ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕಷ್ಟಕ್ಕೆ ಮಿಡಿಯದ ಜನಪ್ರತಿನಿಧಿಗಳು ಇರುವುದಾದರೂ ಏಕೆ?

Last Updated 5 ಏಪ್ರಿಲ್ 2020, 21:05 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಕಾಟದಿಂದ ರಾಜ್ಯ ಮಾತ್ರವಲ್ಲ, ಇಡೀ ಜಗತ್ತೇ ಬಳಲುತ್ತಿದೆ. ಕೆಲವು ದಿನಗಳಿಂದ ಸಂಪೂರ್ಣ ಸ್ತಬ್ಧವೇ ಆಗಿದೆ. ನಾವು ಕಂಡು ಕೇಳರಿಯದ ಕಡುಸಂಕಷ್ಟ ಇದು. ಅವರು, ಇವರು ಎನ್ನದೆ ಎಲ್ಲರಿಗೂ ಈ ಬಾಧೆಯ ಬಿಸಿ ತಟ್ಟಿದೆ. ಅಂದಿನ ಅನ್ನವನ್ನು ಅಂದಂದೇ ದುಡಿಯುವವರ ಸ್ಥಿತಿ ಹೇಳತೀರದಾಗಿದೆ. ದುಡಿಮೆಗಾಗಿ ಹೊರನಾಡುಗಳಿಗೆ ಹೋದವರು ಅಲ್ಲಲ್ಲೇ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಅಂಥವರಿಗೆ ಊಟ, ಆಸರೆ ಒದಗಿಸಲು ಸರ್ಕಾರ ಹೆಣಗಾಡುತ್ತಿದೆ. ಮನೆಯಲ್ಲಿಯೇ ಇರುವವರು ಹೊರಹೋಗಲಾಗದೆ ಹೈರಾಣಾಗಿದ್ದಾರೆ. ಏನೋ ಒಂದು ಆಸರೆ, ಸಾಂತ್ವನ, ಬೆಂಬಲಎಲ್ಲರಿಗೂ ಬೇಕಾಗಿರುವ ಸಂದರ್ಭ ಇದು.ವೈದ್ಯರು, ದಾದಿಯರು, ಪೊಲೀಸರು,ಪೌರಕಾರ್ಮಿಕರು ಸೇರಿದಂತೆ ಅಗತ್ಯ ಸೇವೆ ಒದಗಿಸುವವರು ತಮಗೆ ಸೋಂಕು ತಗಲುವ ಅಪಾಯವಿದ್ದರೂ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರಿಗೆ ಸಾಂತ್ವನ ಹೇಳಬೇಕಾದ ಜನಪ್ರತಿನಿಧಿಗಳುಎಲ್ಲಿ ಹೋಗಿದ್ದಾರೆ ಎಂದು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ವಿಷಾದಕರ. ಜನರಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಮನೆಯಲ್ಲಿಯೇ ಅವಿತುಕೊಂಡಿರುವ ಹಾಗೆ ಕಾಣುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಕೆಲವೇ ಸಚಿವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬ ಶಾಸಕರು ಸಕ್ರಿಯರಾಗಿರುವುದನ್ನು ಬಿಟ್ಟರೆ ಉಳಿದಂತೆ ಜನರ ಸಂಕಷ್ಟ ನಿವಾರಣೆಯಲ್ಲಿ ಅವರ ಪಾತ್ರ ಕಾಣಿಸುತ್ತಿಲ್ಲ.

ಜನರ ಸಂಕಷ್ಟಗಳಿಗೂ ತಮಗೂ ಸಂಬಂಧವೇಇಲ್ಲ ಎಂಬಂತೆ ಕುಳಿತುಕೊಳ್ಳುವ ಕಾಲ ಇದಲ್ಲ. ಲಾಕ್‌ಡೌನ್‌ನಿಂದಾಗಿ ಜನ ಮನೆಯಲ್ಲಿಯೇ ಕುಳಿತು ಮಾನಸಿಕ ಒತ್ತಡಕ್ಕೆ ಈಡಾಗಿದ್ದಾರೆ. ಕೂಲಿಕಾರ್ಮಿಕರು ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತಿದ್ದಾರೆ. ಕೆಲವರು ನಡೆದುಕೊಂಡೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಜನಪ್ರತಿನಿಧಿಗಳು ಜನರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಾದ ಹೊತ್ತು ಇದು. ತಮ್ಮ ಕೈಲಾದ ಸಹಾಯವನ್ನೂ ಮಾಡಬೇಕು. ರಾಜ್ಯದ ಉದ್ಯಮಪತಿಗಳು ಉದಾರವಾಗಿ ದೇಣಿಗೆ ನೀಡಿದ್ದಾರೆ. ಸರ್ಕಾರಿ ನೌಕರರು, ಸರ್ಕಾರದ ವಿವಿಧ ಸಂಸ್ಥೆಗಳೂ ದೇಣಿಗೆ ನೀಡಿವೆ. ವಿವಿಧ ಸಂಘ–ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳೂ ಈ ಸಂದರ್ಭದಲ್ಲಿ ಮಾನವೀಯತೆ ಮೆರೆದಿವೆ. ಶಾಸಕರು ತಮ್ಮ ವೇತನದ ಅಲ್ಪಭಾಗವನ್ನು ಕೊಡಲು ಮುಂದಾಗಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಘೋಷಿಸಿಕೊಳ್ಳುವ ರಾಜಕಾರಣಿಗಳು ತಮ್ಮ ಸ್ವಂತ ಹಣವನ್ನು ದೇಣಿಗೆ ರೂಪದಲ್ಲಿ ನೀಡಲು ಮುಂದೆಬಂದಿಲ್ಲ. ಜನರ ಜೊತೆ ನೇರ ಸಂಬಂಧ ಮತ್ತು ಋಣಬಂಧಕ್ಕೆ ಒಳಗಾಗದ ಎಷ್ಟೋ ಮಂದಿ ಉದಾರವಾಗಿ ಧನಸಹಾಯ ಮಾಡಿದ್ದಾರೆ. ಜನರಿಂದಲೇ ಆಯ್ಕೆಯಾಗಿ ಅಧಿಕಾರ ಅನುಭವಿಸುತ್ತಿರುವ ರಾಜಕಾರಣಿಗಳು ಈಗ ಮೌನವಾಗಿರುವುದು ಸರ್ವಥಾ ಸಲ್ಲ. ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರಬೇಕಾದುದು ಜನಪ್ರತಿನಿಧಿಗಳ ನೈತಿಕ ಬಾಧ್ಯತೆಯಷ್ಟೇ ಅಲ್ಲ, ಹೊಣೆಗಾರಿಕೆಯೂ ಹೌದು. ರಾಜಕಾರಣಿಗಳು ಮತ್ತು ಜನಸಮೂಹದ ನಡುವೆ ನೀತಿ ನಿಯಮಗಳ ಚೌಕಟ್ಟು ಮೀರಿದ ಸಂಬಂಧ ಇದೆ. ಅದೊಂದು ವಿಶ್ವಾಸ. ಆ ವಿಶ್ವಾಸದಿಂದಲೇ ಜನರು ಇವರಿಗೆ ಮತ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ‘ಇನಾಮು’ ನೀಡಲು ರಾಜಕಾರಣಿಗಳು ಪರ್ಯಾಯ ಪಡೆಯನ್ನೇ ಹೊಂದಿರುತ್ತಾರೆ ಎನ್ನುವುದು ಗುಟ್ಟೇನಲ್ಲ.

ಅದೇ ವ್ಯವಸ್ಥೆಯನ್ನು ಈಗ ಜನರ ಕಣ್ಣೀರು ಒರೆಸಲು ಬಳಸಬೇಕಾಗಿದೆ. ಹಾಗೆ ಬಳಸಲು ಅಡ್ಡಿಯಾಗುತ್ತಿರುವುದು ಏನು? ಗೆದ್ದ ರಾಜಕಾರಣಿಗಳು ಅಷ್ಟೇ ಅಲ್ಲ; ಸೋತ ರಾಜಕಾರಣಿಗಳಿಗೂ ಜನಬೆಂಬಲ ಪಡೆಯಲು ಇದು ಸಕಾಲ. ಸೋತ ಮುಖಂಡರು ಯಾರೂ ರಾಜಕೀಯ ಸನ್ಯಾಸ ಸ್ವೀಕರಿಸಿಲ್ಲ, ಮುಂದಿನ ಚುನಾವಣೆಯಲ್ಲಿ ಅವರು ಜನಬೆಂಬಲಕ್ಕಾಗಿ ಅಂಗಲಾಚುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸೋತವರಲ್ಲಿಯೂ ಕೋಟ್ಯಧಿಪತಿಗಳಿದ್ದಾರೆ. ಅವರೂ ಕೊಂಚ ಔದಾರ್ಯ ತೋರಬೇಕು. ಈ ವಿಷಮ ಸನ್ನಿವೇಶದಲ್ಲಿ ಜನರ ಸಂಕಷ್ಟವನ್ನು ಸಾಧ್ಯವಾದ ಮಟ್ಟಿಗೆ ಸಹ್ಯವಾಗಿಸಬೇಕಿದೆ. ಕಷ್ಟಕಾಲದಲ್ಲಿ ಜನರ ನೋವಿಗೆ ಮಿಡಿಯದವರಿಗೆ ಜನಪ್ರತಿನಿಧಿಗಳಾಗಲು ನೈತಿಕ ಅರ್ಹತೆಯೇ ಇರುವುದಿಲ್ಲ ಎಂಬ ಭಾವನೆ ಜನರಲ್ಲಿ ಮೂಡುವುದು ಸಹಜ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ. ಚುನಾವಣೆಯ ಸಂದರ್ಭದಲ್ಲಿ ಹಂಚುವ ‘ಪಾರಿತೋಷಕ’ಗಳೇ ಸದಾ ಗೆಲ್ಲಿಸಲಾರವು. ಸಂಕಷ್ಟದಲ್ಲಿ ಆಸರೆಯಾದವರನ್ನು ಜನ ಎಂದೂ ಮರೆಯುವುದಿಲ್ಲ. ಈ ಅರಿವು ರಾಜಕಾರಣಿಗಳಲ್ಲಿ ಮೂಡಲಿ. ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಜನರ ಕಷ್ಟಕ್ಕೆ ಮಿಡಿಯಲಿ. ಈಗಿನ ಸಂಕಷ್ಟವನ್ನು ದಾಟಿ ಹೋಗಲು ನೆರವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT