ಬುಧವಾರ, ಮಾರ್ಚ್ 29, 2023
23 °C

ಸಂಪಾದಕೀಯ | ಮೌಲ್ಯ ಶಿಕ್ಷಣ: ಮಠಾಧೀಶರ ಸಲಹೆ ಅವೈಜ್ಞಾನಿಕ, ಅತಾರ್ಕಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾತ್ವಿಕ ಆಹಾರ ನೀಡುವುದು ಹಾಗೂ ಧಾರ್ಮಿಕ ಪಠ್ಯಗಳ ಅಳವಡಿಕೆಯ ಮೂಲಕ ಮೌಲ್ಯಯುತ ಶಿಕ್ಷಣ ಪದ್ಧತಿ ಅನುಷ್ಠಾನ ಮಾಡಬಹುದೆಂದು ರಾಜ್ಯ ಸರ್ಕಾರಕ್ಕೆ ಕೆಲವು ಮಠಾಧೀಶರು ನೀಡಿರುವ ಸಲಹೆ ಅವಾಸ್ತವಿಕ ಹಾಗೂ ಅವೈಜ್ಞಾನಿಕ. ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ದುಂಡುಮೇಜಿನ ಸಮಾಲೋಚನೆ ಸಭೆಯಲ್ಲಿ ವಿವಿಧ ಮಠಾಧೀಶರು ನೀಡಿರುವ ಸಲಹೆಗಳಲ್ಲಿ ಮಕ್ಕಳ ಹಿತಕ್ಕಿಂತಲೂ ಪರೋಕ್ಷ ಉದ್ದೇಶಗಳೇ ಮುಖ್ಯವಾಗಿರುವಂತಿವೆ. ಆಹಾರಕ್ಕೂ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟಿರುವ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಭಗವದ್ಗೀತೆಯ ಮುಕ್ತ ಬೋಧನೆ ಹಾಗೂ ಸಾತ್ವಿಕ ಆಹಾರ ನೀಡುವ ಮೂಲಕ ಮಕ್ಕಳಲ್ಲಿ ಮೌಲ್ಯವರ್ಧನೆ ಮಾಡಬಹುದು ಎಂದು ಹೇಳಿದ್ದಾರೆ.

ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅಂಗಡಿಗಳ ಮುಂದೆ ಮಾಂಸ ನೇತು ಹಾಕುವುದನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಸವರಾಜ ರಾಜಋಷಿ, ಪುನರ್ಜನ್ಮದ ಬಗ್ಗೆ ತಿಳಿವಳಿಕೆ ನೀಡುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ವೈಜ್ಞಾನಿಕ ಆಧಾರ ಹಾಗೂ ವೈಚಾರಿಕ ಸಮರ್ಥನೆಗಳಿಲ್ಲದ ಇಂಥ ಸಲಹೆಗಳಿಂದ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯವರ್ಧನೆ ಆಗುವುದಕ್ಕಿಂತಲೂ, ಇರುವ ಮೌಲ್ಯ ಮುಕ್ಕಾಗುವ ಸಾಧ್ಯತೆಯೇ ಹೆಚ್ಚು.

ಆಹಾರದ ವಿಷಯದಲ್ಲಿ ಸಮುದಾಯಗಳ ನಡುವೆ ಒಡಕನ್ನುಂಟು ಮಾಡುವ ಪ್ರಯತ್ನಗಳು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ. ಅಂಥ ಪ್ರಯತ್ನಗಳ ಮುಂದುವರಿದ ಭಾಗವಾಗಿ, ‘ಸಾತ್ವಿಕ ಆಹಾರ’ದ ಬಗೆಗಿನ ಸ್ವಾಮೀಜಿಗಳ ಮಾತುಗಳನ್ನು ಗಮನಿಸಬಹುದು. ಆರೋಗ್ಯದ ಮೇಲೆ ಆಹಾರ ಪರಿಣಾಮ ಬೀರುತ್ತದೆಯೇ ಹೊರತು, ವ್ಯಕ್ತಿತ್ವದ ಮೇಲಲ್ಲ. ಒಂದು ಆಹಾರವನ್ನು ಸಾತ್ವಿಕ ಎನ್ನುವುದು, ಮತ್ತೊಂದನ್ನು ತಾಮಸ ಎಂದು ಗುರುತಿಸುವುದು ‘ಆಹಾರದ ಶ್ರೇಷ್ಠತೆಯ ವ್ಯಸನ’. ಇಂಥ ವ್ಯಸನ ಸಮಾಜದಲ್ಲಿ ಒಡಕಿಗೆ ಕಾರಣವಾಗುತ್ತದೆ. ಮೇಲು–ಕೀಳುಗಳ ಭೇದಕ್ಕೆ ಅವಕಾಶ ಕಲ್ಪಿಸುತ್ತದೆ. ಮಾಂಸವನ್ನು ನೇತು ಹಾಕುವುದು ಕೆಲವರಿಗೆ ಕಿರಿಕಿರಿ ಹುಟ್ಟಿಸಬಹುದು.

ಮತ್ತೆ ಕೆಲವರಿಗೆ ಸಸ್ಯಾಹಾರದ ಉತ್ಪನ್ನಗಳ ‍ಪ್ರದರ್ಶನವೂ ರೇಜಿಗೆ ಹುಟ್ಟಿಸಬಹುದು. ನಮಗೆ ಒಗ್ಗದ ಆಹಾರ ಇರಬಹುದೇ ಹೊರತು, ಕೀಳು ಆಹಾರ ಎನ್ನುವುದಿರುವುದಿಲ್ಲ. ಮಾಂಸಾಹಾರ ಜಗತ್ತಿನ ಬಹುತೇಕರ ಸಹಜ ಆಹಾರ ಎನ್ನುವ ಸತ್ಯವನ್ನು ಒಪ್ಪಿಕೊಂಡರೆ, ಯಾವ ಇರುಸುಮುರುಸಿಗೂ ಅವಕಾಶ ಇರುವುದಿಲ್ಲ. ಸಾತ್ವಿಕ ಆಹಾರದಿಂದ ಮೌಲ್ಯವ್ಯವಸ್ಥೆ ಅಥವಾ ನೈತಿಕತೆ ಸಾಧ್ಯವಾಗುತ್ತದೆ ಎನ್ನುವ ಸ್ವಾಮೀಜಿಗಳ ಅಭಿಪ್ರಾಯವು ಹುಸಿ ಭಾವುಕತೆಯನ್ನು ಆಧರಿಸಿರುವಂತಹದ್ದೇ ವಿನಾ ವಸ್ತುನಿಷ್ಠವಲ್ಲ, ವೈಜ್ಞಾನಿಕವೂ ಅಲ್ಲ. ಆಹಾರಕ್ಕೂ ಒಳ್ಳೆಯ ನಡವಳಿಕೆಗೂ ಸಂಬಂಧವಿದ್ದಲ್ಲಿ ಎಲ್ಲ ಮಠಾಧೀಶರು ಸಾತ್ವಿಕತೆಯ ಸಾಕಾರಮೂರ್ತಿಗಳಾಗಿ ಇರಬೇಕಾಗಿತ್ತು. ತೀವ್ರ ಸ್ವರೂಪದ ಅಪರಾಧಗಳನ್ನು ಎಸಗಿರುವ ಆರೋಪ–ಖಟ್ಲೆಗಳನ್ನು ಎದುರಿಸುತ್ತಿರುವ ಸ್ವಾಮೀಜಿಗಳ ಉದಾಹರಣೆಗಳು ಇರುವಾಗ, ಆಹಾರದಿಂದ ಸ್ವಭಾವ ನಿರ್ಧಾರವಾಗುತ್ತದೆನ್ನುವ ಮಾತನ್ನು ವೈನೋದಿಕ ನೆಲೆಗಟ್ಟಿನಲ್ಲಷ್ಟೇ ಪರಿಗಣಿಸಬಹುದು.

ನೀತಿ ಶಿಕ್ಷಣದ ಬಗೆಗಿನ ಮಾತು ಬಂದಾಗಲೆಲ್ಲ ಭಗವದ್ಗೀತೆ, ಕುರಾನ್‌, ಬೈಬಲ್‌ ಅನ್ನು ಮುನ್ನೆಲೆಗೆ ತರುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಮೌಲ್ಯವ್ಯವಸ್ಥೆಗೆ ಧರ್ಮಗ್ರಂಥಗಳೇ ಆಧಾರ ಎನ್ನುವ ಮನೋಭಾವ ಒಪ್ಪತಕ್ಕದ್ದಲ್ಲ. ಅಂಥ ನಂಬಿಕೆ ಶಿಕ್ಷಣದ ಮೂಲಭೂತ ಉದ್ದೇಶವನ್ನೇ ಅಪಮೌಲ್ಯಗೊಳಿಸುವಂತಹದ್ದು. ಶಿಕ್ಷಣದ ಚೈತನ್ಯ ಆಧರಿಸಿರುವುದು ಮಾನವೀಯತೆಯನ್ನು;
ಧಾರ್ಮಿಕ ನಂಬಿಕೆಗಳನ್ನಲ್ಲ. ಮತಧರ್ಮಗಳ ನಂಬಿಕೆಗಳನ್ನು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಸಾರ್ವತ್ರೀಕರಿಸಲು ಪ್ರಯತ್ನಿಸುವುದು ಅನಗತ್ಯ ಗೊಂದಲಗಳಿಗೆ ಆಸ್ಪದ ಕಲ್ಪಿಸುತ್ತದೆ. ಮಕ್ಕಳ ಜೊತೆಗೆ ಶಿಕ್ಷಕರಿಗೆ ಹಾಗೂ ರಾಜಕಾರಣಿಗಳಿಗೂ ಮೌಲ್ಯಶಿಕ್ಷಣ ಅಗತ್ಯವೆಂದು ಕೆಲವು ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದು ಒಪ್ಪಬಹುದಾದ ಮಾತು. ಆದರೆ, ರಾಜಕಾರಣಿಗಳಿಗೆ ನೀತಿಬೋಧನೆ ಮಾಡುವವರು ಯಾರು? ಬೋಧಿಸುವ ಸ್ಥಾನದಲ್ಲಿರುವ ಕೆಲವು ಧಾರ್ಮಿಕ ಮುಖಂಡರು ಅಧಿಕಾರ ರಾಜಕಾರಣದ ಭಾಗವಾಗಿ ಗುರುತಿಸಿಕೊಳ್ಳಲು ಉತ್ಸಾಹ ವ್ಯಕ್ತಪಡಿಸುತ್ತಿರುವಾಗ, ಯಾರು ಯಾರಿಗೆ ಬೋಧಿಸಬೇಕು? ಅಧಿಕಾರಕ್ಕಾಗಿ ತಮ್ಮನ್ನು ತಾವು ಮಾರಾಟದ ಸರಕನ್ನಾಗಿಸಿಕೊಂಡ ರಾಜಕಾರಣಿಗಳೊಂದಿಗೆ ಗುರುತಿಸಿಕೊಳ್ಳಲು ಯಾವುದೇ ಸ್ವಾಮೀಜಿಗೆ ಈವರೆಗೆ ನೈತಿಕ ಸಮಸ್ಯೆ ಎದುರಾಗಿಲ್ಲ. ಕೆಲವು ಸ್ವಾಮೀಜಿಗಳು ಗುರುತರ ಆರೋಪಗಳನ್ನು ಹೊತ್ತಿದ್ದಾರೆ. ಧಾರ್ಮಿಕ ಕ್ಷೇತ್ರ ನೈತಿಕ ಬಿಕ್ಕಟ್ಟು ಎದುರಿಸುತ್ತಿದೆ. ಇದರ ಬಗ್ಗೆ ಸ್ವಾಮೀಜಿಗಳು ಬಹಿರಂಗವಾಗಿ ಕಳವಳ
ವ್ಯಕ್ತಪಡಿಸಿರುವ ನಿದರ್ಶನಗಳು ಕಡಿಮೆ. ಧಾರ್ಮಿಕ ಕ್ಷೇತ್ರದಲ್ಲೇ ವೈರುಧ್ಯಗಳು ತುಂಬಿಕೊಂಡಿರುವಾಗ, ಮಕ್ಕಳ ನೈತಿಕ ಶಿಕ್ಷಣದ ಬಗ್ಗೆ ಸಲಹೆಗಳನ್ನು ನೀಡುವುದು ವಿರೋಧಾಭಾಸವೇ ಸರಿ.

ಮಕ್ಕಳು ಮೌಲ್ಯಗಳನ್ನು ಕಲಿಯಬೇಕೆನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಮಕ್ಕಳಿಗೆ ನೈತಿಕತೆಯನ್ನು ಬೋಧಿಸುವ ಸ್ವಾತಂತ್ರ್ಯ ಮಠಾಧೀಶರಿಗಿಲ್ಲ ಎಂದೂ ಹೇಳಲಾಗದು. ಆದರೆ, ನೈತಿಕತೆಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಮಾತನಾಡುವುದು ಸಲ್ಲದು. ಹಾಗೆಯೇ, ನೈತಿಕತೆಯನ್ನು ಕಲಿಸುವ ಹೊಣೆಗಾರಿಕೆಯನ್ನು ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ನಿರ್ವಹಿಸಬೇಕೇ ಹೊರತು, ಅನ್ಯಕ್ಷೇತ್ರದವರಲ್ಲ. ಈ ಸೂಕ್ಷ್ಮವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು, ಮಠಾಧೀಶರೂ ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ ತಜ್ಞರು ಮಠಗಳಲ್ಲಿನ ಕಾರ್ಯನಿರ್ವಹಣೆಯ ಬಗ್ಗೆ ಮೂಗು ತೂರಿಸುವುದು ಎಷ್ಟು ಸರಿಯಲ್ಲವೋ, ಧಾರ್ಮಿಕ ಮುಖಂಡರು ತಮ್ಮದಲ್ಲದ ಕ್ಷೇತ್ರಗಳ ಬಗ್ಗೆ ತಜ್ಞರಂತೆ ಮಾತನಾಡುವುದು ಸರಿಯಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು