ಮಂಗಳವಾರ, ಮಾರ್ಚ್ 28, 2023
32 °C

ಸಂಪಾದಕೀಯ | ಆಸ್ಕರ್‌ ಪ್ರಶಸ್ತಿಗಳ ಪುಳಕ, ಬದಲಾದ ದೃಷ್ಟಿಕೋನದ ಫಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಒಮ್ಮೆಗೇ ಎರಡು ಆಸ್ಕರ್‌ ಪ್ರಶಸ್ತಿ ದೊರೆತಿರುವುದು ಭಾರತೀಯ ಕಲಾವಲಯದಲ್ಲಿ ಪುಳಕ ಹಾಗೂ ಸಂತಸ ಮೂಡಿಸಿದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಎಂಬ ಕಿರು ಸಾಕ್ಷ್ಯಚಿತ್ರ ಹಾಗೂ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ತೆಲುಗಿನ ‘ಆರ್‌ಆರ್‌ಆರ್‌’ ಸಿನಿಮಾಕ್ಕಾಗಿ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿರುವ ‘ನಾಟು ನಾಟು’ ಗೀತೆ ಆಸ್ಕರ್‌ ಪ್ರಶಸ್ತಿಗೆ ಪಾತ್ರವಾಗಿವೆ. ಆಸ್ಕರ್‌ ಪ್ರಶಸ್ತಿಗಳಿಂದಷ್ಟೇ ಚಲನಚಿತ್ರವೊಂದರ ಗುಣಮಟ್ಟ ನಿರ್ಧಾರ ಆಗುವುದಿಲ್ಲ ಎನ್ನುವ ಸತ್ಯವನ್ನು ಮರೆಯದೆಯೇ, ಪ್ರಸ್ತುತ ದೊರೆತಿರುವ ಪ್ರಶಸ್ತಿಗಳು ಭಾರತೀಯ ದೃಶ್ಯಮಾಧ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿವೆ ಎನ್ನುವುದನ್ನೂ ಒಪ್ಪಿಕೊಳ್ಳಬೇಕು.

ಆಸ್ಕರ್‌ ಪ್ರಶಸ್ತಿಗಳಿಗೆ ವಿಶ್ವಮಾನ್ಯತೆ ಇರುವುದು ಹಾಗೂ ಆ ಪ್ರಶಸ್ತಿಗಳತ್ತ ಭಾರತೀಯ ಚಿತ್ರ ನಿರ್ಮಾತೃಗಳು ಪ್ರತಿ ವರ್ಷವೂ ಆಸೆಕಂಗಳಿಂದ ನೋಡುವುದು ಸುಳ್ಳೇನಲ್ಲ. ಹಾಗಾಗಿ, ಈ ಬಾರಿಯ ಎರಡು ಆಸ್ಕರ್‌ ಪ್ರಶಸ್ತಿಗಳು ಭಾರತದ ಸಿನಿಮಾವಲಯದಲ್ಲಿ ಸಹಜವಾಗಿಯೇ ಉತ್ಸಾಹ ಮತ್ತು ಸಂಭ್ರಮ ಮೂಡಿಸಿವೆ. ಈ ಪ್ರಶಸ್ತಿಗಳಿಗೆ ಮತ್ತೊಂದು ಕಾರಣದಿಂದಲೂ ಮಹತ್ವವಿದೆ. ಆಸ್ಕರ್‌ ಗೌರವಕ್ಕೆ ಪಾತ್ರವಾದ ಎರಡೂ ಕಲಾಕೃತಿಗಳು ದಕ್ಷಿಣ ಭಾರತಕ್ಕೆ ಸೇರಿದವು ಎನ್ನುವುದನ್ನು ಗಮನಿಸಬೇಕು. ‘ಭಾರತೀಯ ಸಿನಿಮಾ’ ಎಂದರೆ ಬಾಲಿವುಡ್ ಮಾತ್ರ ಎನ್ನುವ ಭ್ರಮೆಯ ಬಲೂನಿಗೆ ದಕ್ಷಿಣ ಭಾರತದ ಚಲನಚಿತ್ರಗಳು ಸೂಜಿ ಚುಚ್ಚಿ ಬಹಳ ವರ್ಷಗಳಾದವು. ವ್ಯಾಪಾರಿ ಚಿತ್ರಗಳ ತಯಾರಿಕೆಯಲ್ಲಿ ಬಾಲಿವುಡ್ ಮುಂಚೂಣಿಯಲ್ಲಿದ್ದಾಗಲೂ ದಕ್ಷಿಣ ಭಾರತದ ಭಾಷೆಗಳಲ್ಲಿ ಕಲಾತ್ಮಕ ನೆಲೆಗಟ್ಟಿನ ಅತ್ಯುತ್ತಮ ಸಿನಿಮಾ ಪ್ರಯೋಗಗಳು ನಡೆಯುತ್ತಿದ್ದವು. ಕಳೆದೊಂದು ದಶಕದ ಅವಧಿಯಲ್ಲಿ ಮುಖ್ಯವಾಹಿನಿ ಸಿನಿಮಾಗಳ ತಯಾರಿಕೆಯಲ್ಲೂ ದಕ್ಷಿಣ ಭಾರತ ಬಾಲಿವುಡ್ ಅನ್ನು ಹಿಂದಿಕ್ಕಿದೆ. ದೇಶದೊಳಗೆ ಮಾತ್ರವಲ್ಲದೆ ಜಾಗತಿಕವಾಗಿಯೂ ತೆಲುಗು, ಕನ್ನಡ, ಮಲಯಾಳಂ ಹಾಗೂ ತಮಿಳು ಚಿತ್ರಗಳು ಮಾರುಕಟ್ಟೆ ಕಂಡುಕೊಂಡಿವೆ, ತಮ್ಮದೇ ಆದ ವರ್ಚಸ್ಸು ಗಳಿಸಿವೆ. ಕೆಲವು ವರ್ಷಗಳ ಹಿಂದೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಸಿನಿಮಾ ನಿರ್ಮಾತೃಗಳ ಕಣ್ಣು ಈಗ ನಾಡಿನಾಚೆಗೂ ನೆಟ್ಟಿದೆ. ‘ಕೆಜಿಎಫ್’, ‘ಕಾಂತಾರ’ ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯ ಸಾಧ್ಯತೆಗಳನ್ನು ವಿಸ್ತರಿಸಿವೆ. ಸಣ್ಣ ಬಜೆಟ್‌ನ ಹಾಗೂ ಪ್ರಾದೇಶಿಕ ಸೊಗಡಿನ ‘ಕಾಂತಾರ’ ವಿಶ್ವಮಟ್ಟದಲ್ಲಿ ಸುದ್ದಿಮಾಡಿದೆ. ತೆಲುಗಿನ ‘ಬಾಹುಬಲಿ’, ‘ಪುಷ್ಪ’ ಹಾಗೂ ‘ಆರ್‌ಆರ್‌ಆರ್’ ಸಿನಿಮಾಗಳು ಜಾಗತಿಕ ಗಳಿಕೆಯಲ್ಲಿ ಹೊಸ ಎತ್ತರವನ್ನು ತಲುಪಿವೆ. ಇಂಥ ಸಂಕ್ರಮಣ ಸಂದರ್ಭದಲ್ಲಿ ದೊರೆತಿರುವ ಎರಡು ಆಸ್ಕರ್ ಪ್ರಶಸ್ತಿಗಳು, ದಕ್ಷಿಣ ಭಾರತದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸಾಧಿಸಿರುವ ಜನಪ್ರಿಯತೆಯ ಹೊಳಪು ಹೆಚ್ಚಿಸುವಂತಿವೆ. 

ಆಸ್ಕರ್ ಸ್ಪರ್ಧಾಕಣದಲ್ಲಿ ಭಾರತೀಯ ಸಿನಿಮಾಗಳು ಇಲ್ಲಿಯವರೆಗೆ ಪೇಲವವಾಗಿ ಕಾಣಿಸಿರುವುದೇ ಹೆಚ್ಚು. ಆಸ್ಕರ್‌ಗೆ ನಾಮಕರಣಗೊಳ್ಳುವುದೇ ಬಹು ದೊಡ್ಡ ಸಾಧನೆ ಎನ್ನುವ ಮನೋಭಾವ ಈವರೆಗೂ ಸಿನಿಮಾ ವಲಯದಲ್ಲಿತ್ತು. ಹಾಗೆಂದು, ಆಸ್ಕರ್ ಸ್ಪರ್ಧೆಯಲ್ಲಿ ಯಶಸ್ಸು ಗಳಿಸದ ಕಾರಣಕ್ಕಾಗಿ ಭಾರತೀಯ ಸಿನಿಮಾಗಳು ಕಳಪೆ ಎಂದರ್ಥವಲ್ಲ. ಹಾಲಿವುಡ್ ಹಾಗೂ ಭಾರತೀಯ ಸಿನಿಮಾಗಳ ನಿರ್ಮಾಣದ ತಾತ್ವಿಕತೆ ಭಿನ್ನವಾದುದು. ಹಾಲಿವುಡ್ ಸಿನಿಮಾಗಳ ತಾತ್ವಿಕ ನೆಲೆಗಟ್ಟಿನಲ್ಲಿ ನಿರ್ಣಯಗೊಳ್ಳುವ ಆಸ್ಕರ್ ಪ್ರಶಸ್ತಿಗಳು ಚಲನಚಿತ್ರ ಪ್ರಕಾರದ ಶ್ರೇಷ್ಠತೆಯ ಮಾನದಂಡವೇನೂ ಅಲ್ಲ. ಹಾಗಾಗಿ, ಈಗ ಭಾರತಕ್ಕೆ ದೊರಕಿರುವ ಆಸ್ಕರ್‌ ಪ್ರಶಸ್ತಿಗಳಿಂದ, ಭಾರತೀಯ ಸಿನಿಮಾಗಳ ಗುಣಮಟ್ಟದಲ್ಲಿ ಗುಣಾತ್ಮಕ ಬದಲಾವಣೆ ಉಂಟಾಗಿದೆ ಎನ್ನುವ ಅವಸರದ ತೀರ್ಮಾನಕ್ಕೆ ಬರುವಂತಿಲ್ಲ. ಆಸ್ಕರ್‌ ಹೊರತಾಗಿಯೂ ವಿಶ್ವದರ್ಜೆಯ ಸಿನಿಮಾಗಳು ಭಾರತೀಯ ಭಾಷೆಗಳಲ್ಲಿ ನಿರಂತರವಾಗಿ ರೂಪುಗೊಳ್ಳುತ್ತಿರುವುದನ್ನು ದೃಶ್ಯಮಾಧ್ಯಮದ ವಿದ್ಯಾರ್ಥಿಗಳು ಬಲ್ಲರು. ಈಗ ದೊರೆತಿರುವ ಪ್ರಶಸ್ತಿಗಳು, ಸಿನಿಮಾಗಳ ಗುಣಮಟ್ಟವನ್ನು ಸಂಕೇತಿಸುತ್ತಿರು ವುದಕ್ಕಿಂತಲೂ, ಭಾರತೀಯ ಚಿತ್ರೋದ್ಯಮದ ಮನರಂಜನಾ ಸೂತ್ರವನ್ನು ಹಾಲಿವುಡ್ ನಿಧಾನವಾಗಿ ಯಾದರೂ ಒಪ್ಪಿಕೊಳ್ಳುತ್ತಿರುವ ಸೂಚನೆ ಇರುವಂತಿದೆ.

ಭಾರತೀಯ ಮುಖ್ಯವಾಹಿನಿ ಸಿನಿಮಾಗಳ ವ್ಯಾಕರಣದಲ್ಲಿ ಗಮನಾರ್ಹ ಬದಲಾವಣೆಗಳೇನೂ ಕಾಣಿಸದಿದ್ದರೂ, ಭಾರತೀಯ ಸಿನಿಮಾಗಳ ಕುರಿತ ಹಾಲಿವುಡ್‌ ನಿರ್ಮಾತೃಗಳ ದೃಷ್ಟಿಕೋನದಲ್ಲಿ ಬದಲಾವಣೆ ಆದಂತಿದೆ. ಈ ಬದಲಾವಣೆಯ ಕಾರಣದಿಂದಲೇ ಭಾರತೀಯ ಸಿನಿಮಾಗಳ, ವಿಶೇಷವಾಗಿ ದಕ್ಷಿಣ ಭಾರತದ ಚಲನಚಿತ್ರಗಳ ಮಾರುಕಟ್ಟೆ ವಿಸ್ತರಿಸಿದೆ. ಕಾರಣ ಏನೇ ಇದ್ದರೂ, ಆಸ್ಕರ್‌ ಪ್ರಶಸ್ತಿಗಳು ಯುವ ಸಿನಿಮಾ ನಿರ್ಮಾತೃಗಳ ಆತ್ಮವಿಶ್ವಾಸ ಹೆಚ್ಚಿಸಿರುವುದರ ಜೊತೆಗೆ ಸಿನಿಮಾ ನಿರ್ಮಾಣ ಮತ್ತು ಮಾರುಕಟ್ಟೆಯ ಮತ್ತಷ್ಟು ಬಾಗಿಲುಗಳನ್ನು ತೆರೆದಿರುವುದಂತೂ ನಿಜ. ಭಾರತೀಯ ಭಾಷೆಗಳ ಸಿನಿಮಾಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಹೆಚ್ಚಲಿಕ್ಕೂ ಈ ಪ್ರಶಸ್ತಿಗಳು ಪ್ರೇರಣೆಯಾಗಬಹುದು. ‘ದಿ ಎಲಿಫೆಂಟ್ ವಿಸ್ಪರರ್ಸ್’ ತಮಿಳು ಸಾಕ್ಷ್ಯಚಿತ್ರಕ್ಕೆ ದೊರೆತಿರುವ ಜಾಗತಿಕ ಮನ್ನಣೆ, ಭಾರತದಲ್ಲಿ ಸಾಕ್ಷ್ಯಚಿತ್ರಗಳ ಪ್ರಕಾರ ಸಶಕ್ತಗೊಳ್ಳಲಿಕ್ಕೆ ಒತ್ತಾಸೆಯಾಗಲೂಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು