ಬುಧವಾರ, ಸೆಪ್ಟೆಂಬರ್ 22, 2021
22 °C

ಸಂಪಾದಕೀಯ: ಭಾರತ– ಚೀನಾ ಬಿಕ್ಕಟ್ಟುವಿಶ್ವಾಸ ವೃದ್ಧಿಯ ತುರ್ತು ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ನಡುವಣ ಮಾತುಕತೆಯು ಸಕಾರಾತ್ಮಕ ಫಲಿತಾಂಶ ನೀಡಿದೆ. ಗಡಿ ವಿವಾದದ ಕಾರಣಕ್ಕೆ ಎರಡೂ ದೇಶಗಳ ನಡುವಣ ಸಂಬಂಧವು ವಿಷಮ ಸ್ಥಿತಿ ತಲುಪಿದೆ. ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಸಹಜ ಸ್ಥಿತಿಗೆ ತರುವ ಉದ್ದೇಶದ ಐದು ಅಂಶಗಳ ಸೂತ್ರಕ್ಕೆ ಸಚಿವರಿಬ್ಬರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆ.

ಮೇ ತಿಂಗಳ ಮೊದಲ ವಾರದಿಂದ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಲೇ ಸಾಗಿದೆ. ಈಚಿನ ದಿನಗಳಲ್ಲಿ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಎರಡೂ ಭಾಗಗಳಲ್ಲಿನ ಘಟನಾವಳಿಗಳು ಉದ್ವಿಗ್ನತೆಗೆ ಕಾರಣವಾಗಿದ್ದವು. ಕಲ್ಲೆಸೆತ, ಹೊಡೆದಾಟದಲ್ಲಿ ಎರಡೂ ಕಡೆಯಲ್ಲಿ ಸಾವು–ನೋವು ಸಂಭವಿಸಿತ್ತು. ನಾಲ್ಕು ದಶಕಗಳ ಬಳಿಕ ಎಲ್‌ಎಸಿಯಲ್ಲಿ ಗುಂಡು ಹಾರಾಟವೂ ನಡೆಯಿತು.

‘ಚೀನಾದ ಸರಕು ಮತ್ತು ಸೇವೆಗಳು ನಮಗೆ ಬೇಡ’ ಎಂಬ ಭಾರತದ ನಿರ್ಧಾರ ಸುಲಭವಾದದ್ದೇನೂ ಆಗಿರಲಿಲ್ಲ. ಇಂತಹ ಸ್ಥಿತಿಯಲ್ಲಿಯೂ ಎರಡೂ ದೇಶಗಳ ನಡುವೆ ಮಾತುಕತೆಯ ಬಾಗಿಲುಗಳು ತೆರೆದಿದ್ದವು. ಸೇನೆಯ ಹಿರಿಯ ಕಮಾಂಡರ್‌ಗಳು ಮತ್ತು ರಾಜತಾಂತ್ರಿಕ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆಗಳು ನಡೆದಿವೆ. ಸೌಹಾರ್ದದ ನಿರ್ಧಾರಗಳು ಹೊರಬಿದ್ದಿವೆ. ಆದರೆ, ಅವು ಅನುಷ್ಠಾನ ಮಾತ್ರ ಆಗಲಿಲ್ಲ ಎನ್ನುವುದೇ ವಿಶ್ವಾಸದಲ್ಲಿ ಸೃಷ್ಟಿಯಾಗಿರುವ ಕಂದಕದ ಆಳವನ್ನು ಸೂಚಿಸುತ್ತದೆ. ಬಳಿಕ, ಸಚಿವರ ಮಟ್ಟದ ಎರಡು ಸುತ್ತಿನ ಮಾತುಕತೆಗಳು ನಡೆದವು. ಎರಡೂ ದೇಶಗಳ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಒಂದೇ ವಾರದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಹಾಗಾಗಿ, ಈಗ ಬಿಕ್ಕಟ್ಟು ಶಮನಕ್ಕೆ ರಾಜಕೀಯ ತೀರ್ಮಾನದ ಕಸುವು ಲಭಿಸಿದೆ.

ಭಿನ್ನಾಭಿಪ್ರಾಯಗಳು ಬಿಕ್ಕಟ್ಟುಗಳಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳುವುದು ಯಾವುದೇ ಸಂಬಂಧದ ತಳಹದಿ. ಭಿನ್ನಮತವು ಸಂಘರ್ಷವಾಗಬಾರದು ಎಂಬುದನ್ನು 2017ರಲ್ಲಿಯೇ ಭಾರತ ಮತ್ತು ಚೀನಾ ಘೋಷಿಸಿದ್ದವು. ಈಗ, ವಿದೇಶಾಂಗ ಸಚಿವರ ಮಾತುಕತೆಯಲ್ಲಿ ಈ ಘೋಷಣೆಗೆ ಮಹತ್ವ ನೀಡಲಾಗಿದೆ. ಅದುವೇ ಸಮಸ್ಯೆ ಪರಿಹಾರದ ಪ್ರಮುಖ ಸೂತ್ರ. ಸೇನಾ ಮಟ್ಟದ ಮಾತುಕತೆ
ಗಳಲ್ಲಿ ಈ ಸ್ಫೂರ್ತಿಯು ಪ್ರತಿಫಲನಗೊಂಡು, ಗಡಿಯಲ್ಲಿ ಈಗ ಸೃಷ್ಟಿಯಾಗಿರುವ ಬಿಗುವಿನ ವಾತಾವರಣವು ಕೊನೆಗೊಳ್ಳುವುದು ಎರಡೂ ದೇಶಗಳ ಸುರಕ್ಷೆ ಮತ್ತು ಸಮೃದ್ಧಿಗೆ ಅಗತ್ಯ. ವಿಶ್ವಾಸ ವೃದ್ಧಿ ಆಗಬೇಕು ಎನ್ನುವುದು ಸಚಿವರ ಸಭೆಯಲ್ಲಿ ಒಪ್ಪಿತವಾದ ಇನ್ನೊಂದು ಅಂಶ. ಗಡಿಯಲ್ಲಿನ ಸಮಸ್ಯೆಯು ಚೀನಾದ ಬಗ್ಗೆ ಭಾರತದಲ್ಲಿ ಉಂಟು ಮಾಡಿರುವ ಅಪನಂಬಿಕೆಯು ಬಹಳ ದೊಡ್ಡದು.

ಎರಡೂ ದೇಶಗಳು ಏಷ್ಯಾದ ಅತಿ ದೊಡ್ಡ ಆರ್ಥಿಕ ಹಾಗೂ ಮಿಲಿಟರಿ ಶಕ್ತಿಗಳು. ಈ ದೇಶಗಳಿಗೆ ಜಾಗತಿಕ ಮಟ್ಟದಲ್ಲಿ ಮಹತ್ವಾಕಾಂಕ್ಷೆಗಳೂ ಇವೆ. ವ್ಯಾಪಾರ ವಹಿವಾಟಿನಂತಹ ವಿಚಾರಕ್ಕೆ ಕೂಡ ಈಗ ಅಪನಂಬಿಕೆಯ ಕರಿನೆರಳು ಚಾಚಿದೆ. ಇದು, ಭಾರತ–ಚೀನಾದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಅದನ್ನು ತಪ್ಪಿಸಿ, ಪ್ರಗತಿಯತ್ತ ಗಮನ ಹರಿಸುವುದು ಬಹಳ ಮುಖ್ಯ. ವಿದೇಶಾಂಗ ಸಚಿವರ ನಡುವೆ ಒಪ್ಪಿತವಾದ ಅಂಶಗಳು ಸ್ವಾಗತಾರ್ಹ. ಆದರೆ, ಅಲ್ಲಿಯೂ ಚೀನಾ ಕೆಲವು ವಿಚಾರಗಳಲ್ಲಿ ಅಪಾರದರ್ಶಕವಾಗಿಯೇ ಉಳಿದಿರುವುದು ಸರಿಯಲ್ಲ. ಚೀನಾದ ಅತಿಕ್ರಮಣಕಾರಿ ವರ್ತನೆಗೆ ಮೊದಲು ಎಲ್‌ಎಸಿಯಲ್ಲಿ ಇದ್ದ ಯಥಾಸ್ಥಿತಿ ಮರುಸ್ಥಾಪನೆಯಾಗಬೇಕು ಎಂಬ ಭಾರತದ ವಾದದ ಬಗ್ಗೆ ಚೀನಾ ಏನನ್ನೂ ಹೇಳಿಲ್ಲ. ಐದು ಅಂಶಗಳಲ್ಲಿ ಇದು ಸೇರ್ಪಡೆಯಾಗಿಲ್ಲ.

ಸಂಬಂಧದಲ್ಲಿ ಸಾಮರಸ್ಯ ಮತ್ತೆ ಮೂಡಬೇಕಿದ್ದರೆ ಅಪನಂಬಿಕೆ ದೂರವಾಗಬೇಕು. ಭಾರತ ಪ್ರತಿಪಾದಿಸುತ್ತಿರುವ ಪ್ರಮುಖ ವಿಚಾರದ ಬಗ್ಗೆಯೇ ಚೀನಾ ಮೌನವಾಗಿದ್ದರೆ ಸೌಹಾರ್ದ ಮರುಸ್ಥಾಪನೆ ಸುಲಭವಲ್ಲ. ಜಾಗತಿಕ ನಾಯಕತ್ವದ ಸ್ಥಾನಕ್ಕೆ ಏರಬೇಕು ಎಂಬ ಬಯಕೆ ಇರುವ ಬೃಹತ್‌ ದೇಶಗಳು ಪರಸ್ಪರ ವಿಶ್ವಾಸವಿಲ್ಲದೆ ವರ್ತಿಸುವುದು ಈ ಆಕಾಂಕ್ಷೆಗೆ ತೊಡಕಾಗಬಹುದು ಎಂಬ ಎಚ್ಚರ ಎರಡೂ ದೇಶಗಳಲ್ಲಿ ಮೂಡಲಿ. ಅಪನಂಬಿಕೆಯನ್ನು ಹೋಗಲಾಡಿಸಿ ನಂಬಿಕೆ ಮೂಡಿಸುವ ಹೊಣೆಗಾರಿಕೆ ಭಾರತಕ್ಕಿಂತ ಚೀನಾದ ಮೇಲೆಯೇ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು