ಭಾನುವಾರ, ಜೂನ್ 20, 2021
29 °C

ಸಂಪಾದಕೀಯ: ಪಡಿತರ ಕಳ್ಳಸಾಗಣೆ ತಡೆಗೆಬಿಗಿಯಾದ ಕ್ರಮ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬಡ ಕುಟುಂಬಗಳ ಜನ ಹಸಿವಿನಿಂದ ಬಳಲಬಾರದು ಎಂಬ ಮಹತ್ತರವಾದ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಧಾನ್ಯಗಳನ್ನು ಒದಗಿಸುತ್ತಿವೆ. ರಾಜ್ಯದಲ್ಲಿ ಆದ್ಯತಾ ವಲಯದ (ಬಿಪಿಎಲ್‌) ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ ಮತ್ತು ಪ್ರತೀ ಕುಟುಂಬಕ್ಕೆ ತಲಾ 2 ಕೆ.ಜಿ. ಗೋಧಿ ಹಾಗೂ ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳಾಗಿರುವ ಕಡು ಬಡತನದ ಕುಟುಂಬಗಳಿಗೆ ತಿಂಗಳಿಗೆ 35 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದ್ಯತಾ ವಲಯದಿಂದ ಹೊರಗಿರುವ (ಎಪಿಎಲ್‌) ಕುಟುಂಬಗಳಿಗೂ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸುವ ವ್ಯವಸ್ಥೆ ಜಾರಿಯಲ್ಲಿದೆ. ಅಂತ್ಯೋದಯ ಅನ್ನ ಯೋಜನೆಯ 10.90 ಲಕ್ಷ ಫಲಾನುಭವಿಗಳು ಮತ್ತು 1.16 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ರಾಜ್ಯ ಸರ್ಕಾರವು ಕೇಂದ್ರದ ನೆರವಿನಲ್ಲಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಉಚಿತ ಪಡಿತರ ವಿತರಣೆಗಾಗಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಆದರೆ, ಬಡ ಕುಟುಂಬಗಳ ಹಸಿವು ನೀಗಿಸುವುದಕ್ಕಾಗಿ ಸರ್ಕಾರ ಪೂರೈಸುತ್ತಿರುವ ಆಹಾರ ಧಾನ್ಯವನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಿಸಿ, ಮಾರಾಟ ಮಾಡುವ ಜಾಲಗಳು ರಾಜ್ಯದ ಎಲ್ಲೆಡೆ ಸಕ್ರಿಯವಾಗಿವೆ ಎಂಬ ಆರೋಪ ಹಿಂದಿನಿಂದಲೂ ಇದೆ. ಮಾರ್ಚ್‌ 16ರಂದು ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದಿಂದಲೇ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಅಕ್ಕಿ ಗಿರಣಿಯೊಂದಕ್ಕೆ ಪಡಿತರ ಅಕ್ಕಿಯ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದನ್ನು ಅಧಿಕಾರಿಗಳು ವಶಕ್ಕೆ ಪಡೆದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವು ಉಚಿತ ಪಡಿತರ ವಿತರಣಾ ಯೋಜನೆಯ ಅತ್ಯಧಿಕ ಸಂಖ್ಯೆಯ ಫಲಾನುಭವಿ
ಗಳನ್ನು ಹೊಂದಿರುವ ಬೆಂಗಳೂರು ನಗರದಿಂದ ಭಾರಿ ಪ್ರಮಾಣದಲ್ಲಿ ಪಡಿತರ ಧಾನ್ಯಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದೆ. ಪ್ರಕರಣ ದಾಖಲಿಸುವ ಹಂತದಲ್ಲಿ ನಡೆದಿರುವ ಬೆಳವಣಿಗೆಗಳು, ವಿಳಂಬ ಗತಿಯ ತನಿಖೆ ಎಲ್ಲವೂ ಪಡಿತರ ಧಾನ್ಯದ ಕಳ್ಳಸಾಗಣೆ ಜಾಲದ ಜತೆಗೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾದ ನಂಟು ಹೊಂದಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ
ನೀಡುವಂತಿವೆ.

ನಿಯಮಗಳ ಪ್ರಕಾರ, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಅಥವಾ ಭಾರತೀಯ ಆಹಾರ ನಿಗಮದ ಉಗ್ರಾಣಗಳಿಂದ ಜಿಪಿಎಸ್‌ ಸಾಧನ ಅಳವಡಿಸಿದ ಲಾರಿಯಲ್ಲಿ ನಿಗದಿತ ದಾಖಲೆಗಳೊಂದಿಗೆ ತಾಲ್ಲೂಕು ಮಟ್ಟದ ವಿತರಣಾ ಕೇಂದ್ರಗಳಿಗೆ ಪಡಿತರ ಧಾನ್ಯವನ್ನು ಸಾಗಿಸಬೇಕು. ಅಲ್ಲಿಂದ ಜಿಪಿಎಸ್‌ ಅಳವಡಿಸಿದ ವಾಹನದಲ್ಲೇ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮಾಡಬೇಕು. ಉಗ್ರಾಣಗಳು, ತಾಲ್ಲೂಕು ಮಟ್ಟದ ಸಗಟು ವಿತರಣಾ ಕೇಂದ್ರಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಕಣ್ಗಾವಲಿನಲ್ಲೇ ಆಹಾರ ಧಾನ್ಯಗಳ ವಿತರಣೆ ಮತ್ತು ಸಾಗಣೆ ಪ್ರಕ್ರಿಯೆ ನಡೆಯಬೇಕು. ಆದರೆ, ಬಹುತೇಕ ಉಗ್ರಾಣಗಳು, ವಿತರಣಾ ಕೇಂದ್ರಗಳಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ ಎಂಬ ಆರೋಪವಿದೆ. ಆಹಾರ ಧಾನ್ಯಗಳ ಸಗಟು ಸಾಗಣೆಗೆ ಗುತ್ತಿಗೆ ಪಡೆದಿರುವವರೇ ಕಾಳಸಂತೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಆಗಾಗ ಬಯಲಿಗೆ ಬರುತ್ತಿವೆ. ಆಹಾರ ಇಲಾಖೆ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ, ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಹಾಗೂ ಪೊಲೀಸರ ಸಹಕಾರದಲ್ಲೇ ಈ ಜಾಲ ಸಲೀಸಾಗಿ ಪಡಿತರ ಧಾನ್ಯವನ್ನು ಕಳ್ಳಸಾಗಣೆ ಮಾಡುತ್ತಿದೆ ಎಂಬ ಆರೋಪವನ್ನು ಅಲ್ಲಗಳೆಯ
ಲಾಗದು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಹಂಚಿಕೆ ಮಾಡಲು ಒದಗಿಸಿದ ಅಕ್ಕಿಯನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಬಳಸಿ ಕಳ್ಳಸಾಗಣೆ ಮಾಡುತ್ತಿರುವ ಆರೋಪವೂ ಇದೆ. ಪಡಿತರ ಧಾನ್ಯಗಳನ್ನು ಕಾಳಸಂತೆಗೆ ಕಳ್ಳಸಾಗಣೆ ಮಾಡುವವರ ವಿರುದ್ಧದ ಕ್ರಮ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸುವುದಕ್ಕೆ ಸೀಮಿತವಾಗಬಾರದು. ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವುದರ ಜತೆಗೆ ಉಗ್ರಾಣಗಳ ನಿರ್ವಹಣೆ, ಪಡಿತರ ವಿತರಣೆ, ಮೇಲುಸ್ತುವಾರಿಯ ಜವಾಬ್ದಾರಿ ಹೊಂದಿರುವ ಎಲ್ಲ ಹಂತದ ಅಧಿಕಾರಿಗಳನ್ನೂ ಇಂತಹ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿ ಮಾಡಿದರೆ ಅಕ್ರಮಗಳನ್ನು ತಪ್ಪಿಸಲು ಸಾಧ್ಯ. ಜಿಪಿಎಸ್‌, ಸಿ.ಸಿ. ಟಿ.ವಿ. ಕ್ಯಾಮೆರಾ ಕಣ್ಗಾವಲು ಸೇರಿದಂತೆ ತಂತ್ರಾಂಶಗಳ ಬಳಕೆ ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ಬಿಗಿಗೊಳಿಸುವತ್ತ ಸರ್ಕಾರ ಗಮನಹರಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು