ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಣಿ ಕದ್ದಾಲಿಕೆ ಪ್ರಕರಣ ತನಿಖೆ ನಡೆಯಲಿ, ಶಿಕ್ಷೆ ಆಗಲಿ

Last Updated 18 ಆಗಸ್ಟ್ 2019, 2:55 IST
ಅಕ್ಷರ ಗಾತ್ರ

ದೂರವಾಣಿ ಸಂಭಾಷಣೆ ಕದ್ದಾಲಿಕೆ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಖಾಸಗಿತನವು ಭಾರತೀಯರ ಮೂಲಭೂತ ಹಕ್ಕು. ಆದರೆ ಕದ್ದಾಲಿಕೆಯು ಆ ಮಹತ್ವದ ಹಕ್ಕನ್ನೇ ಮೊಟಕುಗೊಳಿಸುತ್ತದೆ. ಇದು, ನೈತಿಕವಾಗಿ ಸರಿಯಲ್ಲ. ದೇಶದ ಕಾನೂನಿನ ಅನುಸಾರ ಅಪರಾಧ ಕೃತ್ಯ. ಸಂವಿಧಾನವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದವರು ಅದೇ ಸಂವಿಧಾನವು ಪ್ರಜೆಗಳಿಗೆ ಕೊಟ್ಟಿರುವ ಹಕ್ಕುಗಳ‌ನ್ನು ಕಸಿದುಕೊಳ್ಳುವ ಚಾಳಿಅನೂಚಾನವಾಗಿ ನಡೆದುಬಂದಿದೆ. ಕದ್ದಾಲಿಕೆ ಕೂಡ ಅಂತಹುದೇ ಒಂದು ಪ್ರಮಾದ. ಪ್ರಭಾವಿ ರಾಜಕಾರಣಿಗಳು ಹಾಗೂ ‘ಕಳ್ಳಕಿವಿ’ಗಳನ್ನು ಹಿಂಡಿ ಶಿಕ್ಷೆ ವಿಧಿಸಬೇಕಾದ ಅಧಿಕಾರಿಗಳೇ ಈ ಕದ್ದಾಲಿಕೆಯ ಚದುರಂಗದಾಟದಲ್ಲಿ ಪ್ರಧಾನ ಪಾತ್ರಧಾರಿಗಳಾಗಿರುವುದು ವ್ಯವಸ್ಥೆಯ ದುರಂತ.ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ನಡೆದಿರುವುದು ಇದು ಮೊದಲೇನೂ ಅಲ್ಲ. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು 1988ರಲ್ಲಿ ಟೆಲಿಫೋನ್ ಕದ್ದಾಲಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ಕೊಟ್ಟಿದ್ದರು. 2011ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಅಂದಿನ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು, ಪ್ರಭಾವಿಗಳ ಮನೆಯಿಂದಲೇ ತಮ್ಮ ದೂರವಾಣಿ ಕದ್ದಾಲಿಕೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ‘ನನ್ನ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಕರೆಗಳನ್ನು ಕದ್ದು ಆಲಿಸಲಾಗುತ್ತಿದೆ’ ಎಂದು ವರ್ಷದ ಹಿಂದೆ ಗಂಭೀರ ಆರೋಪ ಮಾಡಿದ್ದರು. ಅಧಿಕಾರ ಉಳಿಸಿಕೊಳ್ಳಲು ಹಾಗೂ ಎದುರಾಳಿಗಳನ್ನು ಹಣಿಯಲು ಅವರ ದೂರವಾಣಿಗಳಿಗೆ ಕದ್ದು ಕಿವಿಕೊಡುವುದು, ಅವರ ತಂತ್ರಗಾರಿಕೆಗಳನ್ನು ಮೊದಲೇ ಅರಿತು ಮಣಿಸುವುದು ಅಥವಾ ಪ್ರತಿತಂತ್ರ ಹೆಣೆಯುವುದು ರಾಜಕೀಯ ನಾಯಕರಿಗೆ ಕರತಲಾಮಲಕ. ಸಿಕ್ಕಿದ ಅಧಿಕಾರ ತಮ್ಮ ಪದತಲದಲ್ಲೇ ಇರಬೇಕು ಎಂಬ ಹಪಹಪಿಯಿಂದ ಅಧಿಕಾರದ ದುರುಪಯೋಗ ಕೆಟ್ಟ ಪರಂಪರೆಯಾಗಿ ಬೆಳೆದಿದೆ.ಇದಕ್ಕೆ ಯಾವುದೇ ಪಕ್ಷ ಅಥವಾ ಅಧಿಕಾರಸ್ಥರು ಭಿನ್ನರಲ್ಲ. ದುರುದ್ದೇಶಪೂರಿತ ಕದ್ದಾಲಿಕೆಯನ್ನು ಇಲ್ಲವಾಗಿಸಲು ಇನ್ನೂ ಸಾಧ್ಯವಾಗದಿರುವುದು ವ್ಯವಸ್ಥೆಯ ಹುಳುಕಿಗೆ ಹಿಡಿದ ಕನ್ನಡಿ.

ಇಂಡಿಯನ್ ಟೆಲಿಗ್ರಾಫಿಕ್ ಕಾಯ್ದೆ 1885ರ ಅನ್ವಯ 1951ರಲ್ಲಿ ರೂಪಿಸಲಾಗಿರುವ ಇಂಡಿಯನ್ ಟೆಲಿಗ್ರಾಫಿಕ್‌ ನಿಯಮಗಳು ಸದ್ಯ ಚಾಲ್ತಿಯಲ್ಲಿವೆ. ದೇಶದ ಭದ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹಾಗೂ ಸಾರ್ವಜನಿಕ ಬದುಕಿಗೆ ದೊಡ್ಡ ಹಾನಿ ಮಾಡುವ ದಂಗೆ–ಗಲಭೆಗಳಲ್ಲಿ ಭಾಗಿಯಾಗಲಿದ್ದಾರೆ ಎಂಬ ಸಂಶಯದ ಮೇಲೆ ವ್ಯಕ್ತಿ ಅಥವಾ ಸಂಸ್ಥೆಗಳ ದೂರವಾಣಿಗಳನ್ನು ಕದ್ದಾಲಿಸಲು ಈ ನಿಯಮಗಳಡಿ ಅವಕಾಶವಿದೆ. ಇಂತಹ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಸಮರ್ಥನೀಯ ಕಾರಣ ಉಲ್ಲೇಖಿಸಿ ಕದ್ದಾಲಿಸಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಮಟ್ಟದಲ್ಲಾದರೆ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯದಲ್ಲಾದರೆ ಗೃಹ ಇಲಾಖೆಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ತನಿಖಾ ಸಂಸ್ಥೆಗಳು ಪಡೆಯಲೇಬೇಕು. ದೇಶದ್ರೋಹದ ನಿಗ್ರಹ ಅಥವಾ ರಾಷ್ಟ್ರದ ಭದ್ರತೆ ಕಾಪಾಡಲು ಇರುವ ಮಹತ್ವದ ಅಸ್ತ್ರವೊಂದನ್ನು ಅಧಿಕಾರಸ್ಥರು ತಮ್ಮ ಎದುರಾಳಿ ಪಕ್ಷದ ಅಥವಾ ತಮ್ಮದೇ ಪಕ್ಷದ ರಾಜಕಾರಣಿಗಳನ್ನು ಸದೆಬಡಿಯಲು ಬಳಸುವುದು ರಾಜಕೀಯದ ಹೀನಮಾರ್ಗಗಳಲ್ಲಿ ಒಂದು.

ಸರ್ಕಾರ ಉಳಿಸಿಕೊಳ್ಳಲು ನಡೆಸಿದ್ದಾರೆ ಎನ್ನಲಾದ ಕದ್ದಾಲಿಕೆಯ ಪ್ರಕರಣವೀಗ, ಅಧಿಕಾರಿಗಳು, ಭೂಗತ ಜಗತ್ತು, ದಂಧೆಕೋರರ ನಡುವಣ ನಂಟನ್ನು ಬಹಿರಂಗಪಡಿಸಿದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಹುದ್ದೆಗೆ ನಡೆದ ಲಾಬಿಯ ಮತ್ತೊಂದು ಮುಖವನ್ನೂ ಬಯಲು ಮಾಡಿದೆ. ಇಂತಹ ಕೃತ್ಯ ಎಸಗಿದವರು ಹಾಗೂ ಅದಕ್ಕೆ ಆದೇಶ ಕೊಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಮಾಡಲು ಮತ್ತು ವ್ಯಕ್ತಿಯ ಖಾಸಗಿತನ ರಕ್ಷಿಸಲು ಕಠಿಣ ಕಾಯ್ದೆಯೊಂದನ್ನು ತರಬೇಕು. ಆಗಮಾತ್ರ, ಜನರಲ್ಲಿ ತಮ್ಮ ಖಾಸಗಿತನ ಬಯಲಾಗುವುದಿಲ್ಲ ಎಂಬ ವಿಶ್ವಾಸ ಮೂಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT