ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Editorial | ಚುನಾವಣೆಯ ಅಲ್ಪ ಲಾಭಕ್ಕಾಗಿ ಶ್ರೀಲಂಕಾ ಜೊತೆಗಿನ ಸಂಬಂಧ ಕೆಡಿಸಬೇಡಿ

Published 3 ಏಪ್ರಿಲ್ 2024, 23:57 IST
Last Updated 3 ಏಪ್ರಿಲ್ 2024, 23:57 IST
ಅಕ್ಷರ ಗಾತ್ರ

ನಮ್ಮ ನೆರೆಯ ದೇಶ ಶ್ರೀಲಂಕಾದ ಜೊತೆಗಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ವಿಚಾರವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೆದಕಿದ್ದಾರೆ. ಚುನಾವಣೆಯಲ್ಲಿ ಆಗಬಹುದಾದ ಅಲ್ಪ ಲಾಭದ ಏಕೈಕ ಉದ್ದೇಶದಿಂದ ಪ್ರಧಾನಿಯವರು ಈ ರೀತಿ ಮಾಡಿರುವುದು ದುರದೃಷ್ಟಕರ. ಕಚ್ಚತೀವು ದ್ವೀಪವನ್ನು ಭಾರತವು ಶ್ರೀಲಂಕಾಕ್ಕೆ ಕೊಟ್ಟಿರುವುದು ಸರಿಯಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷವು ಕಚ್ಚತೀವು ವಿಚಾರವನ್ನು ‘ಅಸಡ್ಡೆ’ಯಿಂದ ನಿರ್ವಹಿಸುವ ಮೂಲಕ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಮೋದಿ ಅವರು ಆರೋಪಿಸಿದ್ದಾರೆ. ಈಗ ಬಹಿರಂಗವಾಗಿರುವ ಕೆಲವು ಮಾಹಿತಿಗಳು ಡಿಎಂಕೆಯ ದ್ವಂದ್ವ ನೀತಿಯನ್ನೂ ಬಯಲು ಮಾಡಿವೆ. ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಕರುಣಾನಿಧಿ ಅವರು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ನೀಡಲು 1974ರಲ್ಲಿ ಸಮ್ಮತಿ ಸೂಚಿಸಿದ್ದರು. ಆದರೆ, ಅವರ ಪಕ್ಷವು ಸಾರ್ವಜನಿಕವಾಗಿ ಇದಕ್ಕೆ ತದ್ವಿರುದ್ಧ ನಿಲುವು ತಳೆದಿತ್ತು ಎಂದೂ ಪ್ರಧಾನಿಯವರು ಆರೋಪ ಮಾಡಿದ್ದಾರೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಮೋದಿ ಅವರ ಪ್ರತಿಪಾದನೆಯನ್ನು ಬೆಂಬಲಿಸಿದ್ದಾರೆ. 

ಈ ದ್ವೀಪಕ್ಕೆ ಸಂಬಂಧಿಸಿ ಮಾಡಿಕೊಂಡ ಒಪ್ಪಂದದ ಕುರಿತು ತಮಿಳುನಾಡಿನ ರಾಜಕೀಯ ಪಕ್ಷಗಳು ಆಗಾಗ ಅಸಮಾಧಾನ ವ್ಯಕ್ತಪಡಿಸಿ, ದ್ವೀಪವನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯ ಮಾಡಿದ್ದು ಇದೆ. ಆದರೆ, ಇದಕ್ಕಾಗಿ ಬಲವಾದ ಬೇಡಿಕೆ ಕೇಳಿಬಂದಿಲ್ಲ ಅಥವಾ ಚಳವಳಿಯೂ ನಡೆದಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವೂ ಸೇರಿ ಈ ಹಿಂದಿನ ಯಾವುದೇ ಸರ್ಕಾರವು ಈ ದ್ವೀಪಕ್ಕೆ ಸಂಬಂಧಿಸಿ ಭಿನ್ನವಾದ ನಿಲುವನ್ನು ವ್ಯಕ್ತಪಡಿಸಿದ್ದೇ ಇಲ್ಲ. ಈ ದ್ವೀಪದ ಮೇಲೆ ಭಾರತಕ್ಕೆ ಚಾರಿತ್ರಿಕವಾದ ಯಾವುದೇ ಹಕ್ಕು ಇಲ್ಲ; ಹಾಗಾಗಿ ಈ ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು 2013ರಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಭಾರತ–ಶ್ರೀಲಂಕಾ ಅಂತರರಾಷ್ಟ್ರೀಯ ಜಲಗಡಿಯ ಶ್ರೀಲಂಕಾ ಭಾಗದಲ್ಲಿ ಕಚ್ಚತೀವು ದ್ವೀಪ ಇದೆ ಎಂದು ಈಗಿನ ಸರ್ಕಾರವು ರಾಜ್ಯಸಭೆಗೆ 2022ರಲ್ಲಿ ಹೇಳಿತ್ತು. 1974 ಮತ್ತು 1976ರಲ್ಲಿ ಶ್ರೀಲಂಕಾ ಜೊತೆಗೆ ಮಾಡಿಕೊಂಡ ಒಪ್ಪಂದಗಳ ಅಂಶಗಳನ್ನು ವಿದೇಶಾಂಗ ಸಚಿವಾಲಯವು ಮದ್ರಾಸ್‌ ಹೈಕೋರ್ಟ್‌ಗೆ 2014ರ ಜುಲೈನಲ್ಲಿ ವಿವರಿಸಿ, ಇದು ಮುಗಿದ ವಿಚಾರ ಎಂದು ತಿಳಿಸಿತ್ತು. ಕಚ್ಚತೀವು ದ್ವೀಪವನ್ನು ಸ್ವಾಧೀನಪಡಿಸಿಕೊಂಡೂ ಇಲ್ಲ, ಹಸ್ತಾಂತರಿಸಿಯೂ ಇಲ್ಲ, ಈ ದ್ವೀಪವು ಅಂತರರಾಷ್ಟ್ರೀಯ ಜಲಗಡಿಯ ಶ್ರೀಲಂಕಾ ಭಾಗದಲ್ಲಿ ಇದೆ ಎಂದು ವಿದೇಶಾಂಗ ಸಚಿವಾಲಯವು ಮಾಹಿತಿ ಹಕ್ಕು ಅಡಿಯಲ್ಲಿ ನೀಡಿದ ಮಾಹಿತಿಯಲ್ಲಿ 2015ರಲ್ಲಿ ಹೇಳಿತ್ತು. ಚಾರಿತ್ರಿಕ ದಾಖಲೆಗಳು ಕೂಡ ಇದೇ ನಿಲುವಿಗೆ ಪೂರಕವಾಗಿ ಇವೆ. 

ಬಗೆಹರಿದ ವಿಚಾರವೊಂದನ್ನು ಹಲವು ವರ್ಷಗಳ ಬಳಿಕ ಕೆದಕುವುದು ಸರಿಯಲ್ಲ ಮತ್ತು ವಿವೇಕಯುತವಾದ ನಡೆಯೂ ಅಲ್ಲ. ರಾಜಕೀಯ ಪಕ್ಷಗಳು ವಿವಿಧ ವಿಚಾರಗಳ ಕುರಿತು ತಮ್ಮದೇ ಆದ ನಿಲುವುಗಳನ್ನು ಹೊಂದಿರುತ್ತವೆ ಮತ್ತು ರಾಜಕೀಯ ಅಥವಾ ಚುನಾವಣಾ ಲಾಭಕ್ಕೆ ಬೇಕಾದ ರೀತಿಯಲ್ಲಿ ಅವುಗಳನ್ನು ವ್ಯಕ್ತಪಡಿಸುತ್ತವೆ. ಆದರೆ, ಪ್ರಧಾನಿಯವರು ವಿವಾದಕ್ಕೆ ಕಾರಣವಾಗಬಹುದಾದ ವಿಚಾರಗಳ ಕುರಿತು ಹೇಳಿಕೆಗಳನ್ನು ನೀಡುವಾಗ ಹೆಚ್ಚು ಜವಾಬ್ದಾರಿಯುತವಾಗಿ ಇರಬೇಕು. ಅವರ ಹೇಳಿಕೆಯು ತಮಿಳುನಾಡಿನಲ್ಲಿ ಪ್ರಾದೇಶಿಕ ಭಾವನೆಯನ್ನು ಕೆರಳಿಸಬಹುದು; ಶ್ರೀಲಂಕಾ ಜೊತೆಗಿನ ದ್ವಿಪಕ್ಷೀಯ ಸಂಬಂಧವು ಹದಗೆಡುವಂತೆ ಮಾಡಬಹುದು. ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ರಾಷ್ಟ್ರೀಯ ಭದ್ರತೆ ಮತ್ತು ನೆರೆಯ ದೇಶದ ಜೊತೆಗಿನ ಉತ್ತಮ ಸಂಬಂಧಕ್ಕಿಂತ ಪಕ್ಷದ ಚುನಾವಣಾ ಹಿತಾಸಕ್ತಿಯೇ ಮುಖ್ಯ ಎಂದು ಮೋದಿ ಅವರು
ಪರಿಗಣಿಸಬಾರದಿತ್ತು. ಈ ವಿಚಾರದಲ್ಲಿ ಕರುಣಾನಿಧಿ ಅವರು ತೋರಿದ ಮುತ್ಸದ್ದಿತನ ಅಭಿನಂದನಾರ್ಹ. ಹಾಗೆಯೇ 1974ರಲ್ಲಿ ಆದ ಒಪ್ಪಂದವನ್ನು ಆಗ ವಿರೋಧಿಸಿದ್ದ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಒಪ್ಪಂದವನ್ನು ಮರುಪರಿಶೀಲನೆ ಮಾಡದೇ ಇರುವ ಮೂಲಕ ಶ್ಲಾಘನೀಯವಾಗಿ ವರ್ತಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT