ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ನಾಯಕತ್ವ ವಿಚಾರ: ಅನಿಶ್ಚಿತ ಸ್ಥಿತಿ ಇನ್ನಾದರೂ ಹೋಗಲಾಡಿಸಿ

Last Updated 31 ಮೇ 2021, 20:30 IST
ಅಕ್ಷರ ಗಾತ್ರ

ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಮತ್ತೊಮ್ಮೆ ಹೊಗೆಯಾಡುತ್ತಿದೆ. ಮುಖ್ಯಮಂತ್ರಿ ಬದಲಾವಣೆಯ ಸುದ್ದಿಯೂ ದಟ್ಟವಾಗಿದೆ. ಇನ್ನೊಂದೆಡೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯವರನ್ನು ಬದಲಾಯಿಸಕೂಡದು ಎಂದು ಶಾಸಕರ ಗುಂಪೊಂದು ಬಹಿರಂಗವಾಗಿಯೇ ಒತ್ತಾಯಿಸುತ್ತಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಇದು ಮೊದಲೇನಲ್ಲ. 2019ರ ಜುಲೈನಲ್ಲಿ ಅವರು ಮುಖ್ಯಮಂತ್ರಿ
ಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜಕೀಯ ಅಭದ್ರತೆ ಇಲ್ಲದೆ ಆಡಳಿತ ಸುಗಮವಾಗಿ ಸಾಗಿದ ಅವಧಿಯೇ ಕಡಿಮೆ. ಈ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನಗಳನ್ನು ವಿರೋಧ ಪಕ್ಷಗಳು ಮಾಡುತ್ತಿಲ್ಲ; ಸ್ವಪಕ್ಷೀಯರೇ ಮಾಡುತ್ತಿದ್ದಾರೆ ಎನ್ನುವುದು ಕುತೂಹಲಕರ. ಆಡಳಿತದಲ್ಲಿ ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗಿದೆ ಎನ್ನುವುದು ಕೆಲವು ಶಾಸಕರ ಆರೋಪ. ವಿಜಯೇಂದ್ರ ಅವರು ‘ಸೂಪರ್ ಮುಖ್ಯಮಂತ್ರಿ’ಯಾಗಿದ್ದಾರೆ ಎಂದು ಬಿಜೆಪಿ ಮುಖಂಡರೇ ಪಿಸುಗುಡುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಂತೂ ‘ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ಭ್ರಷ್ಟಾಚಾರ ಮಿತಿಮೀರಿದೆ’ ಎಂದು ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರ ಸಚಿವ ಸಂಪುಟದ ಸದಸ್ಯರೇ ಆಗಿರುವ ಸಿ.ಪಿ.ಯೋಗೇಶ್ವರ್ ಅವರ ಇತ್ತೀಚಿನ ದೆಹಲಿ ಭೇಟಿಯೂ ನಾಯಕತ್ವ ಬದಲಾವಣೆಯ ವದಂತಿಯನ್ನು ಮುನ್ನೆಲೆಗೆ ತಂದಿದೆ. ಯತ್ನಾಳ್ ಸೇರಿದಂತೆ ಅಪಸ್ವರ ಎತ್ತಿರುವ ಶಾಸಕರ ವಿರುದ್ಧ ಪಕ್ಷದ ವರಿಷ್ಠರು ಕಠಿಣ ಶಿಸ್ತುಕ್ರಮ ಕೈಗೊಳ್ಳದಿರುವುದು ಭಿನ್ನಮತೀಯ ಶಾಸಕರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲೇ ನಾಯಕತ್ವ ಬದಲಾವಣೆಯ ಕೂಗಿಗೆ ಪಕ್ಷದ ವರಿಷ್ಠರ ಪರೋಕ್ಷ ಆಶೀರ್ವಾದ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಯಾವುದೇ ಪಕ್ಷದ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಪಕ್ಷದ ಶಾಸಕರು ನಿರ್ಧರಿಸಬೇಕಾದ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ವರಿಷ್ಠರ ಸಮ್ಮತಿ ಪಡೆಯುವುದೂ ರೂಢಿ. ಆದರೆ, ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಟೀಕಾಸ್ತ್ರ ಬಿಡುವುದು ಮತ್ತು ಬದಲಾವಣೆಗೆ ಪದೇ ಪದೇ ಯತ್ನಿಸುವುದು ಒಳ್ಳೆಯ ಆಡಳಿತದ ಲಕ್ಷಣವಂತೂ ಅಲ್ಲ. ಮುಖ್ಯಮಂತ್ರಿಗೆ ತಾವು ಕುಳಿತ ಕುರ್ಚಿಯೇ ಅಭದ್ರ ಅಂತ ಅನ್ನಿಸ ತೊಡಗಿದರೆ, ರಾಜ್ಯದ ಅಭಿವೃದ್ಧಿಯ ಕಡೆಗೆ ಅವರು ಪೂರ್ತಿ ಗಮನ ಕೊಡಲಾರರು. ಅದರಲ್ಲೂ ಕೋವಿಡ್ ಸಂಕಷ್ಟವು ರಾಜ್ಯದ ಲಕ್ಷಾಂತರ ಜನರನ್ನು ದುಃಖದ ಮಡುವಿನಲ್ಲಿ ದೂಡಿರುವ ಈ ಸಮಯದಲ್ಲಿ ಆಳುವ ಪಕ್ಷದ ಶಾಸಕರು, ಸಚಿವರು ದೆಹಲಿಗೆ ಓಡಾಡುತ್ತಾ, ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲಸ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಹೇವರಿಕೆ ಹುಟ್ಟಿಸುವಂತಿದೆ. ಮೂರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಸಚಿವ ಸಂಪುಟದ ಪುನರ್‌ರಚನೆ ವೇಳೆ ಖಾತೆಗಳ ಹಂಚಿಕೆಯನ್ನು ಮೂರು ದಿನಗಳಲ್ಲಿ ಐದು ಸಲ ಬದಲಾಯಿಸಿದ್ದು, ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ನೇರವಾಗಿ ರಾಜ್ಯಪಾಲರ ಬಳಿಗೆ ಹೋಗಿ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿರ್ಧಾರದ ಬಗ್ಗೆ ದೂರು ನೀಡಿರುವುದು, ಕೋವಿಡ್ ಪರಿಸ್ಥಿತಿಯ ನಿರ್ವಹಣೆಯಲ್ಲಿ ಸಚಿವ ಸಂಪುಟದಲ್ಲೇ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು- ಎಲ್ಲವೂ ಸರ್ಕಾರದ ಅದಕ್ಷತೆಯನ್ನು ಎತ್ತಿ ತೋರಿಸುತ್ತಿವೆ. ಸರ್ಕಾರ ತೆಗೆದುಕೊಳ್ಳುತ್ತಿರುವ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಗೊಂದಲವೂ ಹೆಚ್ಚುತ್ತಿದೆ. ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಗೆ (ಜಿಂದಾಲ್) 3,667 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ದರಕ್ಕೆ ಶುದ್ಧ ಕ್ರಯ ಮಾಡಿಕೊಡುವ ಸಚಿವ ಸಂಪುಟದ ನಿರ್ಧಾರವನ್ನು ಪಕ್ಷದ ಶಾಸಕರಾದ ಅರವಿಂದ ಬೆಲ್ಲದ, ಕೆ.ಪೂರ್ಣಿಮಾ, ಉದಯ್‌ ಗರುಡಾಚಾರ್‌ ವಿರೋಧಿಸಿದ್ದರು. ಸಚಿವ ಸಂಪುಟದ ಈ ನಿರ್ಧಾರ ವಿರೋಧಿಸಿ ಯತ್ನಾಳ್‌ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು.ಈ ಭೂಮಿ ಮಾರಾಟದ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಸಂಶಯ ವ್ಯಕ್ತಪಡಿಸಿದ್ದರಿಂದ ಹಾಗೂ ಸಂಪುಟ ತೀರ್ಮಾನದ ವಿರುದ್ಧ ಧ್ವನಿ ಎತ್ತಿದ ಕಾರಣ ಮಾರಾಟದ ನಿರ್ಧಾರವನ್ನು ಕೈಬಿಡಲಾಗಿದೆ. ಸಂಪುಟದಲ್ಲಿ ಸಾಮೂಹಿಕ ಜವಾಬ್ದಾರಿಯಿಂದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ ಎನ್ನುವುದೂ ಇದರಿಂದ ಸ್ಪಷ್ಟವಾಗಿದೆ. ಬಿಜೆಪಿ ಒಳಗೆ ನಿರಂತರವಾಗಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗುತ್ತಿಲ್ಲ. ಆಡಳಿತವನ್ನು ದಕ್ಷತೆಯಿಂದ ನಡೆಸಲು ಅದೇ ಭಿನ್ನಮತ ಅಡ್ಡಿಯಾಗುತ್ತಿದೆ. ಇವೆಲ್ಲವನ್ನೂ ಗಮನಿಸಿದಾಗ, ಯಡಿಯೂರಪ್ಪ ಅವರು ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎನ್ನದೇ ನಿರ್ವಾಹವಿಲ್ಲ. ತೂಗುಕತ್ತಿಯ ಕೆಳಗೆ ಕುಳಿತು ದಕ್ಷ ಆಡಳಿತ ನೀಡುವುದು ಯಾವ ಮುಖ್ಯಮಂತ್ರಿಗೂ ಸಾಧ್ಯವಿಲ್ಲ. ಪಕ್ಷದ ವರಿಷ್ಠರು ಏಕಕಾಲದಲ್ಲಿ ಮಗುವನ್ನು ಚಿವುಟುವ ಮತ್ತು ತೊಟ್ಟಿಲು ತೂಗುವ ಕೆಲಸ ಮಾಡುತ್ತಿರುವುದು ಎಳ್ಳಷ್ಟೂ ಸರಿಯಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ಇಂತಹ ಗೊಂದಲಮಯ ಪರಿಸ್ಥಿತಿಗೆ ಅವಕಾಶ ಮಾಡಿಕೊಟ್ಟಿರುವುದು ರಾಜ್ಯದ ಜನರಿಗೆ ಬಗೆಯುವ ದ್ರೋಹ ಎಂದೇ ಹೇಳಬೇಕಾಗುತ್ತದೆ. ದಕ್ಷ ಆಡಳಿತವನ್ನು ಬಯಸುವುದು ಜನರ ಮೂಲಭೂತ ಹಕ್ಕು ಎನ್ನುವುದನ್ನು ಬಿಜೆಪಿ ಮುಖಂಡರು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT