ಶುಕ್ರವಾರ, ಜೂನ್ 5, 2020
27 °C

‘ಉದ್ಯೋಗ ಖಾತರಿ’ಗೆ ಶಕ್ತಿ ತುಂಬಿದುಡಿಯುವ ಕೈಗಳಿಗೆ ಕೆಲಸ ಕೊಡಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಸೃಷ್ಟಿಸಿರುವ ಬಿಕ್ಕಟ್ಟಿನಿಂದ ದೇಶದ ಸುಮಾರು 40 ಕೋಟಿ ಜನ ಬಡತನದ ದವಡೆಗೆ ಸಿಲುಕುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಅಧ್ಯಯನ ವರದಿ ಹೇಳಿದೆ. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಾಂತರ ಭಾಗದ ಜನರನ್ನೇ ಈ ಬಿಕ್ಕಟ್ಟು ಹೆಚ್ಚಿಗೆ ಕಾಡಲಿದ್ದು, ಅವರ ನಿತ್ಯದ ಅನ್ನವನ್ನೇ ಕಸಿಯುವ ಸಾಧ್ಯತೆ ಇದೆ ಎಂಬ ಭೀತಿಯನ್ನೂ ವ್ಯಕ್ತಪಡಿಸಲಾಗಿದೆ. ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಕೋಟ್ಯಂತರ ಮಂದಿ ನಗರ ಪ್ರದೇಶಗಳಿಂದ ಗಂಟು–ಮೂಟೆ ಕಟ್ಟಿಕೊಂಡು ಹಳ್ಳಿಗಳ ಕಡೆಗೆ ವಲಸೆ ಹೋಗಿದ್ದಾರೆ. ಈ ವಿದ್ಯಮಾನವನ್ನು ನೋಡಿದಾಗ ವಿಶ್ವಸಂಸ್ಥೆಯು ಹೇಳಿದಂತಹ ಭವಿಷ್ಯದ ದುರ್ದಿನಗಳು ಹೊಸ್ತಿಲಲ್ಲೇ ಇವೆ ಎನ್ನುವ ಮುನ್ಸೂಚನೆ ಸಿಗದಿರಲಾರದು. ಮೊನ್ನೆ ಮೊನ್ನೆಯವರೆಗೆ ವೃದ್ಧಾಶ್ರಮಗಳ ಸ್ವರೂಪ ತಾಳಿ ಭಣಗುಡುತ್ತಿದ್ದ ರಾಜ್ಯದ ಸಾವಿರಾರು ಹಳ್ಳಿಗಳು ಇದೀಗ ಜನರಿಂದ ತುಂಬಿ ತುಳುಕುತ್ತಿವೆ. ಆದರೆ, ಯಾವ ಕಾರಣಕ್ಕಾಗಿ ಅವರು ಊರನ್ನು ತೊರೆದಿದ್ದರೋ ಈಗ ವಾಪಸಾದಾಗಲೂ ಅದೇ ಕಾರಣವೇ ಅವರನ್ನು ಸಮಸ್ಯೆಯಾಗಿ ಕಾಡುತ್ತಿದೆ. ಅಂದರೆ, ಅಲ್ಲಿನ ದುಡಿಯುವ ಕೈಗಳಿಗೆ ಉದ್ಯೋಗ
ವಿಲ್ಲ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ರಾಜ್ಯ ಸರ್ಕಾರದಿಂದ ಭರವಸೆದಾಯಕ ಘೋಷಣೆ ಯೊಂದು ಹೊರಬಿದ್ದಿದೆ. ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯನ್ನು ತಕ್ಷಣದಿಂದಲೇ ಪುನರಾರಂಭ ಮಾಡಲಾಗುವುದು ಮತ್ತು ನಿತ್ಯದ ಕೂಲಿಯನ್ನು ₹249ರಿಂದ ₹ 275ಕ್ಕೆ ಹೆಚ್ಚಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಪ್ರಕಟಿಸಿದ್ದಾರೆ. ನೊಂದವರ ಕಣ್ಣೀರು ಒರೆಸಲು ಇದರಿಂದ ಸ್ವಲ್ಪಮಟ್ಟಿಗಾದರೂ ಸಾಧ್ಯವಾಗಲಿದ್ದು, ಉದ್ಯೋಗ ಖಾತರಿ ಯೋಜನೆಯನ್ನು ಪುನಶ್ಚೇತನಗೊಳಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ.

ಮೂರು ದಶಕಗಳ ಹಿಂದೆ ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ದೇಶದ ಚಲನೆಯ ದಿಕ್ಕೇ ಬದಲಾಗಿದೆ. ಕೃಷಿ ಹಾಗೂ ಗ್ರಾಮೀಣ ಅರ್ಥ ವ್ಯವಸ್ಥೆಯ ಬೇರುಗಳೆಲ್ಲ ಸಡಿಲಗೊಂಡಿವೆ. ವಲಸೆ ಹೆಚ್ಚಿದಂತೆ, ಹಳ್ಳಿಗಳು ಬಿಕೋ ಎನ್ನತೊಡಗಿದ್ದು, ನಗರಗಳು ಮಿತಿಮೀರಿ ಬೆಳೆದಿವೆ. ಸ್ಥಳೀಯವಾಗಿಯೇ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದುವರೆಗಿನ ಆಡಳಿತಗಾರರು ವಿಫಲವಾಗಿದ್ದರ ಪರಿಣಾಮವನ್ನು ಈಗ ಉಣ್ಣಬೇಕಿದೆ. ಹೌದು, ಕೊರೊನಾ ವೈರಾಣು ಈಗ ತಂದಿರುವ ಸಂಕಷ್ಟವು ಹಳ್ಳಿಗಳನ್ನು ಹೊಸ ದೃಷ್ಟಿಕೋನದಿಂದ ನೋಡುವಂತಹ ಅವಕಾಶವೊಂದನ್ನು ಸೃಷ್ಟಿಸಿದೆ. ಕೃಷಿ ಜತೆಗೆ ಗುಡಿ ಕೈಗಾರಿಕೆಗಳನ್ನೂ ಉತ್ತೇಜಿಸುವ, ಆ ಮೂಲಕ ವಲಸೆಯನ್ನೂ ತಪ್ಪಿಸುವಂತಹ ಯೋಜನೆಗಳನ್ನು ರೂಪಿಸಲು ಇದು ಸಕಾಲ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ನವಚೇತನ ನೀಡಲೂ ಈಗಿನ ಸಂದರ್ಭವನ್ನು ಬಳಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ದುಡಿಯುವ ಕೈಗಳಿಗೆ ತುರ್ತಾಗಿ ಕೆಲಸ ಬೇಕಿದೆ. ಉದ್ಯೋಗ ಖಾತರಿ ಯೋಜನೆ ಮೂಲಕ ಅವರಿಗೆ ಉದ್ಯೋಗಾವಕಾಶ ಒದಗಿಸಿಕೊಡುವುದರ ಜತೆಗೆ ಸಾರ್ವಜನಿಕ ಆಸ್ತಿ ಸೃಷ್ಟಿಸುವ ಕೆಲಸವನ್ನೂ ಸರ್ಕಾರ ಮಾಡಬೇಕು. ಉದ್ಯೋಗ ಖಾತರಿ ಯೋಜನೆಗೆ ಹಣದ ವ್ಯವಸ್ಥೆ ಮಾಡಿಕೊಳ್ಳುವುದನ್ನು ಸರ್ಕಾರವು ಆದ್ಯತೆಯಾಗಿ ಪರಿಗಣಿಸಬೇಕು. ಏಕೆಂದರೆ, ಹಸಿದ ಹೊಟ್ಟೆಯನ್ನು ತುಂಬಿಸುವುದು ಎಲ್ಲಕ್ಕಿಂತಲೂ ತುರ್ತಿನ ಕೆಲಸ. ಸಿಂಧನೂರಿನ ಜೀವವೊಂದು ಹಸಿವಿನಿಂದ ಪ್ರಾಣತೆತ್ತಂತಹ ಪ್ರಸಂಗ ಮರುಕಳಿಸದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ. ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಕೃಷಿಹೊಂಡ, ಹೊಲಗಳ ಬದು ನಿರ್ಮಾಣದಂತಹ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಹೇಗೂ ಬೇಸಿಗೆ ಕಾಲ ಬಂದಿರುವುದರಿಂದ ಕಾಲುವೆಗಳ ದುರಸ್ತಿ, ಕೆರೆಗಳ ಹೂಳು ತೆಗೆಯುವುದು, ಬಾಂದಾರಗಳನ್ನು ನಿರ್ಮಿಸುವುದು ಮೊದಲಾದ ಕಾಮಗಾರಿಗಳನ್ನೂ ನಡೆಸಬೇಕು. ಯೋಜನೆಯ ಅನುಷ್ಠಾನದಲ್ಲಿ ಸಣ್ಣ ಲೋಪವೂ ಆಗದಂತೆ ಎಚ್ಚರಿಕೆ ವಹಿಸಬೇಕು. ಕಾರ್ಮಿಕರ ಖಾತೆಗಳಿಗೆ ಹದಿನೈದು ದಿನಗಳ ಕೂಲಿಯನ್ನು ಮುಂಗಡವಾಗಿ ತುಂಬಬೇಕು. ವಲಸೆಯ ಈ ಆಟದಲ್ಲಿ ಮುರಿದು ಬಿದ್ದಿರುವ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಆ ನೆರವು, ಅವರಿಗೆ ಊರುಗೋಲಾಗಿ ಒದಗಲಿದೆ. ಈ ಯೋಜನೆಯ ಹಣವನ್ನು ದುರುಪಯೋಗ ಮಾಡಿಕೊಂಡ ಹಲವು ಹಗರಣಗಳು ಈ ಹಿಂದೆ ವರದಿಯಾಗಿದ್ದುಂಟು. ಒಂದು ಹೊತ್ತಿನ ಊಟಕ್ಕೂ ಚಿಂತಿಸುವ ಸ್ಥಿತಿಯಲ್ಲಿ ಮೌನವಾಗಿ ರೋದಿಸುತ್ತಿರುವಂತಹ ಬಡವರ ಕಣ್ಣೀರನ್ನು ಒರೆಸಲು ಮೀಸಲಿಟ್ಟ ಹಣದ ಪ್ರತೀ ಪೈಸೆಯೂ ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು