ಲೋಕಪಾಲ ನೇಮಕಕ್ಕೆ ಕಾಲ ಸನ್ನಿಹಿತ ನ್ಯಾಯಾಲಯದ ಒತ್ತಡದ ಫಲ

ಸೋಮವಾರ, ಏಪ್ರಿಲ್ 22, 2019
29 °C

ಲೋಕಪಾಲ ನೇಮಕಕ್ಕೆ ಕಾಲ ಸನ್ನಿಹಿತ ನ್ಯಾಯಾಲಯದ ಒತ್ತಡದ ಫಲ

Published:
Updated:

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರು ಭಾರತದ ಮೊದಲ ಲೋಕಪಾಲರಾಗಿ ನಿಯುಕ್ತಿ ಆಗುವುದು ಬಹುತೇಕ ಖಚಿತವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ನ್ಯಾಯಮೂರ್ತಿ ಘೋಷ್ ಅವರ ಹೆಸರನ್ನು ಆಯ್ಕೆ ಮಾಡಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆ ಸಮಿತಿಯ ಸಭೆಯಿಂದ ದೂರ ಉಳಿದಿದ್ದರು. ಸುಪ್ರೀಂ ಕೋರ್ಟ್‌ನ ಸತತ ತಪರಾಕಿಗಳಿಂದಾಗಿ ಈ ನೇಮಕ ನಡೆದಿದೆಯೇ ವಿನಾ ಕೇಂದ್ರ ಸರ್ಕಾರದ ಇಚ್ಛಾಶಕ್ತಿಯಿಂದ ಅಲ್ಲ ಎಂಬ ಕಟು ಸತ್ಯವನ್ನು ಇಲ್ಲಿ ಗಮನಿಸಲೇಬೇಕು. ನ್ಯಾಯಾಲಯದ ಒತ್ತಡದಿಂದಾಗಿ ಕಡೆಗೂ 2018ರ ಸೆಪ್ಟೆಂಬರ್ 27ರಂದು ಲೋಕಪಾಲ ಶೋಧ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಮೊದಲ ಸಭೆ ನಡೆದದ್ದು ಇದೇ ಫೆಬ್ರುವರಿಯಲ್ಲಿ! ಸಾರ್ವಜನಿಕ ಸೇವೆಯ ಉನ್ನತ ಹಂತದಲ್ಲಿ ನಡೆಯುವ ಭ್ರಷ್ಟಾಚಾರದ ವಿಚಾರಣೆ ನಡೆಸುವುದು ಲೋಕಪಾಲ ಸಂಸ್ಥೆಯ ಕರ್ತವ್ಯ. ಮಾಜಿ ಪ್ರಧಾನಮಂತ್ರಿ, ಕೇಂದ್ರದ ಹಾಲಿ ಮತ್ತು ಮಾಜಿ ಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರಿ ಒಡೆತನದ ಉದ್ಯಮಗಳ ಎಲ್ಲ ಗ್ರೂಪ್ ಎ ಅಧಿಕಾರಿಗಳು,  ಸರ್ಕಾರದ ಆರ್ಥಿಕ ನೆರವು ಪಡೆಯುವ ಸ್ವಯಂಸೇವಾ ಸಂಸ್ಥೆಗಳ ನಿರ್ದೇಶಕರು, ಅಧಿಕಾರಿಗಳು ಈ ಸಂಸ್ಥೆಯ ತನಿಖೆಯ ವ್ಯಾಪ್ತಿಗೆ ಬರುತ್ತಾರೆ. ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ವಿಷಯಕ್ಕೆ ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಭೂತಕನ್ನಡಿ ಹಿಡಿದು ಆನಂತರ ಜಾಣಮರೆವಿಗೆ ಜಾರುತ್ತವೆ. ಇಲ್ಲವಾದರೆ, 1968ರಲ್ಲಿಯೇ ಚಾಲನೆ ಪಡೆದ ಲೋಕಪಾಲ ನಿಯುಕ್ತಿಯ ವಿಷಯ ಐದು ದಶಕಗಳ ಕಾಲಹರಣಕ್ಕೆ ಬಲಿ ಆಗಬೇಕಿರಲಿಲ್ಲ. 2008ರಲ್ಲಿ ಅಸ್ತಿತ್ವಕ್ಕೆ ಬಂದ ಯುಪಿಎ-2 ಸರ್ಕಾರವು ಭ್ರಷ್ಟಾಚಾರದ ಹಲವು ಆರೋಪಗಳಲ್ಲಿ ಮುಳುಗಿತ್ತು. 2011ರಲ್ಲಿ ಲೋಕಪಾಲ ವ್ಯವಸ್ಥೆ ರೂಪಿಸುವಂತೆ ಭಾರಿ ಜನಾಂದೋಲನವೇ ಜರುಗಿತ್ತು. ಈ ಒತ್ತಡದಲ್ಲಿ ರೂಪುಗೊಂಡದ್ದು 2013ರ ಲೋಕಪಾಲ ಮತ್ತು ಲೋಕಾಯುಕ್ತರ ಕಾಯ್ದೆ. ಅದು ಜಾರಿಗೆ ಬಂದದ್ದು 2014ರ ಜನವರಿ 16ರಂದು. ಅವು ಯುಪಿಎ-2 ಸರ್ಕಾರದ ಕಟ್ಟಕಡೆಯ ದಿನಗಳು. ಧಾವಂತದಲ್ಲಿ ಲೋಕಪಾಲರನ್ನು ನೇಮಕ ಮಾಡುವ ಅಂದಿನ ಸರ್ಕಾರದ ನಡೆ ಸಂದೇಹ ಹುಟ್ಟಿಸಿತ್ತು. ಲೋಕಪಾಲ ಶೋಧ ಸಮಿತಿಯ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಕೆ.ಟಿ.ಥಾಮಸ್ ಮತ್ತು ಇದೇ ಸಮಿತಿಯ ಸದಸ್ಯರಾಗಿದ್ದ ಹಿರಿಯ ವಕೀಲ ಫಾಲಿ ನರಿಮನ್ ಪ್ರತಿಭಟಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಆಯ್ಕೆಯನ್ನು ಮುಂದಿನ ಸರ್ಕಾರಕ್ಕೆ ಬಿಡುವಂತೆ ಬಿಜೆಪಿ ನಾಯಕ ಅರುಣ್ ಜೇಟ್ಲಿ ಆಗ್ರಹಿಸಿದ್ದರು. ಅಂತೆಯೇ ಈ ಪ್ರಕ್ರಿಯೆ ಸ್ಥಗಿತಗೊಂಡಿತು.

2014ರ ಮೇ ತಿಂಗಳಲ್ಲಿ ಆರಿಸಿಬಂದ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಈ ವಿಷಯಕ್ಕೆ ಆದ್ಯತೆ ನೀಡಲೇ ಇಲ್ಲ. ‘ನಾನೂ ತಿನ್ನುವುದಿಲ್ಲ, ಯಾರಿಗೂ ತಿನ್ನಲು ಬಿಡುವುದಿಲ್ಲ’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಘೋಷಿಸಿದ್ದರು ಮೋದಿ. ತಮ್ಮನ್ನು ದೇಶದ ಸಮರ್ಥ ಕಾವಲುಗಾರ ಎಂದೂ ಜನಸಮುದಾಯಗಳ ಮುಂದೆ ಬಿಂಬಿಸಿಕೊಳ್ಳುವಲ್ಲಿ ಈಗಲೂ ಅವರು ಹಿಂದೆ ಬಿದ್ದವರಲ್ಲ. ವಿಶ್ವ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತದ ಸ್ಥಾನ ಈಗಲೂ ಕೆಳಮಟ್ಟದಲ್ಲೇ ಉಳಿದಿದೆ. ದೇಶದ ಉನ್ನತ ತನಿಖಾ ಸಂಸ್ಥೆ ಸಿಬಿಐ, ಖುದ್ದು ಭ್ರಷ್ಟಾಚಾರ- ಸ್ವಜನಪಕ್ಷಪಾತದ ಆರೋಪಗಳಿಗೆ ಸಿಲುಕಿದೆ. ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬ ಅನುಮಾನವನ್ನು ವಿರೋಧ ಪಕ್ಷಗಳು ಜನಮಾನಸದಲ್ಲಿ ಬಿತ್ತಿವೆ. ‘ಕಾವಲುಗಾರನೇ ಕಳ್ಳ’ ಎಂಬ ಆರೋಪವನ್ನು ಮೋದಿ ಬಲವಾಗಿ ತಳ್ಳಿಹಾಕಿದ್ದಾರೆ. ತಿನ್ನಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕಾಗಿ ವಿರೋಧ ಪಕ್ಷಗಳು ಈ ಆಪಾದನೆಯಲ್ಲಿ ತೊಡಗಿವೆ ಎಂದು ತಿರುಗೇಟು ನೀಡಿದ್ದಾರೆ. ಆದರೆ ಈ ಎಲ್ಲ ಆರೋಪ-ಪ್ರತ್ಯಾರೋಪಗಳ ನಡುವೆ ಸ್ವಾಯತ್ತ ಲೋಕಪಾಲ ಸಂಸ್ಥೆಯೊಂದರ ಕೊರತೆ ಎದ್ದು ಕಂಡಿದ್ದು ಸತ್ಯ. ತನ್ನನ್ನು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕ ಎಂದು ಬಣ್ಣಿಸಿಕೊಳ್ಳುವ ಕೇಂದ್ರ ಸರ್ಕಾರ, ಐದು ವರ್ಷಗಳ ಅವಧಿಯಲ್ಲಿ ಲೋಕಪಾಲರನ್ನು ನೇಮಿಸುವ ಇಚ್ಛಾಶಕ್ತಿ ತೋರದೇ ಹೋದದ್ದು ಬಹುದೊಡ್ಡ ವಿಡಂಬನೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !