ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಸರ್ಕಾರಿ ಶಾಲೆ ಸಶಕ್ತಗೊಳಿಸಲು ಬೇಕಿದೆ ದೃಢಸಂಕಲ್ಪ

Published 27 ಡಿಸೆಂಬರ್ 2023, 23:45 IST
Last Updated 27 ಡಿಸೆಂಬರ್ 2023, 23:45 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಶಾಲೆಗಳ ಹಲವು ಕಟ್ಟಡಗಳು ಸುರಕ್ಷಿತವಲ್ಲ ಎಂಬ ವಿಚಾರವು ಕಳವಳಕಾರಿ
ಆಗಿದೆ. ಇದರ ಜೊತೆಗೆ ಇತರ ಮೂಲಸೌಕರ್ಯಗಳ ಕೊರತೆಯೂ ಶಾಲೆಗಳನ್ನು ಕಾಡುತ್ತಿದೆ. ಹಲವೆಡೆ ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ, ಹೆಂಚುಗಳು ಉದುರುತ್ತಿವೆ, ಸಿಮೆಂಟ್‌ ಚಾವಣಿ ಇದ್ದೆಡೆ ಸಿಮೆಂಟ್‌ ಉದುರುತ್ತಿದೆ, ಹಲವಾರು ಶಾಲೆಗಳಲ್ಲಿ ಬೆಂಚು, ಮೇಜುಗಳಿಲ್ಲ; ಶುದ್ಧ ಕುಡಿಯುವ ನೀರು ಲಭ್ಯ ಇಲ್ಲದ ಶಾಲೆಗಳ ಸಂಖ್ಯೆಯೂ ಬಹಳ ದೊಡ್ಡದಿದೆ. ಶೌಚಾಲಯದ ಸೌಲಭ್ಯ ಇಲ್ಲದ ಶಾಲೆಗಳು ಹಲವಿದ್ದರೆ, ಶೌಚಾಲಯದ ಸ್ವಚ್ಛತೆ ಮತ್ತು ಇತರ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಗ್ರಾಮೀಣ ಪ್ರದೇಶ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಶಾಲೆಗಳಲ್ಲಿಯೇ ಈ ಸಮಸ್ಯೆಗಳು ಹೆಚ್ಚು ಎಂಬುದು ಇಂತಹ ಪ್ರದೇಶಗಳ ಕುರಿತು ಸರ್ಕಾರ ಹೊಂದಿರುವ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ರಾಜ್ಯದಲ್ಲಿ ಒಟ್ಟು 48,285 ಸರ್ಕಾರಿ ಶಾಲೆಗಳಿದ್ದು, 17,258 ಕಡೆ ಶಾಲಾ ಕೊಠಡಿಗಳ ಕೊರತೆ ಇದೆ. ರಾಜ್ಯದ 5 ಜಿಲ್ಲೆಗಳಲ್ಲಿ ತಲಾ ಒಂದು ಸಾವಿರಕ್ಕೂ ಹೆಚ್ಚು ಕೊಠಡಿಗಳು ನಿರ್ಮಾಣವಾಗಬೇಕಿವೆ.


ಕೊಠಡಿಗಳಿಲ್ಲದೇ ಮರದ ನೆರಳು, ಅಂಗನವಾಡಿ ಕೇಂದ್ರಗಳು, ಯಾವುದೋ ಉಗ್ರಾಣದಲ್ಲಿ ಶಾಲೆಗಳನ್ನು ನಡೆಸುವ ದುಃಸ್ಥಿತಿ ಇನ್ನೂ ಇದೆ ಎಂಬುದು ದುರದೃಷ್ಟಕರ. ‘ನೆಲದ ಮೇಲೆ ಕುಳಿತು ಪಾಠ ಕೇಳುವ ವ್ಯವಸ್ಥೆಯನ್ನು ಮುಂದಿನ ವರ್ಷದೊಳಗೆ ಕೊನೆಗೊಳಿಸಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ಕೊಟ್ಟಿದ್ದಾರೆ. ಅದಕ್ಕೆ ಬೇಕಾಗುವ ಅನುದಾನವನ್ನು ಮುಂದಿನ ವರ್ಷದ ಬಜೆಟ್‌ನಲ್ಲಿ ತೆಗೆದಿರಿಸಲು ಅವರು ಮುಖ್ಯಮಂತ್ರಿ ಮೇಲೆ ಅಗತ್ಯ ಒತ್ತಡ ಹಾಕಬೇಕಾಗಿದೆ. ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆಯ ಕಾರಣದಿಂದಲೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ ಎಂಬುದು ಬಹಳ ಸ್ಪಷ್ಟ. 

ಸರ್ಕಾರಿ ಶಾಲೆಗಳ ಪೈಕಿ ಒಟ್ಟು 287 ಶಾಲೆಗಳು ಈ ಸಾಲಿನಲ್ಲಿ ಶೂನ್ಯ ದಾಖಲಾತಿಯನ್ನು ಹೊಂದಿದ್ದರೆ, ಹತ್ತರವರೆಗೆ ಮಕ್ಕಳಿರುವ ಶಾಲೆಗಳ ಸಂಖ್ಯೆ 3,546. ಈ ಶಾಲೆಗಳ ಪರಿಸ್ಥಿತಿ ಸುಧಾರಿಸದೇ ಇದ್ದರೆ, ಮುಂದಿನ ವರ್ಷಗಳಲ್ಲಿ ಶೂನ್ಯ ದಾಖಲಾತಿ ಶಾಲೆಗಳ ಪಟ್ಟಿಗೆ ಈ ಶಾಲೆಗಳೂ ಸೇರಬಹುದು. ಶಾಲಾ ಮೂಲಸೌಕರ್ಯವನ್ನು ಖಾತರಿಪಡಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲೇಬೇಕಿದೆ. ಮಧ್ಯಾಹ್ನದ ಬಿಸಿಯೂಟ, ಶಾಲಾ ದತ್ತು ಯೋಜನೆ, ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಣೆಯಂತಹ ಉಪಕ್ರಮ ಗಳಲ್ಲಿ ಹಲವು ಕರ್ನಾಟಕದಿಂದಲೇ ಆರಂಭ ಗೊಂಡಂತಹವು. ಇತರ ರಾಜ್ಯಗಳೂ ಇಂತಹ ಯೋಜನೆಗಳನ್ನು ಆ ಬಳಿಕ ಅಳವಡಿಸಿಕೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತವು ಕಳವಳ ಮೂಡಿಸುವ ಮತ್ತೊಂದು ಸಂಗತಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರ ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ಸಿಗದಿರುವುದು ಕೆಲವು ಪ್ರಮುಖ ಕಾರಣಗಳು. ಶಿಕ್ಷಕರಿಗೆ ಬೋಧನೆಯ ಜೊತೆಗೆ ಇತರ ಹಲವು ಜವಾಬ್ದಾರಿಗಳನ್ನು ವಹಿಸಲಾಗಿದೆ. ಇವುಗಳನ್ನು ಪೂರೈಸುವು ದಕ್ಕಾಗಿಯೇ ಶಿಕ್ಷಕರ ಹೆಚ್ಚಿನ ಸಮಯ ವ್ಯಯವಾಗುತ್ತದೆ. ಶಿಕ್ಷಕರನ್ನು ಬೋಧನೆಗೆ ಹೊರತಾದ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂಬುದನ್ನು ಅಧಿಕಾರಸ್ಥರೂ ಒಪ್ಪುತ್ತಾರೆ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರಿ ಶಾಲೆಗಳನ್ನು ಉಳಿಸಿ–ಬೆಳೆಸುವುದನ್ನು ಸರ್ಕಾರವು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ಸರ್ಕಾರಿ ಶಾಲೆಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿರುವವರು ದುರ್ಬಲ ಸಮುದಾಯಗಳ ಮಕ್ಕಳು. ಆ ಸಮುದಾಯಗಳ ಸಬಲೀಕರಣದ ಕೀಲಿಕೈ ಸರ್ಕಾರಿ ಶಾಲೆಗಳ ಶಿಕ್ಷಕರ ಕೈಯಲ್ಲಿದೆ. ಈ ಶಾಲೆಗಳನ್ನು ಎಲ್ಲ ರೀತಿಯಲ್ಲೂ ಸಶಕ್ತಗೊಳಿಸಲು ಬೇಕಾದ ಸಮಗ್ರ ಯೋಜನೆ ರೂಪಿಸಿ, ಅದನ್ನು ಕಾಲಮಿತಿಯೊಳಗೆ ಕಾರ್ಯರೂಪಕ್ಕೆ ತರುವ ಬದ್ಧತೆಯನ್ನು ಸರ್ಕಾರ ಈಗಲಾದರೂ ಪ್ರದರ್ಶಿಸಬೇಕು. ಶಿಕ್ಷಕರ ನೇಮಕಾತಿಯು ಕಾಲಕಾಲಕ್ಕೆ ನಡೆಯುವಂತೆ ನೋಡಿಕೊಳ್ಳಬೇಕು. ಬೋಧನೆಯ ಗುಣಮಟ್ಟ ಖಾತರಿಪಡಿಸಲು ನಿಗಾ ವ್ಯವಸ್ಥೆ ನಿರಂತರವಾಗಿ ಇರುವಂತೆ ಮಾಡಬೇಕು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT