ಸೋಮವಾರ, ಮೇ 23, 2022
30 °C

ಸಂಪಾದಕೀಯ: ಶಾಸಕರ ‘ವಿಐಪಿ ಸಂಸ್ಕೃತಿ’ಗೆ ವಿಧಾನಸಭೆ ಮಣೆ ಹಾಕದಿರಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಶಾಸಕರಿಗೆ ವಿಶೇಷ ಗೌರವ ಹಾಗೂ ಅಧಿಕಾರವನ್ನು ದೊರಕಿಸಿಕೊಡುವುದರ ಕುರಿತು ಕರ್ನಾಟಕ ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿಯು ವಿಧಾನಸಭೆಯಲ್ಲಿ ಮಂಡಿಸಿರುವ ವರದಿ, ಜನಪ್ರತಿನಿಧಿಗಳಲ್ಲಿ ಇರುವ ವಿಐಪಿ ಮನಃಸ್ಥಿತಿಯ ದ್ಯೋತಕವಾಗಿದೆ. ಜನಪರ ಕಾರ್ಯಕ್ರಮಗಳ ಪ್ರಾಮಾಣಿಕ ಅನುಷ್ಠಾನಕ್ಕಿಂತಲೂ ಶಿಷ್ಟಾಚಾರ ಪ್ರಕ್ರಿಯೆಯ ಬಗ್ಗೆ ಶಾಸಕರು ಹೆಚ್ಚು ತಲೆ ಕೆಡಿಸಿಕೊಂಡಿರುವುದು, ಮೂಗಿಗಿಂತ ಮೂಗುತಿ ಭಾರ ಎನ್ನುವ ಮಾತನ್ನು ನೆನಪಿಸುವಂತಿದೆ.

ಅಂಗವಿಕಲ ಮಹಿಳೆಯರು, ಬುದ್ಧಿಮಾಂದ್ಯ ಮಕ್ಕಳು, ಎಂಡೊಸಲ್ಫಾನ್‌ ಬಾಧೆಯಿಂದ ನರಳುತ್ತಿರುವ ವ್ಯಕ್ತಿಗಳಿಗೆ ಜಿಲ್ಲಾ ಮಟ್ಟದಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಮಹಿಳೆಯರ ಕಳ್ಳಸಾಗಣೆಯನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವ ಕೆಲವು ಶಿಫಾರಸುಗಳನ್ನು ಬಿಟ್ಟರೆ, ವರದಿಯಲ್ಲಿರುವ ಉಳಿದೆಲ್ಲವೂ ಶಾಸಕರ ಗೌರವ ಮತ್ತು ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಬೇಡಿಕೆಗಳೇ ಆಗಿವೆ. ತಮ್ಮ ಸರಳ ನಡೆ ಹಾಗೂ ಕಾರ್ಯದಕ್ಷತೆಯ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಬೇಕಾದ ಶಾಸಕರು ಸಮಾಜದಲ್ಲಿ ತಾವು ಪ್ರತ್ಯೇಕವಾದ ಹಾಗೂ ವಿಶೇಷ ಗೌರವ–ಸವಲತ್ತುಗಳಿಗೆ ಅರ್ಹವಾದ ಸಮುದಾಯ ಎನ್ನುವುದನ್ನು ಸಾಬೀತುಪಡಿಸಲು ಹೊರಟಂತಿದೆ.

ವಿಧಾನಮಂಡಲದ ಸದಸ್ಯರನ್ನು ಸರ್ಕಾರಿ ಸಮಾರಂಭಗಳಿಗೆ ಆಹ್ವಾನಿಸುವ ಬಗ್ಗೆ ಪಾಲಿಸಬೇಕಾದ ನಿಯಮಗಳ ಕುರಿತಂತೆ ಸರ್ಕಾರ ಇದುವರೆಗೆ 70ಕ್ಕೂ ಹೆಚ್ಚು ಸುತ್ತೋಲೆ ಮತ್ತು ಆದೇಶಗಳನ್ನು ಹೊರಡಿಸಿದೆ ಎಂದು ವರದಿ ಹೇಳಿದೆ. ಈ ಸಂಖ್ಯೆಯೇ ಶಾಸಕರು ತಮಗೆ ಸಲ್ಲುತ್ತಿರುವ ವಿಶೇಷ ಗೌರವದ ಬಗ್ಗೆ ಹೊಂದಿರುವ ಅತೃಪ್ತಿ ಎಷ್ಟು ತೀವ್ರವಾದುದು ಎನ್ನುವುದನ್ನು ಸೂಚಿಸುವಂತಿದೆ. ಸರ್ಕಾರಿ ಸಮಾರಂಭಗಳೆಂದರೆ, ಕಾರ್ಯಕ್ರಮದ ಉದ್ದೇಶಕ್ಕಿಂತ ಶಿಷ್ಟಾಚಾರದ ಮೆರೆದಾಟವೇ ಹೆಚ್ಚಾಗಿರುತ್ತದೆ ಎನ್ನುವ ಭಾವನೆ ಈಗಾಗಲೇ ಸಾರ್ವಜನಿಕರಮನಸ್ಸಿನಲ್ಲಿದೆ. ಆ ಶಿಷ್ಟಾಚಾರದ ಕಸರತ್ತನ್ನು ಮತ್ತಷ್ಟು ಹೆಚ್ಚಿಸಲು ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿ ಮುಂದಾದಂತಿದೆ.

ತಿರುಪತಿಯ ದೇವಸ್ಥಾನದಲ್ಲಿ ಶಾಸಕರಿಗೆ ದರ್ಶನ–ವಸತಿಗೆ ವ್ಯವಸ್ಥೆ ಮಾಡುವುದು ಹಾಗೂ ರಾಜ್ಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದಾಗ ಶಿಷ್ಟಾಚಾರದ ಪ್ರಕಾರ ಸೂಕ್ತ ಸೌಲಭ್ಯ ನೀಡಬೇಕು ಎನ್ನುವ ಶಿಫಾರಸುಗಳಂತೂ ಭಕ್ತಿ ಮುಖ್ಯವಾಗಬೇಕಾದ ಧಾರ್ಮಿಕ ಸ್ಥಳಗಳಲ್ಲೂ ಪ್ರತಿಷ್ಠೆ ಮೆರೆಯುವ ಪ್ರಯತ್ನವಾಗಿದೆ. ತಮ್ಮ ಅಸ್ತಿತ್ವ ಗೌಣವಾಗಿರಬೇಕಾದ ಶ್ರದ್ಧಾಕೇಂದ್ರಗಳಲ್ಲಿ ಅಧಿಕಾರದ ಪ್ರದರ್ಶನ ಮಾಡುವುದು ಪ್ರಜಾಪ್ರತಿನಿಧಿಗಳಿಗೆ ತಕ್ಕ ನಡವಳಿಕೆಯಲ್ಲ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಚಟುವಟಿಕೆಗಳಲ್ಲಿ ಮೂಗು ತೂರಿಸಬಯಸುವ ಶಿಫಾರಸು ಜಾರಿಗೆ ಬಂದಲ್ಲಿ, ಸಾಮಾಜಿಕ ನ್ಯಾಯದಲ್ಲಿ ಹಸ್ತಕ್ಷೇಪಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.

ಎರಡೂ ಇಲಾಖೆಗಳ ಹಲವು ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಈಗ ಅಧಿಕಾರಿಗಳು ಮಾಡುತ್ತಿದ್ದಾರೆ. ಆ ಆಯ್ಕೆಯನ್ನು ವಿಧಾನಸಭಾ ಸದಸ್ಯರಿಗೆ ನೀಡುವಂತೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ಶಾಲೆಗಳಲ್ಲಿ ಸ್ಥಳೀಯ ಶಾಸಕರು ಸೂಚಿಸುವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಆಗಬೇಕು ಎಂದು ಮಾಡಿರುವ ಶಿಫಾರಸು, ಸ್ವಜನಪಕ್ಷಪಾತ ಹಾಗೂ ಹಿಂಬಾಲಕರಿಗೆ ಅವಕಾಶಗಳನ್ನು ಸೃಷ್ಟಿಸಲು ರಾಜಕಾರಣಿಗಳಿಗೆ ಅವಕಾಶ ಕಲ್ಪಿಸುವಂತಿದೆ.

ಶಾಸಕರ ಶಿಫಾರಸಿನ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದರಿಂದ ನೂರಾರು ಅರ್ಹ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇಂಥ ಶಿಫಾರಸುಗಳಿಗೆ ಹೋಲಿಸಿದರೆ, ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಶಾಸಕರಿಗೆ ಆಗುವ ಸಮಸ್ಯೆಗಳನ್ನು ನಿವಾರಿಸಬೇಕು ಎನ್ನುವ ಬೇಡಿಕೆಯೇ ಹೆಚ್ಚು ಸೌಮ್ಯವಾಗಿ ಕಾಣಿಸುತ್ತದೆ. ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ವಿವಿಧ ಇಲಾಖೆಗಳಲ್ಲಿನ ಯೋಜನೆಗಳನ್ನು ಶಾಸಕರ ಗಮನಕ್ಕೆ ತರಬೇಕು ಎಂದು ಬಯಸಿರುವುದು ಸರಿಯಾಗಿಯೇ ಇದೆ.

ಜನಪ್ರತಿನಿಧಿಗಳೊಂದಿಗೆ ಸಮರ್ಪಕ ಸಂವಹನ ನಡೆಸುವ ಹಾಗೂ ಶಿಷ್ಟಾಚಾರ ಪಾಲಿಸುವ ದಿಸೆಯಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಬೇಕೆನ್ನುವುದೂ ಒಪ್ಪತಕ್ಕ ಒತ್ತಾಯ. ಆದರೆ, ಶ್ರದ್ಧಾಕೇಂದ್ರಗಳಲ್ಲಿ ಆದ್ಯತೆ–ಮಾನ್ಯತೆ ಬಯಸುವ ಹಾಗೂ ಸಾಮಾಜಿಕ
ನ್ಯಾಯಕ್ಕೆ ಧಕ್ಕೆಯಾಗುವಂತಹ ಶಿಫಾರಸುಗಳನ್ನು ವಿಧಾನಸಭೆ ತಿರಸ್ಕರಿಸಬೇಕು. ಜನ ಹಾಗೂ ಜನಪ್ರತಿನಿಧಿಗಳ ನಡುವೆ ಅಂತರವನ್ನು ಸೃಷ್ಟಿಸುವ ‘ವಿಐಪಿ ಸಂಸ್ಕೃತಿ’ಗೆ ಸರ್ಕಾರ ಅವಕಾಶ ಕಲ್ಪಿಸಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು