ಮತೀಯ ದ್ವೇಷದ ಹಿಂಸೆಯ ತಾಣವಾಗಿ ಬದಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ ಕೊನೆಯ ವಾರ ಕೇರಳದ ವ್ಯಕ್ತಿಯೊಬ್ಬರನ್ನು ಗುಂಪು ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿತ್ತು. ಮೇ 1ರ ಬಳಿಕ ಮತೀಯ ದ್ವೇಷದ ಕಾರಣಕ್ಕಾಗಿಯೇ ಇಬ್ಬರ ಕೊಲೆಗಳು ನಡೆದಿವೆ. ಈ ಪ್ರಕರಣಗಳ ಬೆನ್ನಲ್ಲೇ ಮತೀಯ ದ್ವೇಷದ ಬೆಂಕಿ ಇಡೀ ಕರಾವಳಿಯನ್ನು ವ್ಯಾಪಿಸಿಕೊಳ್ಳುವ ಲಕ್ಷಣಗಳು ಗೋಚರಿಸಿದ್ದವು. ಕೊಲೆಪ್ರಕರಣಗಳನ್ನೇ ಮುಂದಿಟ್ಟುಕೊಂಡು ಹಿಂದೂ– ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಪ್ರಯತ್ನಗಳೂ
ಆರಂಭವಾಗಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬದಲಾವಣೆ ಮಾಡಿತು. ದೀರ್ಘಕಾಲದಿಂದ ಒಂದೇ ಠಾಣೆ, ಉಪವಿಭಾಗಗಳಲ್ಲಿ ಠಿಕಾಣಿ ಹೂಡಿರುವ ಕೆಳಹಂತದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿನ ಮತೀಯ ದ್ವೇಷದ ಹಿಂಸಾ ಕೃತ್ಯಗಳ ಹಿಂದಿನ ಆಳ–ಅಗಲ ಬಲ್ಲ ಐಪಿಎಸ್ ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸುತ್ತಿದ್ದಂತೆಯೇ ಪೊಲೀಸರ ಕಾರ್ಯವೈಖರಿ ಬದಲಾಗಿದೆ. ಮತೀಯ ದ್ವೇಷದ ಭಾಷಣ ಮಾಡುವವರು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಾಕುವ ಮೂಲಕ ಹಿಂಸೆಯನ್ನು ಪ್ರಚೋದಿಸುವವರು, ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿದೆ.

ಮತೀಯ ಹಿಂಸಾ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾದವರು ಮತ್ತು ಅಂತಹ ಕೃತ್ಯಗಳಿಗೆ ಪ್ರಚೋದನೆ ನೀಡಿದ್ದಾರೆ ಎನ್ನಲಾದ 36 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ವಿದೇಶಗಳಲ್ಲಿ ಕುಳಿತು ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂಸೆಯನ್ನು ಪ್ರಚೋದಿಸುವವರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿತ್ತು. ಈಗ ಹೊಸ ತಂತ್ರಗಾರಿಕೆ ಪ್ರಯೋಗಿಸಿರುವ ಪೊಲೀಸರು, ಲುಕ್ಔಟ್ ನೋಟಿಸ್ ಹೊರಡಿಸಿ ಅಂತಹವರನ್ನು ಸ್ವದೇಶಕ್ಕೆ ಕರೆಸಿಕೊಂಡು, ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ಕರಾವಳಿಯಲ್ಲಿನ ಮತೀಯ ದ್ವೇಷದ ಹಿಂಸಾಚಾರಕ್ಕೂ ಅಕ್ರಮ ಮರಳು ಸಾಗಣೆ, ಮಾದಕ ವಸ್ತು ಮಾರಾಟ ಮತ್ತು ದನದ ಮಾಂಸ ಪೂರೈಕೆ ಜಾಲಕ್ಕೂ ನಂಟು ಇದೆ ಎಂಬುದನ್ನು ಅರಿತು, ಅಂತಹ ಕೃತ್ಯಗಳನ್ನೂ ಹತ್ತಿಕ್ಕಲು ಕಾರ್ಯತಂತ್ರ ರೂಪಿಸಿ, ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಆಧಾರಿತ ಹಿಂಸೆಯನ್ನು ಹತ್ತಿಕ್ಕಲು ಈ ಬಾರಿ ಪೊಲೀಸರು ದೃಢವಾದ ಹೆಜ್ಜೆಗಳನ್ನು ಇರಿಸಿದ್ದಾರೆ. ಪೊಲೀಸರ ಈ ನಡೆಯನ್ನು ಬೆಂಬಲಿಸಬೇಕಾದ ಜವಾಬ್ದಾರಿ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ಸಮಾಜದ ಮೇಲಿದೆ.

ಈ ವಿಚಾರದಲ್ಲಿ ಆರಂಭಿಕ ಹಂತದಲ್ಲಿ ರಾಜ್ಯ ಸರ್ಕಾರವು ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಇದೆ. ಆದರೆ, ಪೊಲೀಸರ ಕಾರ್ಯಾಚರಣೆಗೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನವೂ ಕೆಲವರಿಂದ ಆರಂಭವಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಆ ಗುಂಪಿನಲ್ಲಿ ಸೇರಿದ್ದಾರೆ. ಪೊಲೀಸರ ಕಾರ್ಯಾಚರಣೆಯನ್ನೇ ಶಂಕಿಸಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮವನ್ನೇ ಕೈಗೊಳ್ಳಬಾರದು ಎಂಬ ಧಾಟಿಯಲ್ಲಿ ಅವರ ಪತ್ರವಿದೆ. ಸಾಂವಿಧಾನಿಕ ಅಧಿಕಾರ ಹೊಂದಿರುವ ಶೋಭಾ ಅವರು ಕಾನೂನಿನ ಆಡಳಿತವನ್ನು ಬೆಂಬಲಿಸಬೇಕೇ ವಿನಾ ಧರ್ಮದ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಹಿಂಸಾಚಾರಕ್ಕೆ ಇಳಿಯುವವರನ್ನಲ್ಲ. ಪೊಲೀಸರು ಒಂದೇ ಧರ್ಮಕ್ಕೆ ಸೇರಿದವರ ವಿರುದ್ಧವಷ್ಟೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದನ್ನು ದಾಖಲೆಗಳು ಹೇಳುತ್ತವೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಧರ್ಮದ ಆಧಾರದಲ್ಲಿ ನೋಡುವುದು, ಧರ್ಮದ ನೆರಳಿನಲ್ಲಿ ರಕ್ಷಿಸುವುದು ಸಂವಿಧಾನಕ್ಕೆ ಅಪಚಾರ ಬಗೆಯುವ ಕೆಲಸ. ಕೋಮು ಹಿಂಸೆಯಲ್ಲಿ ನೇರವಾಗಿ ಭಾಗಿಯಾಗುವವರ ವಿರುದ್ಧವಷ್ಟೇ ಕ್ರಮ ಆದರೆ ಸಾಲದು. ತೆರೆಯ ಹಿಂದೆ ಕುಳಿತು ಪ್ರಚೋದನೆ ನೀಡುವ, ಕಾರ್ಯತಂತ್ರ ರೂಪಿಸುವ ಸೂತ್ರಧಾರರನ್ನೂ ಕಾನೂನಿನ ಅಡಿಯಲ್ಲಿ ಕ್ರಮಕ್ಕೆ ಒಳಪಡಿಸುವ ಕೆಲಸ ಆಗಬೇಕು. ಅವರು ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ ಒತ್ತಡಕ್ಕೆ ಮಣಿಯದೇ ಕ್ರಮ ಜರುಗಿಸಬೇಕು. ರಾಜಕೀಯ ಲಾಭಕ್ಕಾಗಿ ಮತೀಯ ಹಿಂಸೆಯನ್ನು ಬೆಂಬಲಿಸುವವರು, ಅದನ್ನು ತಡೆಗಟ್ಟುವ ಪ್ರಯತ್ನಕ್ಕೆ ವಿರುದ್ಧವಾಗಿ ಕೆಲಸ ಮಾಡುವ ರಾಜಕಾರಣಿಗಳು ಮತ್ತು ಸಂಘಟನೆಗಳ ಮುಖಂಡರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಬಲವಾದ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು. ಆಗ ಕೋಮು ಹಿಂಸೆ ನಿಗ್ರಹಕ್ಕೆ ಪಣ ತೊಟ್ಟ ಪೊಲೀಸರ ಕೈಗಳು ಮತ್ತಷ್ಟು ಬಲಗೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.