ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೃಷಿ ಕ್ಷೇತ್ರಕ್ಕೆ ಉತ್ಸಾಹ ತುಂಬಿದ ಆಶಾದಾಯಕ ಮುಂಗಾರು ಮುನ್ಸೂಚನೆ

Published 8 ಜೂನ್ 2023, 0:42 IST
Last Updated 8 ಜೂನ್ 2023, 0:42 IST
ಅಕ್ಷರ ಗಾತ್ರ

ಕೆಲವು ಪ್ರತಿಕೂಲ ಸನ್ನಿವೇಶಗಳ ಹೊರತಾಗಿ ಪ್ರಸಕ್ತ ವರ್ಷದ ಮುಂಗಾರು ವಾಡಿಕೆಯಂತೆಯೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ದೇಶದ ಕೃಷಿ ಕ್ಷೇತ್ರದ ಉತ್ಸಾಹವು ಗರಿಗೆದರುವಂತೆ ಮಾಡಿದೆ. ನಾಲ್ಕು ವರ್ಷಗಳಿಂದಲೂ ದೇಶ, ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚಿನ ಮಳೆಯನ್ನು ಕಾಣುತ್ತಿದ್ದು, ಈ ಋತುವಿನಲ್ಲೂ ಅದೇ ಪರಿಪಾಟ ಮುಂದುವರಿಯಲಿದೆ ಎನ್ನುವುದು ನಿರಾಳಭಾವ ಮೂಡಿಸುವಂತಹ ಮುನ್ಸೂಚನೆ. ಭಾರತದ ಪಾಲಿಗೆ ‘ವಾಡಿಕೆಯ ಮುಂಗಾರು’ ಅತ್ಯಂತ ಮಹತ್ವದ್ದು. ಏಕೆಂದರೆ, ಶೇಕಡ 52ರಷ್ಟು ಕೃಷಿ ಜಮೀನು ನೇರವಾಗಿ ಈ ಋತುವಿನ ಮಳೆಯನ್ನೇ ಆಧರಿಸಿದೆ. ಜಲಾಶಯಗಳು ಭರ್ತಿಯಾಗಿ ಕುಡಿಯುವ ನೀರಿನ ಸಂಗ್ರಹವನ್ನು ಖಚಿತಪಡಿಸಲು, ಜಲ ವಿದ್ಯುತ್‌ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಈ ಅವಧಿಯ ಮಳೆ ತುಂಬಾ ಅಗತ್ಯ. ದೇಶದ ಒಟ್ಟು ಆಹಾರ ಉತ್ಪಾದನೆಯ ಶೇ 40ರಷ್ಟು ಪ್ರಮಾಣ ಮುಂಗಾರಿನಲ್ಲೇ ಉತ್ಪಾದನೆ ಆಗುವುದರಿಂದ ಆಹಾರ ಭದ್ರತೆಯ ದೃಷ್ಟಿಯಿಂದಲೂ ಈ ಅವಧಿಯಲ್ಲಿ ಸುರಿಯುವ ಮಳೆಯ ಮೇಲೆ ನಮ್ಮ ಅವಲಂಬನೆ ಹೆಚ್ಚಾಗಿದೆ. ಸಾಗರದ ಮೇಲ್ಮೈ ತಾಪಮಾನ ಹೆಚ್ಚಿ, ಮಲಯ ಮಾರುತಗಳನ್ನು ದುರ್ಬಲಗೊಳಿಸುವಂತಹ ‘ಎಲ್‌ ನಿನೊ’ ಪರಿಣಾಮದ ಕುರಿತೂ ಮುನ್ಸೂಚನೆ ಸಿಕ್ಕಿದೆ.

ಹೀಗಾಗಿ ದೇಶದ ಕೆಲವು ಭಾಗಗಳಲ್ಲಿ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ವಾಡಿಕೆಯ ಸರಾಸರಿ ಶೇ 96ರಷ್ಟು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೆ, ಖಾಸಗಿ ವಲಯದ ಸ್ಕೈಮೆಟ್‌, ಶೇ 20ರಷ್ಟು ಮಳೆ ಕೊರತೆ ಎದುರಾಗಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ, ಈ ಆತಂಕವನ್ನು ದೂರ ಮಾಡುವಂತೆ ಮುಂಗಾರು ಪೂರ್ವ ಮಳೆ ಎಲ್ಲೆಡೆ ಸುರಿದಿದ್ದು, ಬಿತ್ತನೆಗೆ ಕೃಷಿ ಜಮೀನನ್ನು ಹದಗೊಳಿಸಿದೆ. ಹೀಗಾಗಿ ಮುಂಗಾರಿನ ಆಗಮನ ಈಗ ನಾಲ್ಕು ದಿನ ತಡವಾಗುತ್ತಿದ್ದರೂ ಕೃಷಿಕವರ್ಗ ಧೃತಿಗೆಟ್ಟಿಲ್ಲ. ವಾಡಿಕೆ ಪ್ರಮಾಣದಲ್ಲಿ ಮಳೆ ಸುರಿದರೆ ಕೃಷಿ ಹಾಗೂ ಕೃಷಿ ಸಂಬಂಧಿ ಉದ್ಯಮಗಳ ಚಟುವಟಿಕೆಗಳು ಗರಿಗೆದರಲಿದ್ದು, ಹಣದುಬ್ಬರ ತಹಬಂದಿಗೆ ಬರುವ ಸಾಧ್ಯತೆ ಇದೆ. ಬೆಲೆ ಏರಿಕೆ ನಿಯಂತ್ರಣಕ್ಕೂ ಇದರಿಂದ ಅವಕಾಶವಾಗಲಿದೆ.

ಮುಂಗಾರು ಅವಧಿಯಲ್ಲಿನ ಸರಾಸರಿ ಮಳೆ ಪ್ರಮಾಣ ವಾಡಿಕೆಯಂತಿದ್ದರೂ ಕೆಲಭಾಗಗಳಲ್ಲಿ ಇದ್ದಕ್ಕಿದ್ದಂತೆ ವಿಪರೀತ ಮಳೆ ಸುರಿಯುವ, ಭರ್ತಿ ಮಳೆಗಾಲದಲ್ಲೂ ದೀರ್ಘಕಾಲದವರೆಗೆ ‘ಶುಷ್ಕ ದಿನ’ಗಳನ್ನು ಕಾಣುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಮುಂಗಾರಿನ ಆರಂಭದ ಜೂನ್‌ ತಿಂಗಳಿನಲ್ಲೇ ಮಲಯ ಮಾರುತಗಳು ದುರ್ಬಲವಾಗಿರಲಿವೆ. ಜುಲೈ ತಿಂಗಳಿನಲ್ಲಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯಿದೆ ಎಂದೂ ಲೆಕ್ಕ ಹಾಕಲಾಗಿದೆ. ಮಳೆಗಾಲದ ಯಾವುದೇ ಕೆಲವು ದಿನಗಳಲ್ಲಿ ಇಡೀ ಋತುವಿನ ಮಳೆ ಸುರಿದು, ಮಿಕ್ಕ ದಿನಗಳು ಶುಷ್ಕವಾಗಿ ಉಳಿದರೆ ಕೃಷಿ ಚಟುವಟಿಕೆಗಳು ದಿಕ್ಕು ತಪ್ಪಲಿವೆ. ಆದರೆ, ಈ ಲೆಕ್ಕಾಚಾರ ಏನೇ ಇದ್ದರೂ ಇಡೀ ದೇಶಕ್ಕೆ ಅನ್ವಯವಾಗುವಂಥದ್ದು. ರಾಜ್ಯದಲ್ಲೂ ಆಶಾದಾಯಕ ಮುಂಗಾರಿನ ಮುನ್ಸೂಚನೆ ಸಿಕ್ಕಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ತುಂಬಾ ಕಡಿಮೆ ಸಮಯ ಸಿಕ್ಕಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ. ಆ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು.

ಮಳೆಯ ಮುನ್ಸೂಚನೆಗೆ ಬಳಕೆಯಾಗುತ್ತಿರುವ ತಂತ್ರಜ್ಞಾನ ನಿರಂತರವಾಗಿ ಸುಧಾರಣೆ ಆಗುತ್ತಿದೆ. ಹವಾಮಾನ ಮುನ್ಸೂಚನೆಗಳನ್ನು ಪ್ರದೇಶವಾರು, ಜಿಲ್ಲಾವಾರು ವಿಭಜಿಸಿ ನೋಡಲೂ ಇದರಿಂದ ಸಾಧ್ಯವಾಗಿದೆ. ಇಲಾಖೆಯಿಂದ ದೀರ್ಘಾವಧಿ, ವಿಸ್ತರಿತ ಅವಧಿ, ಅಲ್ಪಾವಧಿ ಮತ್ತು ಅಲ್ಪ-ಮಧ್ಯಮಾವಧಿ ಮುನ್ಸೂಚನೆ ಸಿಗುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾವಾರು ಮಳೆ ಪ್ರಮಾಣದಲ್ಲಿ ಆಗುವ ವ್ಯತ್ಯಾಸವನ್ನು ಕೃಷಿ ಇಲಾಖೆಯು ನಿಖರವಾಗಿ ಗುರುತಿಸಬೇಕು. ಅದಕ್ಕೆ ತಕ್ಕಂತೆ ರೈತರಿಗೆ ಮುನ್ಸೂಚನೆಗಳನ್ನೂ ಕೊಡಬೇಕು. ಅತಿವೃಷ್ಟಿ ಇಲ್ಲವೆ ಅನಾವೃಷ್ಟಿಯಿಂದ ಬೆಳೆಹಾನಿ ತಪ್ಪಿಸುವಂತೆ ನೋಡಿಕೊಳ್ಳುವಲ್ಲಿಯೂ ತಂತ್ರಜ್ಞಾನವನ್ನು ದುಡಿಸಿಕೊಳ್ಳಬೇಕು. ಪ್ರತಿ ಜಿಲ್ಲೆಯ ಅಗತ್ಯಗಳಿಗೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಬೇಕು. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಕೆರೆ–ಕಟ್ಟೆಗಳ ಹೂಳು ತೆಗೆಯಿಸಿ, ಹೆಚ್ಚಿನ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಅಲ್ಪಾವಧಿ ಮತ್ತು ಅಲ್ಪ-ಮಧ್ಯಮಾವಧಿ ಮುನ್ಸೂಚನೆಗಳನ್ನು ರೈತರಿಗೆ ದಾಟಿಸಿ, ಅವರು ವಹಿಸಬೇಕಾದ ಎಚ್ಚರಿಕೆ ಕುರಿತು ಅರಿವು ಮೂಡಿಸಬೇಕು. ಪ್ರಕೃತಿಯ ಸವಾಲುಗಳನ್ನು ಸಾಧ್ಯವಾದಷ್ಟು ದಿಟ್ಟವಾಗಿ ಎದುರಿಸಲು ಅವರಲ್ಲಿ ಬಲವನ್ನೂ ತುಂಬಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT