ಸೋಮವಾರ, ಸೆಪ್ಟೆಂಬರ್ 27, 2021
20 °C

ಸಂಪಾದಕೀಯ: ಹಾಕಿ ತಂಡದ ಸಾಧನೆ ಸುವರ್ಣಯುಗಕ್ಕೆ ಬುನಾದಿಯಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತದ ಕ್ರೀಡಾಪ್ರೇಮಿಗಳ ನಾಲ್ಕು ದಶಕಗಳ ಕಾಯುವಿಕೆಗೆ ಸಿಹಿಫಲ ಲಭಿಸಿದೆ. ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ದೀರ್ಘಕಾಲದಿಂದ ಎದುರಿಸಿದ್ದ ಪದಕಗಳ ಬರವನ್ನು ಮನಪ್ರೀತ್‌ ಸಿಂಗ್ ಬಳಗವು ಟೋಕಿಯೊದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ನೀಗಿಸಿದೆ. ಜರ್ಮನಿ ಎದುರಿನ ರೋಚಕ ಹಣಾಹಣಿಯಲ್ಲಿ ನಮ್ಮ ತಂಡ ಗೆಲುವು ದಾಖಲಿಸಿದೆ. ಈ ಸಾಧನೆಯು ಕ್ರೀಡಾಪ್ರೇಮಿಗಳಲ್ಲಿ ಪುಳಕ ಮೂಡಿಸಿದೆ. ಸಂಭ್ರಮಾಚರಣೆಗೆ ಕಾರಣವಾಗಿದೆ. ಇದು, ಹಾಕಿಯೊಂದಿಗೆ ನಾವು ಹೊಂದಿರುವ ಭಾವನಾತ್ಮಕ ನಂಟಿಗೆ ಸಾಕ್ಷಿ. ಈ ಕ್ರೀಡೆಯಲ್ಲಿ ಎಂಟು ಒಲಿಂಪಿಕ್ ಚಿನ್ನ ಗೆದ್ದ ದಾಖಲೆ ಮಾಡಿದ ಏಕೈಕ ರಾಷ್ಟ್ರ ಭಾರತ. ಆದರೆ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ನಂತರ ಹಾಕಿ ಕ್ರೀಡೆಯಲ್ಲಿ ದೇಶದ ಸಾಧನೆಯು ಪಾತಾಳಕ್ಕೆ ಇಳಿಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬದಲಾದ ನಿಯಮಗಳು, ಆಸ್ಟ್ರೋಟರ್ಫ್‌ ಬಳಕೆ, ಯುರೋಪಿಯನ್ನರ ವೇಗದ ಆಟ ಮತ್ತು ಭಾರತದ ಹಾಕಿ ಫೆಡರೇಷನ್‌ನ ಆಂತರಿಕ ಸಮಸ್ಯೆಗಳು ಆಟವನ್ನು ನಿಸ್ತೇಜಗೊಳಿಸಿದ್ದು ಸುಳ್ಳಲ್ಲ. ಅದರಲ್ಲೂ 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ತಂಡ ಅರ್ಹತೆಯನ್ನೇ ಗಳಿಸಲು ವಿಫಲವಾಗಿತ್ತು. ತದನಂತರ ತಂಡವನ್ನು ಮರಳಿ ಕಟ್ಟುವ ಪ್ರಯತ್ನ ಆರಂಭವಾಯಿತು. ಈಗ ಪದಕದ ಫಲ ದೊರೆತಿದೆ. ಭಾರತ ತಂಡದ ಸಾಧನೆ ನಿಜಕ್ಕೂ ಅಭಿನಂದನಾರ್ಹ. ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಹಾಕಿ ಆಟಗಾರರಿಗೆ ಅಭ್ಯಾಸಕ್ಕೆ ಹೆಚ್ಚು ಅವಕಾಶಗಳು ದೊರೆತಿಲ್ಲ. ವಿದೇಶ ಪ್ರವಾಸಗಳು, ಟೂರ್ನಿಗಳೂ ಹೆಚ್ಚು ನಡೆದಿಲ್ಲ. ಈ ಅವಧಿಯಲ್ಲಿ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಹೆಚ್ಚು ಸಮಯ ಕಳೆದವು. ಕೆಲವರಿಗೆ ಕೊರೊನಾ ಸೋಂಕು ಕೂಡ ಕಾಡಿತ್ತು. ಈ ಎಲ್ಲ ಸವಾಲುಗಳ ನಡುವೆ ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕಾಪಾಡಿಕೊಂಡು ಪದಕ ಗೆದ್ದಿರುವುದು ಕಡಿಮೆ ಸಾಧನೆಯಲ್ಲ. 1972ರಲ್ಲಿ ಕಂಚು ಗೆದ್ದ ನಂತರ ಸೆಮಿಫೈನಲ್ ಪ್ರವೇಶಿಸಲೂ ತಂಡಕ್ಕೆ ಸಾಧ್ಯವಾಗಿ ರಲಿಲ್ಲ. 1980ರ ಒಲಿಂಪಿಕ್ಸ್‌ನಲ್ಲಿ ಕೇವಲ ಆರು ತಂಡಗಳು ಸ್ಪರ್ಧಿಸಿದ್ದವು. ಆದ್ದರಿಂದ ನಾಕೌಟ್ ಹಂತ ಆಯೋಜನೆ ಆಗಿರಲಿಲ್ಲ. ಲೀಗ್‌ ಸುತ್ತಿನಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ್ದ ತಂಡಗಳು ಫೈನಲ್ ಆಡಿದ್ದವು. ಈ ಬಾರಿ ಆ ಕೊರಗು ಕೂಡ ಕಳೆದುಹೋಯಿತು. ಫೈನಲ್ ಪ್ರವೇಶಿಸುವ ಆಸೆಯೂ ಚಿಗುರಿತ್ತು. ಆದರೆ ನಾಲ್ಕರ ಘಟ್ಟದಲ್ಲಿ ಸೋಲು ಎದುರಾಯಿತು. ಆ ಬಳಿಕ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆಟಗಾರರು ಪುಟಿದೆದ್ದ ರೀತಿ ಅಮೋಘವಾದದ್ದು. 2012ರಿಂದ ತಂಡದಲ್ಲಿರುವ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರ ಅನುಭವ ತಂಡಕ್ಕೆ ಬಹಳಷ್ಟು ನೆರವಾಯಿತು. ಅನುಭವಿ ಮತ್ತು ಯುವ ಆಟಗಾರರ ನಡುವಿನ ಸಮನ್ವಯವು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಈ ಸಲ ಘಟಾನುಘಟಿ ತಂಡಗಳನ್ನು ದಿಟ್ಟತನದಿಂದ ಎದುರಿಸಲು ಮುಖ್ಯ ಕೋಚ್, ಆಸ್ಟ್ರೇಲಿಯಾದ ಗ್ರಹಾಂ ರೀಡ್, ದಕ್ಷಿಣ ಆಫ್ರಿಕಾದ ಅನಾಲಿಟಿಕಲ್ ಕೋಚ್ ಗ್ರೆಗ್ ಕ್ಲಾರ್ಕ್ ಮತ್ತು ಸಹಾಯಕ ಕೋಚ್ ಶಿವೇಂದ್ರ ಸಿಂಗ್ ಅವರ ಮಾರ್ಗದರ್ಶನ ನೆರವಾಯಿತು. ವಿದೇಶಿ ಕೋಚ್‌ಗಳಿಂದ ಭಾರತ ಹಾಕಿಯ ಪುನರುತ್ಥಾನ ಸಾಧ್ಯವಿಲ್ಲವೆಂಬ ಮಾತುಗಳನ್ನು ರೀಡ್ ಸುಳ್ಳು ಮಾಡಿ ತೋರಿಸಿದ್ದಾರೆ.

ಮಹಿಳೆಯರ ಹಾಕಿ ತಂಡದ ಐತಿಹಾಸಿಕ ಸಾಧನೆಯಲ್ಲಿಯೂ ವಿದೇಶಿ ಕೋಚ್ ಸ್ಯೋರ್ಡ್ ಮರೈನ್ ಅವರ ಕೊಡುಗೆ ಇದೆ. ರಾಣಿ ರಾಂಪಾಲ್ ನಾಯಕಿಯಾಗಿರುವ ತಂಡವು ಇಂದು (ಆ. 6) ನಡೆಯಲಿರುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಸೆಣಸಲಿದೆ. ಬಡತನದ ಬೇಗೆ, ಸಾಮಾಜಿಕ ಕಟ್ಟಲೆಗಳನ್ನೆಲ್ಲ ಮೀರಿ ಬಂದಿರುವ ಹೆಣ್ಣುಮಕ್ಕಳು ಈ ತಂಡದಲ್ಲಿದ್ದಾರೆ. ಅವರೆಲ್ಲರೂ ತಮ್ಮ ಪ್ರತಿಭೆ ಮತ್ತು ಛಲದ ಮೂಲಕ ಮಹಿಳೆಯರಿಗೆ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ. ಹಾಕಿ ಆಟವು ಈ ಮಟ್ಟಕ್ಕೆ ಬೆಳೆಯಲು ಒಡಿಶಾ ರಾಜ್ಯದ ಕಾರ್ಯವೂ ಗಮನಾರ್ಹ. ಕಳೆದ ಆರು ವರ್ಷಗಳಲ್ಲಿ ಅಲ್ಲಿ ವಿಶ್ವಕಪ್ ಹಾಕಿ ಟೂರ್ನಿ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳು ಆಯೋಜನೆಯಾದವು. ಬುಡಕಟ್ಟು ಸಮುದಾಯದ
ಪ್ರತಿಭೆಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಯಿತು. ಬೇರೆ ರಾಜ್ಯಗಳಿಗೂ ಇದು ಮಾದರಿಯಾಗಬಲ್ಲದು. ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ದೇಶದ ಮೊದಲ ಮಹಿಳೆ, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಪಡೆದ ಮಣಿಪುರದ ಮೀರಾಬಾಯಿ ಚಾನು, ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್, ಡಿಸ್ಕಸ್‌ ಥ್ರೋನಲ್ಲಿ ಆರನೇ ಸ್ಥಾನ ಗಳಿಸಿದ ಕಮಲ್‌ಪ್ರೀತ್ ಕೌರ್, ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿಕುಮಾರ ದಹಿಯಾ ಅವರ ಸಾಧನೆಗಳು ಯುವಸಮೂಹಕ್ಕೆ ಹೊಸ ಪ್ರೇರಣೆ ನೀಡಬಲ್ಲವು. ಈ ಎಲ್ಲ ಸಾಧನೆಗಳ ಜೊತೆಗೆ ‘ರಾಷ್ಟ್ರೀಯ ಕ್ರೀಡೆ’ ಹಾಕಿ ಪುನರುತ್ಥಾನದ ಹಾದಿ ಹಿಡಿದಿರುವುದು ಆಶಾದಾಯಕ. ಮತ್ತೊಂದು ಸುವರ್ಣಯುಗಕ್ಕೆ ಇದು ಮುನ್ನುಡಿಯಾಗಬೇಕು. ಯಶಸ್ಸಿನ ಶ್ರೇಯ ಹಂಚಿಕೊಳ್ಳಲು ಮುಗಿಬೀಳುವ ಪಟ್ಟಭದ್ರ ಹಿತಾಸಕ್ತಿಗಳನ್ನು ದೂರವಿಡಬೇಕು. ಕ್ರೀಡಾ ಆಡಳಿತದಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆ ತರಬೇಕು. ಆಗಮಾತ್ರ ಭವಿಷ್ಯದಲ್ಲಿ ಭಾರತವನ್ನು ಕ್ರೀಡಾರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಈಡೇರಲು ಸಾಧ್ಯ. ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿಭಾನ್ವಿತರನ್ನು ಬೆಳೆಸುವ ಇಚ್ಛಾಶಕ್ತಿ ಬೇಕಷ್ಟೇ. ಆಗಮಾತ್ರ ಒಲಿಂಪಿಕ್ ಸಾಧಕರ ಶ್ರಮಕ್ಕೆ ತಕ್ಕ ಗೌರವ ನೀಡಿದಂತಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು