ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಮೋದಿ–‍ಪುಟಿನ್ ಭೇಟಿ: ಗೆಳೆತನ ಗಾಢವಾಗಿಸುವ ಯತ್ನ

ನರೇಂದ್ರ ಮೋದಿ ಅವರ ಈ ಭೇಟಿಯು ವ್ಲಾದಿಮಿರ್ ಪುಟಿನ್ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ
Published 10 ಜುಲೈ 2024, 23:19 IST
Last Updated 10 ಜುಲೈ 2024, 23:19 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಯು ಭಾರತ–ರಷ್ಯಾ ನಡುವಿನ ಬಹುಕಾಲದ ಬಾಂಧವ್ಯವನ್ನು ಹೇಳುವ ಕೆಲಸ ಮಾಡಿದೆ. ಮೊದಲನೆಯದಾಗಿ ಈ ಭೇಟಿಯು ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಗೆ ಮತ್ತೆ ಚಾಲನೆ ನೀಡಿದೆ. ಈ ಶೃಂಗಸಭೆಯು ಎರಡೂ ದೇಶಗಳ ನಾಯಕರ ನಡುವೆ ಮಾತುಕತೆಗೆ ಒಂದು ವೇದಿಕೆ. ಮೋದಿ ಅವರು ರಷ್ಯಾಕ್ಕೆ ಈ ಹಿಂದೆ ಭೇಟಿ ನೀಡಿದ್ದು 2019ರಲ್ಲಿ. ವ್ಲಾಡಿವೊಸ್ಟೊಕ್‌ನಲ್ಲಿ ನಡೆದ ಭಾರತ–ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅವರು ಆಗ ತೆರಳಿದ್ದರು. ಅದಾದ ನಂತರ ಅವರು ರಷ್ಯಾಕ್ಕೆ ಭೇಟಿ ನೀಡಿದ್ದು ಈಗ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 2021ರಲ್ಲಿ ದೆಹಲಿಗೆ ಬಂದಿದ್ದರು. ಉಕ್ರೇನ್ ವಿರುದ್ಧ ರಷ್ಯಾ ಸಾರಿದ ಸಮರ, ಅಮೆರಿಕದ ಜೊತೆ ಭಾರತದ ಸಂಬಂಧವು ಹೆಚ್ಚು ಗಾಢವಾಗುತ್ತಿರುವುದು ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡದಂತೆ ಮಾಡಿದ್ದ ಕಾರಣಗಳ ಪೈಕಿ ಪ್ರಮುಖವಾದವು. 2022ರಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಪುಟಿನ್ ಸಮರ್ಕಂಡ್‌ನಲ್ಲಿ ಭೇಟಿಯಾಗಿದ್ದರು. ಆದರೆ ‘ಪರಸ್ಪರ ಸಂಪರ್ಕದಲ್ಲಿ ಇರುವ’ ಒಪ್ಪಂದವೊಂದನ್ನು ಹೊರತುಪಡಿಸಿದರೆ, ಆ ಭೇಟಿಯಿಂದ ಇನ್ನೇನೂ ಆಗಿರಲಿಲ್ಲ. ವಾಸ್ತವದಲ್ಲಿ ಎರಡೂ ದೇಶಗಳು ಸಂಪರ್ಕ ಕಡಿದುಕೊಂಡ ನಿದರ್ಶನವೇ ಇಲ್ಲ. ಪುಟಿನ್ ಮತ್ತು ಮೋದಿ ಅವರು ದೂರವಾಣಿ ಮೂಲಕ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಉಕ್ರೇನ್–ರಷ್ಯಾ ಯುದ್ಧ ಆರಂಭವಾದ ನಂತರದಲ್ಲಿ, ರಷ್ಯಾದಿಂದ ಈ ಹಿಂದೆ ಖರೀದಿಸುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಭಾರತವು ಖರೀದಿಸಿದೆ. ಇದಕ್ಕಾಗಿ ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳ ದಿಗ್ಬಂಧನ
ವನ್ನೂ ಲೆಕ್ಕಿಸಲಿಲ್ಲ. ಇವೆಲ್ಲ ಇದ್ದರೂ ಅಮೆರಿಕದ ಜೊತೆಗಿನ ಭಾರತದ ಸಂಬಂಧವು ಹೆಚ್ಚು ಗಾಢವಾದ ಕಾರಣದಿಂದ, ಭಾರತ–ರಷ್ಯಾ ನಡುವಿನ ಸಂಬಂಧದಲ್ಲಿ ಅಂತರವೊಂದು ಸೃಷ್ಟಿಯಾದಂತೆ ಕಂಡಿತ್ತು.

ಆದರೆ, ಈ ಭಾವನೆಯನ್ನು ಹೋಗಲಾಡಿಸುವ ಉದ್ದೇಶದಿಂದ ಈಗ ಎರಡೂ ದೇಶಗಳು, 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ವಹಿವಾಟು 100 ಬಿಲಿಯನ್ ಡಾಲರ್‌ಗೆ (ಅಂದಾಜು ₹8.34 ಲಕ್ಷ ಕೋಟಿ) ತಲುಪಬೇಕು ಎಂಬ ಗುರಿ ಹಾಕಿಕೊಂಡಿವೆ. ಆದರೆ, ದ್ವಿಪಕ್ಷೀಯ ವ್ಯಾಪಾರ ವಹಿವಾಟು 2025ರ ವೇಳೆಗೆ 30 ಬಿಲಿಯನ್ ಡಾಲರ್‌ಗೆ (₹2.50 ಲಕ್ಷ ಕೋಟಿ) ತಲುಪಬೇಕು ಎಂದು ಎರಡೂ ದೇಶಗಳು ಹಿಂದೆ ವ್ಲಾಡಿವೊಸ್ಟೊಕ್‌ನಲ್ಲಿ ಒಪ್ಪಂದಕ್ಕೆ ಬಂದಿದ್ದವು. ಈ ಗುರಿಯನ್ನು ಈಗಾಗಲೇ ದಾಟಿ ಆಗಿದೆ. ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆಯಾದ ಕಾರಣ, ವ್ಯಾಪಾರ ವಹಿವಾಟಿನ ಮೊತ್ತವು ಈ ವರ್ಷ 60 ಬಿಲಿಯನ್ ಡಾಲರ್ (₹5.01 ಲಕ್ಷ ಕೋಟಿ) ದಾಟಿದೆ. ಹೀಗಾಗಿ ಈಗ ನಿಗದಿ ಮಾಡಿಕೊಂಡಿರುವ ಗುರಿಯು ಬಹಳ ಸಲೀಸಾಗಿ ಸಾಧಿಸಬಹುದಾದದ್ದು ಎಂದು ಅನ್ನಿಸುತ್ತದೆ. ಒಂಬತ್ತು ಒಪ್ಪಂದಗಳಿಗೆ ಸಹಿ ಮಾಡಲಾಗಿದ್ದರೂ ಎರಡೂ ದೇಶಗಳ ನಡುವಿನ ರಕ್ಷಣಾ ಪಾಲುದಾರಿಕೆ ಹಾಗೂ ಆರ್ಥಿಕ ಪಾಲುದಾರಿಕೆಯಲ್ಲಿ ಹೊಸ ಚೈತನ್ಯ ಕಾಣಿಸದೇ ಇರುವುದು ಗಮನಾರ್ಹ. ಭಾರತವು ರಕ್ಷಣಾ ಉಪಕರಣಗಳ ಖರೀದಿಯ ವಿಚಾರದಲ್ಲಿ ರಷ್ಯಾ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತಿರುವುದು ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಒಂದು ಸಮಸ್ಯೆಯಾಗಿ ಉಳಿದಿದೆ.

ವಿಶ್ವದಲ್ಲಿ ಏಕಾಂಗಿಯಾಗಿದ್ದಾರೆಂದು ಬಿಂಬಿತವಾಗಿರುವ ಪುಟಿನ್ ಅವರ ಪಾಲಿಗೆ, ಮೋದಿ ಅವರ ಈ ಭೇಟಿಯು ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದೆ ಎಂಬುದು ನಿಜ. ಆದರೆ, ಪುಟಿನ್ ಅವರು ಚೀನಾ ಕಡೆ ಹೆಚ್ಚು ಒಲವು ತೋರುತ್ತಿರುವುದನ್ನು ‘ಸಮತೋಲನ’ಕ್ಕೆ ತರಲು ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು ಎಂದಾದರೆ, ಆ ಉದ್ದೇಶವು ವಾಸ್ತವಕ್ಕೆ ಹತ್ತಿರವಾಗುವಂಥದ್ದಲ್ಲ. ಏಕೆಂದರೆ, ಚೀನಾ ಕಡೆಗಿನ ಒಲವನ್ನು ತಗ್ಗಿಸುವ ಅಸ್ತ್ರವು ಭಾರತದ ಕೈಯಲ್ಲಿ ಇಲ್ಲ. ಇಂದಿನ ವಿಶ್ವ ರಾಜಕಾರಣದಲ್ಲಿ ರಷ್ಯಾ ದೇಶವು
ಚೀನಾಕ್ಕೆ ಹತ್ತಿರವಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಅದಕ್ಕೆ ಒಂದು ಮುಖ್ಯ ಕಾರಣ, ಪುಟಿನ್ ಅವರು ಪಾಶ್ಚಿಮಾತ್ಯ ದೇಶಗಳ ಜೊತೆ ಹೊಂದಿರುವ ಸಂಬಂಧ. ಮೋದಿ–ಪುಟಿನ್ ಭೇಟಿಗೆ ಅಮೆರಿಕ ಮತ್ತು ಉಕ್ರೇನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವುದು ನಿರೀಕ್ಷಿತ. ಭಾರತದ ಪಾಲಿಗೆ ರಷ್ಯಾ ದೇಶವು ಸುಖದಲ್ಲಿಯೂ ದುಃಖದಲ್ಲಿಯೂ ಜೊತೆಗಿರುವ ಗೆಳೆಯ ಎಂದು ಮೋದಿ ಬಣ್ಣಿಸಿದ್ದಾರೆ. ಹಾಗೆಯೇ, ಉಕ್ರೇನ್‌ನ ಕೀವ್‌ನಲ್ಲಿ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯನ್ನು ಮೋದಿ ಅವರು ಖಂಡಿಸಿರುವುದು ವಿಶ್ವದ ಇತರ ರಾಷ್ಟ್ರಗಳ ಮೇಲೆ ಪ್ರಭಾವ ಬೀರಿಲ್ಲ. ಬೇರೆ ದೇಶಗಳಿಂದ ಪ್ರಭಾವಿತವಾಗದೆಯೇ ಸ್ವಾಯತ್ತವಾಗಿ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂಬ ನಿಲುವಿಗೆ ಮಿತಿಗಳು ಇವೆ ಎಂಬುದು ಭಾರತಕ್ಕೆ ಗೋಚರಿಸುತ್ತಿದೆ. ಹಗ್ಗದ ಮೇಲಿನ ನಡಿಗೆಯು ಮುಂದಿನ ದಿನಗಳಲ್ಲಿ ಇನ್ನಷ್ಟು
ಸವಾಲಿನದ್ದಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT