ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹಿಂಸೆ ಹಿಂದೆ ಸರಿಯಲಿ; ಶಾಂತಿ, ಸೌಹಾರ್ದ ಮುನ್ನೆಲೆಗೆ ಬರಲಿ

Last Updated 12 ಏಪ್ರಿಲ್ 2021, 20:40 IST
ಅಕ್ಷರ ಗಾತ್ರ

ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಕೋಮು ಹಿಂಸೆಯ ದಳ್ಳುರಿಯಿಂದ ಹೊರಬರುವ ಮೊದಲೇ ರಾಜಕೀಯ ಹಿಂಸಾಚಾರದ ಬೀಜ ಬಿತ್ತನೆಗೆ ಒಳಗಾದ ರಾಜ್ಯ ಪಶ್ಚಿಮ ಬಂಗಾಳ. 1960ರ ದಶಕದ ಕೊನೆಯ ಭಾಗದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಹಿಡಿತವು ಸಡಿಲವಾಗತೊಡಗಿತು. ಸಿಪಿಎಂ ಪ್ರವರ್ಧಮಾನಕ್ಕೆ ಬಂತು. ಅದರ ಜತೆಗೇ ಕಾಂಗ್ರೆಸ್‌ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಮಾರಾಮಾರಿ ಸಾಮಾನ್ಯ ಎಂಬಂತಾಯಿತು. ಟಿಎಂಸಿ ಮುನ್ನೆಲೆಗೆ ಬರುವುದರೊಂದಿಗೆ 2000ನೇ ಇಸವಿಯ ಬಳಿಕ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಸೋತು ಸೊರಗಿತು. ಹೊಡೆದಾಟದ ಕಣದಲ್ಲಿ ಕಾಂಗ್ರೆಸ್‌ ಸ್ಥಾನವನ್ನು ಟಿಎಂಸಿ ಪಡೆದುಕೊಂಡಿತು. 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದ ಬಳಿಕ ಬಡಿದಾಟ ಇನ್ನಷ್ಟು ಭೀಕರವಾಯಿತು. ಈಗ ಸಿಪಿಎಂ ನೆಲಕಚ್ಚಿದೆ, ಬಿಜೆ‍ಪಿ ಬಲಗೊಂಡಿದೆ. ಹಾಗಾಗಿ, ಟಿಎಂಸಿ ಜತೆಗೆ ಕುಸ್ತಿಯಾಡುವ ಸರದಿ ಬಿಜೆಪಿಯದ್ದಾಗಿದೆ. ಈ ರಾಜ್ಯದ ವಿಧಾನಸಭಾ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಡೆಸಲು ಚುನಾವಣಾ ಆಯೋಗವು ನಿರ್ಧರಿಸುವುದಕ್ಕೆ ಈ ರೀತಿಯ ಹಿಂಸೆಯ ಹಿನ್ನೆಲೆಯೇ ಕಾರಣ ಆಗಿದ್ದಿರಬಹುದು. ಆದರೂ ಶನಿವಾರ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ನೆತ್ತರು ಹರಿದಿದೆ. ಎರಡು ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ. ಕೂಚ್‌ಬಿಹಾರ್‌ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ ಎರಡು ಮತಗಟ್ಟೆಗಳು ಹಿಂಸಾಚಾರಕ್ಕೆ ಸಾಕ್ಷಿಯಾಗಿವೆ. ಇದರಲ್ಲಿ ರಾಜಕೀಯ ವೈಷಮ್ಯಕ್ಕೆ ಒಬ್ಬ ವ್ಯಕ್ತಿ ಬಲಿಯಾದರೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಗುಂಡೇಟಿಗೆಇತರ ನಾಲ್ವರು ಜೀವ ತೆತ್ತಿದ್ದಾರೆ. ಬಂದೂಕು ಕಸಿದುಕೊಳ್ಳಲು ಬಂದ ಜನರ ಗುಂಪಿನ ಮೇಲೆ ‘ಸ್ವರಕ್ಷಣೆ’ಗಾಗಿ ಗುಂಡು ಹಾರಿಸಲಾಯಿತು ಎಂಬುದು ಸಿಐಎಸ್‌ಎಫ್‌ನ ಸ್ಪಷ್ಟೀಕರಣ. ಬಾಲಕನೊಬ್ಬನ ಮೇಲೆ ಸಿಐಎಸ್‌ಎಫ್‌ ತಂಡವು ಹಲ್ಲೆ ನಡೆಸಿತು. ಇದರಿಂದ ಕೆರಳಿದ ಸ್ಥಳೀಯರು ಸಂಘರ್ಷಕ್ಕೆ ಇಳಿದರು ಎಂದೂ ಹೇಳಲಾಗುತ್ತಿದೆ. ಅದೇನೇ ಇದ್ದರೂ ಕೇಂದ್ರೀಯ ಪಡೆಯು ಜನರನ್ನು ನಿಭಾಯಿಸುವಲ್ಲಿ ಹೆಚ್ಚಿನ ಸಂಯಮ ತೋರಬೇಕಿತ್ತು ಎಂಬ ವಾದದಲ್ಲಿ ಹುರುಳಿಲ್ಲದೆ ಇಲ್ಲ. ಕೆರಳಿದ ಜನರನ್ನು ಚದುರಿಸಲು ತಮಗೆ ಲಭ್ಯವಿದ್ದ ಇತರ ಅವಕಾಶಗಳನ್ನುಸಿಐಎಸ್‌ಎಫ್‌ ಬಳಸಿಕೊಂಡಿದೆಯೇ, ಹಿಂಸಾಚಾರಕ್ಕೆ ಕಾರಣ ಯಾರು ಎಂಬ ಬಗ್ಗೆ ತನಿಖೆ ಆಗಬೇಕಿದೆ.

ವೇದನೆ ಮತ್ತು ವಿಷಾದಕ್ಕೆ ಕಾರಣವಾಗಬೇಕಿದ್ದ ಈ ಸಾವನ್ನು ಬಿಜೆಪಿ ಮತ್ತು ಟಿಎಂಸಿ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು. ರಾಜಕೀಯ ಹಿಂಸಾಚಾರದ ಇತಿಹಾಸ ರಾಜ್ಯಕ್ಕೆ ಇದೆ ಎಂಬ ಕಾರಣಕ್ಕೆ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದೇನಿಲ್ಲ. ಹಿಂಸೆ ಮತ್ತು ವೈಷಮ್ಯವನ್ನು ಬದಿಗೊತ್ತಿ ಜನರಲ್ಲಿ ಪ್ರೀತಿ ಬಿತ್ತುವುದೇ ನಿಜವಾದ ನಾಯಕತ್ವ ಎಂಬುದರ ಅತಿ ದೊಡ್ಡ ನಿದರ್ಶನವಾಗಿ ಗಾಂಧೀಜಿ ನಮ್ಮ ಮುಂದಿದ್ದಾರೆ. ಆದರೆ, ಅಧಿಕಾರದಾಹ
ದಿಂದ ಕುರುಡಾಗಿರುವ ನಾಯಕರಿಗೆ ಇದು ಕಾಣಿಸದು. ರಾಜ್ಯದಲ್ಲಿ ವ್ಯಾಪಕವಾಗಿ ನಿಯೋಜನೆಗೊಂಡಿರುವ ‘ಕೇಂದ್ರೀಯ ಭದ್ರತಾ ಪಡೆಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿವೆ, ಅವರಿಗೆ ಮುತ್ತಿಗೆ ಹಾಕಿ’ ಎಂದು ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪದೇ ಪದೇ ಹೇಳಿದ್ದಾರೆ. ‘ಮುತ್ತಿಗೆ ಹಾಕಿ’ ಎನ್ನುವುದು ಹೊಣೆ ಮರೆತ ಹೇಳಿಕೆ.ಇದನ್ನು ಪ್ರಚೋದನೆ ಎಂದು ಚುನಾವಣಾ ಆಯೋಗವು ಪರಿಗಣಿಸಿರುವುದರಲ್ಲಿ ಅರ್ಥ ಇದೆ. ಆದರೆ, ಮಮತಾ ಆರೋಪದಲ್ಲಿ ಸತ್ಯಾಂಶ ಇದೆಯೇ ಎಂಬುದನ್ನು ಪರಿಶೀಲಿಸುವುದು ತನ್ನ ಹೊಣೆ ಎಂಬುದನ್ನು ಆಯೋಗವು ಮರೆತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಂತಹ ಅತ್ಯಂತ ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಕೂಡ ಪ್ರಚೋದನಕಾರಿಯಾಗಿ ಮಾತನಾಡಿದ್ದಕ್ಕೆ ಈ ಚುನಾವಣಾ ಪ್ರಚಾರವು ಸಾಕ್ಷಿಯಾಯಿತು. ‘ನಾಟಿ ಬಾಯ್‌ಗಳು ಸರಿಯಾಗಿ ವರ್ತಿಸದಿದ್ದರೆ ಕೂಚ್‌ಬಿಹಾರದಂತಹ ಇನ್ನಷ್ಟು ಘಟನೆಗಳು ನಡೆದು ಇನ್ನೂ ಹೆಚ್ಚು ಜನರು ಸಾಯುತ್ತಾರೆ’ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದು ಏನನ್ನು ಸೂಚಿಸುತ್ತದೆ? ಪ್ರತಿ ದಿನವೂ ಕೆರಳಿಸುವ ಮಾತುಗಳನ್ನು ಆಡಿ ಇಡೀ ರಾಜ್ಯವನ್ನು ಅಗ್ನಿಪರ್ವತದ ರೀತಿಯಲ್ಲಿಪರಿವರ್ತಿಸಿದ್ದರ ಜವಾಬ್ದಾರಿಯನ್ನು ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹೊತ್ತುಕೊಳ್ಳ
ಲೇಬೇಕು. ಪ್ರಜಾಪ್ರಭುತ್ವ ಎಂಬುದು ಯಾರಿಗೆ ಹೆಚ್ಚು ಹಿಂಸಾಚಾರ ನಡೆಸುವ ತಾಕತ್ತು ಇದೆ ಎಂಬುದರ ಪರೀಕ್ಷೆ ಅಲ್ಲ. ಜನರು ವಿವೇಚನೆಯಿಂದ ಮತ ಚಲಾಯಿಸಲು ಸಾಧ್ಯವಾಗುವಂತೆ ಇನ್ನುಳಿದ ನಾಲ್ಕು ಹಂತಗಳ ಮತದಾನವನ್ನು ಶಾಂತಿಯಿಂದ, ಮುಕ್ತವಾಗಿ ನಡೆಸುವ ದಿಸೆಯಲ್ಲಿ ಆಯೋಗ ಮತ್ತು ರಾಜಕೀಯ ಪಕ್ಷಗಳು ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT