ಗುರುವಾರ , ಆಗಸ್ಟ್ 5, 2021
22 °C

ಸಂಪಾದಕೀಯ: ಐಪಿಸಿಯ ಸೆಕ್ಷನ್‌ 124(ಎ) ರದ್ದುಪಡಿಸಲು ಇದು ಸಕಾಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಇರುವ, ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್‌ 124(ಎ) ಅನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯು ಈಚಿನ ದಿನಗಳಲ್ಲಿ ಬಲವಾಗುತ್ತಿದೆ. ಈ ಬೇಡಿಕೆಯು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ. ಆದರೆ, ಬ್ರಿಟಿಷರ ಕಾಲದ ಈ ಕಾನೂನು ಈಗಲೂ ಅಗತ್ಯವಿದೆಯೇ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಈಚೆಗೆ ಪ್ರಶ್ನಿಸಿರುವುದು, ‘ಈ ಕಾನೂನನ್ನು ತೆಗೆಯಬೇಕು’ ಎಂಬ ಬೇಡಿಕೆಗೆ ಪ್ರಾಮುಖ್ಯ ತಂದುಕೊಟ್ಟಿದೆ. ತೀರಾ ಈಚೆಗೆ, ಕೆಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌, ದೇಶದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಕಟುವಾಗಿ ಟೀಕಿಸಿದೆ. ಕಾನೂನಿನ ದುರ್ಬಳಕೆಯಿಂದಾಗಿ ತೊಂದರೆಗೆ ಒಳಗಾದವರಿಗೆ ಸಮಾಧಾನ ಆಗುವಂತಹ ತೀರ್ಮಾನಗಳನ್ನು ಸಹ ನೀಡಿದೆ. ಈ ಕಾನೂನಿನ ಪುನರ್‌ ಪರಿಶೀಲನೆಯ ಅಗತ್ಯ ಇದೆ ಎಂದು ಕೋರ್ಟ್‌ ಈಗ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಕೇಂದ್ರವು ಈ ಕೆಲಸವನ್ನು ಮಾಡದೆ ಇದ್ದರೆ, ತಾನೇ ಆ ಕೆಲಸ ಮಾಡುವುದಾಗಿಯೂ ಕೋರ್ಟ್‌ ಸ್ಪಷ್ಟಪಡಿಸಿದೆ. ‘ಮಹಾತ್ಮ ಗಾಂಧಿ ಮತ್ತು ತಿಲಕ್ ಅವರ ಬಾಯಿಮುಚ್ಚಿಸಲು’ ಬ್ರಿಟಿಷರು ಬಳಸಿಕೊಳ್ಳುತ್ತಿದ್ದ ಐಪಿಸಿಯ ಸೆಕ್ಷನ್‌ 124(ಎ) ಅನ್ನು ಈಗ ಪೊಲೀಸರು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಅವರು ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಏಳು ದಶಕಗಳ ನಂತರವೂ ಈ ಕಾನೂನು ಬಳಕೆಯಲ್ಲಿ ಇರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಪೊಲೀಸರಿಗೆ ಯಾರನ್ನಾದರೂ ಸಿಲುಕಿಸಬೇಕು ಎಂದು ಅನ್ನಿಸಿದರೆ ಅವರು ಈ ಸೆಕ್ಷನ್ ಬಳಸಿಕೊಳ್ಳುತ್ತಾರೆ ಎಂದು ಸಿಜೆಐ ಹೇಳಿದ್ದಾರೆ.

ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ ಈ ಮಾತುಗಳನ್ನು ಆಡಿದೆ. ಈ ಸೆಕ್ಷನ್ನಿನ ವ್ಯಾಪಕ ದುರ್ಬಳಕೆಯನ್ನು ಅರ್ಜಿದಾರರು ಉಲ್ಲೇಖಿಸಿ, ಇದನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದಾರೆ. ದೇಶದ್ರೋಹದ ಸೆಕ್ಷನ್ನಿನ ಭೀತಿಯಿಂದಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜನ ಮುಕ್ತವಾಗಿ ಚಲಾಯಿಸಲು ಹಿಂಜರಿಯಬಹುದು ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ. ಟೀಕೆ ಮತ್ತು ಅಭಿಪ್ರಾಯಭೇದವನ್ನು ಹತ್ತಿಕ್ಕಲು, ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು, ಮುಕ್ತ ಅಭಿವ್ಯಕ್ತಿಗೆ ಕಡಿವಾಣ ಹಾಕಲು ಈಚಿನ ವರ್ಷಗಳಲ್ಲಿ ಈ ಕಾನೂನನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿರುವ ನಿದರ್ಶನಗಳು ಇವೆ. ಪೌರತ್ವ ತಿದ್ದುಪಡಿ ಕಾಯ್ದೆಯಂತಹ (ಸಿಎಎ) ಕಾನೂನುಗಳ ವಿಚಾರದಲ್ಲಿ ಸರ್ಕಾರವನ್ನು ವಿರೋಧಿಸಿದವರು, ಲೇಖಕರು, ಪತ್ರಕರ್ತರು, ವಿದ್ಯಾರ್ಥಿಗಳು ಈ ಕಾನೂನಿನ ದುರ್ಬಳಕೆಗೆ ಗುರಿಯಾಗಿದ್ದಾರೆ. ಸಿಜೆಐ ಅವರು ಹೇಳಿರುವಂತೆ, ಇಂತಹ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತವರಿಗೆ ಶಿಕ್ಷೆ ಆಗುವ ಪ್ರಮಾಣ ಕಡಿಮೆ. ಏಕೆಂದರೆ, ದೇಶದ್ರೋಹದ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕಾದ ತಪ್ಪನ್ನು ಬಹುತೇಕರು ಮಾಡಿರುವುದಿಲ್ಲ. ಕೆಲವು ತಿಂಗಳುಗಳ ಹಿಂದೆ, ಬೆಂಗಳೂರಿನ ದಿಶಾ ರವಿ ಪ್ರಕರಣದಲ್ಲಿ ಸೆಕ್ಷನ್ 124(ಎ) ಅನ್ನು ತಪ್ಪಾಗಿ ಬಳಕೆ ಮಾಡಿಕೊಳ್ಳಲಾಯಿತು. ಪರಿಸರ ಕಾರ್ಯಕರ್ತೆ ಆಗಿರುವ ದಿಶಾ ಅವರ ಮೇಲೆ ವಿನಾಕಾರಣ ದೇಶದ್ರೋಹದ ಆರೋಪ ಹೊರಿಸಿ, ಬಂಧಿಸಲಾಯಿತು. ರಾಮಚಂದ್ರ ಗುಹಾ ಸೇರಿದಂತೆ ಕೆಲವು ವಿದ್ವಾಂಸರು ಪ್ರಧಾನಿಗೆ ಬರೆದ ಪತ್ರವೊಂದನ್ನು ನೆಪವಾಗಿ ಇರಿಸಿಕೊಂಡು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಪತ್ರಕರ್ತ ವಿನೋದ್ ದುವಾ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದನ್ನೇ ನೆಪವಾಗಿ ಇರಿಸಿಕೊಂಡು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ನಂತರ ದುವಾ ಅವರನ್ನು ಸುಪ್ರೀಂ ಕೋರ್ಟ್‌ ದೋಷಮುಕ್ತಗೊಳಿಸಿತು. ಇಂತಹ ಪ್ರಕರಣಗಳು ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡುವುದಿಲ್ಲ; ಉದಾರವಾದಿ ಪ್ರಜಾತಂತ್ರ ಇರುವ ಇತರ ದೇಶಗಳ ಎದುರು ನಮ್ಮ ದೇಶಕ್ಕೆ ಕೆಟ್ಟ ಹೆಸರು ತರುತ್ತವೆ.

ಸೆಕ್ಷನ್ 124(ಎ) ಕಾನೂನಿನ ದುರ್ಬಳಕೆಯನ್ನು ತಡೆಯಲು ಹೊಸದಾಗಿ ಮಾರ್ಗಸೂಚಿ ರೂಪಿಸಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕೋರ್ಟ್‌ಗೆ ವಿವರಿಸಿದ್ದಾರೆ. ಹಾಗೆ ನೋಡಿದರೆ, 1962ರಲ್ಲಿ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಈ ಕಾನೂನಿನ ಬಳಕೆ ಹೇಗೆ ಸೀಮಿತವಾಗಿರಬೇಕು ಎಂದು ಸ್ಪಷ್ಟಪಡಿಸಿದೆ. ಅದಾದ ನಂತರವೂ ಕಾನೂನಿನ ದುರ್ಬಳಕೆ ನಿಂತಿಲ್ಲ ಎಂಬುದು ಸ್ಪಷ್ಟ. ಈಗ ಇನ್ನೂ ಒಂದು ಮಾರ್ಗಸೂಚಿ ರೂಪಿಸುವುದರಿಂದ ಕಾನೂನಿನ ದುರ್ಬಳಕೆ ನಿಂತುಬಿಡುತ್ತದೆಯೇ? ದೇಶ ಅಂದರೆ ಸರ್ಕಾರ, ದೇಶಪ‍್ರೇಮ ಅಂದರೆ ಪಕ್ಷವೊಂದರ ಸಿದ್ಧಾಂತವನ್ನು ಸಮರ್ಥಿಸುವುದು ಎಂಬ ಮಟ್ಟದ ವ್ಯಾಖ್ಯಾನಗಳು ಈಚಿನ ವರ್ಷಗಳಲ್ಲಿ ಕೆಲವರಿಂದ ಆಗಿವೆ. ಇಂಥವರ ಕೈಗೆ ಈ ಕಾನೂನು ಸಿಕ್ಕಿದಾಗ, ರಾಜಕೀಯ ಉದ್ದೇಶ ಸಾಧನೆಗೆ ಇದು ಬಳಕೆಯಾಗುತ್ತದೆಯೇ ವಿನಾ ದೇಶದ ಹಿತವನ್ನು ಕಾಯಲು ಅಲ್ಲ. ದೇಶದ ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಈ ಸಂದರ್ಭದ ಜರೂರುಗಳಲ್ಲಿ ಒಂದು. ಜನರ ಹಕ್ಕುಗಳನ್ನು ಹತ್ತಿಕ್ಕಲು ಬಳಕೆ ಆಗುವ ಸೆಕ್ಷನ್ 124(ಎ) ಅನ್ನು ಪೂರ್ತಿಯಾಗಿ ರದ್ದುಮಾಡಲು ಇದು ಸಕಾಲ. ಈ ಕಾನೂನಿನಲ್ಲಿ ನೀಡಿರುವ ‘ದೇಶದ್ರೋಹ’ದ ವ್ಯಾಖ್ಯಾನವು ಸವಕಲಾಗಿದೆ, ಆಧುನಿಕ ಪ್ರಜಾತಂತ್ರ ವ್ಯವಸ್ಥೆಗೆ ಇದು ಹೊಂದಿಕೆಯಾಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು