ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಹೊಸ ದಾಳ ಉರುಳಿಸಿದ ಕೇಜ್ರಿವಾಲ್‌: ಜಾಮೀನಿನ ನಂತರ ಅಚ್ಚರಿಯ ನಡೆ

Published : 15 ಸೆಪ್ಟೆಂಬರ್ 2024, 23:38 IST
Last Updated : 15 ಸೆಪ್ಟೆಂಬರ್ 2024, 23:38 IST
ಫಾಲೋ ಮಾಡಿ
Comments

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ನೀಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್‌ ಮಾಡಿರುವ ಘೋಷಣೆಯು ಅಚ್ಚರಿಯೇ. ಜಾಮೀನು ನೀಡುವ ನಿರ್ಧಾರವು ನಿರೀಕ್ಷಿತವೇ ಆಗಿತ್ತು. ಏಕೆಂದರೆ, ಹೆಚ್ಚು ಕಠಿಣವಾಗಿರುವ ಹಣ ಅಕ್ರಮ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿನ ಪ್ರಕರಣದಲ್ಲಿಯೇ ಕೇಜ್ರಿವಾಲ್‌, ಉಪಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ, ಎಎ‍ಪಿ ಮುಖಂಡ ಸಂಜಯ್‌ ಸಿಂಗ್‌, ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಸೇರಿದಂತೆ ಹಲವರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಹೀಗಾಗಿ, ಸಿಬಿಐ ಪ್ರಕರಣದಲ್ಲಿಯೂ ಕೇಜ್ರಿವಾಲ್‌ಗೆ ಜಾಮೀನು ದೊರೆಯಲಿದೆ ಎಂಬುದು ನಿರೀಕ್ಷಿತವೇ ಆಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗ ಕೇಜ್ರಿವಾಲ್‌ ಘೋಷಿಸಿದ್ದಾರೆ. ವಿಧಾನಸಭೆಗೆ ನವೆಂಬರ್‌ನಲ್ಲಿಯೇ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ‘ಜನರು ಮತ್ತೆ ಆರಿಸಿ ಕಳುಹಿಸಿದರೆ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ಇದು ಅವರಿಗೆ ಸಿಕ್ಕ ರಾಜಕೀಯ ಅವಕಾಶ. ಅಬಕಾರಿ ನೀತಿ ಹಗರಣವನ್ನು ಚುನಾವಣಾ ವಿಚಾರವಾಗಿ ಪರಿವರ್ತಿಸಲು ಅವರು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಯಾಲಯವು ಹೇರಿರುವ ಕಠಿಣ ಜಾಮೀನು ಷರತ್ತುಗಳಿಗೆ ಅವರು ನೀಡಿದ ಉತ್ತರವೂ ಹೌದು. ಜಾಮೀನು ಷರತ್ತುಗಳಿಂದಾಗಿ ಅವರು ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ, ಕಡತಗಳಿಗೆ ಸಹಿ ಮಾಡುವಂತಿಲ್ಲ. ಹೀಗಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಅವರಿಗೆ ಕಷ್ಟವಾಗುತ್ತಿತ್ತು. ಈ ಷರತ್ತುಗಳು ಅವರ ಹಕ್ಕುಗಳು ಮತ್ತು ಹೊಣೆಗಾರಿಕೆಗಳಿಗೆ ಅಡ್ಡಿಯಾಗುವಂತಿವೆ. ಜಾಮೀನು ಮತ್ತು ಅದರ ಅಸಾಮಾನ್ಯ ಷರತ್ತುಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕೇಜ್ರಿವಾಲ್‌ ಮುಂದಾಗಿದ್ದಾರೆ. ಚುನಾವಣಾ ವಿಜಯವು ಪ್ರಕರಣವನ್ನು ನಗಣ್ಯ ಮಾಡಲಿದೆಯೇ ಅಥವಾ ನ್ಯಾಯಾಲಯದ ಆದೇಶವು ಮುಂದುವರಿಯಲಿದೆಯೇ ಎಂಬುದು ಈಗ ಇರುವ ‍ಪ್ರಶ್ನೆ. ಕೆಲವು ರಾಜಕಾರಣಿಗಳು ಪ್ರಶ್ನೆಗಳಿಗೆ ಸವಾಲಿನ ಉತ್ತರ ಕಂಡುಕೊಳ್ಳುತ್ತಾರೆ. 

ಇಲ್ಲಿ ಅವರ ಜಾಮೀನಿಗಿಂತ ಮುಖ್ಯವಾಗಿರುವುದು, ಅವರನ್ನು ಸಿಬಿಐ ಬಂಧಿಸಿದ್ದರ ಕುರಿತು ನ್ಯಾಯಪೀಠವು ಆಡಿರುವ ಮಾತುಗಳು. ಸುದೀರ್ಘ ಕಾಲ ಸೆರೆಮನೆಯಲ್ಲಿ ಇರಿಸುವುದು ಅದರಲ್ಲಿಯೂ ವಿಶೇಷವಾಗಿ ವಿಚಾರಣೆಯು ಸದ್ಯದಲ್ಲಿ ಮುಗಿಯುವುದಿಲ್ಲ ಎಂಬುದು ಗೊತ್ತಿರುವಾಗಲೂ ಜಾಮೀನು ನೀಡದೇ ಇರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ವಲ್‌ ಭುಯಾನ್ ಸ್ಪಷ್ಟಪಡಿಸಿದ್ದಾರೆ. ತನಿಖಾ ಪ್ರಕ್ರಿಯೆಯೇ ಶಿಕ್ಷೆಯಾಗಬಾರದು ಎಂಬ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ನೀಡಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಜೈಲಿನಲ್ಲಿ ಇರಿಸಬಹುದು, ಇಲ್ಲದೇ ಇದ್ದರೆ ಜಾಮೀನು ನೀಡಬೇಕು ಎಂಬುದೇ ನಿಯಮ ಎಂದಿರುವ ನ್ಯಾಯಾಲಯವು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನೀಡಲಾದ ಸ್ವಾತಂತ್ರ್ಯದ ಹಕ್ಕಿನ ಮೌಲ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ. 

ನ್ಯಾಯಮೂರ್ತಿ ಭುಯಾನ್ ಅವರು ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಸಿಬಿಐಯ ನಡೆ ಮತ್ತು ಕೇಜ್ರಿವಾಲ್‌ ಅವರ ಬಂಧನದ ಅಗತ್ಯದ ಕುರಿತು ಎತ್ತಿರುವ ಪ್ರಶ್ನೆಗಳಿಂದಾಗಿ ಈ ತೀರ್ಪು ವಿಶೇಷ ಎನಿಸಿಕೊಳ್ಳುತ್ತದೆ. ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಬಂಧನ ಪ್ರಕ್ರಿಯೆ ಕುರಿತು ಯಾವುದೇ ಪ್ರಶ್ನೆಗಳನ್ನು ಎತ್ತಿಲ್ಲ. ಆದರೆ, ಭುಯಾನ್ ಅವರು ಮಾತ್ರ ಸಿಬಿಐ ನಡೆಯು ತೀವ್ರವಾದ ಲೋಪಗಳಿಂದ ಕೂಡಿದೆ ಎಂದಿದ್ದಾರೆ. ಸಿಬಿಐ ‘ಪಂಜರದ ಗಿಳಿ’ ಎಂದು ನ್ಯಾಯಾಲಯವು 2013ರಲ್ಲಿ ಹೇಳಿದ್ದನ್ನು ಅವರು ಮತ್ತೆ ಉಲ್ಲೇಖಿಸಿದ್ದಾರೆ. ತನಿಖಾ ಸಂಸ್ಥೆಯ ನಡೆಯು ಅನುಮಾನಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ಇರಬೇಕು ಎಂದಿದ್ದಾರೆ. ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನು ಮಂಜೂರಾದ ಬಳಿಕ ಕೇಜ್ರಿವಾಲ್‌ ಅವರು ಇನ್ನೇನು ಬಿಡುಗಡೆ ಆಗಲಿದ್ದಾರೆ ಎಂಬಂತಹ ಸ್ಥಿತಿ ಇದ್ದಾಗ ಅವರನ್ನು ಸಿಬಿಐ ಬಂಧಿಸಿದ್ದು, ಅವರ ಬಿಡುಗಡೆಯನ್ನು ‘ವಿಫಲ’ಗೊಳಿಸುವ ಯತ್ನವಾಗಿತ್ತು ಎಂದಿದ್ದಾರೆ. ಹಾಗಾಗಿಯೇ ಬಂಧನದ ಹಿಂದೆ ದುರುದ್ದೇಶವಿದೆ ಎಂದು ನ್ಯಾಯಾಲಯ ಭಾವಿಸುವಂತಾಗಿದೆ; ಸರ್ಕಾರದ ರಾಜಕೀಯ ಹಿತಾಸಕ್ತಿಗಳಿಗಾಗಿ ಹೀಗೆ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಜಾಮೀನು ಆದೇಶವು ಕೇಜ್ರಿವಾಲ್‌ ಅವರಿಗೆ ಸಿಕ್ಕ ಕಾನೂನು ಜಯ; ಈ ಜಯವನ್ನು ರಾಜಕೀಯ ಜಯವನ್ನಾಗಿ ಪರಿವರ್ತಿಸಲು ಕೇಜ್ರಿವಾಲ್‌
ಯತ್ನಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT