ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಭಿವೃದ್ಧಿ, ಜನಹಿತ ಕಾಯುವ ಸಂಕಲ್ಪ ಮಾಡಲು ಸರ್ಕಾರಕ್ಕೆ ಸಕಾಲ

Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ದಕ್ಷಿಣ ದಿಕ್ಕಿನಲ್ಲಿ ಬಿಜೆಪಿಯು ಅಧಿಕಾರ ದಕ್ಕಿಸಿಕೊಳ್ಳಲು ನೆರವಾದ ವಲಸಿಗರಿಗೆ ಸಚಿವ ಸ್ಥಾನ ಕೊಡುವ ಕಸರತ್ತಿನಲ್ಲಿ ಆರು ತಿಂಗಳು ಸವೆದುಹೋಗಿವೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರಕಳೆದ ಜುಲೈನಲ್ಲಿ ಅಸ್ತಿತ್ವಕ್ಕೆ ಬಂದಿತು. ಉಪಚುನಾವಣೆಯ ಬಳಿಕ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಗೊಂದಲದಲ್ಲಿ ಮತ್ತೆ ಸುಮಾರು ಎರಡು ತಿಂಗಳು ಉರುಳಿದವು. ಕಾಂಗ್ರೆಸ್–ಜೆಡಿಎಸ್‌ ತೊರೆದು ಉಪಚುನಾವಣೆಯಲ್ಲಿ ಜಯ ಸಾಧಿಸಿದ ‘ಅರ್ಹ’ರಲ್ಲಿ ಹತ್ತು ಮಂದಿ ಹಾಗೂ ಪಕ್ಷದವರೇ ಆದ ಮೂವರಿಗೆ ವಿಸ್ತರಣೆ ವೇಳೆ ಅವಕಾಶ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಯೇ ಹೇಳಿದ್ದರು. ವರಿಷ್ಠರ ಅಡ್ಡಿಯೋ ಮುಖ್ಯಮಂತ್ರಿಯವರ ಸ್ವಯಂ ನಿರ್ಧಾರವೋ ಅಂತೂ ಇಂತೂ ಸಂಪುಟ ವಿಸ್ತರಣೆಯಾಗಿ ಹತ್ತು ಜನ ‘ಅರ್ಹ’ರಷ್ಟೇ ಸಚಿವರಾದರು. ಮೂಲ ಬಿಜೆಪಿಯವರಿಗೆ ಅವಕಾಶ ಸಿಕ್ಕಿಲ್ಲ. ಸಂಪುಟಕ್ಕೆ 34 ಮಂದಿಯನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಅದರಲ್ಲಿ ಈಗ 28 ಸ್ಥಾನಗಳು ಭರ್ತಿಯಾಗಿವೆ. ವಿಸ್ತರಣೆ ಬೆನ್ನಲ್ಲೇ, ಮೂಲ–ವಲಸಿಗ ಎಂಬ ಚರ್ಚೆ ಬಿರುಸು ಪಡೆದಿದೆ. ಜೂನ್‌ ಹೊತ್ತಿಗೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಹೇಳಿಕೆಯೂ ಹೊರಬಿದ್ದಿದೆ. ಸಚಿವ ಆಕಾಂಕ್ಷಿಗಳು ಅಲ್ಲಿಯವರೆಗೆ ರಾಜಕೀಯ ಹೇಳಿಕೆ–ಪ್ರತಿಹೇಳಿಕೆ ನೀಡುವುದು, ಸಚಿವ ಸ್ಥಾನ ಗಿಟ್ಟಿಸಲು ತಮ್ಮದೇ ಪ್ರಭಾವವಲಯದಲ್ಲಿ ಲಾಬಿ ಮಾಡುವುದು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ತೋರುವುದು ಬಿಟ್ಟು ವರಿಷ್ಠರ ಸುತ್ತ ಪ್ರದಕ್ಷಿಣೆ ಹಾಕುವುದಕ್ಕೆ ಇದು ಅವಕಾಶ ಮಾಡುವ ಸಾಧ್ಯತೆ ಇದೆ. ಅಭಿವೃದ್ಧಿಗೆ ಒಮ್ಮನಸ್ಸಿನಿಂದ ದುಡಿಯಬೇಕಾದ ಜನಪ್ರತಿನಿಧಿಗಳು ಕಾದಾಟಕ್ಕೆ, ಕಾಲೆಳೆಯುವುದಕ್ಕೆ ಮತ್ತೊಂದಿಷ್ಟು ಕಾಲಾವಕಾಶ ನೀಡುವ ಈ ನಡೆ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ವಿಚಾರಗಳಲ್ಲಿ ವಿಳಂಬ ಧೋರಣೆಯು ಪಕ್ಷದ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ.

ಸಚಿವ ಸಂಪುಟ ರಚನೆಯಲ್ಲಿ, ವಿವಿಧ ಸಮುದಾಯ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯವನ್ನು ಕಾಯ್ದುಕೊಳ್ಳುವುದು ರೂಢಿಗತ ಪದ್ಧತಿ. ಜಾತಿ ಆಧಾರಿತವಾಗಿ ಸಚಿವ ಸ್ಥಾನ ಹಂಚಿಕೆ ಮಾಡಿದರೆ ಆ ಜಾತಿಯ ಅಲಕ್ಷಿತರು, ಬಡವರು ಉದ್ಧಾರವಾಗುತ್ತಾರೆ ಎಂಬ ನಂಬಿಕೆ ಹುಸಿಯಾಗಿ ಬಹಳ ಕಾಲವಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗೆ ಸೇರಿದವರಾಗಿದ್ದರೆ ಅಲ್ಲಿನ ತಳಮಟ್ಟದ ಸಮಸ್ಯೆಗಳ ಅರಿವಿರುತ್ತದೆ ಎಂಬ ಕಾಳಜಿಯಿಂದ ಜಿಲ್ಲಾವಾರು ಪ್ರಾತಿನಿಧ್ಯದ ಪರಿಪಾಟ ಬೆಳೆದುಬಂತು. ಅಂತಹ ಆಶಯ ಈಡೇರದಿರುವುದನ್ನು ದಶಕಗಳ ಇತಿಹಾಸ ತೋರಿಸಿದೆ. ತಮಗೆ ಸಚಿವ ಸ್ಥಾನ ಬೇಕು ಎಂಬ ಕಾರಣಕ್ಕೆ ಜಾತಿ– ಜಿಲ್ಲೆಯ ಪ್ರಾತಿನಿಧ್ಯದ ಪ್ರವರವನ್ನು ಮುಂದಿಡುವ ಚಾಳಿ ಚಾಲ್ತಿಯಲ್ಲಿರುವುದು ಸತ್ಯ. ಸಾಮುದಾಯಿಕ ಹಿತ, ಸಾಮಾಜಿಕ ನ್ಯಾಯಪಥವು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯ. ಅದು ಸಾಕಾರಗೊಳ್ಳಬೇಕಾದರೆ ಸಚಿವ ಸಂಪುಟದ ಜಾತಿವಾರು ಪ್ರಾತಿನಿಧ್ಯದಲ್ಲಿ ಸಮತೋಲನ ಇರಬೇಕು. ವಿಸ್ತರಣೆ ಬಳಿಕ ಜಾತಿವಾರು ಪ್ರಾತಿನಿಧ್ಯವನ್ನು ಗಮನಿಸಿದರೆ, ಕರ್ನಾಟಕದಲ್ಲಿ ರಾಜಕೀಯ ಆಧಿಪತ್ಯವನ್ನು ತನ್ನ ಅಂಕೆಯಲ್ಲಿಟ್ಟುಕೊಂಡ ಎರಡು ಪ್ರಬಲ ಜಾತಿಗಳೇ ಉಳಿದ ಸಮುದಾಯಗಳ ಪ್ರಾತಿನಿಧ್ಯವನ್ನು ಕಬಳಿಸಿದಂತೆ ಕಾಣಿಸುತ್ತದೆ. 28 ಸಚಿವರ ಪೈಕಿ ಮುಖ್ಯಮಂತ್ರಿ ಹಾಗೂ ಒಬ್ಬ ಉಪಮುಖ್ಯಮಂತ್ರಿ ಸೇರಿ ಲಿಂಗಾಯತರು ಎಂಟು ಜನರಿದ್ದರೆ, ಒಬ್ಬ ಉಪಮುಖ್ಯಮಂತ್ರಿ ಒಳಗೊಂಡಂತೆ ಒಕ್ಕಲಿಗರು 7 ಜನರಿದ್ದಾರೆ. ಬ್ರಾಹ್ಮಣರು ಇಬ್ಬರಿದ್ದಾರೆ. ಪರಿಶಿಷ್ಟ ಜಾತಿಯವರ ಪೈಕಿ ಒಬ್ಬ ಉಪಮುಖ್ಯಮಂತ್ರಿ ಸೇರಿ ಮೂವರಿದ್ದರೆ, ಮತ್ತೊಂದು ನಿರ್ಣಾಯಕ ಸಮುದಾಯವಾಗಿರುವ ಪರಿಶಿಷ್ಟ ಪಂಗಡವನ್ನು ಪ್ರತಿನಿಧಿಸುವ ಇಬ್ಬರು ಸಚಿವರು ಇದ್ದಾರೆ. ಹಾಲಿ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮೂರು ಪ್ರಭಾವಿ ಸಮುದಾಯವರಿಗೇ ನೀಡಿರುವುದು ಉಳಿದ ಸಮುದಾಯದವರನ್ನು ಕಡೆಗಣಿಸಿದಂತಲ್ಲವೇ ಎಂದು ಬಿಜೆಪಿಯವರೇ ಪ್ರಶ್ನಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಸರ್ಕಾರ ರಚನೆಗೆ ಕೈ ಹಿಡಿದವರನ್ನು ಓಲೈಸಲು ಬೆಂಗಳೂರು ನಗರ ಹಾಗೂ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಪಾಲು ದೊರೆತಿದೆ. 12 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಈ ಅಸಮತೋಲನವನ್ನು ಮುಂದಿನ ದಿನಗಳಲ್ಲಾದರೂ ನಿವಾರಿಸಬೇಕಿದೆ. ಆರ್ಥಿಕ ಹಿಂಜರಿತ, ಉದ್ಯೋಗನಷ್ಟ, ನೆರೆ ಪರಿಹಾರದಲ್ಲಿ ಹಿನ್ನಡೆ... ಇಂತಹ ಸಮಸ್ಯೆಗಳು ತೀವ್ರವಾಗಿವೆ. ರಾಜಕೀಯ ಗೊಂದಲಗಳನ್ನು ಬದಿಗಿಟ್ಟು, ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವತ್ತ ಮುಖ್ಯಮಂತ್ರಿ ಹಾಗೂ ಸಚಿವರುಇನ್ನಾದರೂ ಗಮನಕೊಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT