ಶುಕ್ರವಾರ, ಜೂನ್ 5, 2020
27 °C

ಮುಂಗಾರು ಮುನ್ಸೂಚನೆ ಆಶಾದಾಯಕ: ಬೀಜ, ಗೊಬ್ಬರ ಪೂರೈಕೆಗೆ ಬೇಕು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಈ ಬಾರಿ ಮುಂಗಾರು ಆಶಾದಾಯಕವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು, ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೇಶಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ. ರಾಜ್ಯದ ಬಯಲುಸೀಮೆಯ ಕೆಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುವ ಸಂಭವವಿದೆ ಎಂದು ತಜ್ಞರು ಹೇಳಿರುವುದು ಸ್ವಲ್ಪ ನೆಮ್ಮದಿ ನೀಡುವಂತಹ ಸಂಗತಿ. ಜೂನ್‌ ಮೊದಲ ವಾರದಲ್ಲೇ ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ರಾಜ್ಯಕ್ಕೆ ಮೂರ್ನಾಲ್ಕು ದಿನ ತಡವಾಗಿ ಬರಬಹುದೆಂದೂ ಅಂದಾಜಿಸಲಾಗಿದೆ.

ಈಗಾಗಲೇ ರಾಜ್ಯದ ಕೆಲವೆಡೆ ಪೂರ್ವ ಮುಂಗಾರು ಉತ್ತಮವಾಗಿದೆ. ವಿಜಯಪುರ, ಬಾಗಲಕೋಟೆ, ಬೀದರ್‌, ಚಿತ್ರದುರ್ಗ ಭಾಗದಲ್ಲಿ ಮಳೆಯಾಗಿದೆ. ಕೆಲವು ಕಡೆ ಎಳ್ಳು, ಹೆಸರು, ಉದ್ದು ಮತ್ತಿತರ ಧಾನ್ಯಗಳ ಬಿತ್ತನೆ ಕಾರ್ಯವೂ ಆರಂಭವಾಗಿದೆ. ಈ ಮುಂಗಾರು ಮಳೆಯ ಮೇಲೆ ರೈತರ ಜೀವನವಷ್ಟೇ ಅಲ್ಲ, ದೇಶದ ಆರ್ಥಿಕತೆಯೂ ಅವಲಂಬಿತವಾಗಿದೆ. ಹೀಗಾಗಿ, ವಾಡಿಕೆಯ ಮುಂಗಾರಿನ ಮುನ್ಸೂಚನೆ ಸಮಾಧಾನ ತರುವಂಥದ್ದು. ಆದರೆ, ಹವಾಮಾನ ಇಲಾಖೆ ನೀಡುವ ಮುನ್ಸೂಚನೆ ಎಲ್ಲ ಬಾರಿಯೂ ನಿಖರವಾಗಿಯೇ ಇರುತ್ತದೆ ಎಂದು ಹೇಳಲಾಗದು. ಕಳೆದ ವರ್ಷ ಮುಂಗಾರು ಮಳೆಯು ವಾಡಿಕೆಯ ಪ್ರಮಾಣದಲ್ಲಿರುವ ಸಾಧ್ಯತೆ ಇದೆ ಎಂದು ಅದು ಅಂದಾಜಿಸಿತ್ತು. ಆದರೆ, ಕಳೆದ 25 ವರ್ಷಗಳಲ್ಲೇ ಆಗದಿದ್ದಷ್ಟು ಹೆಚ್ಚು ಮಳೆಯಾಗಿತ್ತು. ಹಾಗಾಗಿ, ಇಲಾಖೆಯ ಮುನ್ಸೂಚನೆಯನ್ನು ಒಂದು ಸೂಚಕವಾಗಷ್ಟೇ ಪರಿಗಣಿಸುವುದು ಒಳ್ಳೆಯದು. ಈಗ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಎಲ್ಲ ಕ್ಷೇತ್ರಗಳೂ ಬಿಕ್ಕಟ್ಟು ಎದುರಿಸುತ್ತಿವೆ. ಅದು, ಈಗಲೇ ಬಗೆಹರಿಯುವ ಸೂಚನೆಗಳು ಇಲ್ಲ. ಸಂಭಾವ್ಯ ಸಂಕಷ್ಟದಿಂದ ಕೃಷಿ ಕ್ಷೇತ್ರವನ್ನು ಪಾರು ಮಾಡಲು ಅಗತ್ಯ ಸಿದ್ಧತೆಗಳನ್ನು ಸರ್ಕಾರ ಈಗಿನಿಂದಲೇ ಮಾಡಿಕೊಳ್ಳಬೇಕಿದೆ.

ಸಾಮಾನ್ಯವಾಗಿ ಸರ್ಕಾರ ಪ್ರತಿವರ್ಷ ಬೇಸಿಗೆಯಲ್ಲೇ, ಹವಾಮಾನ ಇಲಾಖೆಯ ಮೊದಲ ವರದಿ ಆಧರಿಸಿ ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ. ಆದರೆ, ಕೊರೊನಾ ಸೋಂಕು ಬಾಧಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಸೋಂಕು ನಿಯಂತ್ರಣದ ಚಟುವಟಿಕೆಗಳಲ್ಲಿ ನಿರತವಾಗಿವೆ. ಇತ್ತ ಕೃಷಿ ವಲಯದಲ್ಲೂ ಕೊಯ್ಲು ಮತ್ತು ಕೊಯ್ಲೋತ್ತರ ಚಟುವಟಿಕೆಗಳು ಅಸ್ತವ್ಯಸ್ತವಾಗಿವೆ. ಕೊಯ್ಲಾದ ಬೆಳೆಗಳನ್ನು ಮಾರಾಟ ಮಾಡಲಾಗದೇ ರೈತರು ಕಂಗಾಲಾಗಿದ್ದಾರೆ. ಪೂರ್ವ ಮುಂಗಾರು ಶುರುವಾದರೂ ಇನ್ನೂ ಕೊಯ್ಲಾದ ತೋಟಗಾರಿಕಾ ಬೆಳೆಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲೇ ರೈತರು ತೊಡಗಿದ್ದಾರೆ. ದಿಗ್ಬಂಧನದಿಂದಾಗಿ ಕೃಷಿ ಮತ್ತು ಕೃಷಿಪೂರಕ ಕೆಲಸಗಳೂ ಇಲ್ಲಿಯವರೆಗೆ ಸ್ತಬ್ಧವಾಗಿದ್ದವು. ಬಿತ್ತನೆ ಬೀಜ, ರಸಗೊಬ್ಬರದ ಅಂಗಡಿಗಳು ಬಂದ್‌ ಆಗಿದ್ದವು. ಅಂತರರಾಜ್ಯ ಸರಕು ಸಾಗಣೆ ಸ್ಥಗಿತಗೊಂಡ ಕಾರಣ, ಕೃಷಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ ಸಾಗಿಸುವ ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು.

ಈಗ ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ, ಸಾರಿಗೆ ಮತ್ತು ಕಾರ್ಮಿಕರ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳಿವೆ. ಕೆಲವು ರೈತರು ಹಿಂಗಾರಿನಲ್ಲಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಮುಂಗಾರು ಚಟುವಟಿಕೆಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ. ಮುಂಗಾರು ಚಟುವಟಿಕೆಗೆ ಬೇಕಾದ ಬಿತ್ತನೆ ಸಾಮಗ್ರಿಗಳ ದಾಸ್ತಾನಿದೆ ಎಂದು ಸರ್ಕಾರ ಹೇಳುತ್ತಿದೆ. ಮಳೆಗಾಲ ಶುರುವಾಗುವ ಹೊತ್ತಿಗೆ ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜಗಳು ಸಕಾಲದಲ್ಲಿ ರೈತರಿಗೆ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕಿದೆ. ಲಾಕ್‌ಡೌನ್‌ ಕಾರಣದಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿ, ಹತಾಶರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರೈತರಿಗೆ ಬಿತ್ತನೆಬೀಜ, ಗೊಬ್ಬರ ಕೊಳ್ಳುವ ಶಕ್ತಿ ಇರುವುದಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರವು ಸಾಲ ಅಥವಾ ಸಬ್ಸಿಡಿ ರೂಪದಲ್ಲಿ ಬಿತ್ತನೆಬೀಜ, ಗೊಬ್ಬರ ಪೂರೈಸುವ ಸಾಧ್ಯತೆ ಬಗ್ಗೆ ಚಿಂತಿಸಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು