ಶುಕ್ರವಾರ, ಮೇ 20, 2022
19 °C

ಸಂಪಾದಕೀಯ | ಲಖಿಂಪುರ ಖೇರಿ ಪ್ರಕರಣ: ರೈತರ ವಾದ ಸಮರ್ಥಿಸಿದ ಎಸ್‌ಐಟಿ ಹೇಳಿಕೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತನ ಸಾವಿಗೆ ಕಾರಣವಾದ ಅಕ್ಟೋಬರ್‌ 3ರ ಲಖಿಂಪುರ ಖೇರಿ ಹಿಂಸಾಚಾರವನ್ನು ‘ಒಂದು ಪೂರ್ವಯೋಜಿತ ಸಂಚು’ ಎಂದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕರೆದಿದೆ. ಉತ್ತರಪ್ರದೇಶದ ಪೊಲೀಸರು, ಆರಂಭದಿಂದಲೂ ಇದನ್ನೊಂದು ಮಾಮೂಲಿ ಪ್ರಕರಣ ಎಂಬಂತೆಯೇ ಬಿಂಬಿಸುತ್ತಾ ಬಂದಿದ್ದರು. ಎಸ್‌ಐಟಿಯ ಹೇಳಿಕೆಯಿಂದಾಗಿ ಈಗ ಪ್ರಕರಣದ ಸ್ವರೂಪವೇ ಬದಲಾಗಿದೆ.

‘ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಕಾರು ನುಗ್ಗಿಸಿದ್ದಲ್ಲದೆ, ಗುಂಡನ್ನೂ ಹಾರಿಸಿದ್ದ’ ಎಂದು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದ ಕುರಿತು ವರದಿಯಾಗಿತ್ತು. ಉತ್ತರಪ್ರದೇಶದ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ರೀತಿಗೆ ಅತೃಪ್ತಿ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಮೂವರು ಐಪಿಎಸ್‌ ಅಧಿಕಾರಿಗಳನ್ನು ಸೇರ್ಪಡೆ ಮಾಡುವ ಮೂಲಕ ಎಸ್‌ಐಟಿಯನ್ನು ‘ಮೇಲ್ದರ್ಜೆ’ಗೆ ಏರಿಸಿತ್ತು. ‘ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಎಸ್‌ಐಟಿಯಲ್ಲಿ ಈ ಬದಲಾವಣೆ ಮಾಡಲಾಗಿದೆ’ ಎಂದೂ ಕೋರ್ಟ್‌ ಹೇಳಿತ್ತು. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಕೇಶ್‌ ಜೈನ್‌ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಎಸ್‌ಐಟಿಯು ಪ್ರಕರಣದ ತನಿಖೆಯನ್ನು ಈಗ ಹೊಸ ಎತ್ತರಕ್ಕೆ ಒಯ್ದಿದೆ.

ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಎಸ್‌ಐಟಿಯು ಸಲ್ಲಿಸಿರುವ ವರದಿಯಲ್ಲಿ ‘ನಿರ್ಲಕ್ಷ್ಯ ಇಲ್ಲವೇ ಅಸೂಕ್ಷ್ಮ ವರ್ತನೆಯಿಂದ ಈ ಸಾವುಗಳು ಸಂಭವಿಸಿಲ್ಲ; ಬದಲಾಗಿ ಕೊಲ್ಲುವ ಉದ್ದೇಶದಿಂದಲೇ ನಡೆಸಿದ ಕೃತ್ಯಗಳು ಅವಾಗಿದ್ದವು’ ಎಂದು ಸ್ಪಷ್ಟವಾಗಿ ತಿಳಿಸಿದೆ. ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯು ಸಾವಿಗೆ ಕಾರಣ ಎಂಬ ಮೊದಲಿನ ಆರೋಪವನ್ನು ಕೈಬಿಟ್ಟು, ಕೊಲೆ ಹಾಗೂ ಕೇಡು ಉಂಟುಮಾಡುವ ಉದ್ದೇಶದಿಂದಲೇ ಎಸಗಿದ ಕೃತ್ಯ ಎಂಬ ಆಪಾದನೆಯನ್ನು ಹೊಸದಾಗಿ ಸೇರ್ಪಡೆ ಮಾಡುವಂತೆಯೂ ಅದು ಕೋರಿದೆ. ಆರೋಪಿಗಳ ವಿರುದ್ಧ ಈಗ ಐಪಿಸಿ ಸೆಕ್ಷನ್‌ 307ರ ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿಕೊಳ್ಳಬೇಕಾಗಿದೆ. ಪ್ರಕರಣ ಸಂಭವಿಸಿದ ಮೇಲೆ ದಾಖಲಿಸಿಕೊಂಡ ಪ್ರಥಮ ಮಾಹಿತಿ ವರದಿಯಲ್ಲಿ ಈ ಸೆಕ್ಷನ್‌ನ ಪ್ರಸ್ತಾಪವೇ ಇರಲಿಲ್ಲ. ಪ್ರಕರಣದ ಮುಖ್ಯ ಆರೋಪಿ ಆಶಿಶ್‌ ಮಿಶ್ರಾ ಹಾಗೂ ಇತರ 12 ಜನ ಈಗ ಜೈಲಿನಲ್ಲಿದ್ದಾರೆ. ಅವರೀಗ ಹೊಸ ಆರೋಪಗಳನ್ನು ಎದುರಿಸಬೇಕಿದೆ.

ಆರೋಪಿಗಳೆಲ್ಲರ ಉದ್ದೇಶವೂ ಒಂದೇ ಆಗಿತ್ತು ಎಂಬ ಅಂಶವನ್ನು ಹೊರತುಪಡಿಸಿ ಆರೋಪಿಗಳ ಮೇಲೆ ಹೇರಬೇಕು ಎಂದು ಎಸ್‌ಐಟಿ ಸೂಚಿಸಿರುವ ಉಳಿದೆಲ್ಲ ಅಂಶಗಳನ್ನು ಕೋರ್ಟ್‌ ಒಪ್ಪಿಕೊಂಡಿದೆ. ಹೊಸ ಆರೋಪಗಳನ್ನು ಹೊರಿಸಿರುವುದರಿಂದ ಆಶಿಶ್‌ ಮಿಶ್ರಾ ಮೇಲಿನ ಕಾನೂನಿನ ಹಿಡಿತ ಇನ್ನಷ್ಟು ಬಲಗೊಂಡಿದೆ. ಸಚಿವ ಅಜಯ್‌ ಮಿಶ್ರಾ ಅವರು ಮಗನನ್ನು ಸಮರ್ಥಿಸಲು ಪ್ರಬಲವಾಗಿ ಯತ್ನಿಸಿದ್ದರು. ಪ್ರಕರಣದಲ್ಲಿ ಆತನ ಪಾತ್ರ ಏನೂ ಇಲ್ಲ ಎಂದು ಬಿಂಬಿಸಲೂ ಹೊರಟಿದ್ದರು. ‘ಪ್ರತಿಭಟನೆನಿರತ ರೈತರೇ ಕಾರಿನ ಮೇಲೆ ದಾಳಿ ಮಾಡಿದರು. ನಿಯಂತ್ರಣ ತಪ್ಪಿದ ಕಾರು ಅವರ ಮೇಲೆ ನುಗ್ಗಿತು’ ಎಂದು ಪ್ರತಿಪಾದಿಸಿದ್ದರು.

ಆದರೆ, ಎಸ್‌ಐಟಿ ಈಗ ಈ ಕೃತ್ಯವನ್ನು ಪೂರ್ವಯೋಜಿತ ಸಂಚು ಎಂದು ಹೇಳಿರುವುದರಿಂದ ಈ ಕುರಿತು ತನಿಖೆ ನಡೆಸುವಾಗ ಮುಂದೊಂದು ದಿನ ಸಚಿವರೂ ವಿಚಾರಣೆ ಎದುರಿಸಬೇಕಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಜಯ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎನ್ನುವುದು ರೈತರ ಬೇಡಿಕೆ. ಈ ಬೇಡಿಕೆಗೆ ಈಗ ಇನ್ನಷ್ಟು ಬಲ ಬಂದಿದೆ. ಪ್ರಕರಣದ ಸಂಬಂಧ ಪ್ರಶ್ನೆ ಕೇಳಿದ ಪತ್ರಕರ್ತರ ಜತೆ ಸಚಿವರು ಅನುಚಿತವಾಗಿ ವರ್ತಿಸಿದ್ದು ಸಹ ಅವರು ಹೊಂದಿರುವ ಹುದ್ದೆಗೆ ಶೋಭೆ ತರುವಂಥದ್ದಲ್ಲ. ಉತ್ತರಪ್ರದೇಶವು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು ರೈತರ ಈ ಹತ್ಯೆ ಪ್ರಕರಣ ಅಲ್ಲಿ ಅನುರಣಿಸಲಿದೆ. ಅಜಯ್‌ ಮಿಶ್ರಾ ಅವರನ್ನು ಬಿಜೆಪಿ ಬಲವಾಗಿ ಬೆಂಬಲಿಸುತ್ತಿದ್ದು, ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಬೇಡಿಕೆಗೆ ಪ್ರಧಾನಿ ಕಿವಿಗೊಟ್ಟಿಲ್ಲ. ಆದರೆ, ಪ್ರಕರಣ ಹೊಸ ಸ್ವರೂಪ ಪಡೆದಿರುವ ಈ ಹಂತದಲ್ಲಿ ಮಿಶ್ರಾ ಅವರಿಗೆ ಇದೇ ರೀತಿ ಬೆಂಬಲ ಮುಂದುವರಿಸುವುದು ಪ್ರಧಾನಿಯವರಿಗೆ ಸಾಧ್ಯವಾಗದೇ ಇರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು