ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರಿ ಸಂಖ್ಯೆಯ ಹುದ್ದೆ ಖಾಲಿ ಇರುವುದು ದುರದೃಷ್ಟಕರ

Last Updated 21 ಮಾರ್ಚ್ 2023, 23:06 IST
ಅಕ್ಷರ ಗಾತ್ರ

ದೇಶದಲ್ಲಿರುವ ಹಲವು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿ ಖಾಲಿ ಇವೆ ಎಂಬುದು ಕಳವಳಕಾರಿ ವಿಚಾರ. ಇದರಿಂದಾಗಿ ಹಲವಾರು ಸಂಸ್ಥೆಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗಬಹುದು. ಏಳು ಐಐಟಿಗಳಲ್ಲಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ಮತ್ತು 22 ಎನ್‌ಐಟಿಗಳಲ್ಲಿ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ನಿರ್ದೇಶಕ ಮಂಡಳಿಗೆ ಅಧ್ಯಕ್ಷರೇ ಇಲ್ಲ ಎಂದು ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ. ಹಾಗೆಯೇ 20 ಐಐಐಟಿಗಳು (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ) ಕೂಡ ಮುಖ್ಯಸ್ಥರಿಲ್ಲದೆಯೇ ಕೆಲಸ ಮಾಡುತ್ತಿವೆ. ಕೇಂದ್ರದ ಅನುದಾನದಲ್ಲಿ ನಡೆಯುವ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ 39 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 13,791 ಬೋಧಕ ಹುದ್ದೆಗಳು. ನಿವೃತ್ತಿ ಅಥವಾ ರಾಜೀನಾಮೆ ಅಥವಾ ಅಗತ್ಯದ ಕಾರಣಕ್ಕಾಗಿ ಸೃಷ್ಟಿಸಲಾದ ಹೆಚ್ಚುವರಿ ಹುದ್ದೆಗಳಿಂದಾಗಿ ಇಷ್ಟೊಂದು ಹುದ್ದೆಗಳು ಖಾಲಿ ಉಳಿದಿವೆ. ಕಾರಣಗಳು ಏನೇ ಇರಲಿ, ಹುದ್ದೆಗಳು ಖಾಲಿ ಇರುವುದರಿಂದಾಗಿ ಈ ಸಂಸ್ಥೆಗಳು ಅಥವಾ ಅಲ್ಲಿನ ಕೆಲವು ವಿಭಾಗಗಳ ಕಾರ್ಯನಿರ್ವಹಣೆಗೆ ತೊಡಕಾಗುವುದು ನಿಜ. ಹಾಗೆಯೇ ಸಂಸ್ಥೆಯಲ್ಲಿ ನಡೆಯುವ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳ ಮೇಲೆ ಕೂಡ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಕೆಲವು ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಹೊಣೆ ಗಾರಿಕೆಯನ್ನು ಬೇರೊಂದು ಸಂಸ್ಥೆಯಲ್ಲಿ ಇರುವವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಇದರಿಂದಾಗಿ ಹೆಚ್ಚುವರಿ ಹೊಣೆ ವಹಿಸಿಕೊಂಡವರಿಗೆ ಹೆಚ್ಚಿನ ಹೊರೆಯಾಗಿ ಅವರ ಕೆಲಸದ ಗುಣಮಟ್ಟವನ್ನು ಬಾಧಿಸಿದೆ.

ಇಷ್ಟೊಂದು ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿರುವುದು ದುರದೃಷ್ಟಕರ. ಬಹುಕಾಲದಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ಈಗ ಇಷ್ಟೊಂದು ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿವೆ. ಇಷ್ಟೊಂದು ದೊಡ್ಡ ಸಂಖ್ಯೆಯ ಖಾಲಿ ಹುದ್ದೆಗಳನ್ನು ಅಲ್ಪಾವಧಿಯಲ್ಲಿ ಭರ್ತಿ ಮಾಡಲು ಸಮರ್ಪಕ ವ್ಯಕ್ತಿಗಳು ಸಿಗುವುದಿಲ್ಲ. ಹಾಗಾಗಿ ಖಾಲಿ ಹುದ್ದೆಗಳ ಸಂಖ್ಯೆಯು ಹೆಚ್ಚುತ್ತಲೇ ಹೋಗುತ್ತದೆ. ಖಾಲಿ ಹುದ್ದೆಗಳಿಗೆ ನೇಮಕಾತಿ ಏಕೆ ಆಗಿಲ್ಲ ಎಂಬುದರ ಕುರಿತು ಸರ್ಕಾರ ಯಾವುದೇ ವಿವರಣೆ ನೀಡಿಲ್ಲ. ಹಾಗೆಯೇ ಖಾಲಿ ಹುದ್ದೆಗಳ ಭರ್ತಿಗೆ ಕೈಗೊಂಡ ಕ್ರಮಗಳೇನು ಎಂಬುದನ್ನೂ ಹೇಳಿಲ್ಲ. ಇವೆಲ್ಲವೂ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು. ಖಾಸಗಿ ಸಂಸ್ಥೆಗಳ ದುಬಾರಿ ಶುಲ್ಕವನ್ನು ಭರಿಸಲಾಗ‌ ದವರಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣದ ಅವಕಾಶ ಕೊಡುವ ಕೇಂದ್ರಗಳು. ಉನ್ನತ ಶಿಕ್ಷಣದ ಗುಣಮಟ್ಟದ ವಿಚಾರದಲ್ಲಿ ಭಾರತವು ಯಾವಾಗಲೂ ಹಿಂದೆಯೇ ಇದೆ. ಜಾಗತಿಕ ಮಟ್ಟದ ಶ್ರೇಯಾಂಕದಲ್ಲಿ ಉನ್ನತ ಶ್ರೇಣಿ ಪಡೆದ ಸಂಸ್ಥೆಗಳು ನಮ್ಮ ದೇಶದಲ್ಲಿ ಇಲ್ಲ. ಕಳಪೆ ಮಾನವ ಸಂಪನ್ಮೂಲ, ಮೂಲಸೌಕರ್ಯದ ಕೊರತೆ, ಶೈಕ್ಷಣಿಕ ಸೌಲಭ್ಯಗಳ ಅಲಭ್ಯತೆಯೇ ಇದಕ್ಕೆ ಮುಖ್ಯ ಕಾರಣಗಳು. ನಮ್ಮ ಸಂಸ್ಥೆಗಳ ಸ್ಥಿತಿ ಹೇಗಿದೆ ಎಂಬುದನ್ನು ಈಗ ಇರುವ ಖಾಲಿ ಹುದ್ದೆಗಳೇ ಸಾರಿ ಹೇಳುತ್ತವೆ.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಾಲೇಜು ಮತ್ತು ಶಾಲೆಯಂತಹ ಸಂಸ್ಥೆಗಳಲ್ಲಿ ಪ‍ರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ದೇಶದಲ್ಲಿ 11 ಲಕ್ಷ ಶಿಕ್ಷಕರ ಕೊರತೆ ಇದೆ ಎಂದು ಭಾರತದ ಶಿಕ್ಷಣದ ಸ್ಥಿತಿಗತಿ ಕುರಿತು ಯುನೆಸ್ಕೊ 2021ರಲ್ಲಿ ಸಿದ್ಧಪಡಿಸಿದ ವರದಿ ಹೇಳಿತ್ತು. ಶಿಕ್ಷಕರಲ್ಲಿ ಹಲವರಿಗೆ ಬೇಕಾದ ಅರ್ಹತೆ ಇಲ್ಲ. ಹಲವು ಶಿಕ್ಷಕರ ಕೆಲಸದ ಸ್ಥಿತಿಗತಿಯೂ ಆಕರ್ಷಕವಾಗಿ ಇಲ್ಲ. ಕಳೆದ ಎರಡು ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಯುವಜನರ ಸಂಖ್ಯೆ ಹೆಚ್ಚು ಇರುವುದರಿಂದ ಆಗುವ ಅನುಕೂಲಗಳ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಅಂತಹ ಅನುಕೂಲಗಳು ಯುವಜನರಿಗೆ ದೊರೆಯುವ ಶಿಕ್ಷಣ ಮತ್ತು ಅವರ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತ. ಮಕ್ಕಳು ಮತ್ತು ಯುವಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕದೇ ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಯುವಜನರೇ ದೊಡ್ಡ ಹೊರೆಯಾಗಿ
ಪರಿಣಮಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT