ಮಂಗಳವಾರ, ನವೆಂಬರ್ 24, 2020
22 °C

ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಧಿಕಾರಸ್ಥರ ಸ್ವಜನಪಕ್ಷಪಾತ: ತನಿಖೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರು ಜೆಡಿಎಸ್‌ನಲ್ಲಿದ್ದಾಗ ಅವರ ಕುಟುಂಬದ 10ರಿಂದ 12 ಜನರಿಗೆ ತಾವು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಕ್ಲಾಸ್ ಒನ್ ಹುದ್ದೆಗಳನ್ನು ಕೊಡಿಸಿದ್ದಾಗಿ ಜೆಡಿಎಸ್‌ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಎಂದು ವರದಿಯಾಗಿದೆ. ‘ನನ್ನ ಅಧಿಕಾರ ಅವಧಿಯಲ್ಲಿ ಶಿಕ್ಷಕರು- ಉಪನ್ಯಾಸಕರ ನೇಮಕಾತಿ ನಡೆದಿತ್ತು. ಆಗ ಕೃಷ್ಣ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಪುಟ್ಟಣ್ಣ ಅವರು ನನ್ನ ಮೂಲಕ ನೂರಾರು ಮಂದಿಗೆ ಉದ್ಯೋಗ ಕೊಡಿಸಿದ್ದಾರೆ’ ಎಂದೂ ಅವರು ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಹೇಳಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಹೇಳಿರುವ ಈ ಮಾತುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅವರು ಹೇಳಿರುವುದು ನಿಜವೇ ಆಗಿದ್ದರೆ, ಅದು ಕಾನೂನುಬಾಹಿರ ಕೃತ್ಯ. ಕೆಪಿಎಸ್‌ಸಿಯಲ್ಲಿ ವಶೀಲಿ ಕೆಲಸಗಳು ನಡೆಯುತ್ತವೆ ಎನ್ನುವುದಕ್ಕೆ ಈ ಮಾತು ಮತ್ತಷ್ಟು ಪುಷ್ಟಿ ಕೊಡುತ್ತದೆ. ಅಧಿಕಾರಸ್ಥರ ತಾಳಕ್ಕೆ ತಕ್ಕಂತೆ ಕೆಪಿಎಸ್‌ಸಿ ಕುಣಿಯುತ್ತದೆ ಎನ್ನುವುದೂ ಇದರಿಂದ ಸ್ಪಷ್ಟವಾಗುತ್ತದೆ. ಆಯೋಗದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಎಲ್ಲೆ ಮೀರಿದೆ ಎನ್ನುವ ಆರೋಪ ಅತ್ಯಂತ ಹಳೆಯದು. ಆದರೆ, ಮುಖ್ಯಮಂತ್ರಿಯಾಗಿದ್ದವರೊಬ್ಬರು ಇದನ್ನು ಸಾರ್ವಜನಿಕ ಸಭೆಯಲ್ಲಿ ಹೇಳಿಕೊಂಡಿರುವುದು ಇದೇ ಮೊದಲಿರಬೇಕು. ಮುಖ್ಯಮಂತ್ರಿ ಸ್ಥಾನದ ಅಧಿಕಾರ ದುರುಪಯೋಗ ಆಗಿದೆ ಎನ್ನುವುದನ್ನು ಅವರ ಮಾತುಗಳೇ ದೃಢಪಡಿಸುತ್ತವೆ. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅಧಿಕಾರಸ್ಥರು ಹಸ್ತಕ್ಷೇಪ ನಡೆಸಲು ಆಯೋಗವು ಅವಕಾಶ ಮಾಡಿಕೊಟ್ಟಿರುವುದು ಕೂಡ ಅಕ್ಷಮ್ಯ. ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ, ಕುಮಾರಸ್ವಾಮಿ ಹೇಳಿಕೆಯ ಹಿನ್ನೆಲೆಯಲ್ಲಿ ನಿಯಮಬಾಹಿರ ನೇಮಕಾತಿಗಳ ಬಗ್ಗೆ ಸಾಧ್ಯವಿರುವ ಕಾನೂನು ಕ್ರಮ ಜರುಗಿಸುವಂತೆ ರಾಜ್ಯಪಾಲರು ಸೂಚಿಸಬೇಕಾಗಿದೆ. ಪುಟ್ಟಣ್ಣ ಕುಟುಂಬದ 10–12 ಮಂದಿಗೆ ಕ್ಲಾಸ್ ಒನ್ ಹುದ್ದೆಗಳನ್ನು ಕುಮಾರಸ್ವಾಮಿ ತಮ್ಮ ಪ್ರಭಾವ ಬಳಸಿ ಕೊಡಿಸಿದ್ದರೆ, ಅಷ್ಟೂ ಜನ ಆ ಹುದ್ದೆಗಳಿಗೆ ಅರ್ಹರಾಗಿದ್ದರೇ ಅಥವಾ ಅರ್ಹತೆ ಇಲ್ಲದವರಾಗಿದ್ದರೇ, ಪ್ರಭಾವವನ್ನು ಯಾವ ಬಗೆಯಲ್ಲಿ ಬಳಸಲಾಯಿತು, ಯಾರ ಮೂಲಕ ಪ್ರಭಾವ ಬಳಸಲಾಯಿತು, ಇದಕ್ಕೆ ಆಯೋಗದ ಯಾವುದೇ ಸದಸ್ಯರಿಂದ ಇಲ್ಲವೇ ಸಂಬಂಧಿಸಿದ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಲಿಲ್ಲವೇ, ವಿರೋಧ ವ್ಯಕ್ತವಾಗಿದ್ದರೆ ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಯಿತು... ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕು ಎಂದು ಜನ ಬಯಸಿದರೆ ತಪ್ಪಲ್ಲ. ಆ 10–12 ಜನ ಅರ್ಹತೆ ಇಲ್ಲದವರಾಗಿದ್ದರೆ, ಅವರಿಂದಾಗಿ ಅಷ್ಟು ಮಂದಿ ಅರ್ಹರು ಉದ್ಯೋಗವಂಚಿತರಾಗುವಂತೆ ಆಯಿತೇ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಾಗುತ್ತದೆ. ಅಲ್ಲದೆ, ವಿಧಾನ ಪರಿಷತ್‌ ಸದಸ್ಯರೊಬ್ಬರು ನೂರಾರು ಮಂದಿಗೆ ಉದ್ಯೋಗ ಕೊಡಿಸಬಲ್ಲರು ಎನ್ನುವುದೇ ಗಾಬರಿ ಮೂಡಿಸುವ ವಿಷಯ. ಶಾಸಕರೊಬ್ಬರಿಗೆ ಇಷ್ಟೊಂದು ಮಂದಿಗೆ ಉದ್ಯೋಗ ಕೊಡಿಸಲು ಸಾಧ್ಯವಾಗುವುದಾದರೆ ಉಳಿದೆಲ್ಲ ಶಾಸಕರು ಇನ್ನೆಷ್ಟು ಮಂದಿಗೆ ಉದ್ಯೋಗ ಕೊಡಿಸಿರಬಹುದು?!

ಶಾಸಕರು, ಸಚಿವರು, ಮುಖ್ಯಮಂತ್ರಿಗಳು ತಮಗೆ ಬೇಕಾದವರಿಗೆ ಉದ್ಯೋಗ ಕೊಡಿಸುವುದಾದರೆ ಆಯೋಗ ಏಕೆ ಬೇಕು? ಅದರ ಬಾಗಿಲು ಮುಚ್ಚಿಸಿ, ಜನಪ್ರತಿನಿಧಿಗಳಿಗೆ ಬೇಕಾದವರಿಗೇ ಉದ್ಯೋಗ ಕೊಡಬಹುದಲ್ಲವೇ? ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳಿಗೆ ತಯಾರಾಗಿ, ಉದ್ಯೋಗ ಪಡೆಯಲು ಹಂಬಲಿಸುವ ಲಕ್ಷಾಂತರ ಜನ ರಾಜ್ಯದಲ್ಲಿದ್ದಾರೆ. ರಾಜಕೀಯ ಪ್ರಭಾವದ ಮೂಲಕ ಹುದ್ದೆಗಳು ಬಿಕರಿಯಾಗಿವೆ ಎಂಬ ಸುದ್ದಿ ಗೊತ್ತಾಗಿ ಅವರ ಮನಸ್ಸಿಗೆ ಏನನ್ನಿಸಬೇಡ? ವ್ಯವಸ್ಥೆಯ ಬಗ್ಗೆ ಅಳಿದುಳಿದ ನಂಬಿಕೆಯನ್ನೂ ಅವರು ಕಳೆದುಕೊಳ್ಳುವುದಿಲ್ಲವೇ? ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬಿಜೆಪಿ, ಕಾಂಗ್ರೆಸ್ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗೆ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? 1998, 1999 ಮತ್ತು 2004ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿವೆ. ಕೆಪಿಎಸ್‌ಸಿಯ ಅಧ್ಯಕ್ಷರಾಗಿದ್ದವರೊಬ್ಬರು ಜೈಲಿಗೂ ಹೋಗಿದ್ದರು. ನೇಮಕಾತಿಗಳಲ್ಲಿ ಆದ ಲೋಪ ಸರಿಪಡಿಸುವಂತೆ ನ್ಯಾಯಾಲಯ ನೀಡಿದ ತೀರ್ಪು ಪೂರ್ಣವಾಗಿ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ನ್ಯಾಯಾಲಯದ ತೀರ್ಪು ಬಂದ ನಂತರವೂ ಕೆಪಿಎಸ್‌ಸಿ ಧೋರಣೆಯಲ್ಲಿ ಮಹತ್ವದ ಬದಲಾವಣೆಯೇನೂ ಆದಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದು ನಡೆಸಿದ ಯಾವುದೇ ನೇಮಕಾತಿಯೂ ಆರೋಪ ಮುಕ್ತವಾಗಿಲ್ಲ. ಪಾರದರ್ಶಕತೆ ಕೊರತೆಯ ಕುರಿತೂ ದೂರುಗಳಿವೆ. ಪಿ.ಸಿ.ಹೋಟಾ ಸಮಿತಿ ನೀಡಿದ ವರದಿಯನ್ನು ಸರ್ಕಾರ ಭಾಗಶಃ ಒಪ್ಪಿಕೊಂಡಿದ್ದರೂ ಅದರ ಅನುಷ್ಠಾನವು ಸಮರ್ಪಕವಾಗಿ ಆಗಿಲ್ಲ. ಇಂತಹ ಸ್ಥಿತಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ ರಾಜ್ಯದ ಯುವಜನರಲ್ಲಿ ವಿಶ್ವಾಸ ಮೂಡುವುದಾದರೂ ಹೇಗೆ? ಆಯೋಗದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಕ್ರಮ ಜರುಗಿಸಬೇಕಾದ ಸ್ಥಾನದಲ್ಲಿ ಇರುವವರೇ ಅದನ್ನು ದುರುಪಯೋಗಪಡಿಸಿಕೊಂಡರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು