ಮಂಗಳವಾರ, ಮಾರ್ಚ್ 9, 2021
31 °C

ಸಂಪಾದಕೀಯ: ಸಾಲ ನೀಡುವ ಅನಧಿಕೃತ ಆ್ಯಪ್‌ಗಳು; ಎಚ್ಚರಿಕೆ ಸಾಲದು, ಕ್ರಮ ಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಉಚಿತವಾಗಿ ಹಾಗೂ ಸುಲಭವಾಗಿ ಸಿಗುವಂಥವು ಕೆಲವೊಮ್ಮೆ ಬಹಳ ದುಬಾರಿಯಾಗಿಯೂ ಪರಿಣಮಿಸಬಲ್ಲವು ಎಂಬ ಮಾತಿದೆ. ಇಂತಹ ಮಾತುಗಳಿಗೆ ಜನಸಮುದಾಯ ಪಡೆದ ಅನುಭವ ಕಾರಣವಾಗಿರುತ್ತದೆ. ಈ ಮಾತನ್ನು ಮೊಬೈಲ್‌ ಆ್ಯಪ್‌ ಮೂಲಕ ಸಿಗುವ ಸಾಲದ ವಿಚಾರಕ್ಕೂ ಅನ್ವಯಿಸಬಹುದು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ‘ವೈಯಕ್ತಿಕ ಸಾಲ’ (personal loan) ಎಂದು ಟೈಪ್ ಮಾಡಿದರೆ, ತಕ್ಷಣಕ್ಕೆ ಅಥವಾ ಹೆಚ್ಚಿನ ಪ್ರಶ್ನೆಗಳನ್ನು ಕೇಳದೆಯೇ ವೈಯಕ್ತಿಕ ಸಾಲ ನೀಡುವುದಾಗಿ ಹೇಳಿಕೊಳ್ಳುವ ನೂರಾರು ಆ್ಯಪ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ. ವ್ಯಕ್ತಿ ವೈಯಕ್ತಿಕ ಸಾಲ ಪಡೆಯಲು ಅರ್ಹ ಹೌದೋ ಅಲ್ಲವೋ ಎಂಬುದನ್ನು ಎರಡೇ ನಿಮಿಷಗಳ ಅವಧಿಯಲ್ಲಿ ಹೇಳುವುದಾಗಿಯೂ ಈ ಆ್ಯಪ್‌ಗಳು ತಿಳಿಸುತ್ತವೆ.

ಕನಿಷ್ಠ ₹ 1,000ದಿಂದ ಗರಿಷ್ಠ ₹ 1 ಲಕ್ಷದವರೆಗೆ ಸಾಲವನ್ನು ತ್ವರಿತವಾಗಿ ಮಂಜೂರು ಮಾಡಿಕೊಡುವುದಾಗಿಯೂ ಈ ಆ್ಯಪ್‌ಗಳು ಹೇಳುತ್ತವೆ. ಹೇಳಿದಂತೆ ಸಾಲ ನೀಡುತ್ತವೆ ಕೂಡ. ಆದರೆ, ನಂತರದಲ್ಲಿ ಸಾಲ ವಸೂಲಿಗೆ ಅವು ಸ್ವೀಕಾರಾರ್ಹ ಅಲ್ಲದ ಮಾರ್ಗಗಳನ್ನು ಬಳಸಿದ ನಿದರ್ಶನಗಳು ವರದಿಯಾಗಿವೆ. ಲಾಕ್‌ಡೌನ್‌ ಅವಧಿಯಲ್ಲಿ ಸಾಲ ಮರುಪಾವತಿಗೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆದೇಶ ಹೊರಡಿಸಿದ್ದರೂ ಈ ಆ್ಯಪ್‌ಗಳು ಮಾತ್ರ ಸಾಲದ ಕಂತುಗಳನ್ನು ಮರುಪಾವತಿ ಮಾಡಲೇಬೇಕು ಎಂದು ಒತ್ತಡ ತರುತ್ತಿದ್ದವು ಎಂಬ ವರದಿಗಳು ಇವೆ.

ಸಾಲ ಪಡೆದು, ವಾಪಸ್ ನೀಡದವರ ವೈಯಕ್ತಿಕ ವಿವರಗಳನ್ನು ಅಕ್ರಮವಾಗಿ ಪಡೆದು, ಸಾಲ ಪಡೆದವರ ಹೆಸರುಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಬಹಿರಂಗಪಡಿಸಿದ ವರದಿಗಳೂ ಇವೆ. ಈ ಆ್ಯಪ್‌ಗಳು ವಿಧಿಸುತ್ತಿರುವ ಬಡ್ಡಿ ದರದ ಪ್ರಮಾಣ ಕೂಡ ತೀರಾ ದುಬಾರಿ ಎಂಬುದನ್ನು ಸಾಲ ಪಡೆದವರು ಕಂಡುಕೊಂಡಿದ್ದಾರೆ. ಇಂಥ ವರದಿಗಳಿಂದ ಎಚ್ಚೆತ್ತಿರುವ ಆರ್‌ಬಿಐ, ಈ ಬಗೆಯ ಆ್ಯಪ್‌ಗಳ ವಿಚಾರದಲ್ಲಿ ಜಾಗರೂಕರಾಗಿ ಇರುವಂತೆ ಸಾರ್ವಜನಿಕರಿಗೆ ಹಿತವಚನ ಹೇಳಿದೆ.

ಗೂಗಲ್‌ ಪ್ಲೇಸ್ಟೋರ್‌ ಈಗ ಒಂದು ಮಾರುಕಟ್ಟೆಯ ಸ್ವರೂಪವನ್ನೂ ಪಡೆದುಕೊಂಡಿದೆ. ಈ ಮಾರುಕಟ್ಟೆಯನ್ನು ಬಳಸಿಕೊಂಡು ಹೊಸ ಕಾಲದ ಅನೇಕ ಕಂಪನಿಗಳು ಹಣಕಾಸಿನ ಬಗೆಬಗೆಯ ಸೇವೆಗಳನ್ನು ನೀಡುತ್ತಿವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು, ಷೇರು ಖರೀದಿ ಮತ್ತು ಮಾರಾಟ, ಹಣಕಾಸಿನ ಸಾಕ್ಷರತೆಗೆ ಸಂಬಂಧಿಸಿದ ಆನ್‌ಲೈನ್‌ ತರಗತಿಗಳಿಗೆ ಹಾಜರಾಗುವುದು, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹಣ ತೊಡಗಿಸುವುದು... ಇವೆಲ್ಲ ಇಂತಹ ಆ್ಯಪ್‌ಗಳ ಮೂಲಕವೇ ಈಗ ಸಾಧ್ಯವಾಗಿವೆ.

ಹಣಕಾಸಿನ ಸಾಕ್ಷರತೆಯಲ್ಲಿ ಹಿಂದೆ ಉಳಿದಿರುವ ಭಾರತದಲ್ಲಿ ಇಂತಹ ಆ್ಯಪ್‌ಗಳು ಸ್ತುತ್ಯರ್ಹ ಕೆಲಸ ಮಾಡುತ್ತಿವೆ. ಹಾಗೆಯೇ, ಅನಧಿಕೃತ ಆ್ಯಪ್‌ಗಳು ಸಾಲ ಕೊಡುವುದಾಗಿ ಹೇಳಿಕೊಂಡು ಹದ್ದುಮೀರಿದ ವರ್ತನೆ ತೋರಿದ್ದೂ ಇದೆ. ಆರ್‌ಬಿಐ ಈಗ ಇಂತಹ ಆ್ಯಪ್‌ಗಳನ್ನು ‘ಅನಧಿಕೃತ’ ಎಂದು ಕರೆದಿದೆ ಎಂದಾದರೆ, ಅವುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಇದು ಸಕಾಲ ಎಂದೇ ಅರ್ಥ. ಪ್ಲೇಸ್ಟೋರ್‌ ಮೂಲಕ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಸಾಮಾನ್ಯ ವ್ಯಕ್ತಿಗೆ ಆ್ಯಪ್‌ಗಳ ಜನಕರು ಯಾರು ಎಂಬುದು ಗೊತ್ತಿರಲಾರದು. ಹಾಗಾಗಿ, ಗೂಗಲ್‌ ಕಂಪನಿ ಮತ್ತು ಕಾನೂನು ಜಾರಿ ಸಂಸ್ಥೆಗಳು ಒಂದಾಗಿ ಇಂತಹ ಆ್ಯಪ್‌ಗಳ ಮೇಲೆ ಕಡಿವಾಣ ವಿಧಿಸಬೇಕು.

ಕಾನೂನಿಗೆ ಅನುಗುಣವಾಗಿ ಸಾಲ ನೀಡುವ ಪರವಾನಗಿ ಇರುವ ಸಂಸ್ಥೆಗಳ, ಬ್ಯಾಂಕ್‌ಗಳ ಆ್ಯಪ್‌ಗಳಿಗೆ ಮಾತ್ರ ಗೂಗಲ್‌ ಪ್ಲೇಸ್ಟೋರ್‌ನಲ್ಲಿ (ಅಥವಾ ಆ್ಯಪಲ್‌ನ ಸ್ಟೋರ್‌) ಜಾಗ ಸಿಗುವಂತೆ ಆಗಬೇಕು. ಆಗ ವೈಯಕ್ತಿಕ ಸಾಲ ಅರಸುವವರಿಗೆ ಅಧಿಕೃತ ಸಂಸ್ಥೆಗಳ ಜೊತೆ ಮಾತ್ರ ಸಂವಹನ ನಡೆಸಲು ಸಾಧ್ಯವಾಗುತ್ತದೆ, ಸಾಲ ಸರಿಯಾದ ಮೂಲದಿಂದ ಸಿಗುವಂತೆ ಆಗುತ್ತದೆ. ಅನಧಿಕೃತ ಆ್ಯಪ್‌ಗಳಿಗೆ ಪ್ಲೇಸ್ಟೋರ್‌ನಲ್ಲಿ ಸ್ಥಾನ ನೀಡಿ, ನಂತರ ಅವುಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸುವುದರಿಂದ ಪ್ರಯೋಜನ ಇಲ್ಲ. ಹಣಕಾಸಿನ ಒತ್ತಡದಲ್ಲಿ ಸಿಲುಕಿದವರು ಸುಲಭಕ್ಕೆ ಸಿಗುವ ಸಾಲವನ್ನು ತಕ್ಷಣಕ್ಕೆ ಪಡೆದುಕೊಳ್ಳುತ್ತಾರೆ, ನಂತರ ತೊಂದರೆ ಅನುಭವಿಸುತ್ತಾರೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದಾದರೆ, ಅನಧಿಕೃತ ಸಂಸ್ಥೆಗಳಿಗೆ ಪ್ಲೇಸ್ಟೋರ್‌ನಲ್ಲಿ ಜಾಗ ಸಿಗದಂತೆ ಮಾಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು