ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣನೆ–ಭಾವನೆಗಳ ನಡುವೆ ತವಕ–ತಲ್ಲಣಗಳ ಪಿಸುನುಡಿ

ಕಲಬುರ್ಗಿ ಕನ್ನಡ ಸಾಹಿತ್ಯ ಸಮ್ಮೇಳನ
Last Updated 6 ಫೆಬ್ರುವರಿ 2020, 2:45 IST
ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ
ಎಚ್.ಎಸ್. ವೆಂಕಟೇಶಮೂರ್ತಿ ಅವರ ಅಧ್ಯಕ್ಷ ಭಾಷಣವು ಕರ್ನಾಟಕ– ಕನ್ನಡಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಆಗಬೇಕಾದ ಕೆಲಸಗಳನ್ನು ಪರಿಣಾಮಕಾರಿಯಾಗಿ ತೆರೆದಿಟ್ಟಿದೆ. ಕನ್ನಡ ಶಿಕ್ಷಣ ಮಾಧ್ಯಮದ ಅಗತ್ಯವನ್ನು ಒತ್ತಿಹೇಳಿರುವ ಸಮ್ಮೇಳನಾಧ್ಯಕ್ಷರು, ಶಿಕ್ಷಣ ಸಂಸ್ಥೆಗಳನ್ನು ಹಣ ಸಂಪಾದನೆಯ ದಂಧೆ ಮಾಡಿಕೊಂಡಿರುವ ವ್ಯಾಪಾರಮುಖಿಗಳನ್ನು ನಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಶಿಕ್ಷಣ ವ್ಯಾಪಾರೀ ಉದ್ಯಮವಲ್ಲ; ಅದು ಅನುಭವವನ್ನು ಮಾತಾಗಿಯೂ ಮಾತನ್ನು ಅನುಭವವಾಗಿಯೂ ಅಖಂಡತ್ವದಲ್ಲಿ ಸಿದ್ಧಿಸಿಕೊಳ್ಳುವ ವ್ಯಕ್ತಿರೂಪಣದ ಸೃಷ್ಟಿಶಾಲೆ’ ಎನ್ನುವ ಅವರ ವಿಶ್ಲೇಷಣೆ ಹಾಗೂ ಇಂಗ್ಲಿಷ್‌ ಶಾಲೆಗಳು ಶಿಕ್ಷಣ ಮಟ್ಟದ ಇಳಿವಿಗೆ ಕಾರಣವಾಗಿವೆ ಎನ್ನುವ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಏಕರೂಪ ಶಿಕ್ಷಣದ ಅನುಷ್ಠಾನದ ಬಗ್ಗೆ ಕಾರ್ಯಪ್ರವೃತ್ತವಾಗಬೇಕಾಗಿದೆ. ನಿಕಟ‍ಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರೂ ಇದೇ ವಿಷಯಕ್ಕೆ ಒತ್ತು ಕೊಟ್ಟು, ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣಕ್ಕೆ ಒತ್ತಾಯಿಸಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹಿಂದಿ ಹೇರಿಕೆಯ ಪ್ರಯತ್ನಗಳನ್ನು ಸ್ಪಷ್ಟವಾಗಿ ವಿರೋಧಿಸಿರುವ ವೆಂಕಟೇಶಮೂರ್ತಿ, ‘ಹಿಂದಿಗೆ ಸಮಾನತೆಯಲ್ಲೂ ಪ್ರಥಮ ಸ್ಥಾನ ಎಂಬ ಮಾತನ್ನು ನಾನು ಒಪ್ಪಲಾರೆ’ ಎಂದು ಹೇಳಿರುವುದು ಸರಿಯಾಗಿದೆ. ಆದರೆ, ಸಂಸ್ಕೃತ ಅಥವಾ ಪ್ರಾಕೃತವನ್ನು ಸೇತುವೆಯ ಭಾಷೆಯಾಗಿ ರೂಢಿಗೆ ತರಲು ಬಹುವಾರ್ಷಿಕ ಯೋಜನೆ ಅಗತ್ಯ ಎನ್ನುವ ಅವರ ಅಭಿಪ್ರಾಯವನ್ನು ಅರಗಿಸಿಕೊಳ್ಳುವುದು ಕಷ್ಟ. ದಕ್ಕಬೇಕಾದ ಎಲ್ಲವೂ ನಮಗೆ ಕನ್ನಡದ ಮೂಲಕವೇ ದಕ್ಕಬೇಕು, ಕಲಿಯುವ ಮತ್ತು ಕಲಿಸುವ ಭಾಷೆಯೇ ವ್ಯವಹಾರ ಭಾಷೆಯಾಗಬೇಕು ಎನ್ನುವ ನಿಲುವುಗಳನ್ನು ಒಪ್ಪುವುದಾದರೆ, ಸಂಸ್ಕೃತ–ಪ್ರಾಕೃತಗಳನ್ನು ಸಂವಹನ ಭಾಷೆಯಾಗಿ ರೂಪಿಸುವ ಪ್ರಕ್ರಿಯೆ ಹುಲಿಯ ಅಸ್ಥಿಪಂಜರಕ್ಕೆ ಜೀವ ತುಂಬುವ ನಡವಳಿಕೆಯೇ ಆಗಲಿದೆ.

ಕರ್ನಾಟಕದ ಮಹಾನ್‌ ಲೇಖಕರ ಸಾಹಿತ್ಯವನ್ನು ಭಾರತದ ಇತರ ಭಾಷೆಗಳಿಗೆ ಪರಿಚಯಿಸಬೇಕೆನ್ನುವ ಅವರ ಆಶಯ ಒಳ್ಳೆಯದು.ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹಪಾಲು ಉದ್ಯೋಗಗಳನ್ನು ಒದಗಿಸಿಕೊಡಲು ಉದ್ಯೋಗ ಮೀಸಲಾತಿ ಅಗತ್ಯ ಎನ್ನುವ ಒತ್ತಾಯ ಕುರಿತು ವ್ಯಾಪಕ ಚರ್ಚೆ ಆಗಬೇಕಾಗಿದೆ. ಪಠ್ಯಕ್ರಮದಲ್ಲಿ ಕನ್ನಡದ ಸೊಗಡು ಕ್ಷೀಣಿಸುತ್ತಿದ್ದು, ಇಂದಿನ ಶಿಕ್ಷಣ ಕ್ರಮದಿಂದಲೇ ಕನ್ನಡ ಭಾಷೆ ಹಾಗೂ ಆ ಭಾಷೆಯಲ್ಲಿ ಮೈದಳೆದ ಸಾಹಿತ್ಯ ಮತ್ತು ವೈಚಾರಿಕತೆ ನಮ್ಮ ಮಕ್ಕಳಿಂದ ದೂರವಾಗುತ್ತಿದೆ ಎನ್ನುವ ಅಧ್ಯಕ್ಷರ ದುಗುಡವನ್ನು ನಾಡಿನ ಪ್ರಜ್ಞಾವಂತರೆಲ್ಲ ಗಂಭೀರವಾಗಿ ಪರಿಗಣಿಸಬೇಕು.

ಇತ್ತೀಚಿನ ವರ್ಷಗಳ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳಿಗೆ ಹೋಲಿಸಿದರೆ ವೆಂಕಟೇಶಮೂರ್ತಿ ಅವರ ಭಾಷಣ ಓದಲಿಕ್ಕೆ ಸೊಗಸಾಗಿದ್ದು, ಕಾವ್ಯಾತ್ಮಕವಾಗಿಯೂ ಇದೆ. ಸಮಕಾಲೀನ ತಲ್ಲಣಗಳನ್ನು ಕಾವ್ಯರೂಪದಲ್ಲಿ ಅಭಿವ್ಯಕ್ತಿಸುವ ಕ್ರಮ, ಸಮಸ್ಯೆಗಳ ಸರಳೀಕರಣವೂ ಆಗಿಬಿಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿಯೂ ಈ ಭಾಷಣವನ್ನು ನೋಡುವುದಕ್ಕೆ ಸಾಧ್ಯವಿದೆ. ಗಂಡಾಂತರಗಳ ನಡುವೆ ಕನ್ನಡ ನಂದಾದೀಪವನ್ನು ಎದೆಗೂಡಲ್ಲಿ ಆರದುಳಿಸಿಕೊಂಡು ಬಂದ ಕರಿಮಣ್ಣಿನ ಹಣತೆ ಎಂದು ಕಲಬುರ್ಗಿಯನ್ನು ಕಾವ್ಯಾತ್ಮಕವಾಗಿ ಬಣ್ಣಿಸಿರುವ ಸಮ್ಮೇಳನಾಧ್ಯಕ್ಷರು, ಅದೇ ನೆಲದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ‍ಪ್ರತಿಭಟನೆಗಳ ಬಗ್ಗೆ ಒಂದು ಮಾತನ್ನೂ ಆಡಿಲ್ಲ.

ಕಲ್ಯಾಣ ಕರ್ನಾಟಕದ ಕಡಕೋಳ ಮಡಿವಾಳಪ್ಪ, ಜಲಾಲ ಸಾಹೇಬ, ‍ಪಿಂಜಾರ ಬಡಾಸಾಹೇಬ ಮುಂತಾದ ತತ್ವಪದಕಾರರ ಧರ್ಮಸಹಿಷ್ಣುತೆಯ ನಿಲುವು ಈ ಹೊತ್ತು ನಮ್ಮ ನಾಡಿಗೆ ಮಾರ್ಗದರ್ಶಕ ಎನ್ನುವ ಅವರ ಮಾತು ಒಪ್ಪತಕ್ಕದ್ದು. ‘ಪರಧರ್ಮ ಪರವಿಚಾರಗಳ ಸೈರಣೆಯ...’ ಕವಿರಾಜಮಾರ್ಗಕಾರನ ಮಾತನ್ನು ನೆನಪಿಸಿಕೊಂಡು, ‘ಹಾಗೆ ಸೈರಿಸಿ ಪರಸ್ಪರ ಹೊಕ್ಕಾಡುತ್ತಾ ಒಗ್ಗೂಡಿ ಪ್ರವಹಿಸುವುದು ಮುಂಬರಿವ ನೆಲೆ’ ಎನ್ನುವ ಅಭಿಪ್ರಾಯವೂ ಸ್ವಾಗತಾರ್ಹ. ಆದರೆ, ಅಂಥ ಸೈರಣೆಯ ವಾತಾವರಣ ನಾಡಿನಲ್ಲೀಗ ಇದೆಯೇ ಎನ್ನುವ ಪ್ರಶ್ನೆಗೆ ಮುಖಾಮುಖಿಯಾಗುವ ಪ್ರಯತ್ನವನ್ನೇ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿಲ್ಲ.

ಶೃಂಗೇರಿಯಲ್ಲಿ ಇತ್ತೀಚೆಗೆ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ವಿವಾದವನ್ನಾಗಿಸಿ, ಸಮ್ಮೇಳನದಿಂದ ದೂರವುಳಿದ ಸರ್ಕಾರದ ನಿಲುವಿನ ಬಗ್ಗೆ ಹಾಗೂ ಆ ಮೇಳಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಹೊಂದಾಣಿಕೆಯ ಮನೋಧರ್ಮದ ಬಗ್ಗೆ ವೇದಿಕೆಯ ಮೇಲಿನ ಭಾಷಣದಲ್ಲಾದರೂ ಪ್ರತಿಕ್ರಿಯಿಸುವ ಗೋಜಿಗೆ ಅಧ್ಯಕ್ಷ ಭಾಷಣ ಹೋಗಿಲ್ಲ. ಕನ್ನಡದ ಕೆಲಸಗಳಿಗೆ ಅನುದಾನ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದರ ಪ್ರಸ್ತಾಪವೂ ಭಾಷಣದಲ್ಲಿಲ್ಲ.

ಸಾಹಿತ್ಯ–ಸಂಸ್ಕೃತಿಯ ಜೊತೆಗೆ ಸಾಮಾಜಿಕವಾಗಿಯೂ ಪ್ರಾಕೃತಿಕವಾಗಿಯೂ ನಾಡನ್ನು ಸ್ವಸ್ಥವಾಗಿ ಉಳಿಸಿಕೊಳ್ಳುವುದಕ್ಕೆ ಉಂಟಾಗಿರುವ ಆತಂಕಗಳ ಬಗ್ಗೆ ಸ್ಪಷ್ಟವಾಗಿ, ನಿರ್ಭಿಡೆಯಾಗಿ ಮಾತನಾಡದೇ ಹೋದರೆ ಸಾಹಿತ್ಯ ಸಮ್ಮೇಳನವು ಸರ್ಕಾರದ ಕೃಪಾಪೋಷಿತ ಜಾತ್ರೆಯ ಚೌಕಟ್ಟಿನಲ್ಲಿ ಉಳಿಯುತ್ತದೆಯೇ ವಿನಾ, ಕನ್ನಡಿಗರ ವಿವೇಕ ಮತ್ತು ಸ್ವಾಭಿಮಾನದ ಅಭಿವ್ಯಕ್ತಿಯಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT