ಸೋಮವಾರ, ಆಗಸ್ಟ್ 8, 2022
23 °C

ಸಂಪಾದಕೀಯ| ಪಿಯುಸಿ ಫಲಿತಾಂಶ ಕೊಂಚ ಏರಿಕೆ: ಶಿಕ್ಷಣ ಕ್ಷೇತ್ರ ಪುನಶ್ಚೇತನದ ಸೂಚನೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

2021–22ನೇ ಸಾಲಿನ ಶೈಕ್ಷಣಿಕ ವರ್ಷದ ಪಿಯುಸಿ ಫಲಿತಾಂಶವು ಕೊರೊನಾ ಆತಂಕದ ನಡುವೆಯೂ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಇಚ್ಛಾಶಕ್ತಿಯ ದ್ಯೋತಕವಾಗಿದೆ. ಕಳೆದ ವರ್ಷ ಕೊರೊನಾ ಸೋಂಕು ಉಲ್ಬಣಿಸಿದ ಕಾರಣದಿಂದಾಗಿ ಪರೀಕ್ಷೆಗಳನ್ನು ನಡೆಸದೆಯೇ ಫಲಿತಾಂಶ ಪ್ರಕಟಿಸಲಾಗಿತ್ತು. ಅದಕ್ಕೆ, ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿಗಳು ತೋರಿದ ಸಾಧನೆಯನ್ನು ಪರಿಗಣಿಸಲಾಗಿತ್ತು. 2021–22ರ ಶೈಕ್ಷಣಿಕ ವರ್ಷದಲ್ಲೂ ಕೊರೊನಾ ಕಣ್ಣಾಮುಚ್ಚಾಲೆ ಮುಂದುವರಿದಿತ್ತಾದರೂ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಉಳಿಸಿಕೊಂಡು ದೃಢಮನಸ್ಸಿನಿಂದ ಪರೀಕ್ಷೆಯ ಸವಾಲನ್ನು ಎದುರಿಸಿದ್ದರ ಫಲಿತಾಂಶ ಈಗ ಪ್ರಕಟವಾಗಿದೆ. ಪ್ರಸಕ್ತ ಫಲಿತಾಂಶ ಹಾಗೂ ಕಳೆದ ತಿಂಗಳು ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಕೊರೊನಾ ಕಾರಣದಿಂದಾಗಿ ಏರುಪೇರಾಗಿದ್ದ ಶೈಕ್ಷಣಿಕ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ದಿಸೆಯಲ್ಲಿ ಉತ್ತೇಜನ ನೀಡುವಂತಿವೆ. ಪರೀಕ್ಷೆಗೆ ಹಾಜರಾದ 6.68 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿ ಗಳಲ್ಲಿ, ಶೇಕಡ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಉತ್ತಮ ಸಾಧನೆಯೆಂದೇ ಹೇಳಬೇಕು. 2019–20ನೇ ಸಾಲಿನ ಶೇ 61.80ರಷ್ಟು ಫಲಿತಾಂಶ ಸಾಧನೆಗೆ ಹೋಲಿಸಿದರೆ, ಈ ಬಾರಿ ಫಲಿತಾಂಶದಲ್ಲಿ ಶೇ 0.08ರಷ್ಟು ಏರಿಕೆಯಾಗಿದೆ. ಪರೀಕ್ಷೆ ಸಂದರ್ಭದಲ್ಲಿ ತಲೆದೋರಿದ್ದ ಹಿಜಾಬ್‌ ವಿವಾದದಿಂದಾಗಿ ವಿಚಲಿತರಾಗದೆ, ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.  ಎಂದಿನಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿರುವುದು ಅಚ್ಚರಿಯ ಸಂಗತಿಯಲ್ಲವಾ ದರೂ, ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳ ಸಾಧನೆ ನಗರ ಪ್ರದೇಶಗಳ ಕಾಲೇಜುಗಳಿಗಿಂತ ಕೊಂಚ ಉತ್ತಮವಾಗಿರುವುದು ಗಮನಸೆಳೆಯುವಂತಿದೆ. ನಗರ ಪ್ರದೇಶಗಳ ಶೇ 61.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶಗಳ ಶೇ 62.18ರಷ್ಟು ಮಕ್ಕಳು ಯಶಸ್ಸು ಗಳಿಸಿದ್ದಾರೆ.

ಸವಲತ್ತುಗಳ ಕೊರತೆಯ ನಡುವೆಯೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಸಾಧನೆ ವಿಶೇಷವಾದುದು. ಆದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು, ವಿಶೇಷವಾಗಿ ಕಲಾ ವಿಭಾಗದ ವಿದ್ಯಾರ್ಥಿಗಳ ಹಿನ್ನಡೆ ಕಳವಳ ಹುಟ್ಟಿಸುವಂತಹದ್ದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೇ 51.38ರಷ್ಟು ಉತ್ತೀರ್ಣ ರಾಗಿದ್ದಾರೆ, ಇಂಗ್ಲಿಷ್‌ ಮಾಧ್ಯಮದ ಶೇ 69.99 ರಷ್ಟು ವಿದ್ಯಾರ್ಥಿಗಳು ಯಶಸ್ಸು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 64.97 ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇ  72.53ರಷ್ಟು ವಿದ್ಯಾರ್ಥಿಗಳು ಯಶಸ್ಸು ಗಳಿಸಿದ್ದರೆ, ಕಲಾ ವಿಭಾಗದಲ್ಲಿನ ಯಶಸ್ಸಿನ ಪ್ರಮಾಣ ಶೇ 48.71ರಷ್ಟು ಮಾತ್ರ. 2019–20ರಲ್ಲಿ 41.27 ಹಾಗೂ 2018–19ರಲ್ಲಿ ಶೇ 50ಕ್ಕಿಂತಲೂ ಹೆಚ್ಚಿನ ಫಲಿತಾಂಶವನ್ನು ಕಲಾ ವಿಭಾಗ ಸಾಧಿಸಿತ್ತು. ಈ ಅಂಕಿಅಂಶಗಳು, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ದೊರೆಯುತ್ತಿರುವ ಉತ್ತೇಜನವು ಕಲಾ ವಿಭಾಗಕ್ಕೆ ದೊರೆಯದಿರುವು ದನ್ನು ಸೂಚಿಸುವಂತಿವೆ. ಕಲಾ ವಿಭಾಗ ಮತ್ತು ವಿಜ್ಞಾನ ವಿಭಾಗಗಳ ನಡುವೆ ಶೇ 20ಕ್ಕಿಂತಲೂ ಹೆಚ್ಚಿನ ಫಲಿತಾಂಶದ ವ್ಯತ್ಯಾಸ ಇರುವುದು ಭಿನ್ನ ಜ್ಞಾನಕ್ಷೇತ್ರಗಳ ಬೆಳವಣಿಗೆಗೆ ಸಂಬಂಧಿಸಿದಂತೆ ಉಂಟಾಗಿರುವ ಅಸಮತೋಲನವನ್ನು ಸೂಚಿಸುವಂತಿದೆ. 

ಫಲಿತಾಂಶ ಸಾಧನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮೊದಲೆರಡು ಸ್ಥಾನಗಳ
ಲ್ಲಿವೆ. 2019–20ರ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ವಿಜಯಪುರ ಜಿಲ್ಲೆಯು ಈ ಬಾರಿ ಪುಟಿದೇಳುವ ಮೂಲಕ ಮೂರನೇ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯು ನಾಲ್ಕು ಮತ್ತು ಐದನೇ ಸ್ಥಾನ ಪಡೆದಿವೆ. ರಾಯಚೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳು ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. 2019–20ರ ಸಾಲಿನ ಶೈಕ್ಷಣಿಕ ವರ್ಷದಲ್ಲೂ ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳು ಕಳ‍ಪೆ ಸಾಧನೆ ತೋರಿದ್ದವು. ಉತ್ತೀರ್ಣತೆಯ ಪ್ರಮಾಣ ಕಡಿಮೆಯಿರುವ ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಎಲ್ಲ ಪ್ರಯತ್ನ ನಡೆಸಲಿದೆ ಎಂದು ಪ್ರತಿವರ್ಷ ಶಿಕ್ಷಣ ಸಚಿವರು ಹೇಳುವುದು ವಾಡಿಕೆಯಾಗಿದ್ದರೂ, ಆ ಮಾತು ಕಾರ್ಯರೂಪಕ್ಕೆ ಬಂದಿಲ್ಲದಿರುವುದನ್ನು ಫಲಿತಾಂಶಗಳೇ ಸೂಚಿಸುತ್ತಿವೆ. ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಪ್ರದೇಶಗಳು ಶೈಕ್ಷಣಿಕ ಸಾಧನೆಯಲ್ಲೂ ಹಿನ್ನಡೆ ಅನುಭವಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸುವಂತೆ, ಶೈಕ್ಷಣಿಕವಾಗಿ ಹಿನ್ನಡೆಯಲ್ಲಿರುವ ಜಿಲ್ಲೆಗಳ ವಿದ್ಯಾರ್ಥಿಗಳ ಉತ್ತೇಜನಕ್ಕೂ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಾಗಿದೆ. ಕಲಾ ವಿಭಾಗಕ್ಕೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುವ ದಿಸೆಯಲ್ಲಿ ಕೂಡ ಶೈಕ್ಷಣಿಕ ವಲಯದಲ್ಲಿ ಚಿಂತನೆ ನಡೆಯಬೇಕಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶಗಳು ಪ್ರಕಟವಾದ ಸಂದರ್ಭದಲ್ಲಿ ಪ್ರದೇಶವಾರು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ವಿಶ್ಲೇಷಣೆ ನಡೆಯುತ್ತದೆ. ಈ ಚರ್ಚೆ ನಿರಂತರವಾಗಿರ ಬೇಕು ಹಾಗೂ ಶಿಕ್ಷಣದ ಗುಣಮಟ್ಟವನ್ನು ರಾಜ್ಯದ ಎಲ್ಲೆಡೆ ಏಕರೂಪದಲ್ಲಿರುವಂತೆ ನೋಡಿಕೊಳ್ಳುವ ದಿಸೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು