ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ; ಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ:ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಬಲ ಬೇಕು

ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದು ಹಾಗೂ ಕೃಷಿ ಕ್ಷೇತ್ರದ ಚಟುವಟಿಕೆಗಳಿಗೆ ಇನ್ನಷ್ಟು ಇಂಬು ಕೊಡುವುದು ಸರ್ಕಾರದ ಆದ್ಯತೆ ಆಗಬೇಕು
Published 7 ಮಾರ್ಚ್ 2024, 0:23 IST
Last Updated 7 ಮಾರ್ಚ್ 2024, 0:23 IST
ಅಕ್ಷರ ಗಾತ್ರ

ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಆಶ್ಚರ್ಯ ಮೂಡಿಸುವ ಮಟ್ಟದಲ್ಲಿ ಏರಿಕೆ ಕಂಡಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಎರಡನೆಯ ಅಂದಾಜಿನಲ್ಲಿ, ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು 2023–24ನೇ ಹಣಕಾಸು ವರ್ಷಕ್ಕೆ ಶೇಕಡ 7.6ಕ್ಕೆ ಹೆಚ್ಚಿಸಲಾಗಿದೆ. ಮೊದಲಿನ ಅಂದಾಜಿನ ಪ್ರಕಾರ, ಜಿಡಿಪಿ ಬೆಳವಣಿಗೆಯು ಶೇ 7.3ರಷ್ಟು ಇರಲಿದೆ ಎಂದು ಹೇಳಲಾಗಿತ್ತು. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ 8.4ರಷ್ಟು ದಾಖಲಾಗಿದೆ ಎಂದು ಎನ್‌ಎಸ್‌ಒ ಹೇಳಿದೆ. ಇದು ಮಾರುಕಟ್ಟೆಯ ನಿರೀಕ್ಷೆಯಾಗಿದ್ದ
ಶೇ 6.6ಕ್ಕಿಂತ, ಆರ್‌ಬಿಐ ಮಾಡಿದ್ದ ಅಂದಾಜು ಪ್ರಮಾಣವಾದ ಶೇ 6.5ಕ್ಕಿಂತ ಹೆಚ್ಚು. ಎನ್‌ಎಸ್‌ಒ ಅಂದಾಜಿಗೆ ಅನುಗುಣವಾಗಿ ಜಿಡಿಪಿ ಬೆಳವಣಿಗೆ ಆದಲ್ಲಿ, ದೇಶದ ಅರ್ಥ ವ್ಯವಸ್ಥೆಯು ಸತತ ಮೂರನೆಯ ವರ್ಷದಲ್ಲಿಯೂ ಶೇ 7 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಬೆಳವಣಿಗೆ ದಾಖಲಿಸಿದಂತೆ ಆಗಲಿದೆ. ಅದೂ, ಜಾಗತಿಕ ಅರ್ಥ ವ್ಯವಸ್ಥೆಗಳ ಬೆಳವಣಿಗೆ ಪ್ರಮಾಣದ ಮೇಲೆ ಗಂಭೀರವಾದ ಒತ್ತಡಗಳು ಇರುವಾಗ ಭಾರತವು ಈ ಪ್ರಮಾಣದ ಬೆಳವಣಿಗೆ ದಾಖಲಿಸಿದಂತೆ ಆಗುತ್ತದೆ. ದೊಡ್ಡ ಗಾತ್ರದ ಅರ್ಥ ವ್ಯವಸ್ಥೆಗಳ ಪೈಕಿ ಅತಿ ಹೆಚ್ಚಿನ ಪ್ರಮಾಣದ ಬೆಳವಣಿಗೆ ದರವನ್ನು ಭಾರತವು ಹೊಂದಿದಂತೆ ಆಗುತ್ತದೆ. ಹಿಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಪರಿಷ್ಕೃತ ಅಂಕಿ–ಅಂಶಗಳನ್ನು ಕೂಡ ಎನ್‌ಎಸ್‌ಒ ಬಿಡುಗಡೆ ಮಾಡಿದ್ದು, ಹಿಂದಿನ ವರ್ಷದ ಬೆಳವಣಿಗೆ ದರದ ಅಂದಾಜನ್ನು ತುಸು ತಗ್ಗಿಸಿದೆ. ಹೀಗಾಗಿ, ಹಿಂದಿನ ವರ್ಷದ ಬೆಳವಣಿಗೆ ಪ್ರಮಾಣಕ್ಕೆ ಹೋಲಿಸಿ ನೋಡಿದಾಗ ಈ ವರ್ಷದ ಬೆಳವಣಿಗೆ ದರವು ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ಅನ್ನಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳ ಜಿಡಿಪಿ ಬೆಳವಣಿಗೆ ಪ್ರಮಾಣವನ್ನು ಪರಿಷ್ಕರಿಸಲಾಗಿದೆ; ಕಡೆಯ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ಬೆಳವಣಿಗೆ ಪ್ರಮಾಣವು ಕಡಿಮೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಅರ್ಥ ವ್ಯವಸ್ಥೆಯಲ್ಲಿ ಚುರುಕಿನ ಚಟುವಟಿಕೆಗಳು ನಡೆಯುತ್ತಿವೆ, ಈ ಬೆಳವಣಿಗೆಯು ವ್ಯವಸ್ಥೆಯಲ್ಲಿನ ಆಶಾಭಾವನೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂಬುದು ಖಚಿತ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕೆ ವಲಯ ಹಾಗೂ ನಿರ್ಮಾಣ ವಲಯದಲ್ಲಿ ಕ್ರಮವಾಗಿ ಶೇಕಡ 8.5ರಷ್ಟು ಹಾಗೂ ಶೇ 10.7ರಷ್ಟು ಬೆಳವಣಿಗೆ ದಾಖಲಾಗುವ ನಿರೀಕ್ಷೆ ಇದೆ. ಫೆಬ್ರುವರಿ ತಿಂಗಳಲ್ಲಿ ತಯಾರಿಕಾ ವಲಯದ ಬೆಳವಣಿಗೆ ಪ್ರಮಾಣವು ಐದು ತಿಂಗಳುಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಕಾರ್ಖಾನೆಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ಮಾರಾಟವು ಹೆಚ್ಚಾದುದರ ಪರಿಣಾಮ ಇದು. ತಯಾರಿಕಾ ವಲಯದಲ್ಲಿನ ಬೆಳವಣಿಗೆಯ ಕಾರಣದಿಂದಾಗಿ ಒಟ್ಟಾರೆ ಕೈಗಾರಿಕಾ ವಲಯವು ಈ ವರ್ಷದಲ್ಲಿ ಶೇ 9ರಷ್ಟು ಬೆಳವಣಿಗೆ ಕಂಡಿದೆ. ಈ ವರ್ಷದಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಶೇ 0.7ರಷ್ಟು ಮಾತ್ರ ಬೆಳವಣಿಗೆ ಕಂಡುಬರಬಹುದು ಎನ್ನಲಾಗಿದೆ. ಹಿಂದಿನ ವರ್ಷದಲ್ಲಿ ಈ ವಲಯಗಳಲ್ಲಿ ಶೇ 4.7ರಷ್ಟು ಬೆಳವಣಿಗೆ ದಾಖಲಾಗಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಮೌಲ್ಯವರ್ಧನೆಗೆ ಈ ವಲಯದ ಕೊಡುಗೆಯು ಶೇ 0.8ರಷ್ಟು ಕುಸಿದಿದೆ.

ಬೆಳವಣಿಗೆ ಪ್ರಮಾಣ ಚೆನ್ನಾಗಿದೆ, ಆರೋಗ್ಯಕರ ಮಟ್ಟದಲ್ಲಿ ಇದೆ ಎಂದು ಅಂಕಿ–ಅಂಶಗಳು ಹೇಳುತ್ತಿವೆಯಾದರೂ, ತುಸು ಕಳವಳಕ್ಕೆ ಕಾರಣವಾಗುವ ಸಂಗತಿಗಳೂ ಇವೆ. ಮಾರುಕಟ್ಟೆಯಲ್ಲಿ ಖರೀದಿ ಪ್ರಮಾಣವು ಹೆಚ್ಚು ಬಲ ಪಡೆದುಕೊಂಡಿಲ್ಲ. ಡಿಸೆಂಬರ್ ತ್ರೈಮಾಸಿಕದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರ ಕಡೆಯಿಂದ ಆಗುವ ಖರೀದಿಗಳ ಪ್ರಮಾಣವು ಶೇ 3.5ರಷ್ಟು ಮಾತ್ರ ಹೆಚ್ಚಳ ಕಂಡಿದೆ. ಇಡೀ ಆರ್ಥಿಕ ವರ್ಷದಲ್ಲಿ ಇಂತಹ ಖರೀದಿಗಳಲ್ಲಿ ಆಗುವ ಹೆಚ್ಚಳವು ಶೇ 3ರಷ್ಟು ಮಾತ್ರ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಶೇ 3ರಷ್ಟು ಬೆಳವಣಿಗೆ ಕಂಡಲ್ಲಿ ಅದು ಒಟ್ಟಾರೆ ಜಿಡಿಪಿ ಬೆಳವಣಿಗೆ ದರಕ್ಕಿಂತ ಕಡಿಮೆ ಎಂಬುದು ವಾಸ್ತವ. ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಈಗಲೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ಇದರ ಪರಿಣಾಮವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಖರೀದಿಯು ನಗರ ಪ್ರದೇಶಗಳಲ್ಲಿನ ಖರೀದಿ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. ಕುಟುಂಬಗಳ ಮಟ್ಟದಲ್ಲಿ ಆಗುವ ವೆಚ್ಚಗಳು, ಖರೀದಿಗಳು ದೇಶದ ಒಟ್ಟು ಜಿಡಿಪಿಯಲ್ಲಿ ಶೇ 50ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಆದರೆ ಈ ವೆಚ್ಚಗಳಲ್ಲಿ ಹೆಚ್ಚಳ ಆಗುತ್ತಿರುವ ಸೂಚನೆಗಳು ಕಂಡುಬಂದಿಲ್ಲ. ಜನರ ಖರೀದಿ ಪ್ರಮಾಣ ಹೆಚ್ಚಾದಾಗ ಮಾತ್ರ ಹೂಡಿಕೆಗಳಿಗೆ ಇನ್ನಷ್ಟು ಬಲ ಬರುತ್ತದೆ. ಬಂಡವಾಳ ಸಂಚಯನದ ಹೆಚ್ಚಳದ ಪ್ರಮಾಣವು ಶೇ 10ಕ್ಕಿಂತ ಜಾಸ್ತಿ ಇದ್ದರೂ, ಜನರು ಖರ್ಚು ಮಾಡುವುದು ಹೆಚ್ಚಾಗದೇ ಇದ್ದರೆ ಹೆಚ್ಚಿನ ಹೂಡಿಕೆಗೆ ಖಾಸಗಿ ವಲಯವು ಮನಸ್ಸು ಮಾಡುವುದಿಲ್ಲ. ಸರ್ಕಾರಕ್ಕೆ ಕೂಡ ಬಂಡವಾಳ ವೆಚ್ಚವನ್ನು ಬಹುಕಾಲದವರೆಗೆ ದೊಡ್ಡ ಮಟ್ಟದಲ್ಲಿ ಉಳಿಸಿಕೊಳ್ಳಲು ಆಗುವುದಿಲ್ಲ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದು ಹಾಗೂ ಕೃಷಿ ಕ್ಷೇತ್ರದ ಚಟುವಟಿಕೆಗಳಿಗೆ ಇನ್ನಷ್ಟು ಇಂಬು ಕೊಡುವುದು ಸರ್ಕಾರದ ಆದ್ಯತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT