ಶುಕ್ರವಾರ, ಜೂನ್ 5, 2020
27 °C

ಕೊರೊನಾ ವಿರುದ್ಧ ಹೋರಾಟ ರೈಲ್ವೆಯ ವಿಶಿಷ್ಟ ಚಿಂತನೆ ಮಾದರಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ–2 ವೈರಾಣು, ಅದರ ಸೋಂಕಿನಿಂದ ಉಂಟಾಗುವ ಕೋವಿಡ್‌–19 ಕಾಯಿಲೆಯು ಇಡೀ ಜಗತ್ತು ತಲ್ಲಣಗೊಳ್ಳುವಂತೆ ಮಾಡಿವೆ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ ಈಗ 10 ಲಕ್ಷದತ್ತ ದಾಪುಗಾಲಿಟ್ಟಿದೆ ಮತ್ತು ಕೋವಿಡ್‌ ಪಿಡುಗಿಗೆ ಬಲಿಯಾದವರ ಸಂಖ್ಯೆ 50 ಸಾವಿರ ಸಮೀಪಿಸಿದೆ. ಸೋಂಕಿನ ಪ್ರಮಾಣವು ದ್ವಿಗುಣಗೊಳ್ಳುತ್ತಲೇ ಸಾಗುವುದು ಕೊರೊನಾ ಸೋಂಕಿನ ಅತ್ಯಂತ ಅಪಾಯಕಾರಿ ಲಕ್ಷಣ.

ರೋಗಿಗಳ ಸಂಖ್ಯೆಯು ದಿಢೀರ್ ಏರಿಕೆಯಾಗುತ್ತದೆ. ಲಕ್ಷಾಂತರ ಜನರಿಗೆ ರೋಗವು ಅಂಟಿಕೊಂಡರೆ ಅದನ್ನು ನಿಭಾಯಿಸುವಷ್ಟು ಸಾಮರ್ಥ್ಯವನ್ನು ಯಾವುದೇ ದೇಶದ ಆರೋಗ್ಯ ಮೂಲಸೌಕರ್ಯವು ಹೊಂದಿಲ್ಲ. ಆಸ್ಪತ್ರೆಗಳು, ಹಾಸಿಗೆಗಳು, ವೈದ್ಯರು, ಬೆಂಬಲ ಸಿಬ್ಬಂದಿಯ ಸಂಖ್ಯೆ ಸಾಕಾಗುವುದಿಲ್ಲ. ಸೋಂಕಿಗೆ ಒಳಗಾದ ಶೇ 80ರಷ್ಟು ಮಂದಿ ಚಿಕಿತ್ಸೆ ಇಲ್ಲದೆ ಅಥವಾ ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಾರೆ ಎಂಬುದು ಒಂದು ಆಶಾದಾಯಕ ಅಂಶ. ಆದರೆ, ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಶೇ 20ರಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

ಅವರ ಪೈಕಿ ಶೇ 5ರಷ್ಟು ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬುದು ಇತರ ದೇಶಗಳ ಅನುಭವದಿಂದ ನಮಗೆ ದೊರೆತಿರುವ ಅರಿವು. ಇಂತಹ ರೋಗಿಗಳ ಚಿಕಿತ್ಸೆಗೆ ವೆಂಟಿಲೇಟರ್‌ ಬೇಕಾಗುತ್ತದೆ. ಇದರ ಜತೆಗೆ, ಸೋಂಕು ಶಂಕಿತರನ್ನು ಪ್ರತ್ಯೇಕವಾಗಿ ಇರಿಸಬೇಕಾದ ಅನಿವಾರ್ಯವು ಸಮಸ್ಯೆಯನ್ನು ಇನ್ನಷ್ಟು ಗಾಢವಾಗಿಸಿದೆ. ಆರೋಗ್ಯ ವ್ಯವಸ್ಥೆಯು ಹೆಚ್ಚು ಉತ್ತಮವಾಗಿರುವ ಸ್ಪೇನ್‌, ಇಟಲಿ, ಇಂಗ್ಲೆಂಡ್‌, ಅಮೆರಿಕದಂತಹ ದೇಶಗಳು ಕೂಡ ಈ ಬೃಹತ್‌ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದೆ ತತ್ತರಿಸಿವೆ.

ಜಗತ್ತು ಎದುರಿಸುತ್ತಿರುವ ಅಸಾಮಾನ್ಯ ಸಂದರ್ಭ ಇದು. ಇಂತಹ ಅಸಾಧಾರಣವಾದ ಸನ್ನಿವೇಶದಲ್ಲಿ ಅಸಾಮಾನ್ಯವಾದ ಕ್ರಮಗಳು ಬೇಕಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡುವಿಕೆ ಸರಪಣಿಯನ್ನು ತುಂಡರಿಸಬೇಕು ಎಂಬ ಕಾರಣಕ್ಕೆ ಹಲವು ದೇಶಗಳು ಲಾಕ್‌ಡೌನ್‌ ಘೋಷಿಸಿವೆ. ನಮ್ಮ ದೇಶದಲ್ಲಿಯೂ ಇದೇ 14ರವರೆಗೆ ಲಾಕ್‌ಡೌನ್‌ ಪ್ರಕಟಿಸಲಾಗಿದೆ. ಅದರ ನಡುವೆಯೇ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಬೇರೆ ದೇಶಗಳಲ್ಲಿ ಆದಂತೆ, ನಮ್ಮಲ್ಲಿಯೂ ಸೋಂಕು ಹರಡುವಿಕೆ ವಿಪರೀತ ಮಟ್ಟಕ್ಕೆ ಹೋದರೆ ಅದನ್ನು ನಿಭಾಯಿಸಲು ಯುದ್ಧೋಪಾದಿ ಸಿದ್ಧತೆಗಳೂ ಸಾಲುವುದಿಲ್ಲ. ಪ್ರತ್ಯೇಕಿಸಲಾದ ವಾರ್ಡ್‌ ಮತ್ತು ಆಸ್ಪತ್ರೆ ಹಾಸಿಗೆಗಳನ್ನು, ಅಗತ್ಯ ಇರುವ ಎಲ್ಲರಿಗೂ ಪೂರೈಸಲು ಈಗ ಇರುವ ಆಸ್ಪತ್ರೆಗಳಿಂದ ಸಾಧ್ಯವಿಲ್ಲ. ಈ ಕೊರತೆಯನ್ನು ಕಡಿಮೆ ಮಾಡಲು ಕೈಜೋಡಿಸುವುದಾಗಿ ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

ರೈಲು ಬೋಗಿಗಳನ್ನು ಆಸ್ಪತ್ರೆ ಹಾಸಿಗೆ ಮತ್ತು ಪ್ರತ್ಯೇಕಿಸಲಾದ ವಾರ್ಡ್‌ ಆಗಿ ಬದಲಾಯಿಸಿ ನೀಡುವುದಾಗಿ ತಿಳಿಸಿದೆ. ಅದರ ಮಾದರಿಯನ್ನು ಸಿದ್ಧಪಡಿಸಿದೆ. ಚಿತ್ತರಂಜನ್‌ನ ರೈಲು ಎಂಜಿನ್‌ ಕಾರ್ಖಾನೆ, ಚೆನ್ನೈನ ರೈಲು ಬೋಗಿ ಕಾರ್ಖಾನೆ ಮತ್ತು ಬೆಂಗಳೂರಿನ ಯಲಹಂಕದ ರೈಲು ಗಾಲಿ ಕಾರ್ಖಾನೆಯನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ಬೋಗಿಯಲ್ಲಿ ಗರಿಷ್ಠ 16 ಹಾಸಿಗೆಗಳನ್ನು ಹಾಕಲು ಸಾಧ್ಯವಿದೆ.

ಆರಂಭದಲ್ಲಿ ಐದು ಸಾವಿರ ಮತ್ತು ನಂತರದ ಹಂತದಲ್ಲಿ 20 ಸಾವಿರ ಬೋಗಿಗಳನ್ನು ಕೋವಿಡ್‌ ಆಸ್ಪತ್ರೆಗಳಾಗಿ ಪರಿವರ್ತಿಸಲು ರೈಲ್ವೆ ವಲಯಗಳಿಗೆ ಸೂಚನೆ ನೀಡಲಾಗಿದೆ. ಇದು ಸಾಧ್ಯವಾದರೆ 3.2 ಲಕ್ಷ ಹಾಸಿಗೆಗಳು ಲಭ್ಯವಾಗುತ್ತವೆ. ರೈಲ್ವೆಯು 125 ಆಸ್ಪತ್ರೆಗಳನ್ನು ಹೊಂದಿದೆ. ಅವುಗಳ ಪೈಕಿ 70 ಆಸ್ಪತ್ರೆಗಳನ್ನು ಕೋವಿಡ್‌ ಬಾಧಿತರ ಚಿಕಿತ್ಸೆಗೆ ಮೀಸಲಿಡಲು ಇಲಾಖೆ ಮುಂದಾಗಿದೆ. ರೈಲ್ವೆಯ ಆಸ್ಪತ್ರೆಗಳಿಂದ ನಿವೃತ್ತರಾದ ವೈದ್ಯರು ಮತ್ತು ಇತರ ಅರೆವೈದ್ಯಕೀಯ ಸಿಬ್ಬಂದಿಯನ್ನೂ ಕೊರೊನಾ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳುವುದಾಗಿ ಹೇಳಿದೆ.

ಲಾಕ್‌ಡೌ‌ನ್‌ನಿಂದಾಗಿ ಸರಕು ಸಾಗಾಟ ದುಸ್ತರವಾಗಿರುವ ಈ ಹೊತ್ತಿನಲ್ಲಿ, ಔಷಧ, ವೈದ್ಯಕೀಯ ಸಲಕರಣೆ ಮತ್ತು ಅಗತ್ಯ ವಸ್ತುಗಳ ಸಾಗಾಟವನ್ನೂ ರೈಲ್ವೆ ಆರಂಭಿಸಿದೆ. ಕಡು ಸಂಕಷ್ಟದ ಈ ಕಾಲದಲ್ಲಿ ರೈಲ್ವೆಯ ಈ ಕ್ರಿಯಾಶೀಲ ಯೋಚನೆ ಮತ್ತು ಯೋಜನೆಗೆ ಮೆಚ್ಚುಗೆಯನ್ನಷ್ಟೇ ವ್ಯಕ್ತಪಡಿಸಿದರೆ ಸಾಲದು. ಜನರ ಬಗ್ಗೆ ಗಾಢವಾದ ಕಳಕಳಿಯುಳ್ಳ ಅಧಿಕಾರಿಗಳಷ್ಟೇ ಈ ರೀತಿ ಚಿಂತಿಸಲು ಸಾಧ್ಯ.

ಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ, ಬೋಗಿಗಳು, ಶೌಚಾಲಯಗಳು ಕೊಳಕಾಗಿರುತ್ತವೆ ಎಂಬ ಅಸಮಾಧಾನ ರೈಲು ಪ್ರಯಾಣಿಕರಲ್ಲಿ ಇದ್ದಿದ್ದೇ. ಆದರೆ, ರೈಲ್ವೆಯು ಈಗ ಕೆಲಸ ಮಾಡುತ್ತಿರುವ ರೀತಿಯು ಆ ಎಲ್ಲ ಅತೃಪ್ತಿಗಳನ್ನು ಮರೆಸಿ, ಜನರಲ್ಲಿ ಕೃತಜ್ಞ ಭಾವವನ್ನು ಮಾತ್ರ ಉಳಿಸುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಜಾಗತಿಕ ಪಿಡುಗನ್ನು ಸೋಲಿಸಲು ಸರ್ಕಾರಗಳು ಮತ್ತು ಇಲಾಖೆಗಳು ವಿಭಿನ್ನವಾಗಿ, ವಿಶಿಷ್ಟವಾಗಿ ಯೋಚಿಸುವ ಅಗತ್ಯ ಇದೆ ಎಂಬುದರತ್ತಲೂ ರೈಲ್ವೆಯು ಬೊಟ್ಟು ಮಾಡಿ ತೋರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು