ಗುರುವಾರ , ಜೂನ್ 24, 2021
21 °C

ಪಡಿತರ ವಿತರಣೆ ವ್ಯವಸ್ಥೆ ಬಲಪಡಿಸಿ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಜಾರಿಯಲ್ಲಿರುವ ‘ಅನ್ನಭಾಗ್ಯ’ ಯೋಜನೆಯ ಆಹಾರ ಧಾನ್ಯಗಳನ್ನು ಲೂಟಿ ಹೊಡೆಯಲು ಬಳಸಲಾಗುತ್ತಿರುವ ನಾನಾ ವಿಧಾನಗಳು ರಾಜ್ಯ ಆಹಾರ ಆಯೋಗ ವರದಿಯಲ್ಲಿ ಪತ್ತೆಯಾಗಿವೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಡಿತರ ಆಹಾರಧಾನ್ಯಗಳು ಹಾಳಾಗಿ ಕೋಟ್ಯಂತರ ರೂಪಾಯಿ ನಷ್ಟವಾದ ಪ್ರಕರಣಗಳನ್ನೂ ಈ ವರದಿ ಪಟ್ಟಿಮಾಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 102 ನ್ಯಾಯಬೆಲೆ ಅಂಗಡಿಗಳು ಮತ್ತು 12 ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಆಯೋಗ ಸಿದ್ಧಪಡಿಸಿರುವ ವರದಿಯಲ್ಲಿ ಪ್ರಸ್ತಾಪವಾಗಿರುವ ಅಂಶಗಳು ಆಘಾತಕಾರಿಯಾಗಿವೆ. ಆಹಾರ ಭದ್ರತಾ ಕಾಯ್ದೆ ಅನ್ವಯ ರಚನೆಯಾಗಿರುವ ಈ ಸ್ವತಂತ್ರ ರಾಜ್ಯ ಆಹಾರ ಆಯೋಗ ಸಿದ್ಧಪಡಿಸಿರುವ ವರದಿಯಲ್ಲಿರುವ ಅಂಶಗಳು ಆಡಳಿತ ಯಂತ್ರದ ಕಣ್ತೆರೆಸಬೇಕಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಸೋರಿಕೆ, ಭ್ರಷ್ಟಾಚಾರ ಹಾಗೂ ಅವ್ಯವಹಾರಗಳ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇವೆ ಎಂಬುದು ಕಟುವಾಸ್ತವ. ಅದರಲ್ಲೂ ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗಾಗಿ ಉಚಿತ ಆಹಾರ ಧಾನ್ಯ ವಿತರಿಸುವ ‘ಅನ್ನಭಾಗ್ಯ’ ಯೋಜನೆಯ ಪಡಿತರಕ್ಕೂ ಕನ್ನ ಹಾಕುವಂತಹ ಮನಸ್ಥಿತಿ ನಾಗರಿಕ ಸಮಾಜಕ್ಕೆ ಒಪ್ಪುವಂತಹದ್ದಲ್ಲ.

ಬಡತನ ರೇಖೆಯಿಂದ ಕೆಳಗಿರುವ ಜನರು ಪಡಿತರ ದೊರಕದೆ ಹಸಿವಿನಿಂದ ನರಳಬಾರದೆಂಬ ಸದುದ್ದೇಶದಿಂದ ‘ಅನ್ನಭಾಗ್ಯ’ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. 2013ರ ಮೇ ತಿಂಗಳಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ ಜಾರಿಗೊಳಿಸಿದಂತಹ ಯೋಜನೆ ಇದು. ಈ ಪ್ರಕಾರ, ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 7 ಕೆಜಿ ಉಚಿತ ಅಕ್ಕಿ ಒದಗಿಸಲಾಗುತ್ತಿದೆ.

ರಾಜ್ಯದಲ್ಲಿ 1.1 ಕೋಟಿ ಕುಟುಂಬಗಳು (4 ಕೋಟಿಗೂ ಹೆಚ್ಚು ಜನರು) ಪ್ರತಿ ತಿಂಗಳೂ ರಾಜ್ಯದಾದ್ಯಂತ ಇರುವ 21,000ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿಂದ ಆಹಾರ ಧಾನ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಅಂಕಿಅಂಶ. ಆದರೆ ಈ ಯೋಜನೆಯ ಅಕ್ಕಿ ಹಾಗೂ ತೊಗರಿ ಬೇಳೆಗಳನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಜಾಲವೂ ಇದೆ ಎಂಬುದು ವಿಪರ್ಯಾಸ. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯ ದುರುಪಯೋಗ ಹಾಗೂ ಅವ್ಯವಹಾರಗಳಲ್ಲಿ ಭಾಗಿಯಾದ ನ್ಯಾಯಬೆಲೆ ಅಂಗಡಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಆಯೋಗದ ವರದಿಯು ಶಿಫಾರಸು ಮಾಡಿದೆ. ಇದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಪಡಿತರ ವ್ಯವಸ್ಥೆಯು ಫಲಾನುಭವಿಗಳನ್ನು ಸರಿಯಾಗಿ ತಲುಪದ ಕಾರಣ ಹಸಿವಿನಿಂದ ಕೆಲವರು ಸತ್ತಿದ್ದಾರೆ ಎಂಬಂಥ ವರದಿಗಳು ರಾಜ್ಯವೂ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಿಂದ ಇತ್ತೀಚಿನ ವರ್ಷಗಳಲ್ಲಿ ಪ್ರಕಟವಾಗಿ ವಿವಾದದ ಕೆಂದ್ರಬಿಂದುಗಳಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ರಾಷ್ಟ್ರದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಸ್ತಿತ್ವದಲ್ಲಿದೆ. ಹೀಗಿದ್ದೂ ಭಾರತದಲ್ಲಿ ಅಪೌಷ್ಟಿಕತೆ ಮಟ್ಟ ತೀವ್ರತರದಲ್ಲಿಯೇ ಮುಂದುವರಿದಿದೆ ಎಂಬುದನ್ನು ಇತ್ತೀಚಿನ ಜಾಗತಿಕ ಪೌಷ್ಟಿಕಾಂಶ ವರದಿ ಎತ್ತಿ ಹೇಳಿದೆ.

ಈ ಬೆಳವಣಿಗೆ ನಾಚಿಕೆಗೇಡಿನದು. ಇನ್ನಾದರೂ ಅಪೌಷ್ಟಿಕತೆಯ ಸಮಸ್ಯೆಯನ್ನು ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಗಮನ ಹರಿಸಬೇಕಿದೆ. ಇದಕ್ಕಾಗಿ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸುವುದು ಅತ್ಯಂತ ಮುಖ್ಯ. ರಾಜ್ಯದಲ್ಲಿ ದಾಸ್ತಾನು ಮಾಡಿರುವ ಆಹಾರ ಧಾನ್ಯಗಳೂ ಅಧಿಕಾರಿಗಳ ನಿಷ್ಕ್ರಿಯತೆ ಅಥವಾ ನಿರ್ಲಕ್ಷ್ಯದಿಂದ ಹುಳ ಹಿಡಿದು ವ್ಯರ್ಥವಾಗುತ್ತಿದೆ ಎಂಬುದಂತೂ ಅಕ್ಷಮ್ಯ.

ದಾಸ್ತಾನು ಮಾಡಿರುವ ಆಹಾರ ಧಾನ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿ ಅರ್ಹರಿಗೆ ವಿತರಿಸಬೇಕಾದ ಕರ್ತವ್ಯವನ್ನೂ ಪಾಲಿಸದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಹಾಗೆಯೇ ಕಳೆದ 4–5 ವರ್ಷಗಳಲ್ಲಿ ರಾಜ್ಯ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಆಯುಕ್ತರ ಹುದ್ದೆಗೆ ನೇಮಕಗೊಂಡವರು ಪದೇಪದೇ ವರ್ಗಾವಣೆಗೊಂಡಿರುವುದೂ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ದ್ಯೋತಕ. ಇಂತಹ ಸಂದರ್ಭದಲ್ಲಿ ರಾಜ್ಯ ಆಹಾರ ಆಯೋಗದ ಶಿಫಾರಸುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಹಸಿವು ಹಾಗೂ ಬಡತನದ ವಿರುದ್ಧದ ಹೋರಾಟ ಭ್ರಷ್ಟಗೊಳ್ಳಬಾರದು. ಈ ದಿಸೆಯಲ್ಲಿ ಆಡಳಿತ ಯಂತ್ರ ಬದ್ಧತೆ ಪ್ರದರ್ಶಿಸಲಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು