ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಪಶ್ಚಿಮಘಟ್ಟ: ಒತ್ತುವರಿ ತೆರವಿಗಾಗಿ ಕಾರ್ಯಪಡೆ ರಚನೆ ಸ್ವಾಗತಾರ್ಹ

Published : 9 ಆಗಸ್ಟ್ 2024, 23:30 IST
Last Updated : 9 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯ ಸರ್ಕಾರವು ವಿಶೇಷ ಕಾರ್ಯಪಡೆ ರಚಿಸಿರುವುದು ಸ್ವಾಗತಾರ್ಹ ಕ್ರಮ.

ಕೇರಳದ ವಯನಾಡ್‌ ಭಾಗದಲ್ಲಿ ಉಂಟಾದ ಭೂಕುಸಿತ ಮತ್ತು ನಮ್ಮ ರಾಜ್ಯದ ವಿವಿಧ ಕಡೆಗಳಲ್ಲಿ ಸಂಭವಿಸಿದ ಗುಡ್ಡ ಕುಸಿತ ಘಟನೆಗಳಿಂದಾಗಿ ಆಡಳಿತಯಂತ್ರ ಈಗಲಾದರೂ ಎಚ್ಚೆತ್ತುಕೊಂಡಂತಿದೆ. ದೇಶದ ಆರು ರಾಜ್ಯಗಳಲ್ಲಿ ಮೈಚಾಚಿರುವ ಪಶ್ಚಿಮಘಟ್ಟಗಳು, ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ವ್ಯಾಪಿಸಿವೆ. ನಮ್ಮ ರಾಜ್ಯವೊಂದರಲ್ಲೇ ಈ ಘಟ್ಟಗಳ ಪ್ರದೇಶದಲ್ಲಿ ಎರಡು ಲಕ್ಷ ಎಕರೆಗೂ ಅಧಿಕ ಅರಣ್ಯ ಒತ್ತುವರಿಯಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿವೆ. ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಬೆಳೆಸಿದ ತೋಟಗಳು ಮತ್ತು ಅಂತಹ ಪ್ರದೇಶಗಳಲ್ಲಿ ತಲೆ ಎತ್ತಿದ ಅನಧಿಕೃತ ರೆಸಾರ್ಟ್‌ಗಳಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ ಎಂಬ ಉಲ್ಲೇಖವು ಅರಣ್ಯ ಇಲಾಖೆ ಈ ಹಿಂದೆಯೇ ಸಿದ್ಧಪಡಿಸಿದ್ದ ವರದಿಯಲ್ಲಿ ಇತ್ತು.

ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಆದ್ಯತೆಯ ಮೇಲೆ ಆಗಬೇಕು ಎಂಬ ಅಂಶವನ್ನೂ ವರದಿ ಒಳಗೊಂಡಿತ್ತು. ಆದರೆ, ಇದುವರೆಗೆ ಯಾವ ಕ್ರಮವನ್ನೂ ಜರುಗಿಸಿರಲಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನೇ ಮುಂದುಮಾಡಿ ಕಾಲಹರಣ ಮಾಡುತ್ತಾ ಬರಲಾಗಿತ್ತು. ಈಗ, ಇತ್ಯರ್ಥವಾಗದೇ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಡ್ವೊಕೇಟ್‌ ಜನರಲ್‌ ನೆರವು ಪಡೆಯಲು ಮುಂದಾಗಿರುವುದು ಕೂಡ ಸಕಾಲಿಕ ಹಾಗೂ ಸೂಕ್ತ ನಿರ್ಧಾರ. ಕಳೆದ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ 80,775 ಎಕರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 28,308 ಎಕರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 25,978 ಎಕರೆ ಮತ್ತು ಕೊಡಗು ಜಿಲ್ಲೆಯಲ್ಲಿ 6,287 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ. ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ದುರಂತದ ಬಳಿಕವೂ ಒತ್ತುವರಿ ತೆರವಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ದುರಂತದ ತೀವ್ರತೆ ಹೆಚ್ಚಿದ್ದಾಗ ಒಂದಿಷ್ಟು ಸದ್ದು ಮಾಡಿದ ಅರಣ್ಯ ಇಲಾಖೆ, ಬಳಿಕ ಕುಂಭಕರ್ಣ ನಿದ್ರೆಗೆ ಜಾರಿತ್ತು. ಈಗ ವಯನಾಡ್‌ ದುರಂತ ಮತ್ತು ಶಿರೂರು ಗುಡ್ಡ ಕುಸಿತದಂತಹ ಪ್ರಕರಣಗಳು ಇಲಾಖೆಯನ್ನು ಬಡಿದೆಬ್ಬಿಸಿವೆ.

ಪಶ್ಚಿಮಘಟ್ಟಗಳ ಜೀವಪರಿಸರವು ಭಾರತ ಮಾತ್ರವಲ್ಲ, ಇಡೀ ಜಗತ್ತಿನ ಅಮೂಲ್ಯ ಆಸ್ತಿ. ಇಲ್ಲಿನ ದಟ್ಟ ಅರಣ್ಯ ಮತ್ತು ಗುಡ್ಡ–ಕಣಿವೆಗಳು ದಕ್ಷಿಣ ಭಾರತದ ಜಲ–ವಾಯು ಸಮತೋಲನದ ಮೂಲಸೆಲೆ. ಇಂತಹ ಪರಿಸರವನ್ನು ನಾವು ಹೆಚ್ಚು ಜತನದಿಂದ ಕಾಪಾಡಿಕೊಳ್ಳಬೇಕು. ಆದರೆ, ಈಚಿನ ದಶಕಗಳಲ್ಲಿ ಇಲ್ಲಿ ಮನುಷ್ಯನ ಹೆಜ್ಜೆಗುರುತುಗಳು ದಟ್ಟವಾಗುತ್ತಿವೆ. ಅರಣ್ಯ ಅತಿಕ್ರಮಣ, ಹೆದ್ದಾರಿ ನಿರ್ಮಾಣ, ಕಲ್ಲು-ಮರಳಿನ ಗಣಿಗಾರಿಕೆ, ನದಿತಿರುವು ಕಾಮಗಾರಿ, ಪ್ರವಾಸೋದ್ಯಮದ ವಿಸ್ತರಣೆ ಮತ್ತು ರೆಸಾರ್ಟ್‌ಗಳ ನಿರ್ಮಾಣ ಎಲ್ಲವೂ ಹೆಚ್ಚುತ್ತಿವೆ.

ಅತಿವೃಷ್ಟಿ, ಭೂಕುಸಿತ, ಮಣ್ಣಿನ ಶೀಘ್ರ ಸವಕಳಿ, ತೇವನಾಶದಂತಹ ಹವಾಗುಣ ಸಂಬಂಧಿ ಒತ್ತಡಗಳ ಜೊತೆಜೊತೆಗೇ ಅಭಿವೃದ್ಧಿಯ ಹೆಸರಿನಲ್ಲಿ ಬೀಳುತ್ತಿರುವ ಪೆಟ್ಟನ್ನೂ ಸಹಿಸಿಕೊಳ್ಳಬೇಕಾದ ಸವಾಲನ್ನು ಪಶ್ಚಿಮಘಟ್ಟಗಳು ಎದುರಿಸುತ್ತಿವೆ. ‘ಪಶ್ಚಿಮಘಟ್ಟವನ್ನು ನಾವು ರಕ್ಷಿಸದಿದ್ದರೆ ನಾಳಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರಾದರೂ ಅವರ ಈ ಕಳಕಳಿಯು ಕ್ರಿಯೆಯಲ್ಲಿ ವ್ಯಕ್ತವಾಗಬೇಕಿದೆ.

ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತಲೇ ಇದೆ. ಕೊಡಗು ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಅಲ್ಲಿನ ಜನಸಂಖ್ಯೆ 5.60 ಲಕ್ಷದಷ್ಟಿದ್ದರೆ, ಕಳೆದ ವರ್ಷ ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 42 ಲಕ್ಷ. ಪರಿಸರದ ಧಾರಣಾ ಸಾಮರ್ಥ್ಯವನ್ನೂ ಅಲಕ್ಷಿಸಿ, ನೂರಾರು ರೆಸಾರ್ಟ್‌ಗಳು ಮತ್ತು ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಪ್ರವಾಸೋದ್ಯಮದ ಮಿತಿಮೀರಿದ ಚಟುವಟಿಕೆಗಳಿಂದ ಪಶ್ಚಿಮಘಟ್ಟಗಳ ಪ್ರದೇಶ ನಲುಗದಂತೆ ಮಾಡುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ಪಶ್ಚಿಮಘಟ್ಟಗಳ ರಕ್ಷಣೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಪಟ್ಟಿಯನ್ನು ಮಾಧವ ಗಾಡ್ಗೀಳ್‌ ಮತ್ತು ಕೆ. ಕಸ್ತೂರಿರಂಗನ್‌ ನೇತೃತ್ವದ ಸಮಿತಿಗಳು ತುಂಬಾ ಹಿಂದೆಯೇ ಮಾಡಿಕೊಟ್ಟಿವೆ.

ವಿಪರ್ಯಾಸವೆಂದರೆ ಈ ವರದಿಗಳ ಶಿಫಾರಸುಗಳಿಗೆ ಪಶ್ಚಿಮಘಟ್ಟಗಳ ಪ್ರದೇಶ ವ್ಯಾಪ್ತಿಯ ರಾಜ್ಯ ಸರ್ಕಾರಗಳೇ ವಿರೋಧ ವ್ಯಕ್ತಪಡಿಸಿವೆ. ಇಲ್ಲಿ ಗಣಿಗಾರಿಕೆ ನಿಷೇಧ, ಅಭಿವೃದ್ಧಿ ಚಟುವಟಿಕೆಗೆ ಕಡಿವಾಣ ಸೇರಿದಂತೆ ಹಲವು ಉಪಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ ಎಂಬುದು ತಜ್ಞರ ಸಲಹೆ. ಸರ್ಕಾರ ಈ ಸಲಹೆಗೆ ಬೆಲೆ ಕೊಡಬೇಕು. ಪಶ್ಚಿಮಘಟ್ಟಗಳ ಸ್ಥಳೀಯರ ಭವಿಷ್ಯ ಹಾಗೂ ನಿಸರ್ಗದ ಹಿತ ಕಾಯುವಂತಹ ಕ್ರಮಗಳು ಇಂದಿನ ಜರೂರು. ಆ ದಿಸೆಯಲ್ಲಿ ಒತ್ತುವರಿ ತೆರವು ಕಾರ್ಯ ಒಂದು ಸಕಾರಾತ್ಮಕ ಹೆಜ್ಜೆ. ಈ ಕಾರ್ಯ ಸಮರ್ಪಕವಾಗಿ ನಡೆಯಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿರುವುದು ಕೂಡ ಅಷ್ಟೇ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT