆ ಹರಿಯುತ್ತಿತ್ತು. ಅನಿಯಂತ್ರಿತ ಅಭಿವೃದ್ಧಿ ಹಾಗೂ ಒತ್ತುವರಿಗಳಿಂದ ಬಹುತೇಕ ರಾಜಕಾಲುವೆಗಳು ಕಿರಿದಾಗಿವೆ. ಕೆಲವು ಕಾಲುವೆಗಳು ಸಂಪೂರ್ಣ ಮುಚ್ಚಿಹೋಗಿವೆ. ಚರಂಡಿಗಳು, ದ್ವಿತೀಯ ಹಂತದ ಕಾಲುವೆಗಳು ಮತ್ತು ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲಸ ಸಮರ್ಪಕವಾಗಿ ನಡೆಯದೇ ಇರುವುದು ಮಳೆ ಸುರಿದಾಗಲೆಲ್ಲ ಬೆಂಗಳೂರಿನಲ್ಲಿ ಮಹಾಪೂರ ಸೃಷ್ಟಿಯಾಗಲು ಕಾರಣ. ತೆಗೆದ ಹೂಳನ್ನೂ ದೂರಕ್ಕೆ ಸಾಗಿಸದೆ ಕಾಲುವೆಗಳ ಪಕ್ಕದಲ್ಲೇ ರಾಶಿ ಹಾಕುತ್ತಿದ್ದು, ಅದು ಮತ್ತೆ ಕಾಲುವೆ ಸೇರಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬಿಬಿಎಂಪಿ ಅಂಕಿಅಂಶಗಳ ಪ್ರಕಾರ, 1,963 ಸ್ಥಳಗಳಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಬಾಕಿ ಇದೆ. ಆರು ತಿಂಗಳಿಗೂ ಹೆಚ್ಚು ಸಮಯದಿಂದ ಈ ಕೆಲಸದಲ್ಲಿ ಕಿಂಚಿತ್ತೂ ಪ್ರಗತಿಯಾಗಿಲ್ಲ. ಅದರ ಜೊತೆಯಲ್ಲೇ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯಲ್ಲೂ ಪ್ರಗತಿಯಾಗಿಲ್ಲ. ಕೆರೆಯಂಗಳದ ಜಮೀನುಗಳ ಒತ್ತುವರಿಗೂ ಕಡಿವಾಣ ಬಿದ್ದಿಲ್ಲ. ಈ ಎಲ್ಲವೂ ರಾಜಧಾನಿಯಲ್ಲಿ ‘ನಗರ ಮಹಾಪೂರ’ ಉಂಟಾಗಿ ಜನಜೀವನ ಹೈರಾಣಾಗುತ್ತಿರುವುದರ ಮೂಲ.
ಬೆಂಗಳೂರಿನಲ್ಲಿ ನಗರ ಮಹಾಪೂರ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಉಂಟಾಗುತ್ತಿದೆ. ಕಳೆದ ವರ್ಷ ಪ್ರವಾಹದಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದರು. ಬೆಂಗಳೂರಿನ ಪೂರ್ವ ಭಾಗದಲ್ಲಿ ಪ್ರವಾಹದಿಂದ ವಾರಗಟ್ಟಲೆ ಜನಜೀವನ ಅಸ್ತವ್ಯಸ್ತವಾಗಿತ್ತು. ಆಗಾಗ ಅನಾಹುತಗಳು ಸಂಭವಿಸುತ್ತಿದ್ದರೂ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಅನುಭವಗಳಿಂದ ಪಾಠ ಕಲಿತಿಲ್ಲ ಎಂಬುದನ್ನು ಈಗಿನ ಪರಿಸ್ಥಿತಿ ಸೂಚಿಸುತ್ತದೆ. ಪ್ರವಾಹ, ಅನಾಹುತ ಸಂಭವಿಸಿದಾಗ ದಿಢೀರ್ ಎಚ್ಚೆತ್ತುಕೊಂಡು ಒಂದಷ್ಟು ಕೆಲಸ ಮಾಡುವ ಆಡಳಿತ ವ್ಯವಸ್ಥೆ, ಅಷ್ಟೇ ಬೇಗ ನಿದ್ರೆಗೆ ಜಾರುತ್ತದೆ. ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೆ ಐದು ವರ್ಷ ಸಮೀಪಿಸುತ್ತಿದೆ. ಆಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿಗಳು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಉತ್ತರದಾಯಿತ್ವ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಡಿ ದೊಡ್ಡ ಯೋಜನೆಗಳನ್ನು ಜಾರಿಗೊಳಿಸುವುದಕ್ಕೇ ಹೆಚ್ಚು ಉತ್ಸುಕರಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚಿಸುವ ಉಮೇದಿನಲ್ಲಿದ್ದಾರೆ. ಈ ಎಲ್ಲದರ ಮಧ್ಯೆ ನಗರದಲ್ಲಿ ಮಳೆಗಾಲ ಎದುರಿಸುವ ಸಿದ್ಧತೆ ಮತ್ತು ಪ್ರವಾಹ, ಮಹಾಪೂರ ತಡೆಯುವ ಕ್ರಮಗಳಿಗೆ ಆದ್ಯತೆ ಸಿಗುತ್ತಿಲ್ಲ. ಸಾವಿರಾರು ಕೋಟಿ ರೂಪಾಯಿ ಹೂಡಿಕೆಯ ಹೊಸ ಯೋಜನೆಗಳನ್ನು ಜಾರಿಗೊಳಿಸುವುದಷ್ಟೇ ನಗರದ ಅಭಿವೃದ್ಧಿಯಲ್ಲ. ಮೂಲಸೌಕರ್ಯದ ಕೊರತೆಯನ್ನು ನೀಗಿಸಿ ನಗರದ ಜನರನ್ನು ಮಳೆ ಅನಾಹುತ, ಮಹಾಪೂರಗಳಿಂದ ಪಾರು ಮಾಡಬೇಕಾದುದು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ. ಇನ್ನೂ ಮಳೆಗಾಲ ಮುಗಿದಿಲ್ಲ. ನಗರದಲ್ಲಿ ಹಿಂಗಾರು ಅವಧಿಯಲ್ಲಿ ಹೆಚ್ಚು ಮಳೆ ಬೀಳುವ ಮುನ್ಸೂಚನೆಗಳಿವೆ. ಮತ್ತಷ್ಟು ದುರಂತಗಳಾಗುವುದನ್ನು ತಪ್ಪಿಸಲು ರಾಜಕಾಲುವೆಗಳ ದುರಸ್ತಿ, ಒತ್ತುವರಿ ತೆರವು ಸೇರಿದಂತೆ ಪ್ರವಾಹ ತಡೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ತುರ್ತಾಗಿ ಕೈಗೊಳ್ಳಬೇಕು. ಈ ದಿಸೆಯಲ್ಲಿ ಬಿಬಿಎಂಪಿ ಆಡಳಿತವನ್ನು ಚುರುಕುಗೊಳಿಸಬೇಕಾದ ಜವಾಬ್ದಾರಿ ಉಪಮುಖ್ಯಮಂತ್ರಿ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.