ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಾಂಸ ಮಾರಾಟಕ್ಕೆ ನಿರ್ಬಂಧ– ಪ್ರಭುತ್ವದ ಅವಿವೇಕದ ನಡೆ

Last Updated 11 ಏಪ್ರಿಲ್ 2022, 20:00 IST
ಅಕ್ಷರ ಗಾತ್ರ

ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಬೇಕು ಎಂದು ದೆಹಲಿ ಮಹಾನಗರ ಪಾಲಿಕೆಗಳ ಮೇಯರ್‌ಗಳು ನೀಡಿರುವ ನಿರ್ದೇಶನ ಯಾವ ದೃಷ್ಟಿಯಿಂದ ನೋಡಿದರೂ ಸಮಂಜಸವಲ್ಲ. ಇಂತಹ ನಿರ್ದೇಶನವು ನಾಗರಿಕರ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳ ಹರಣಕ್ಕೆ ಸಮ. ತಾವು ಏನನ್ನು ಸೇವಿಸಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು, ಕಾನೂನುಬದ್ಧವಾದ ಯಾವ ವೃತ್ತಿಯನ್ನು ನಡೆಸಿ ಜೀವನೋಪಾಯ ಕಂಡುಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಜನರಿಗೆ ಇದೆ. ಈ ಹಕ್ಕುಗಳನ್ನು ಮನಸೋಇಚ್ಛೆ ನಿರಾಕರಿಸುವಂತಿಲ್ಲ. ನಿರ್ದಿಷ್ಟ ಸಂದರ್ಭದಲ್ಲಿ ಸಮಾಜದ ಒಂದು ವರ್ಗ ಮಾಂಸ ಸೇವನೆ ಮಾಡುವುದಿಲ್ಲ ಎಂಬ ಕಾರಣ ನೀಡಿ ಪ್ರಭುತ್ವವು ಇತರರೂ ಆ ಸಂದರ್ಭದಲ್ಲಿ ಮಾಂಸ ಸೇವಿಸುವಂತಿಲ್ಲ ಎಂದು ಹೇಳಲು ಅವಕಾಶವಿಲ್ಲ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಮಾಂಸ ಮಾರಾಟ ಮಾಡಬೇಡಿ, ಮಾಂಸ ಖರೀದಿ ಮಾಡಬೇಡಿ ಎಂದು ಕೂಡ ನಿರ್ದೇಶನ ನೀಡುವಂತಿಲ್ಲ. ಮಾಂಸವು ದೇಶದ ಬಹುಜನರ ಆಹಾರ. ಈ ವಿಚಾರದಲ್ಲಿ ಪೊಲೀಸ್‌ಗಿರಿ ನಡೆಸುವುದಕ್ಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಮಾಂಸದ ಅಂಗಡಿ ತೆರೆಯಬೇಡಿ ಎಂದು ಹೇಳುವುದು ಕೆಲವು ಹಿಂದುತ್ವ ಸಂಘಟನೆಗಳ ಪಾಲಿಗೆ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ಒಂದು ಅಸ್ತ್ರವೂ ಹೌದು. ಜಾತ್ರೆಗಳ ಸಂದರ್ಭದಲ್ಲಿ, ಜಾತ್ರೆ ನಡೆಯುವಲ್ಲಿ ಮುಸ್ಲಿಮರು ಅಂಗಡಿ ತೆರೆಯಬಾರದು ಎನ್ನುವ ನಿಲುವಿನ ಮತ್ತೊಂದು ರೂಪ ಇದು.

ಜನರಿಗೆ ತಮ್ಮ ಆಹಾರ ಯಾವುದಿರಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಇದೆ ಎಂಬ ಮಾತನ್ನು ದೇಶದ ನ್ಯಾಯಾಲಯಗಳು ಹಲವು ಆದೇಶಗಳಲ್ಲಿ ಸ್ಪಷ್ಟವಾಗಿ ಹೇಳಿವೆ. 2017ರ ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಆಹಾರ ಪದ್ಧತಿ ಏನಿರಬೇಕು ಎಂಬುದನ್ನು ಆಯ್ಕೆ ಮಾಡಿ ಕೊಳ್ಳುವುದು ಖಾಸಗಿತನದ ಹಕ್ಕುಗಳ ಒಂದು ಭಾಗ, ಅದನ್ನು ರಕ್ಷಿಸಬೇಕು ಎಂದು ಹೇಳಿದೆ. ಇನ್ನೊಂದು ತೀರ್ಪಿನಲ್ಲಿ ಕೋರ್ಟ್, ‘ವ್ಯಕ್ತಿಯೊಬ್ಬ ಆಹಾರವಾಗಿ ಏನನ್ನು ಸೇವಿಸುತ್ತಾನೆ ಎಂಬುದು ಆತನ ವೈಯಕ್ತಿಕ ವಿಚಾರ. ಅದು ನಮ್ಮ ಸಂವಿಧಾನದ 21ನೆಯ ವಿಧಿಯಲ್ಲಿ ಹೇಳಿರುವ ಖಾಸಗಿತನದ ಸ್ವಾತಂತ್ರ್ಯದ ಭಾಗ’ ಎಂದು ಹೇಳಿದೆ. ಮಾಂಸದ ವ್ಯಾಪಾರದಲ್ಲಿ ತೊಡಗಿರುವವರಿಗೆ ಅವರ ವೃತ್ತಿಯನ್ನು ನಡೆಸಿಕೊಂಡು ಹೋಗುವ ಹಕ್ಕು ಇದೆ. ಈ ಹಕ್ಕನ್ನು ಒಂದಿಷ್ಟು ಅವಧಿಗೆ ನಿರ್ಬಂಧಿಸಲು ಅವಕಾಶ ಇಲ್ಲ ಎಂದು ಕೂಡ ಕೋರ್ಟ್‌ಗಳು ಸ್ಪಷ್ಟಪಡಿಸಿವೆ. 2017ರಲ್ಲಿ ಬಾಂಬೆ ಹೈಕೋರ್ಟ್ ನೀಡಿರುವ ಒಂದು ಆದೇಶವು, ‘ನಿರ್ದಿಷ್ಟ ಆಹಾರ ಸೇವನೆ ಮಾಡಬೇಡಿ ಎಂದು ಪ್ರಭುತ್ವವು ಪ್ರಜೆಗಳಿಗೆ ಹೇಳುವುದು, ನಿರ್ದಿಷ್ಟ ಆಹಾರವನ್ನು ಜನ ಇಟ್ಟುಕೊಳ್ಳುವುದನ್ನು ತಡೆಯುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ’ ಎಂದು ಹೇಳಿದೆ. ನ್ಯಾಯಾಲಯಗಳು ಹೇಳಿರುವ ಈ ಮಾತುಗಳನ್ನು ಈಗ ಕಣ್ಣಿಗೆ ರಾಚುವಂತೆ ಉಲ್ಲಂಘನೆ ಮಾಡಲಾಗಿದೆ. ಉತ್ತರಪ್ರದೇಶದ ಕೆಲವು ಪಟ್ಟಣಗಳಲ್ಲಿ ಕೂಡ ಇದೇ ಬಗೆಯ ನಿರ್ಬಂಧಗಳನ್ನು ಹೇರಲಾಗಿದೆ ಎಂಬ ವರದಿಗಳು ಇವೆ.

ಕೆಲವು ಹಬ್ಬಗಳ ಸಂದರ್ಭದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸುವ ಪ್ರವೃತ್ತಿಯು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ಕಾನೂನುಬದ್ಧ ಅಲ್ಲ. ಇಂತಹ ನಿರ್ಬಂಧಗಳ ಹಿಂದೆ ಇರುವುದು ಶ್ರೇಷ್ಠತೆಯ ಭಾವನೆಯೇ ವಿನಾ ಬೇರೆ ಯಾವ ತರ್ಕವೂ ಇಲ್ಲಿಲ್ಲ. ಆಹಾರದ ವಿಚಾರದಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭಾವನೆಯು ಸರ್ವಥಾ ಸರಿಯಲ್ಲ. ದೇಶದ ಸಂಕೀರ್ಣ ಸಾಮಾಜಿಕ ವಾಸ್ತವಗಳನ್ನು ಅರ್ಥ ಮಾಡಿಕೊಂಡಿರುವ ಯಾರೇ ಆದರೂ ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಮಾತುಗಳನ್ನು ಆಡುವುದಿಲ್ಲ. ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಮಾತ್ರ, ಯಾರು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ವಿವೇಕಹೀನ ಮಾತುಗಳನ್ನು ಆಡಬಲ್ಲರು. ವಾಸ್ತವ ದಲ್ಲಿ ಇಲ್ಲಿ ಆಹಾರ ಎಂಬುದು ನೆಪ ಮಾತ್ರ. ಇಲ್ಲಿನ ನಿಜವಾದ ಉದ್ದೇಶ ಇರುವುದು ಸಮಾಜದ ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಪ್ರತ್ಯೇಕಗೊಳಿಸುವುದು ಹಾಗೂ ಅವರ ಮೇಲೆ ನಿಯಂತ್ರಣ ಸಾಧಿಸುವುದು. ಇದು ಕೆಟ್ಟದ್ದು ಹಾಗೂ ವಿಭಜನಕಾರಿ ರಾಜಕಾರಣ. ಇಂತಹ ನಡೆಗಳನ್ನು ಈಗ ಪ್ರಭುತ್ವ ಬೆಂಬಲಿಸುತ್ತಿದೆ, ಕಾನೂನು ಕೈಗೆತ್ತಿಕೊಳ್ಳುವ ಕೆಲವು ಸಂಘಟನೆಗಳು ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿವೆ. ‘ಎಲ್ಲ ಜೊತೆಗೂಡಿ, ಎಲ್ಲರ ವಿಕಾಸ’ ಎಂಬ ಘೋಷವಾಕ್ಯವು ಈ ಬಗೆಯ ರಾಜಕಾರಣಕ್ಕೆ ಸರಿಹೊಂದುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT