ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೋರ್ಟ್ ಕಲಾಪದ ನೇರಪ್ರಸಾರ; ಹೈಕೋರ್ಟ್‌ ಕ್ರಮ ಸ್ವಾಗತಾರ್ಹ

Last Updated 6 ಜೂನ್ 2021, 19:30 IST
ಅಕ್ಷರ ಗಾತ್ರ

ಮೊಹಮ್ಮದ್ ಶಹಾಬುದ್ದೀನ್ ಮತ್ತು ಬಿಹಾರ ರಾಜ್ಯ ಸರ್ಕಾರದ ನಡುವಿನ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ‘ಮುಕ್ತ ನ್ಯಾಯಾಲಯ’ದ ಪರಿಕಲ್ಪನೆಯ ಬಗ್ಗೆ ಹೇಳಿರುವ ಒಂದೆರಡು ಮಾತುಗಳು ಸ್ಮರಣೀಯ. ಈ ತೀರ್ಪು ಬಂದಿದ್ದು 2010ರ ಮಾರ್ಚ್‌ ತಿಂಗಳಿನಲ್ಲಿ. ‘ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು ಇದ್ದರೂ, ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದೇ ಆದಲ್ಲಿ ಅಂತಹ ಕಲಾಪವು ಮುಕ್ತ ನ್ಯಾಯಾಲಯದಲ್ಲಿ ನಡೆದಿದೆ ಎನ್ನಲು ಆಗದು. ನ್ಯಾಯಾಲಯಕ್ಕೆ ಪ್ರವೇಶಿಸಲು ಸಾರ್ವಜನಿಕರಿಗೆ ಹಕ್ಕು ಇರಬೇಕು, ಯಾರಿಗೆಲ್ಲ ಕಲಾಪ ವೀಕ್ಷಿಸುವ ಇಚ್ಛೆ ಇರುತ್ತದೆಯೋ ಅವರಿಗೆಲ್ಲ ಕೋರ್ಟ್‌ ಪ್ರವೇಶಕ್ಕೆ ಅವಕಾಶ ಇರಬೇಕು. ಆಗ ಅಂತಹ ವ್ಯವಸ್ಥೆಯನ್ನು ಮುಕ್ತ ನ್ಯಾಯಾಲಯ ವ್ಯವಸ್ಥೆ ಎನ್ನಲು ಸಾಧ್ಯ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಭಾರತದಲ್ಲಿ ಕೋರ್ಟ್‌ ಕಲಾಪಗಳು ‘ಮುಕ್ತ ನ್ಯಾಯಾಲಯ’ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ. ಅಂದರೆ, ಕೋರ್ಟ್‌ ಕೊಠಡಿಗೆ ಹೋಗಿ ಅಲ್ಲಿನ ಕಲಾಪಗಳನ್ನು ವೀಕ್ಷಿಸುವ ಹಕ್ಕು ಪ್ರಜೆಗಳಿಗೆ ಇದೆ. ಕೆಲವು ನಿರ್ದಿಷ್ಟ ಸ್ವರೂಪದ ಪ್ರಕರಣಗಳ ವಿಚಾರಣೆಯು ಗೋಪ್ಯವಾಗಿ ನಡೆಯುವುದರಿಂದ, ಹಾಗೆ ನಡೆಯಬೇಕಿರುವುದು ಸರಿ ಕೂಡ ಆಗಿರುವುದರಿಂದ ಅಂತಹ ಪ್ರಕರಣಗಳ ವಿಚಾರಣೆಯ ವೇಳೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂಬುದು ನಿಜ. ಕರ್ನಾಟಕ ಹೈಕೋರ್ಟ್‌ ಒಂದು ಪ್ರಕರಣದ ವಿಚಾರಣೆಯನ್ನು ಈಚೆಗೆ ನೇರ ಪ್ರಸಾರ ಮಾಡಿದೆ. ಹೀಗೆ ಕಲಾಪದ ನೇರ ಪ್ರಸಾರಕ್ಕೆ ಮುಂದಾಗಿದ್ದರಲ್ಲಿ ಕರ್ನಾಟಕ ಹೈಕೋರ್ಟ್ ಮೊದಲನೆಯದು ಅಲ್ಲದಿದ್ದರೂ, ಈ ಕ್ರಮವು ಮೆಚ್ಚುಗೆಗೆ ಅರ್ಹ. ನ್ಯಾಯಾಂಗದ ಕಲಾಪಗಳನ್ನು ಮತ್ತಷ್ಟು ಪಾರದರ್ಶಕ ಆಗಿಸುವ ದಿಸೆಯಲ್ಲಿ ಇದು ಬಹಳ ದೊಡ್ಡ ಹೆಜ್ಜೆ. ಸ್ವಪ್ನಿಲ್ ತ್ರಿಪಾಠಿ ಮತ್ತು ಸುಪ್ರೀಂ ಕೋರ್ಟ್‌ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ‘ನಮ್ಮ ದೇಶದಲ್ಲಿ ಬಹುದೊಡ್ಡ ಸಂಖ್ಯೆಯ ಜನರಿಗೆ ನ್ಯಾಯಾಲಯದ ಕಲಾಪಗಳನ್ನು ನೋಡುವ ಅವಕಾಶ ಅಪರೂಪಕ್ಕೆ ಒಮ್ಮೆ ಸಿಗುತ್ತದೆ. ಇದು ಮುಕ್ತ ನ್ಯಾಯಾಲಯದ ಉದ್ದೇಶವನ್ನು ಕುಗ್ಗಿಸುತ್ತದೆ. ಹೀಗೆ ಅವಕಾಶ ಸಿಗದೆ ಇರುವುದಕ್ಕೆ ಕಾರಣ ಬಡತನ, ಅನಕ್ಷರತೆ, ನ್ಯಾಯಾಲಯ ದೂರದಲ್ಲಿರುವುದು, ಖರ್ಚು ಮತ್ತು ಕಲಾಪಗಳ ಬಗ್ಗೆ ಅರಿವಿನ ಕೊರತೆ’ ಎಂದು ಹೇಳಿದೆ.

ಕೋರ್ಟ್‌ ಕಲಾಪಗಳ ನೇರ ಪ್ರಸಾರ ಬೇಕು ಎಂಬ ಅಭಿಪ್ರಾಯವು ದೇಶದ ಉನ್ನತ ನ್ಯಾಯಾಂಗದಲ್ಲಿ ಈಗಾಗಲೇ ಮೂಡಿದೆ. ಅದರ ಫಲವಾಗಿಯೇ ಕೆಲವು ಹೈಕೋರ್ಟ್‌ಗಳು ಕಲಾಪಗಳ ನೇರ ಪ್ರಸಾರವನ್ನು ಪ್ರಾಯೋಗಿಕವಾಗಿ ನಡೆಸಿವೆ. ಈ ಪ್ರಯೋಗ ಯಶಸ್ಸು ಕಂಡು, ಕಲಾಪಗಳ ನೇರ ಪ್ರಸಾರವು ಅನುದಿನವೂ ಇರುವಂತೆ ಆಗಬೇಕು. ‘ನ್ಯಾಯದಾನ ಮಾತ್ರವೇ ಮುಖ್ಯವಲ್ಲ, ನ್ಯಾಯದಾನ ಆಗುತ್ತಿರುವುದು ಇತರರಿಗೆ ಗೊತ್ತಾಗುವಂತೆಯೂ ಇರಬೇಕು’ ಎಂದು ನ್ಯಾಯಶಾಸ್ತ್ರ ಹೇಳುತ್ತದೆ. ಈ ಮಾತಿನ ಕ್ರಿಯಾರೂಪ ಮುಕ್ತ ನ್ಯಾಯಾಲಯದ ವ್ಯವಸ್ಥೆ. ಈ ವ್ಯವಸ್ಥೆಯು ತಂತ್ರಜ್ಞಾನದ ನೆರವು ಪಡೆದು, ಕಲಾಪಗಳ ನೇರ ಪ್ರಸಾರ ಹೆಚ್ಚೆಚ್ಚು ಆಗುವಂತಾದರೆ, ನ್ಯಾಯಾಲಯದ ಕಲಾಪಗಳ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ಅರಿವು ಮೂಡುತ್ತದೆ. ಆಗ ವ್ಯವಸ್ಥೆಯ ಮೇಲಿನ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ. ‘ನ್ಯಾಯಾಲಯದಲ್ಲಿನ ವಿಚಾರಣೆಗಳಿಗೆ ಪ್ರಜೆಗಳು ಹಾಜರಾಗಿ, ವಿಚಾರಣೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು’ ಎಂದು ತತ್ವಶಾಸ್ತ್ರಜ್ಞ ಪ್ಲೇಟೊ ಹೇಳಿದ್ದ. ಪ್ರಜೆಗಳು ಈ ರೀತಿ ಮಾಡಿದಾಗ ಸಾಂವಿಧಾನಿಕ ವಿಷಯಗಳಲ್ಲಿ, ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವರ ಅರಿವು ವಿಸ್ತಾರವಾಗುತ್ತದೆ. ವ್ಯವಸ್ಥೆಯ ಬಗ್ಗೆ ಅರಿವು ಹೊಂದಿರುವ ವ್ಯಕ್ತಿ ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾನೆ. ದೇಶದ ಉನ್ನತ ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯ ವೇಳೆ ಹಿರಿಯ ವಕೀಲರು ಮಾಡುವ ವಾದ–ಪ್ರತಿವಾದಗಳು ಬಹಳ ಮಾಹಿತಿಪೂರ್ಣವೂ, ವಿಶ್ಲೇಷಣಾತ್ಮಕವೂ, ಪ್ರಜ್ಞೆಯನ್ನು ವಿಸ್ತರಿಸುವಂಥವೂ ಆಗಿರುತ್ತವೆ. ಕಲಾಪಗಳ ನೇರ ಪ್ರಸಾರ ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ, ಹಿರಿಯ ವಕೀಲರು ಮಂಡಿಸುವ ವಾದ–ಪ್ರತಿವಾದಗಳನ್ನು ವಿವರವಾಗಿ ನೋಡುವ ಅವಕಾಶ ಪ್ರತೀ ಪ್ರಜೆಗೂ ಲಭ್ಯವಾಗುತ್ತದೆ. ಅದು ಕಾನೂನಿನ ಅರಿವನ್ನು ಸಾರ್ವಜನಿಕರಲ್ಲಿ ಹೆಚ್ಚಿಸುತ್ತದೆ. ಹತ್ತು ಹಲವು ಒಳ್ಳೆಯ ಸಂಗತಿಗಳನ್ನು ಹೊತ್ತಿರುವ ಕಲಾಪಗಳ ನೇರ ಪ್ರಸಾರದ ವ್ಯವಸ್ಥೆಯು ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT