ಬುಧವಾರ, ಜುಲೈ 28, 2021
29 °C

ಸಂಪಾದಕೀಯ | ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ದೇಶದ ಪಾಲಿಗೊಂದು ಎಚ್ಚರಿಕೆ ಗಂಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆರೋಗ್ಯಪೂರ್ಣ ಹಾಗೂ ಸದೃಢ ಸಮಾಜವನ್ನು ಹೊಂದಬೇಕೆಂಬ ಅಪೇಕ್ಷೆಯು ಎಲ್ಲಾ ದೇಶಗಳಿಗೂ ಇರುತ್ತದೆ. ಆರೋಗ್ಯಪೂರ್ಣ ಸಮಾಜವನ್ನು ಹೊಂದಿರುವ ದೇಶ ಮಾತ್ರ ಪ್ರಗತಿಯತ್ತ ದಾಪುಗಾಲು ಹಾಕಿ, ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಾಧ್ಯ.

ಈ ದಿಸೆಯಲ್ಲಿ, ದೇಶದ ಪ್ರತೀ ಪ್ರಜೆಗೆ ಆಹಾರ ಭದ್ರತೆಯನ್ನು ಒದಗಿಸುವುದು ಮತ್ತು ಆ ಆಹಾರವು ಪೌಷ್ಟಿಕಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಆಡಳಿತದ ಸೂತ್ರ ಹಿಡಿದ ಸರ್ಕಾರದ ಹೊಣೆ. ಆದರೆ, ಜಾಗತಿಕ ಆಹಾರ ಭದ್ರತೆ ಹಾಗೂ ಪೌಷ್ಟಿಕಾಂಶದ ಸ್ಥಿತಿಗತಿ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯು ಸದ್ಯ ಭಾರತ ಎದುರಿಸುತ್ತಿರುವ ವೈರುಧ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಒಂದೂವರೆ ದಶಕದ ಹಿಂದಿನ ಸ್ಥಿತಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯಲ್ಲಿ ಈಗ ಆರು ಕೋಟಿಯಷ್ಟು ಇಳಿಕೆಯಾಗಿದೆ, ನಿಜ. ಹಾಗಿದ್ದೂ ಜಾಗತಿಕ ಹಸಿವು ಸೂಚ್ಯಂಕದಲ್ಲಿ 102ನೇ ಸ್ಥಾನದಷ್ಟು ಹಿಂದಿದ್ದು, ‘ಗಂಭೀರ ಸಮಸ್ಯೆ ಎದುರಿಸುತ್ತಿರುವ ದೇಶಗಳ ಪಟ್ಟಿ’ಯಲ್ಲಿಯೇ ಉಳಿದುಕೊಂಡಿದೆ. ಅಲ್ಲದೆ, ಯಥಾಪ್ರಕಾರ ಪೌಷ್ಟಿಕ ಆಹಾರದ ಕೊರತೆಯೂ ಭಾರತೀಯರನ್ನು ಕಾಡುತ್ತಿದೆ.

ಪೌಷ್ಟಿಕ ಆಹಾರವನ್ನು ಖರೀದಿಸುವ ಸಾಮರ್ಥ್ಯ ಇಲ್ಲದವರದು ಒಂದು ವರ್ಗವಾದರೆ, ಹೆಚ್ಚು ವ್ಯಯಿಸುವ ಸಾಮರ್ಥ್ಯ ಇದ್ದರೂ ಪೌಷ್ಟಿಕ ಆಹಾರ ಸೇವನೆಯ ವಿಚಾರದಲ್ಲಿ ಖಾತರಿ ಇಲ್ಲದವರದು ಇನ್ನೊಂದು ವರ್ಗ. ಪ್ಯಾಕ್‌ ಮಾಡಿದ ಸಿದ್ಧ ಆಹಾರವನ್ನೇ ಹೆಚ್ಚಾಗಿ ಬಳಸುವ ವರ್ಗ ಇದು. ಪ್ಯಾಕ್‌ ಮಾಡಿದ ಈ ಆಹಾರ ತಿನಿಸುಗಳ ಕುರಿತು ಅಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌ನ ವರದಿ ಹೆಚ್ಚಿನ ಬೆಳಕು ಚೆಲ್ಲಿದೆ. ‘ಭಾರತದಲ್ಲಿ ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳ ಮಾರಾಟ ಹೆಚ್ಚುತ್ತಿರುವುದರಿಂದ ಅಪೌಷ್ಟಿಕತೆ ಸಮಸ್ಯೆ ಅಧಿಕವಾಗಿದೆ. ಇಲ್ಲಿನ ಬಹುತೇಕ ಆಹಾರ ಉದ್ಯಮಗಳಿಗೆ ‘ಗುಣಮಟ್ಟದ ಪೌಷ್ಟಿಕ ಆಹಾರ ತಯಾರಿಕಾ ಕಂಪನಿ’ ಎಂಬ ಮಾನ್ಯತೆ ದೊರೆತಿದೆ. ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದ ಕುರಿತು ಸರ್ಕಾರ ರೂಪಿಸಿದ ನಿಯಮಗಳು ಸಡಿಲವಾಗಿವೆ’ ಎಂದು ವರದಿ ಹೇಳುತ್ತದೆ.

ಏಷ್ಯಾದಲ್ಲಿ ಹಸಿವಿನ ಪ್ರಮಾಣ ತಗ್ಗಿಸುವ ವಿಚಾರದಲ್ಲಿ ಭಾರತ ಹಾಗೂ ಚೀನಾ ಸಾಧನೆಯನ್ನು ಈಗ ತುಲನೆ ಮಾಡಿ ನೋಡಲಾಗುತ್ತಿದೆ. ಹಸಿವಿನ ಸಮಸ್ಯೆಯನ್ನು ನೀಗಿಸುವಲ್ಲಿ ಚೀನಾ ಹೆಚ್ಚು ಕೆಲಸ ಮಾಡಿದೆ ಎಂಬುದನ್ನು ವರದಿಗಳು ಹೇಳುತ್ತಿವೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಚೀನಾ 25ನೇ ಸ್ಥಾನದಲ್ಲಿದೆ. ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ ಹಾಗೂ ಜೀವನದ ಗುಣಮಟ್ಟ– ಈ ನಾಲ್ಕು ವಿಷಯಗಳಲ್ಲಿ ಚೀನಾದ ಸಾಧನೆ ಭಾರತಕ್ಕಿಂತ ಉತ್ತಮವಾಗಿದೆ ಎಂಬುದನ್ನೂ ಸಮೀಕ್ಷೆಯು ಬಹಿರಂಗಪಡಿಸಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು, ಸುಧಾರಣೆಯ ಮಾರ್ಗವನ್ನು ಕಂಡುಕೊಳ್ಳಬೇಕು.

ಪೌಷ್ಟಿಕಾಂಶವುಳ್ಳ ಆಹಾರವು ದೇಶದ ಪ್ರತಿಯೊಬ್ಬರಿಗೂ ಸಿಗುವಂತೆ ನೋಡಿಕೊಳ್ಳಲು, ವಿಶ್ವಸಂಸ್ಥೆಯ ವರದಿಯೇ ಹೇಳಿರುವಂತೆ ಸರ್ಕಾರದ ನೀತಿ ನಿರೂಪಣೆಯಲ್ಲಿ ಆಮೂಲಾಗ್ರ ಬದಲಾವಣೆಗಳು ಆಗಬೇಕು. ಕೃಷಿಯ ಮುಖ್ಯ ಗುರಿ ಪೌಷ್ಟಿಕ ಆಹಾರ ಉತ್ಪಾದನೆಯೇ ಆಗಿರಬೇಕು. ಗ್ರಾಮೀಣ ಭಾಗಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನೂ ಸ್ಥಳೀಯ ಮಾರುಕಟ್ಟೆಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬೇಕು. ಪ್ಯಾಕ್‌ ಮಾಡಿದ ಆಹಾರ ತಯಾರಿಸುವ ಘಟಕಗಳಿಗೆ ಅನುಮತಿ ನೀಡುವಾಗ ಪೌಷ್ಟಿಕಾಂಶದ ಖಾತರಿಯೇ ಮಾನದಂಡವಾಗಬೇಕು. ಭಾರತದ ಪಡಿತರ ವ್ಯವಸ್ಥೆಯ ಕುರಿತೂ ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡದು ಎಂಬ ಹಿರಿಮೆ ಹೊಂದಿದ ನಮ್ಮ ಆಹಾರಧಾನ್ಯ ವಿತರಣಾ ಯೋಜನೆಯಲ್ಲಿರುವ ಲೋಪ ದೋಷಗಳನ್ನೆಲ್ಲ ಸರಿಪಡಿಸಿ, ಅದನ್ನು ಇನ್ನಷ್ಟು ಸದೃಢಗೊಳಿಸಬೇಕು. ಅಪೌಷ್ಟಿಕತೆ ಸಮಸ್ಯೆ ನೀಗಿದಷ್ಟೂ ದುಡಿಯುವ ಸಾಮರ್ಥ್ಯ ವೃದ್ಧಿಯಾಗಿ ಬಡತನ ನಿವಾರಣೆಗೆ ಸಹಕಾರಿಯಾಗಲಿದೆ. ಬಡತನ ತಗ್ಗಿದಷ್ಟೂ ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ವೇಗ ಸಿಗುತ್ತದೆ– ಈ ಅಂಶಗಳು ಸರ್ಕಾರದ ಭವಿಷ್ಯದ ಪ್ರತೀ ಹೆಜ್ಜೆಗೂ ದಾರಿದೀಪವಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು